ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸ್ಮೋಪಾಲಿಟನ್‌ ಯುಗದ ಮಹಿಳೆ

Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ಮೊನ್ನೆ ಹಿರಿಯರೊಬ್ಬರು  ಜಯನಗರದ  ಹೋಟೆಲ್ ಒಂದರಲ್ಲಿ ಊಟಕ್ಕೆ ಕರೆದಿದ್ದರು. ಹೋಟೆಲಿನ ಹೆಸರನ್ನು ಮಾತ್ರ ಕೇಳಿದ್ದವಳು  ಹೋಟೆಲಿಗೆ ಹೋಗುವ ದಾರಿ ಗೊತ್ತಾಗದೆ ಸರ್ಕಲ್‌ನ ಸಿಗ್ನಲ್‌ನಲ್ಲಿ ಅವರಿಗಾಗಿ ಕಾಯುತ್ತ ನಿಂತೆ.  ಹೇಳಿದ  ಸಮಯಕ್ಕೆ  ಹತ್ತು ನಿಮಿಷ ತಡವಾಗಿ ಬಂದರು. 

ಬಂದವರೇ ಅವರು ಕೇಳಿದ್ದು ‘ತುಂಬಾ ಬೇಗ ಬಂದೆಯಾ?’ ‘ಇಲ್ಲ ಇಲ್ಲ ಹತ್ತು ನಿಮಿಷ ಆಯ್ತು ಅಷ್ಟೆ’ ಎಂದೆ. ‘ಬೆಂಗಳೂರಿನ ರಸ್ತೆಗಳಲ್ಲಿ ಹೆಣ್ಣುಮಕ್ಕಳನ್ನು ಹೆಚ್ಚು ಹೊತ್ತು ಕಾಯಿಸಬಾರದು, ಕಾಲ  ಸರಿಯಿಲ್ಲ. ನಿನಗೆ ತುಂಬ  ಹಸಿವಾಗಿರಬಹುದು. ಸಾರಿ ಕಣಮ್ಮಾ, ಹತ್ತು ನಿಮಿಷ ಲೇಟಾಯ್ತು’ – ಹಿರಿಜೀವದ ಅಂತಃಕರಣಕ್ಕೆ ಕಣ್ಣಂಚು  ಒದ್ದೆಯಾಗಿತ್ತು. ಮೌನವಹಿಸಿದ್ದೆ. ಆದರೂ ಪ್ರಶ್ನೆ ಕೊರೆಯುತ್ತಿತ್ತು.

‘ಕಾಲ ಸರಿಯಿಲ್ಲ’ ಎನ್ನುವ ಭಯ  ಅವರಿಂದ ಈ ಮಾತನ್ನಾಡಿಸಿತು. ದುರಂತವೆಂದರೆ ನಾನು ನಿಂತಿದ್ದು  ಜಯನಗರದ ಜನನಿಬಿಡ ಪ್ರದೇಶದ ಸರ್ಕಲ್‌ನಲ್ಲಿ. ಸಿಗ್ನಲ್‌ನಲ್ಲಿ ನಿಂತ ಹತ್ತೇ ನಿಮಿಷದಲ್ಲಿ ಎಷ್ಟೊಂದು ಕುತೂಹಲದ  ಕಣ್ಣುಗಳನ್ನು, ಪ್ರಶ್ನಾರ್ಥಕ ಚಿಹ್ನೆಗಳನ್ನು ಎದುರಿಸಿದ್ದೆ! ಕೊನೆಗೆ ಮೊಬೈಲ್‌ಗೆ ಶರಣಾಗಿ ನೋಡುವ ನೋಟಗಳನ್ನು ತಪ್ಪಿಸಿಕೊಂಡಿದ್ದೆ.

ಪ್ರಾಕೃತಿಕವಾಗಿ, ಜೈವಿಕವಾಗಿ ತನಗೆ ತಾನೇ ಅನನ್ಯವಾಗಿಯೂ ಪುರುಷನಿಗೆ  ಸಾಮಾನಳಾಗಿ ಗೌರವ ಪಡೆಯಬೇಕಾಗಿದ್ದ ಸ್ತ್ರೀ ಸಾಮಾಜಿಕವಾಗಿ ಅನೇಕ  ಅವಮಾನಗಳನ್ನೂ,  ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೊರಬೇಕು, ಹೆರಬೇಕು, ತಿಂಗಳು ತಿಂಗಳು ಮುಟ್ಟಾಗಬೇಕು ಎಂಬ ಜೈವಿಕ ಸಮಸ್ಯೆಯಷ್ಟೇ ಅಲ್ಲ.

ಪ್ರೀತಿಸುವುದು, ಅದರಾಚೆಗೆ  ಸಾಮಾಜಿಕವಾದ ಸಮಸ್ಯೆಗಳು ಅವಳನ್ನು ನಲುಗುವಂತೆ  ಮಾಡುತ್ತವೆ. ಕಾಸ್ಮೋಪಾಲಿಟನ್ ಯುಗದಲ್ಲಿ ನಾವಿದ್ದೇವೆ ಎಂಬ ಪ್ರಜ್ಞೆಯನ್ನು  ಮೂಡಿಸಬಲ್ಲ ಅನೇಕ ಸೌಲಭ್ಯಗಳು ಅಂಗೈಯಲ್ಲಿವೆ.

ಬೆಂಗಳೂರಿನ ಬಸ್ಸುಗಳನ್ನೇ ನೋಡಿ! ಕಾಸ್ಮೊಯುಗದಲ್ಲಿ ಸ್ತ್ರೀ ಯಾವ ಸ್ಥಾನದಲ್ಲಿದ್ದಾಳೆ? ಗೆಳತಿಯಲ್ಲಿ ಗುಸು ಗುಸು ಮಾತನಾಡುತ್ತ ಕಿಸಕ್ಕನೆ ನಗುವ ಕಾಲೇಜು ಕನ್ಯೆಯರು, ಮಗುವಿನ ಸ್ಕೂಲ್‌ ಬ್ಯಾಗ್‌, ಟಿಫನ್‌ ಕ್ಯಾರಿಯರ್‌, ಜೊತೆಗೆ ಮಗು – ಮೂರನ್ನೂ ಒಂದೇ ಕೈಯಿಂದ ಸಂಭಾಳಿಸುತ್ತ ಮತ್ತೊಂದು ಕೈಯನ್ನು ಮೇಲಿನ ಗ್ರಿಲ್‌ನೆಡೆಗೆ ಚಾಚುವ ತಾಯಿ, ಸುಸ್ತಾಗಿ ಸೋತು ಜೋಲು ಮೋರೆ ಮಾಡಿಕೊಂಡು ಒಂದು ಕೈಯಲ್ಲೇ ಜೋತಾಡುವ ಕೆಲಸಕ್ಕೆ ಹೋಗುವ ಸ್ತ್ರೀ – ಯಾರೂ ಕೂಡ ಹಿಂದುಗಡೆ ಸೀಟು ಖಾಲಿಯಿದ್ದರೂ ಬಸ್ಸಿನ ಮುಂದುಗಡೆಯಲ್ಲೇ ಹ್ಯಾಪ್‌ ಮುಖ ಮಾಡಿ ನಿಲ್ಲುತ್ತಾರೆಯೇ ವಿನಾ ಗಂಡಸರ ಜಾಗದಲ್ಲಿ ನಿಲ್ಲುವ ಕೂರುವ  ಧೈರ್ಯ ಮಾಡುವುದಿಲ್ಲ.

ಎಲ್ಲಿದ್ದಾಳೆ ಸಮಾನತೆಗೆ ಹಂಬಲಿಸುವ ಸ್ತ್ರೀ? ಇವತ್ತು ಪುರುಷನೊಡನೆ ಸಮಾನತೆಗಿಂತ ಸಮಾನ ವೇತನ, ಗೌರವಕ್ಕಿಂತ ಹೆಚ್ಚಾಗಿ ಭಯಮುಕ್ತ ವಾತಾವರಣ ಸೃಷ್ಟಿಯಾಗಬೇಕಾಗಿದೆ. ಮನೆಯಲ್ಲಿ ಕೆಲಸ ಮಾಡುವ ಕಚೇರಿಯಲ್ಲಿ, ಸಮಾಜದಲ್ಲಿ ಸ್ತ್ರೀಗೆ ಇವತ್ತು ಬೇಕಾಗಿರುವುದು ಭಯಮುಕ್ತವಾದ ವಾತಾವರಣ. ಸಾಮಾನ್ಯವಾಗಿ ಸ್ತ್ರೀಯರ ಜಾಣತನದಲ್ಲಿ ಹೆಚ್ಚಿನ ಪಾಲು ತನ್ನನ್ನು ತಾನು ಹೇಗೆ ಕಾಪಾಡಿಕೊಳ್ಳಬಲ್ಲೆ? ಎಂಬುದರಲ್ಲಿಯೇ ವಿನಿಯೋಗವಾಗುತ್ತದೆ.

‘ಅಯ್ಯೋ ಯಾಕೆ ಐದು  ವರ್ಷದ ಮಗೂಗೆ ಈ ಬೇಸಿಗೆಯಲ್ಲಿ ಈ ರೀತಿ ಬಟ್ಟೆ ತುರುಕಿ ಪ್ಯಾಕ್‌ ಮಾಡಿದ್ದೀರಿ?’ ಕೆಲಸದ ನಡುವೆ ಸಹೋದ್ಯೋಗಿ ಹತ್ತಿರ ಕೇಳಿದ್ದೆ. ‘ನಾನು ಇಲ್ಲಿ ಕೆಲಸ ಮುಗ್ಸಿ, ಬಸ್‌ ಹಿಡಿದು ಮನೆ ಸೇರೋ ಹೊತ್ತಿಗೆ ನನ್ನ ಮಗಳು ಸ್ಕೂಲಿಂದ ಬಂದು ಡೇ–ಕೇರ್‌ನಲ್ಲಿ ಇರಬೇಕು ಕಣ್ರೀ. ಹೆಣ್ಣುಮಗು, ಭಯ ಆಗುತ್ತೆ ನಾನು ಅದಕ್ಕೆ ಫುಲ್‌ ಡ್ರೆಸ್‌ ಹಾಕ್ಬಿಡ್ತೀನಿ’ – ಕೆಲಸಕ್ಕೆ ಹೋಗುವ ತಾಯಿ ಆತಂಕಪಟ್ಟು ಹೇಳಿದಳು.

ಮತ್ತೊಬ್ಬ ಹಿರಿಯ ಸಹೋದ್ಯೋಗಿಯದು ಮತ್ತೊಂದು ಆತಂಕ. ‘ಪಿ.ಯು.ಸಿ. ಓದುವ ಮಗಳು, ಟ್ಯೂಷನ್‌ಗೆ ಕಳಿಸ್ತೀನಿ. ನಮ್ಮೆಜಮಾನ್ರೂ ಜೊತೆಲೇ ಹೋಗ್ತಾರೆ, ಚೆನ್ನಾಗಿ ಟ್ಯೂಷನ್‌ ಹೇಳ್ತಾರೆ ನಿಜ. ಯಾವ ಹುತ್ತದಲ್ಲಿ ಯಾವ ಹಾವೋ, ಆಮೇಲೆ ಯಾವನಿಗೆ ಬೇಕು ತಲೆನೋವು?  ನಮ್ಮೆಚ್ಚರಿಕೆಯಲ್ಲಿ ನಾವಿರಬೇಕು.’ ಹೀಗೆ – ‘ಎಚ್ಚರಿಕೆಯಲ್ಲೇ ಇರಬೇಕು’ ಎಂಬುದರಲ್ಲಿಯೇ ಸ್ತ್ರೀಯ ಅರ್ಧಶಕ್ತಿ ವ್ಯಯವಾಗುತ್ತದೆ.

ಸ್ತ್ರೀ ಎಷ್ಟೇ ಬುದ್ಧಿವಂತೆಯಾಗಿರಲಿ, ದೊಡ್ಡ ಹುದ್ದೆಯಲ್ಲಿರಲಿ, ಗೌರವಕ್ಕೆ ಪಾತ್ರವಾಗಬಲ್ಲ ಎಷ್ಟೇ ಕೆಲಸ ಮಾಡಿರಲಿ  ಒಂದಿಲ್ಲೊಂದು ಕಡೆ ಅವಳು ಹೆಣ್ಣು ಎಂದೇ ಅವಮಾನಿತಳಾಗುತ್ತಾಳೆ. ಗಂಡಸರ ಬಾಯಲ್ಲಿ, ಅವಳು ‘ಆ ಯಮ್ಮ’ ಆಗುತ್ತಾಳೆ. ‘ಅವರು’ ಎನ್ನುವ ಶಬ್ದವನ್ನು ಸ್ತ್ರೀಗೆ ಒಬ್ಬ ಪುರುಷ ಇನ್ನೂ ಬಳಸುತ್ತಿಲ್ಲ.

’ಕೆಲಸದ ಧಾವಂತದಲ್ಲಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ತ್ರೀಯನ್ನು ನೋಡಿ ಆಟೋ ಡ್ರೈವರ್‌ನೊಬ್ಬ ಕಮೆಂಟ್‌ ಮಾಡುತ್ತಾನೆ. ‘ಕೆಲಸಕ್ಕೋಗ್ತೀವಿ ಅಂತ ಕಾರ್‌ ಸ್ಟೇರಿಂಗ್‌ ಹಿಡ್ಕೊಂಡು ರಸ್ತೆಗೆ ಬಂದಿದ್ದಾರೆ. , ಮಕ್ಳನ್ನೋಡ್ಕೊಂಡು ಮನೆಲಿರೋದಕ್ಕೆ ಏನ್‌ ರೋಗ ಇವ್ರಿಗೆ?’ ಇದು ಕೇವಲ ಅನ್‌ಎಜುಕೇಟೆಡ್‌ ಮಾತಲ್ಲ. ಕೆಲಸ ಮಾಡುವ  ಸ್ಥಳದಲ್ಲೂ ಇಂತಹ ಎಷ್ಟೋ ಮಾತುಗಳನ್ನು ಕೇಳುವ ಕರ್ಮ ಸ್ತ್ರೀಯರದ್ದಾಗುತ್ತದೆ.

ಕೆಲಸ ಮಾಡುವ ಕಡೆಗಳಲ್ಲಿ  ಪುರುಷನಿಗೆ ಸ್ತ್ರೀಯ ಮೇಲಿರುವ ಮೊಟ್ಟಮೊದಲ ಸಿಟ್ಟೆಂದರೆ ‘ತನ್ನನ್ನು ಕ್ರಾಸ್‌ ಮಾಡಿ ಮುಂದಕ್ಕೆ ಹೋಗಿ ಬಿಡುತ್ತಾಳೆ’ ಎನ್ನುವುದು ಪುರುಷರ ಅಹಂಕಾರ. ಅವಳನ್ನು ಮಾನಸಿಕವಾಗಿ ಕುಗ್ಗಿಸಲು ತೊಡಗುತ್ತಾರೆ. ಆಗ ವಿನಾ ಕಾರಣ ಕಿರುಕುಳ ಆರಂಭವಾಗುತ್ತದೆ. ಬೇಕಾದಾಗ ರಜೆ ಕೊಡದಿರುವುದರಿಂದ ಆರಂಭವಾಗುವ ಕಿರುಕುಳ ಅವರವರ ನೈತಿಕತೆಯ ಮಟ್ಟಕ್ಕೆ ಅನುಗುಣವಾಗಿ ಬೇರೆ ಬೇರೆಯ ಸ್ವರೂಪಗಳನ್ನು, ಆಯಾಮಗಳನ್ನು ಪಡೆದುಕೊಳ್ಳುತ್ತದೆ.

ಸ್ವಲ್ಪ ಮೆತ್ತಗಿರುವ ಸ್ತ್ರೀಯರಾದರೆ ಪುರುಷರ ಮರ್ಜಿ ಕಾಯವ ಹಂತಕ್ಕೆ ಇಳಿದುಬಿಟ್ಟರೆ, ಗಟ್ಟಿಗಿತ್ತಿಯಾಗಿರುವವರು ‘ಬಜಾರಿ’, ‘ಗಂಡುಬೀರಿ’ ಎಂಬ ಹಣೆಪಟ್ಟಿಯೊಂದಿಗೆ, ‘ಆ ಯಮ್ಮ ಸರಿಯಿಲ್ಲ’ ಎಂಬ ಬಿರುದಿನೊಂದಿಗೆ ಬದುಕಬೇಕಾದ ಸುಳ್ಳು ಸುಳ್ಳೇ ಅನಿವಾರ್ಯತೆಯನ್ನು  ಸೃಷ್ಟಿಸುವಲ್ಲಿ ಪುರುಷ ಯಶಸ್ವಿಯಾಗುತ್ತಾನೆ. ಅಫೀಸು, ಬಾಸುಗಳೆಲ್ಲ ಸ್ತ್ರೀಯರನ್ನು ಅಮಾನುಷವಾಗಿ ಬಳಸಿಕೊಂಡ ಘಟನೆಗಳೇನೂ ಕಡಿಮೆಯಿಲ್ಲ.

ಇವತ್ತಿಗೂ ಅವಳ ಬದುಕು ಹೆಚ್ಚು  ಮಾತನಾಡಬಾರದು; ಹೆಚ್ಚು ನಗಬಾರದು; ಹೆಚ್ಚು ಬೆರೆಯಬಾರದು; ಜಾಣತನ ತೋರಿಸಬಾರದು. ಗತ್ತು, ಗರ್ವ, ಹೆಮ್ಮೆ – ಎಂಬ ಪದಗಳು ಸ್ತ್ರೀಯರಿಗಲ್ಲ ಎಂಬ ನಿಷೇಧಿತ ವಲಯದಲ್ಲೇ ಸ್ತ್ರೀ ಬದುಕಬೇಕಾಗಿದೆ. ಕಾಲ ಎಷ್ಟೇ ಬದಲಾಗಿದೆ ಎಂದರೂ ಸ್ತ್ರೀಸಮಸ್ಯೆ ಇನ್ನೂ ಜಟಿಲವಾಗಿದೆ ಎಂಬುದು ಬಿಟ್ಟರೆ ಅವಳು ಹಲವಾರು ರೀತಿಯಲ್ಲಿ ನಲುಗುತ್ತಲೇ ಇದ್ದಾಳೆ. ಇವತ್ತಿಗೂ ಒಬ್ಬ ಮಾನವಂತಸ್ತ್ರೀ ಅವಳ ಶೀಲದ ವಿಷಯವಾಗಿಯೇ ಹೆಚ್ಚು ಗಮನ ಹರಿಸಬೇಕಾಗಿದೆ.

ಅಡುಗೆ ಮನೆಯೊಂದನ್ನು ಹೊರತುಪಡಿಸಿ ಉಳಿದಂತೆ ಎಲ್ಲವೂ ಸ್ತ್ರೀಗೆ ನಿಷೇಧಿತ ವಲಯವೇ, ಹಲವಾರು ನಿಷೇಧಗಳೇ ಅವಳನ್ನು ಈಗ  ಅವಳ ಪ್ರಜ್ಞೆಯನ್ನೂ ನಿಯಂತ್ರಿಸುತ್ತ ಸಾಗುತ್ತವೆ. ಹೀಗಿದ್ದೂ ಅವಳ ಅಸ್ತಿತ್ವ ಹಲವು ಸಲ ಪುರುಷನೆದುರಿಗೆ ಸಾಬೀತಾಗುತ್ತಲೇ ಇದೆ.

ಮೊನ್ನೆ ಸದನದಲ್ಲಿ ಮಗುವಿಗೆ ಹಾಲುಣಿಸುತ್ತ ಉತ್ತರಿಸುತ್ತಿರುವ ಬ್ರೆಜಿಲ್‌ ದೇಶದ  ಸಚಿವೆ ಮ್ಯಾನುಯೆಲಾ ಅವಿಲಾ ಅವರ ಚಿತ್ರ ವಾಟ್ಸ್ಆ್ಯಪ್‌ನಲ್ಲಿ ಹರಿದಾಡಿತು. ಭಾರತದಂತಹ ದೇಶದಲ್ಲಿ ಸದ್ಯ ಇದರ ಕಲ್ಪನೆಯೂ  ಅಸಾಧ್ಯ. ಆದರೆ ಜಗತ್ತು ಸರಿಯಾದ ಕ್ರಮದಲ್ಲಿ ಮುಂದುವರಿಯಬೇಕೆಂದರೆ ಸ್ತ್ರೀಯ ತಾಯ್ತನಕ್ಕೂ, ಅವಳ ಜಾಣತನಕ್ಕೂ ಅಷ್ಟೇ ಮಹತ್ವವನ್ನೂ , ಗೌರವವನ್ನೂ, ಮನ್ನಣೆಯನ್ನೂ ಕೊಡಬೇಕಾಗಿದೆ. ಪುರಷವರ್ಗ ತನ್ನನ್ನು ತಾನು ಈ ದಿಸೆಯಲ್ಲಿ ತಿದ್ದಿಕೊಳ್ಳಬೇಕಾಗಿದೆ.

ಪ್ರತಿ ಸಂಸ್ಥೆ, ಕಚೇರಿ, ಸಾಮಾಜಿಕ ಕ್ಷೇತ್ರಗಳು ಅವಳ ವ್ಯಕ್ತಿತ್ವವನ್ನು  ಅವಳು ಎಲ್ಲ ಗೌರವಯುತ ಸಭ್ಯತೆಯೊಂದಿಗೆ ಸ್ವೀಕರಿಸಬೇಕಾದ ಅನಿವಾರ್ಯತೆಯಿದೆ; ಹಾಗೂ ಅಂತಹ ವಾತಾವರಣವನ್ನು ಕಲ್ಪಿಸಬೇಕಾಗಿದೆ. ಮನೆಯಲ್ಲೂ, ಕೆಲಸದ ಸ್ಥಳದಲ್ಲೂ ಸಮರ್ಥವಾದ ನಿಭಾಯಿಸುವಿಕೆ ಸ್ತ್ರೀಗೆ ಸಾಧ್ಯವಾಗಬೇಕಾದರೆ ಮೊಟ್ಟಮೊದಲು ಅವಳ ಸಮಸ್ಯೆಗಳು ಪರಿಹಾರವಾಗಬೇಕಾಗಿವೆ.

ಹೆಣ್ಣುಮಗುವು ಹುಟ್ಟಿನಿಂದಲೇ ತಂದೆಯೆಂಬ ಪುರುಷ, ಕೆಲವು ಕೆಟ್ಟ ಪಿ.ಟಿ. ಟೀಚರ್‌ ಇಂದ ಹಿಡಿದು ಡೇ–ಕೇರ್‌, ಅಟೆಂಡೆನ್ಸ್ ಹಾಕುವಾಗ ಕಣ್ಣಲ್ಲೇ ಕರೆಯುವ ಕಾಲೇಜು ಅಧ್ಯಾಪಕರಿಗೆ; ಡೇಟಿಂಗ್‌ ಕರೆಯುವ ಆಫೀಸು ಬಾಸು, ಹಸಿದ ಕಣ್ಣಿಂದಲೇ ಕಾಣುವ ಕೆಲವು ಪುರುಷರು, ಸಂಶಯದಿಂದಲೇ ನೋಡುವ ಸಮಾಜ  – ಎಲ್ಲದರಿಂದ ಸಮಸ್ಯೆಯನ್ನೆದುರಿಸುತ್ತದೆ.

ದುರಂತವೆಂದರೆ ಅವಳ ಪ್ರತಿಭೆಯಿಂದ ಅವಳ ಕೆಲಸದಲ್ಲಿ, ಬರುವ ಸಮಸ್ಯೆಗಳಿಗಿಂತ ಈ ತರದ ಸಮಸ್ಯೆಗಳೇ ಜಾಸ್ತಿಯಾಗಿ ಅವಳ ವ್ಯಕ್ತಿತ್ವ ನಲುಗುತ್ತದೆ, ಮುರುಟುತ್ತದೆ, ಧೈರ್ಯ ಕುಸಿಯುತ್ತದೆ. ಪುರುಷಸಮಾಜ ಉದಾತ್ತವಾದರೆ ಮಾತ್ರ ಅವಳ  ಸಮಸ್ಯೆಗಳಿಗೆ ಪರಿಹಾರ ಸಿಕ್ಕೀತು. ಅವಳೂ ಇತಿಹಾಸ ನಿರ್ಮಿಸಿಯಾಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT