ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ, ಜಾರ್ಖಂಡ್‌ನಲ್ಲಿ ಶಾಂತಿಯುತ ಮತದಾನ

Last Updated 14 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಶ್ರೀನಗರ (ಪಿಟಿಐ): ಪ್ರತ್ಯೇಕತಾವಾದಿಗಳ ಬಹಿ­ಷ್ಕಾರ ಕರೆಯ ನಡುವೆಯೂ ಭಾನುವಾರ ನಡೆದ ಜಮ್ಮು ಕಾಶ್ಮೀರ ವಿಧಾನಸಭಾ ಚುನಾ­ವಣೆಯ ನಾಲ್ಕನೇ ಹಂತದ ಮತದಾನ ಶಾಂತಿಯುತವಾಗಿ ನಡೆದಿದ್ದು ಶೇ 49ರಷ್ಟು ಮತದಾನ­ವಾಗಿದೆ. ಮೈಕೊರೆಯುವ ಚಳಿ,  ಸುರಿಯುವ ಹಿಮದ ನಡುವೆಯೂ ಕಾಶ್ಮೀರಿಗಳು   ಮತ ಚಲಾಯಿಸು­ವಲ್ಲಿ ತೀರಾ ನಿರುತ್ಸಾಹವನ್ನೇನೂ ತೋರಲಿಲ್ಲ.

ಶ್ರೀನಗರ, ಅನಂತನಾಗ್‌, ಶೋಪಿಯಾನ್‌ ಹಾಗೂ ಸಾಂಬಾ ಜಿಲ್ಲೆಗಳ 18 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು. ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ  ಸ್ಪರ್ಧಿಸಿದ್ದ ಸೋನಾವರ (ಎರಡನೇ ಕ್ಷೇತ್ರ) ಹಾಗೂ ಪಿಡಿಪಿಯ ಮುಫ್ತಿ ಮಹಮ್ಮದ್‌ ಸಯೀದ್‌ ಸ್ಪರ್ಧಿಸಿದ್ದ ಅನಂತನಾಗ್‌ ಕ್ಷೇತ್ರಕ್ಕೂ ಇದೇ ವೇಳೆ ಮತದಾನ ನಡೆಯಿತು.

2008ರಲ್ಲಿ ನಡೆದ ಚುನಾ­ವಣಾ ಮತದಾನಕ್ಕೆ ಹೋಲಿ­ಸಿದರೆ ಈ ಬಾರಿ ಶೇ 4ರಷ್ಟು ಹೆಚ್ಚು ಮತದಾನವಾಗಿದೆ. ಮೊದಲ ಎರಡು ಹಂತಗಳ ಚುನಾ­ವಣೆಯಲ್ಲಿ ಶೇ 71­ರಷ್ಟು, ಮೂರನೇ ಹಂತ­ದಲ್ಲಿ 59ರಷ್ಟು ಮತದಾನವಾ­ಗಿತ್ತು. ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆಯಂತಹ ಕೆಲವು ಚಿಕ್ಕಪುಟ್ಟ ಅಹಿತಕರ ಘಟನೆಗಳನ್ನು ಹೊರತು­ಪಡಿಸಿದರೆ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿ­ಯುತವಾ­ಗಿತ್ತು. 87 ವಿಧಾನಸಭಾ ಕ್ಷೇತ್ರಗಳ ಪೈಕಿ ಈಗ 67 ಕ್ಷೇತ್ರಗಳ ಚುನಾವಣೆ ಮುಗಿದಿದೆ. ಇನ್ನುಳಿದ 20 ಕ್ಷೇತ್ರಗಳಿಗೆ ಐದನೇ ಹಾಗೂ ಕೊನೆಯ ಹಂತದ ಮತದಾನ ಡಿ.20ರಂದು ನಡೆಯಲಿದೆ. ಡಿ.23 ರಂದು ಮತ ಎಣಿಕೆ ಆಗಲಿದೆ.

ರಾಂಚಿ ವರದಿ: ಜಾರ್ಖಂಡ್‌ನ 15 ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ನಡೆದ ನಾಲ್ಕನೇ ಹಂತದ ಚುನಾವಣೆಯಲ್ಲಿ ಶೇ 61.08ರಷ್ಟು ಮತ ಚಲಾ­ವಣೆ ಆಗಿದೆ. ಜಾರ್ಖಂಡ್‌ ವಿಕಾಸ್‌ ಮೋರ್ಚಾ (ಪ್ರಜಾ­ತಾಂತ್ರಿಕ) ಪಕ್ಷದಿಂದ ಮಾಜಿ ಮುಖ್ಯ­ಮಂತ್ರಿ ಬಾಬುಲಾಲ್‌ ಮುರಾಂಡಿ ಸ್ಪರ್ಧಿಸಿದ್ದ ಗಿರಿದಿಹ್ ಕ್ಷೇತ್ರ­ದಲ್ಲಿ ಚುನಾವಣೆ ಬಹಿಷ್ಕರಿಸು­ವಂತೆ ಕರೆ ನೀಡಿ ಮಾವೊವಾದಿಗಳು ಪೋಸ್ಟರ್‌ ಅಂಟಿಸಿದ್ದರು. ಪೊಲೀ­ಸರು ಅವನ್ನು ತೆರವುಗೊಳಿಸಿದರು. ಧನ್ವಾರ್‌ ಕ್ಷೇತ್ರ­ದಿಂದಲೂ ಅವರು ಸ್ಪರ್ಧಿಸಿದ್ದಾರೆ. ಇನ್ನುಳಿದ 16 ಸ್ಥಾನ­ಗಳಿಗೆ ಡಿ.20ರಂದು ಮತ ಚಲಾವಣೆ ನಡೆಯಲಿದೆ.

ದಾಖಲೆ ಮತದಾನ
ಒಂದು ಕಾಲಕ್ಕೆ ಉಗ್ರರು ಮತ್ತು ಪ್ರತ್ಯೇಕತಾ­ವಾದಿ­ಗಳು ಪ್ರಾಬಲ್ಯ ಹೊಂದಿದ್ದ ಶ್ರೀನಗರದಲ್ಲಿ ಈ ಬಾರಿ ಶೇ 28ರಷ್ಟು ದಾಖಲೆಯ ಮತದಾನ­ವಾಗಿದೆ.

1989ರಿಂದ ಈಚೆಗೆ ಉಗ್ರರ ಹಾವಳಿ ತೀವ್ರವಾದ ನಂತರ ಇದೇ ಮೊದಲ ಬಾರಿಗೆ ಶ್ರೀನಗರದಲ್ಲಿ ಇಷ್ಟೊಂದು ಪ್ರಮಾಣದ ಮತದಾನವಾಗಿದೆ. 2008­ರಲ್ಲಿ ಶೇ 20ರಷ್ಟು ಮತದಾನ­ವಾಗಿತ್ತು. 2002ರಲ್ಲಿ ಶೇ 19.20 ಹಾಗೂ 1996ರಲ್ಲಿ ಬರೀ ಶೇ 5.13ರಷ್ಟು  ಮತದಾನವಾಗಿತ್ತು.

ಕಳೆದ ಬಾರಿಗೆ ಹೋಲಿಸಿದರೆ ಶ್ರೀನಗರದ ಎಲ್ಲಾ 8 ಕ್ಷೇತ್ರಗಳಲ್ಲಿ ಈ ಬಾರಿ ಮತದಾನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.  ನಗರದ ಕೆಲವೆಡೆ ಕಲ್ಲು ತೂರಾಟ­ದಂತಹ ಯತ್ನಗಳು ನಡೆದರೂ ಮತ ಚಲಾ­ವಣೆ ಪ್ರಮಾಣದ ಮೇಲೆ ಅದು ದುಷ್ಪರಿ­ಣಾಮ ಬೀರಲಿಲ್ಲ. ಪೊಲೀಸರು ಅಶ್ರುವಾಯು ಪ್ರಯೋಗಿಸಿ ಗುಂಪುಗಳನ್ನು ಚದುರಿಸಿದರು. ಮತ­ಗಟ್ಟೆ ಎದುರು ಮತದಾರರ ಉದ್ದನೆಯ ಸಾಲುಗಳು ಕಂಡು ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT