ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡಿನ ತಳಿ ಸಂರಕ್ಷಕ

ಕೊನರು 6
Last Updated 27 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಹಲವು ತಳಿ ತೆಂಗು
ತೆಂಗಿನ ಬೆಳೆಯಲ್ಲೂ ಹಲವಾರು ತಳಿಗಳನ್ನು ಸಂರಕ್ಷಿಸುತ್ತಿರುವ ಅವರ ತೋಟದಲ್ಲಿ ಸಾಮಾನ್ಯ ತಳಿಗಳ ಜತೆಗೆ ಮಲೇಷಿಯನ್‌ ಡ್ವಾರ್ಫ್‌ ಯೆಲ್ಲೊ ಎಂಬ ತಳಿ ಇದೆ. ಎಳನೀರಿನ ಸಿಪ್ಪೆಯನ್ನೂ, ಗೆರಟೆಯನ್ನು ಅರ್ಧದವರೆಗೂ ತಿನ್ನಬಹುದಾದ ತೆಂಗಿನ ತಳಿ ಇದೆ. ಸುಮಾರು 6 ಎಕರೆ ಪ್ರದೇಶದಲ್ಲಿ ರಬ್ಬರ್‌ ಬೆಳೆಸಿರುವ ಭಟ್ಟರು ಆರ್‌ಆರ್ 105, ಆರ್‌ಆರ್‌600, 414 ತಳಿಗಳನ್ನು ಪೋಷಿಸುತ್ತಿದ್ದಾರೆ.

ಅಡಿಕೆ ಮರಗಳಿಗೆ ಹಬ್ಬಿಸಿರುವ ಕರಿಮೆಣಸಿನಲ್ಲೂ ಹಲವು ತಳಿಗಳಿವೆ. ಹೆಚ್ಚು ಇಳುವರಿ ನೀಡುವ ಪಣಿಯೂರು–1, ರೋಗ ನಿರೋಧಕ ಶಕ್ತಿ ಇರುವ ತೈಯಂ–1, ವರ್ಷಕ್ಕೆ ಎರಡು ಬಾರಿ ಫಸಲು ನೀಡುವ ಕರಿಮುಂಡ, ಎತ್ತರ ಪ್ರದೇಶಗಳಲ್ಲಿ ಉತ್ತಮವಾಗಿ ಬೆಳೆಯುವ ಗಿರಿಮುಂಡವೂ ಅಲ್ಲಿದೆ. ಉದ್ದವಾದ ತೆನೆ ಬಿಡುವ ಮಲಬಾರ್‌ ಎಕ್ಸ್‌ಎಲ್‌, ಪೌರ್ಣಮಿ, ಪಂಚಮಿ, ಕಳುವಳ್ಳಿ, ಚೋಮಲ, ಪಣಿಯೂರು 2, 3, 4, 5, 6, 7ರ ವರೆಗಿನ ತಳಿಗಳೂ ಅವರಲ್ಲಿವೆ.

ಗುಡ್ಡದಲ್ಲಿ ಬೆಳೆಸಿರುವ ಗೇರುಬೀಜದಲ್ಲೂ ತರಹೇವಾರಿ ತಳಿಗಳ ಸೊಬಗು. ವೆಂಗುರ್ಲಾ 1ರಿಂದ 8ರವರೆಗಿನ ತಳಿಗಳೂ, ಉಳ್ಳಾಲ–3, ಪ್ರಿಯದರ್ಶಿನಿ ತಳಿಗಳೂ ಇವೆ. ವೆಂಗುರ್ಲಾ ಗೇರು ತಳಿ ಹೆಚ್ಚು ಇಳುವರಿಯನ್ನು ಸ್ಥಿರವಾಗಿ ನೀಡುತ್ತದೆ. ಜತೆಗೆ ಅಗರ್‌ ವುಡ್‌ ಕೂಡ ಭಟ್ಟರ ತೋಟದಲ್ಲಿದೆ. ಅ‌ದು ಹತ್ತಾರು ಎಕರೆ ವಿಸ್ತೀರ್ಣದ  ‌ಜಮೀನು. ಎಲ್ಲೆಡೆ ಬಗೆ ಬಗೆಯ ಕೃಷಿ. ಆ ಕೃಷಿ ಭೂಮಿಯಲ್ಲಿ ಇಲ್ಲ ಎಂದು ಕಂಡು ಬರುವುದು ಕೇವಲ ಭತ್ತ ಮತ್ತು ಚಹಾ ಬೆಳೆ ಮಾತ್ರ...

ವಿಶೇಷತೆ ಅಲ್ಲಿಗೇ ಮುಗಿಯುವುದಿಲ್ಲ. ಅದು ಒಂದು ಬೆಳೆಯ ಒಂದೇ ತಳಿಗೆ ಆಸರೆಯಾಗಿಲ್ಲ. ಹಲವು ಬೆಳೆಗಳ ವಿವಿಧ ತಳಿಗಳು ಅಲ್ಲಿವೆ. ಇಂತಹ ವೈಶಿಷ್ಟ್ಯದ ಭೂಮಿಯನ್ನು ಪೋಷಿಸುತ್ತಿರುವವರು ಕಾಸರಗೋಡಿನ ಬೆಳ್ಳೆಚ್ಚಾರು ಮನೆಯ ಮುಳ್ಳಂಕೊಚ್ಚಿ ಗೋವಿಂದ ಭಟ್‌ ಅವರು.

1960–70ರ ಅವಧಿಯಲ್ಲಿ ರಸಾಯನಶಾಸ್ತ್ರ ಮತ್ತು ಕಾನೂನು ಪದವಿ ಪಡೆದುಕೊಂಡ ಅವರನ್ನು ಸೆಳೆದದ್ದು ಕೃಷಿ ಕ್ಷೇತ್ರ. ಅಂದಿನಿಂದ ಇಂದಿನವರೆಗೂ ಕೃಷಿ ಕ್ಷೇತ್ರದ ವಿವಿಧ ಪ್ರಯೋಗಗಳಿಗೆ ಒಗ್ಗಿಕೊಂಡಿರುವ ಅವರು ಹಲವು ತಳಿಗಳನ್ನು ಸಂಗ್ರಹಿಸಿ ಉಳಿಸಿದ್ದಾರೆ. ಒಂದೇ ಸಸಿಯ ಹತ್ತಾರು ತಳಿಗಳೂ, ಹೆಸರು ಇಲ್ಲದ ತಳಿಗಳೂ ಅವರ ತಾಕಿನಲ್ಲಿವೆ.

ಏಲಕ್ಕಿ, ಕಾಫಿ, ಕರಿಮೆಣಸು, ತೆಂಗು, ಬಾಳೆ, ಅಡಿಕೆ, ರಬ್ಬರ್‌, ಜಾಯಿಕಾಯಿ, ಲವಂಗ, ತಾಳೆ, ದಾಲ್ಚಿನಿ, ಔಷಧೀಯ ಸಸ್ಯಗಳು, ರಂಬೂಟಾನ್‌, ಎಗ್‌ಫ್ರುಟ್‌, ಸ್ಟಾರ್‌ ಆಪಲ್‌, ವೆಲ್ವೆಟ್‌ ಆಪಲ್‌ ಮೊದಲಾದ ಹಣ್ಣಿನ ಮರಗಳೂ, ಬಗೆ ಬಗೆಯ ತರಕಾರಿಗಳೂ, ರಂಗು ರಂಗಿನ ಹೂಗಳ ತಳಿಗಳು ಅಲ್ಲಿವೆ.

ಅಡಿಕೆಯಲ್ಲೂ ವೈವಿಧ್ಯ
ಒಂದು ಗೊನೆ ಹಿಡಿಯುವ, ಎರಡು ಗೊನೆ ಇರುವ, ಮೂರೇ ಗೊನೆ ಬಿಡುವ ಅಡಿಕೆಯೂ ಅವರಲ್ಲಿದೆ. ಹಿರೇಹಳ್ಳಿ ಗಿಡ್ಡಕ್ಕೆ ಸಮಾನವಾದ, ಹತ್ತಿರ ಹತ್ತಿರ ಗಂಟು ಇರುವ ಒಂದು ಗೊನೆ ಹಿಡಿಯುವ ಅಡಿಕೆ, ಸಾಮಾನ್ಯ ಎತ್ತರ ಬೆಳೆಯುವ ಎರಡು ಗೊನೆ ಹಿಡಿಯುವ ಅಡಿಕೆ, ದೊಡ್ಡ ಗಾತ್ರದ ಮೂರು ಗೊನೆ ನೀಡುವ ಅಡಿಕೆ ತಳಿ ಅವರಲ್ಲಿದೆ. ಅಡಿಕೆ ತೋಟದಲ್ಲಿ ಅಂತರ ಗಿಡವಾಗಿ ಬೆಳೆಸಲು ಇದು ಉತ್ತಮ ಎನ್ನುವ ಭಟ್ಟರ ತೋಟದಲ್ಲಿ ಮೋಹಿತ್‌ ನಗರ ಮತ್ತು ಸ್ಥಳೀಯ ತಳಿಗಳ ಅಡಿಕೆಯೂ ಇದೆ. ಅವರ ಆದ್ಯತೆಯೂ ಸ್ಥಳೀಯ ತಳಿಗೇ.

ಬಗೆ ಬಗೆ ಔಷಧಿ ಸಸ್ಯ ತಳಿ
ಔಷಧೀಯ ಗುಣ ಇರುವ ವಾತಂಕಳ್ಳಿ, ಬಾಪಿನ ಸೊಪ್ಪು, ಕ್ಯಾನ್ಸರ್‌ಗೆ ಔಷಧಿಯಾಗಿ ಬಳಕೆಯಾಗುವ ಅಂಚಿಕಾಯಿ, ಸರ್ಪ ಸುತ್ತು ನಿವಾರಿಸಬಲ್ಲ ಒಳ್ಳೆಕೊಡಿ, ಎಲುಕೋಟು, ಎರ್ಚಿಕೋಟು ಮೊದಲಾದ ಮದ್ದಿನ ಗಿಡಗಳೂ ಭಟ್ಟರ ತೋಟದ ಬದಿಯಲ್ಲಿದೆ. ಎಲುಬಿನ ತೊಂದರೆಗೆ ದಿವ್ಯೌಷಧವಾಗಿ ಇದು ಬಳಕೆಯಾಗುತ್ತಿದೆ. ಗಿಣಿಕೆ ಹಣ್ಣು, ನೋಣಿ ಗಿಡಗಳೂ ಅವರ ಬಳಿ ಇವೆ.

ನವ ತಳಿಯ ಜಾಯಿಕಾಯಿ
ಅಡಿಕೆ ತೋಟದ ಮಧ್ಯೆ ಜಾಯಿಕಾಯಿಯ 9 ತಳಿಗಳನ್ನು ಜೋಪಾನ ಮಾಡಿದ್ದಾರೆ. 12 ಗ್ರಾಂ ತೂಗುವ ಜಾಯಿ ಕಾಯಿ ಇದ್ದು, 20 ಗ್ರಾಂ ತೂಕದ ಜಾಯಿ ಕಾಯಿ ಇದೆ ಎಂಬ ಮಾಹಿತಿ ಸಿಕ್ಕಿದೆ. ಅದನ್ನೂ ಸಂಗ್ರಹಿಸಬೇಕು ಎಂದಿದ್ದಾರೆ. ಬಾಳಾ ಸಾಹೇಬ್‌ ಕೃಷಿ ವಿವಿ ಡೆಪೋಲಿಯ ಕೊಂಕಣ್‌ ಸ್ವಾದ್‌, ಕೊಂಕಣ್‌ ಶ್ರೀಮಂತಿ, ಸುಗಂಧಿ, ಕೇರಳ ಸಂಬಾರ ಮಂಡಳಿಯವರು ಅಭಿವೃದ್ಧಿ ಪಡಿಸಿರುವ ವಿಶ್ವಶ್ರೀ ತಳಿಗಳೂ ಇವೆ. ಹೆಸರು ಇಲ್ಲದ ಸ್ಥಳೀಯ ತಳೀಯ 5 ತಳಿಗಳೂ ಇದ್ದು, ಅವುಗಳ ತೂಕ 12ರಿಂದ 13 ಗ್ರಾಂ ಇರುತ್ತದೆ ಎಂಬ ಮಾಹಿತಿಯೂ ಅವರಲ್ಲಿದೆ. ಅಡಿಕೆ ತೋಟದ ಬದಿಯಲ್ಲಿ ಕೋಕೊ ಬೆಳೆಯೂ ಇದೆ. ಅಡಿಕೆ ತೋಟದ ಪಕ್ಕದಲ್ಲಿರುವ 1 ಎಕರೆ ಜಾಗದಲ್ಲಿ ಸುಮಾರು 60 ತಾಳೆ ಸಸಿಗಳನ್ನು ಪೋಷಿಸುತ್ತಿದ್ದಾರೆ.

ಜಾಯಿಕಾಯಿಯಲ್ಲಿ ಗಂಡು ಮರವನ್ನು 4 ಅಡಿ ಎತ್ತರದಲ್ಲಿ ಕತ್ತರಿಸಿ ಅದಕ್ಕೆ ಹೆಣ್ಣು ಮರದ ಚಿಗುರನ್ನು ಕಸಿ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು. ತೋಟದಲ್ಲಿ ಒಂದು ಗಂಡು ಮರ ಇದ್ದರೂ ಪರಾಗಸ್ಪರ್ಶಕ್ಕೆ ಸಾಕಾಗುತ್ತದೆ ಎಂಬ ಮಾಹಿತಿಯನ್ನೂ ಅವರು ನೀಡಿದರು.

ಕಾಫಿಯಲ್ಲಿ ಆರ್‌ ಅಂಡ್‌ ಸಿ, ರೊಬಾಸ್ಟ, ಅರೆಬಿಕ್‌, ಸೆಲೆಕ್ಷನ್‌ 5, 7 ಮೊದಲಾದ ತಳಿಗಳು ಇದ್ದು, ಕಾಫಿ ನಾಡಿನಲ್ಲಿ ಸಿಗುವ ಇಳುವರಿಗಿಂತ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎಂಬಂತೆ ಅಡಿಕೆ ತೋಟದ ಮಧ್ಯೆ ಇರುವ ಕಾಫಿ ಗಿಡಗಳು ಕಾಯಿಬಿಟ್ಟಿವೆ.
ಗಣಪತಿ ಬಿದಿರು ಎಂಬ ತಳಿಯೂ ಅವರ ತೋಟದಲ್ಲಿದೆ.  ಮತ್ತೊಂದು ಬಗೆಯದ್ದು, ಪರೆ ಬಿದಿರು. ಇದರ ಒಂದು ಗಂಟಿನಲ್ಲಿ 14 ಸೇರು ಭತ್ತ ಹಿಡಿಯಬಲ್ಲುದು. ಇದು 130 ಅಡಿ ಎತ್ತರಕ್ಕೆ ನೇರವಾಗಿ ಬೆಳೆಯಬಲ್ಲ ಸಾಮರ್ಥ್ಯ ಹೊಂದಿದೆ ಎಂಬುದನ್ನೂ ವಿವರಿಸಿದರು.
ಮಾವಿನಲ್ಲಿ ಸಿಂಧೂರ ಎಂಬ ವಿಶಿಷ್ಟ ತಳಿ ಅವರ ಬಳಿ ಇದೆ. ಅದರಲ್ಲಿ ಗೊರಟೇ ಇಲ್ಲ. ಬಾಳೆಯಲ್ಲಿ ಸಾಮಾನ್ಯ ತಳಿಗಳಲ್ಲದೆ ಹೂ ಬಾಳೆ, ಕರ್ಪೂರ ಬಾಳೆ ಎಂಬ ತಳಿಗಳೂ ಅವರಲ್ಲಿವೆ. ಕೋವನ್‌ ಚಿಕ್ಕು, ಬಿಳಿ ಸಪೋಟ, ಸುಳಿದ ದೊಡ್ಡ ತೆಂಗಿನಕಾಯಿಯಷ್ಟು ಗಾತ್ರದ ಎಗ್‌ಫ್ರುಟ್‌ ತಳಿಗೂ ಭಟ್ಟರು ಜಾಗ ನೀಡಿದ್ದಾರೆ.

ಝೈಲಾನಿಕಮ್‌ ಸಿನ್ನಮಾನ್‌ ದಾಲ್ಚಿನಿಯ ಉತ್ತಮ ತಳಿಯಾಗಿದ್ದು, ಅದರ ಸೊಪ್ಪಿಗೆ ಉತ್ತಮ ಬೇಡಿಕೆ ಇದೆ. ಇದನ್ನು ಕೃಷಿಕರು ಬೇಲಿಯಾಗಿಯೂ ಬಳಸಬಹುದು. ನೀರಿನ ಅವಶ್ಯಕತೆ ಕಡಿಮೆ ಕೇವಲ ಮಳೆ ನೀರೇ ಸಾಕಾಗುತ್ತದೆ. ಎಲೆಯಲ್ಲಿ ಸಾಂಬಾರ ಪದಾರ್ಥಗಳ ಗುಣ ಹೊಂದಿರುವ ಆಲ್‌ಸ್ಪೈಸಿಯೂ ಅವರಲ್ಲಿದೆ.

ಭಟ್ಟರ ಮನೆಯ ಅಂಗಳದ ಸುತ್ತ ಬಗೆ ಬಗೆ ಹೂಗಳ ಘಮ. ದಾಸವಾಳ, ಡ್ರೈ ಫ್ಲವರ್‌, ನಿತ್ಯಪುಷ್ಪ, ಬಳ್ಳಿ ಹೂಗಳು, ಕ್ಯಾಕ್ಟಸ್‌, ಅಂಥೋರಿಯಂ, ಟಾರ್ಚ್‌ ಲಿಲ್ಲಿ, 4 ಬಗೆಯ ತಾವರೆಗಳು, ಬೋಗನ್‌ವಿಲ್ಲ ಮೊದಲಾದವುಗಳನ್ನೂ ಅವರು ಪೋಷಿಸುತ್ತಿದ್ದಾರೆ.

ಏಲಕ್ಕಿ ವೈವಿಧ್ಯ
ಏಲಕ್ಕಿಯ 2 ತಳಿಗಳೂ ಅವರಲ್ಲಿವೆ. ಗೇರುಬೀಜಕ್ಕೆ ಪರ್ಯಾಯ ಎನ್ನಬಹುದಾದ ಚೆಸ್‌ನಟ್‌ ಕೂಡ ಅವರ ತೋಟದಲ್ಲಿದೆ. ಒಟ್ಟು ಆರು ತಳಿಗಳ ಚೆಸ್‌ನಟ್‌ನ ಒಂದೊಂದು ತಳಿಯೂ ವಿಭಿನ್ನ ಕಾಯಿ ನೀಡುವಂಥದ್ದು. ಒಂದು ಬಗೆಯ ತಳಿಯಲ್ಲಿ ಕವರಿಂಗ್‌ ಬಾಲ್ ತೆರನಾದ ಕಾಯಿಯನ್ನು ಒಡೆದರೆ ಒಳಗೆ ಗೇರುಬೀಜದ ತೆರನಾದ ಕಾಯಿ ಇರುತ್ತದೆ. ಮತ್ತೊಂದು ತಳಿಯ ಗೊಂಚಲಲ್ಲಿ 3 ಗೇರುಹಣ್ಣಿನ ತೆರನಾದ ಕಾಯಿ ಸಿಗುತ್ತದೆ. ಮಗದೊಂದು ತಳಿಯಲ್ಲಿ ಒಂದೇ ಗೇರುಹಣ್ಣಿನ ತೆರನಾದ ಫಸಲು ನೀಡುವ ತಳಿಯೂ ಇದೆ. ಗೇರು ಬೀಜದಂತೆ ಸ್ವಾದ ಇರುವ ಈ ಕಾಯಿಯನ್ನು ಸವಿಯಲು ಮಂಗಗಳ ಹಾವಳಿ ಅವರನ್ನು ಬಿಡುತ್ತಿಲ್ಲ.

‘ಆತ್ಮಸಂತೋಷಕ್ಕಾಗಿ ತಳಿಗಳನ್ನು ಸಂರಕ್ಷಿಸುತ್ತಿದ್ದೇನೆ. ಇದೊಂದು ಹವ್ಯಾಸವಾಗಿದೆ.  69–70ರಲ್ಲಿ ರಸಾಯನಶಾಸ್ತ್ರ ಪದವೀಧರನಾಗಿ ಬಳಿಕ ಕಾನೂನು ಪದವೀಧರನಾಗಿ ಇದೇ ಹವ್ಯಾಸದಲ್ಲಿದ್ದೇನೆ. ತಳಿಗಳನ್ನು ಸಂರಕ್ಷಣೆ ಮಾಡುವಲ್ಲಿ ನರ್ಸರಿಗಳ ಪಾತ್ರವೂ ಮುಖ್ಯ. ಸಸಿಗಳನ್ನು ನಕಲಿ ಕಸಿ ಮಾಡುವುದನ್ನು ಅವರು ನಿಲ್ಲಿಸಬೇಕು.

ಈ ಬಗ್ಗೆ ಇಲಾಖೆಗಳು ಕಟ್ಟುನಿಟ್ಟಾಗಿ ನೋಡಿಕೊಂಡರೆ ಇದು ಸಾಧ್ಯ ಎನ್ನುವ ಕಳಕಳಿ ಹೊಂದಿರುವ ಗೋವಿಂದ ಭಟ್ಟರಿಗೆ ಸಾಂಬಾರ ಮಂಡಳಿ, ತೋಟಗಾರಿಕಾ ಸಂಶೋಧನಾ ಸಂಸ್ಥೆಗಳ ಜತೆಗೆ ಹತ್ತಿರದ ನಂಟಿದೆ. ಜಾಯಿಕಾಯಿಯ ಬಗ್ಗೆ ಅವರ ಪುತ್ರ ಮುರಳಿ ಸುಬ್ಬರಾವ್‌ ಸಂಶೋಧನೆಯನ್ನೂ ಮಾಡುತ್ತಿದ್ದಾರೆ. ಇದಕ್ಕಾಗಿ ಬೇರೆಬೇರೆ ಕಡೆಗಳಿಂದ ಸಸಿಗಳನ್ನು ಸಂಗ್ರಹಿಸಿ ಅವುಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT