ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಪ್ರವಾಹದ ಮಧ್ಯೆ 4 ಲಕ್ಷ ಜನ

ಜನರ ಸ್ಥಳಾಂತರಕ್ಕೆ ವಿಮಾನ, ದೋಣಿ ಬಳಕೆ
Last Updated 9 ಸೆಪ್ಟೆಂಬರ್ 2014, 20:04 IST
ಅಕ್ಷರ ಗಾತ್ರ

ಶ್ರೀನಗರ/ಜಮ್ಮು (ಪಿಟಿಐ): ವಾರದಿಂದ ಸುರಿಯುತ್ತಿದ್ದ ಧಾರಾ­ಕಾರ ಮಳೆ ಮಂಗಳವಾರ ಬಿಡುವು ನೀಡಿದ್ದು, ಪ್ರವಾಹ ಇಳಿಮುಖ­ವಾ­ದರೂ ಇನ್ನೂ ನಾಲ್ಕು ಲಕ್ಷ ಜನರು ಜಲಾವೃತ ಪ್ರದೇಶ­ಗಳಲ್ಲಿ ಸಿಲುಕಿ­ಕೊಂಡಿದ್ದಾರೆ.

ಸಂಕಷ್ಟಕ್ಕೀಡಾದ ಸಂತ್ರಸ್ತರ ರಕ್ಷಣೆ­ಗಾಗಿ ಹಗಲು, ರಾತ್ರಿ ಕಾರ್ಯಾ­ಚರಣೆ  ನಡೆಯುತ್ತಿದ್ದು, ಹೆಚ್ಚುವ­ರಿ­ಯಾಗಿ ವಿಮಾನ ಮತ್ತು ದೋಣಿ­ಗಳನ್ನು ಬಳಸಿ­ಕೊಳ್ಳಲಾಗುತ್ತಿದೆ. ಇದು­ವರೆಗೂ 43 ಸಾವಿರ ನಾಗರಿಕರನ್ನು ರಕ್ಷಿಸಲಾಗಿದೆ. ಸಂತ್ರಸ್ತರಿಗೆ  ಆಹಾರ ಪೊಟ್ಟಣ, ಕುಡಿ­ಯುವ ನೀರು ಹಾಗೂ ಔಷಧಿ­ಗ­ಳನ್ನು ಸರಬರಾಜು ಮಾಡ­ಲಾಗುತ್ತಿದೆ.

ನಡುಗಡ್ಡೆಯಾಗಿರುವ ಶ್ರೀನಗರದ ತಗ್ಗು ಪ್ರದೇಶಗಳಲ್ಲಿ ಸಿಲುಕಿರುವ ಲಕ್ಷಾಂತರ ಜನರನ್ನು ವಾಯು­ಪಡೆಯ ವಿಮಾನ ಮತ್ತು ದೋಣಿಗಳ ಮೂಲಕ ಸ್ಥಳಾಂತರಿಸಲಾಗುತ್ತಿದೆ. ಲಾಲ್‌­ಚೌಕ್‌ ಹಾಗೂ ಇತರ ಜಲಾ­ವೃತ ಪ್ರದೇಶ­ಗಳ ಜನರು ಎತ್ತರ ಪ್ರದೇಶ ಮತ್ತು ಬಹುಮಹಡಿ ಕಟ್ಟಡ­ಗಳ ಮೇಲೆ ಆಶ್ರಯ ಪಡೆದಿದ್ದು, ನೆರವಿಗಾಗಿ ಮೊರೆ ಇಡುತ್ತಿದ್ದಾರೆ. 

ದಕ್ಷಿಣ ಕಾಶ್ಮೀರದಲ್ಲಿ ವಾತಾವರಣ ತಿಳಿಯಾಗಿದ್ದು ಉಕ್ಕಿ ಹರಿಯುತ್ತಿದ್ದ ನದಿಗಳಲ್ಲಿಯ ನೀರಿನ ಮಟ್ಟ ನಿಧಾನ­ವಾಗಿ ಕಡಿಮೆಯಾಗುತ್ತಿದೆ. ಎರಡು ದಿನಗಳಲ್ಲಿ 1.5 ಅಡಿಯಿಂದ 3 ಅಡಿಯ­ವರೆಗೆ ನೀರು ಇಳಿದಿದೆ. ಶ್ರೀನಗರ, ಬಾರಾಮುಲ್ಲಾ ಮತ್ತು ರಾಜ್ಯದ ಉತ್ತರ ಭಾಗದಲ್ಲಿ ಮಾತ್ರ ಪರಿಸ್ಥಿತಿ ಇನ್ನೂ ಯಥಾರೀತಿ ಮುಂದು­ವರಿ­ದಿದ್ದು, ದಾಲ್ ಸರೋವರದಲ್ಲಿ ನೀರಿನ ಮಟ್ಟ ಹೆಚ್ಚಿ, ಪಕ್ಕದ ಹಜರತ್‌­ಬಾಲ್ ದರ್ಗಾ ಆವರಣದೊಳಗೆ ನುಗ್ಗಿವೆ. 

ಉಧಮ್‌ಪುರ ಜಿಲ್ಲೆಯ ಪಂಚೇರಿ­ಯಲ್ಲಿ ಹೊಸದಾಗಿ ಸಂಭವಿಸಿದ ಭೂ­ಕುಸಿತದಲ್ಲಿ 30 ನಾಗರಿಕರು ಮಣ್ಣಿನಡಿ ಸಿಲುಕಿದ್ದು ಇದುವರೆಗೂ ಏಳು ಶವ­ಗಳನ್ನು ಹೊರತೆಗೆಯಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಕಳೆದ ಒಂದು ವಾರದಲ್ಲಿ ಸಾವಿ­ಗೀಡಾ­­ದವರ ಸಂಖ್ಯೆ ಎರಡು ನೂರರ ಗಡಿ ದಾಟಿರಬಹುದು ಎಂದು ಅಂದಾ­ಜಿ­ಸ­ಲಾಗಿದ್ದು, ನಿಖರವಾದ ಮಾಹಿತಿ ನಂತರವಷ್ಟೇ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಣ್ಮರೆ­ಯಾದ ಕುಟುಂಬ ಸದಸ್ಯ­ರನ್ನು  ಹುಡು­ಕಲು ಪರದಾಡುತ್ತಿರುವ ಜನರು ನೆರ­ವಿಗಾಗಿ ಯೋಧರನ್ನು ಅಂಗಲಾ­ಚುತ್ತಿದ್ದಾರೆ. ಶ್ರೀನಗರ ಹೊರತು­ಪಡಿಸಿ ಜಮ್ಮು ಮತ್ತು ಕಾಶ್ಮೀರದ ಇತರೆಡೆ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ. ಕಾಶ್ಮೀರ ಕಣಿವೆ ಮತ್ತು ಲಡಾಖ್  ನಡುವಣ ಪ್ರಮುಖ ಸಂಪರ್ಕ ಕೊಂಡಿ­ಯಾಗಿರುವ 434 ಕಿ.ಮೀ ಉದ್ದದ ಶ್ರೀನಗರ –ಲೇಹ್‌ ರಾಷ್ಟ್ರೀಯ ಹೆದ್ದಾರಿ­ಯನ್ನು ಮುಕ್ತಗೊಳಿಸ­ಲಾಗಿದೆ.

ಆದರೆ, ಭೂಕುಸಿತ ಹಾಗೂ ಪ್ರವಾಹ­ದಲ್ಲಿ ಕೊಚ್ಚಿಹೋದ ಕಾರಣ 300 ಕಿ.ಮೀ ಉದ್ದದ ಜಮ್ಮು–ಶ್ರೀನಗರ ಹೆದ್ದಾರಿಯನ್ನು ಆರನೇ ದಿನವೂ ಮುಚ್ಚಲಾಗಿದೆ. ಇದರಿಂದಾಗಿ ಅಗತ್ಯ ಸಾಮಗ್ರಿಗಳನ್ನು ಹೊತ್ತು ಕಾಶ್ಮೀರದತ್ತ  ತೆರಳುತ್ತಿದ್ದ 1,500 ಲಾರಿಗಳು  ನಡುದಾರಿಯಲ್ಲಿಯೇ ಬೀಡುಬಿಟ್ಟಿವೆ.

ಸ್ಥಿರ ದೂರವಾಣಿ  ಮತ್ತು ಮೊಬೈಲ್‌ ಸಂಪರ್ಕ ಮರಳಿ ಸ್ಥಾಪಿಸುವ ಯತ್ನವನ್ನು ಬಿಎಸ್‌ಎನ್ಎಲ್‌ ತಂತ್ರಜ್ಞರ ತಂಡ ಮುಂದುವರಿಸಿದ್ದು ಭಾಗಶಃ ಸಂಪರ್ಕ ದೊರೆಯುವ ಆಶಾಭಾವನೆ ಇದೆ. ಕಾರ್ಯಾಚರಣೆ­ಯಲ್ಲಿರುವ ಸೇನೆ ಮತ್ತು ವಾಯುಪಡೆ ಯೋಧರು ಉಪ­ಗ್ರಹದ ನೆರವಿನಿಂದ ಮೊಬೈಲ್‌ ಸಂಪರ್ಕ  ಸಾಧಿಸುವಲ್ಲಿ ಯಶಸ್ವಿಯಾಗಿವೆ.

ಇದೇ ಮೊದಲ ಬಾರಿ ನೌಕಾ­ಪಡೆಯ ಕಮಾಂಡೋಗಳನ್ನು ಬಳಸಿ­ಕೊಳ್ಳ­ಲಾ­ಗುತ್ತಿದೆ. ಇದುವರೆಗೂ 25 ಸಾವಿರ ಜನರನ್ನು ರಕ್ಷಿಸಲಾಗಿದೆ. ವೈಷ್ಣೋದೇವಿಗೆ ತೆರಳುವ ಮಾರ್ಗ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗದಿದ್ದರೂ ಯಾತ್ರಿಗಳು ಅಡ್ಡ ದಾರಿ ಬಳಸಿ ಮಂದಿರಕ್ಕೆ ತೆರಳಿದ್ದಾರೆ. ಎರಡು ದಿನಗಳಲ್ಲಿ 25 ಸಾವಿರ ಜನರು ದರ್ಶನ ಪಡೆದಿದ್ದಾರೆ.

***
ಕಟ್ಟ ಕಡೆಯ ನಾಗರಿಕನನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ತಲುಪಿಸಿದ ನಂತರವಷ್ಟೇ ಯೋಧರು ಮರಳುತ್ತಾರೆ. ಅಲ್ಲಿವರೆಗೆ ಕಾರ್ಯಾಚರಣೆ ಮುಂದುವರಿಯಲಿದೆ
– ಲೆಫ್ಟಿನೆಂಟ್‌ ಜನರಲ್‌ ಸುಬ್ರತಾ ಶಹಾ

ರಾಜ್ಯದ 76 ಮಂದಿ ರಕ್ಷಣೆ
ಬೆಂಗಳೂರು:
ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾಗಿರುವ ಭೀಕರ ಪ್ರವಾಹದಲ್ಲಿ ರಾಜ್ಯದ 549 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಇವರೆಲ್ಲ ಸುರಕ್ಷಿತವಾಗಿದ್ದಾರೆ ಎಂದು ರಕ್ಷಣಾ ತಂಡ ಹೇಳಿದೆ. ಇದುವರೆಗೆ ಈ ಪೈಕಿ 76 ಜನರನ್ನು ರಕ್ಷಿಸಲಾಗಿದೆ.

ನೆರವಿನ ಮಹಾಪೂರ
*೫೦,೪೧೭ ಜನರ ರಕ್ಷಣೆ, ೨೧೫ ಸೇನಾ ತುಕಡಿಗಳು, ೮೦ ವೈದ್ಯಕೀಯ ತಂಡ, ೧೫ ಎಂಜಿನಿಯರ್‌ಗಳ ಕಾರ್ಯ ಪಡೆಯಿಂದ ರಕ್ಷ ಣಾ ಕಾರ್ಯ

*೧೨ ಸೇನಾ ಪರಿಹಾರ ಶಿಬಿರಗಳು, ೨೫೦ಕ್ಕೂ ಹೆಚ್ಚಿನ ದೋಣಿಗಳು, ೩೦ಕ್ಕೂ ಹೆಚ್ಚು ವಿಮಾನಗಳು ಹಾಗೂ ೩೧ ಹೆಲಿಕಾಪ್ಟರ್‌ಗಳ ನಿಯೋಜನೆ
*೧೦,೦೦೦ ಹೊದಿಕೆಗಳು, ತುರ್ತು ಪಡಿತರ, ಮ್ಯಾಗಿ ಪೊಟ್ಟಣಗಳ ಪೂರೈಕೆ
*ಗುಜರಾತ್‌, ತೆಲಂಗಾಣ, ಬಿಹಾರ ಸರ್ಕಾರದಿಂದ ಆಹಾರ ಪೂರೈಕೆ
*ಉತ್ತರಾಖಂಡ ಸರ್ಕಾರದಿಂದ  ರೂ. ೧೦ ಕೋಟಿ  ನೆರವು ಘೋಷಣೆ,  ಪ್ರವಾಹ­ಪೀಡಿತ ಪ್ರದೇಶಗಳಿಂದ ಜನ­ರನ್ನು ರಕ್ಷಿಸುವುದಕ್ಕೆ ೫೦ ತೆಪ್ಪಗಳು, ನೀರೆತ್ತುವ ಪಂಪ್‌ಗಳ ಪೂರೈಕೆ
*ಜಮ್ಮು–ಕಾಶ್ಮೀರದಿಂದ ವಿಶೇಷ ವಿಮಾನ ವ್ಯವಸ್ಥೆ  ಮಾಡುವಂತೆ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ  ಮನವಿ
*ಶ್ರೀನಗರದಲ್ಲಿ ಸಿಕ್ಕಿಹಾಕಿಕೊಂಡಿ­ರುವ ಪ್ರವಾಸಿಗರಿಗೆ ಏರ್‌ ಇಂಡಿಯಾದಲ್ಲಿ ಉಚಿತ ಪ್ರಯಾಣ ಸೌಲಭ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT