ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಕ್ಕೇರಿ: ಬಿರುಗಾಳಿ ಸಹಿತ ಮಳೆ ಆರ್ಭಟ

Last Updated 17 ಏಪ್ರಿಲ್ 2014, 8:57 IST
ಅಕ್ಷರ ಗಾತ್ರ

ಕಿಕ್ಕೇರಿ: ಮಂಗಳವಾರ ಸುರಿದ ರೇವತಿ ಮಳೆಗೆ ಹೋಬಳಿಯ ವಿವಿಧೆಡೆಯ ಗ್ರಾಮಗಳ ಮನೆ, ಜಮೀನುಗಳಿಗೆ ಹಾನಿಯಾಗಿದೆ.
ಪಟ್ಟಣ ಸೇರಿದಂತೆ ಕೋಟಹಳ್ಳಿ, ತುಳಸಿ, ಉದ್ದಿನಮಲ್ಲನ ಹೊಸೂರು, ತೆಂಗಿನಘಟ್ಟ, ಮರಿಯನಹೊಸೂರು, ದಬ್ಬೇಘಟ್ಟ ಗ್ರಾಮದ ವಿವಿಧೆಡೆ ಅಪಾರ ಪ್ರಮಾಣದ ಆಸ್ತಿ–ಪಾಸ್ತಿಗೆ ಹಾನಿಯಾಗಿದೆ.

ಬಿರುಗಾಳಿ ಮಳೆ ರಭಸಕ್ಕೆ ಕೋಟಹಳ್ಳಿ ಗ್ರಾಮದ ಬಹುತೇಕ ಮನೆಗಳ ಹೆಂಚುಗಳು ಹಾರಿ ಹೋಗಿ ರಸ್ತೆಯಲ್ಲಿ ಬಿದ್ದಿವೆ. ರೈತಾಪಿ ಜನರಿರುವ ಮನೆಗಳು ಇಡೀ ರಾತ್ರಿ ಜಲಾವೃತವಾಗಿದ್ದವು. ಮನೆಯಿಂದ ನೀರು ಹೊರಹಾಕಲು ಹರಸಾಹಸಪಟ್ಟರು. ಯಾವುದೇ ಸಾವು ನೋವು ಸಂಭವಿಸದಿದ್ದರೂ ಅಪಾರವಾದ ಆಸ್ತಿ, ಭೂಮಿಗೆ ನಷ್ಟವಾಗಿವೆ. ನಂಜೇಗೌಡರ ಜಮೀನಿನಲ್ಲಿದ್ದ ಬಾಳೆ, ತೆಂಗು, ಮೆಣಸು, ಅಡಿಕೆ ತೋಟ ನಾಶವಾಗಿವೆ. ವಯೋವೃದ್ಧೆ ಕಾಳಮ್ಮನವರ ಹಳೆಯ ಮನೆ ಭಾಗಶಃ ನಾಶವಾಗಿವೆ. ಬಹುತೇಕ ರೈತರ ಜಮೀನಿನಲ್ಲಿದ್ದ ಕಬ್ಬು, ತೇಗದ ಮರ, ಸಿಲ್ವರ್ ಮರಗಳು ಮುರಿದು ಬಿದ್ದಿವೆ.

ಪಟ್ಟಣದ ರಾಮಾಚಾರ್ ಪ್ಲೇನಿಂಗ್ ಮಿಷನ್ ಅಂಗಡಿಯ ತಗಡುಗಳು ಗಾಳಿಯ ರಭಸಕ್ಕೆ ಗಾಳಿಯಲ್ಲಿ ಹಾರಿ ಹೋಗಿವೆ. ಲಕ್ಷ್ಮೀಪುರದ ಬಳಿಯ ಬಾಲಾಜಿ ರೈಸ್‌ಮಿಲ್ ಬಳಿ ಹೆದ್ದಾರಿಗೆ ಮರ ಬಿದ್ದು ವಾಹನ ಓಡಾಟಕ್ಕೆ ಅಡಚಣೆಯಾಗಿದೆ. ಅಮಾನಿಕೆರೆ ಬಳಿಯ ಭದ್ರೇಗೌಡರ ಬಾಳೆ ತೋಟ ಸಂಪೂರ್ಣವಾಗಿ ನೆಲಕಚ್ಚಿದೆ. ಸಿಂಗಮ್ಮ ಗುಡಿಯ ಬಳಿಯ ಬೃಹತ್ ಆಲದ ಮರದ ರೆಂಬೆ ರಸ್ತೆಗೆ ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ. 

ಪರಿಹಾರಕ್ಕೆ ಕ್ರಮ: ‘ಚುನಾವಣಾ ಪ್ರಕ್ರಿಯೆಯಿಂದ ಹಾನಿ ಪ್ರದೇಶಕ್ಕೆ ಭೇಟಿ ನೀಡುವುದು ಕಷ್ಟವಾಗಿದೆ. ಸಿಬ್ಬಂದಿಗಳಿಗೆ ತುರ್ತು ಭೇಟಿ, ವರದಿ ನೀಡಲು ತಿಳಿಸಲಾಗಿದೆ. ಪ್ರಾಕೃತಿಕ ವಿಕೋಪದ ಹಾನಿಯಾಗಿರುವುದರಿಂದ ಪರಿಹಾರಕ್ಕೆ ಕ್ರಮ ವಹಿಸಲಾಗುವುದು’ ಎಂದು ತಹಸೀಲ್ದಾರ್ ನವೀನ್ ಜೋಸೆಫ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT