ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಡಿಗೇಡಿಗಳ ಉಪಟಳ: ನೊಂದವರ ನೆಮ್ಮದಿಗೆ ಕುತ್ತು

ಮಂದ ಮಹಿಳೆಯರ ಅನುಪಾಲನಾ ಕೇಂದ್ರ
Last Updated 20 ಸೆಪ್ಟೆಂಬರ್ 2014, 5:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬುದ್ಧಿಮತ್ತೆ ಕಡಿಮೆ ಇರುವ ಹಾಗೂ ಕುಟುಂಬದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ತೊಂದರೆ ಅನುಭವಿಸುತ್ತಿರುವ ಮಹಿಳೆಯರ ಪಾಲನೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಇಲ್ಲಿನ ಉಣಕಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಮಂದ ಮಹಿಳೆಯರ ಅನುಪಾಲನಾ ಕೇಂದ್ರ’ವೇ ಸಮಸ್ಯೆಗಳ ಆಗರವಾಗಿದೆ.

ಸಾಮಾನ್ಯ ಕರ್ತವ್ಯ, ಅರೆವೈದ್ಯಕೀಯ ಮತ್ತು ವೈದ್ಯರು ಸೇರಿದಂತೆ ಸಿಬ್ಬಂದಿ ಕೊರತೆಯಂತಹ ಆಂತರಿಕ ಸಮಸ್ಯೆಗಳು ಒಂದೆಡೆಯಾದರೆ, ಕೇಂದ್ರದ ಆವರಣದ ಮೂಲಕ ಓಡಾಡುವ ಕೆಲ ಕಿಡಿಗೇಡಿಗಳ ಉಪಟಳ ಇಲ್ಲಿನ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.

ಇಲಾಖೆಯ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ರಾಜ್ಯದಲ್ಲಿ ಇಂತಹ ಎರಡು ಕೇಂದ್ರಗಳನ್ನು ಸ್ಥಾಪಿಸಿದೆ. ಮತ್ತೊಂದು ಕೇಂದ್ರ ಬೆಂಗಳೂರಿ­ನಲ್ಲಿದೆ. ನಗರದಲ್ಲಿರುವ ಕೇಂದ್ರದ ಪ್ರವೇಶ ಸಾಮರ್ಥ್ಯ 50 ಇದ್ದರೆ, ಬೆಂಗಳೂರು ಕೇಂದ್ರದಲ್ಲಿ 100 ಜನ ಮಂದಮತಿ ಮಹಿಳೆಯರ ದಾಖಲಾತಿಗೆ ಅವಕಾಶ ಇದೆ. ಉಣಕಲ್‌ ಬಳಿ ಒಂದೇ ಆವರಣದಲ್ಲಿ ಇಲಾಖೆಗೆ ಸೇರಿದ ಬಾಲಕರ ಬಾಲ ಮಂದಿರ, ಮಂದಮತಿ ಮಹಿಳೆಯರ ಅನುಪಾಲನಾ ಕೇಂದ್ರ ಹಾಗೂ ಮನೋವಿಕಲ ಬಾಲಕಿಯರ ಬಾಲ ಮಂದಿರ ಹೀಗೆ ಒಟ್ಟು ಮೂರು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂಬುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಗಳ ವಿವರಣೆ.

ಭದ್ರತೆ ಸಮಸ್ಯೆ: ಈ ಸಂಸ್ಥೆಗಳು ಒಂದೇ ಆವರಣ­ದಲ್ಲಿವೆ. ಉಣಕಲ್‌ ಕ್ರಾಸ್‌ನಿಂದ ಧಾರವಾಡಕ್ಕೆ ತೆರಳುವ ಹೆದ್ದಾರಿಗೆ ಹೊಂದಿಕೊಂಡಂತೆ ಮುಖ್ಯ ದ್ವಾರವಿದೆ. ಆದರೆ, ಸಾಯಿನಗರದ ಮುಖ್ಯ ರಸ್ತೆಯಿಂದ ಈ ಆವರಣದ ಮೂಲಕ ಹಾಯ್ದು ಧಾರವಾಡ ರಸ್ತೆಯತ್ತ ಓಡಾಡುವವರ ಸಂಖ್ಯೆ ದೊಡ್ಡದು.
‘ಅನುಪಾಲನಾ ಕೇಂದ್ರ ಸೇರಿದಂತೆ ಮೂರು ಸಂಸ್ಥೆಗಳಿರುವ ಆವರಣದ ಮೂಲಕ ನಿತ್ಯವೂ ಜನರು ಓಡಾಡುತ್ತಾರೆ. ಬೈಕ್‌ಗಳ ಓಡಾಟವೂ ಸಾಮಾನ್ಯವಾಗಿದೆ. ಈ ಪೈಕಿ ಕೆಲವು ಕಿಡಿಗೇಡಿ­ಗಳು ಕೇಂದ್ರದಲ್ಲಿರುವ ಮಹಿಳೆಯರಿಗೆ ಕಿರುಕುಳ ನೀಡುತ್ತಾರೆ. ಅವರ ಮಾನಸಿಕ ಸ್ಥಿತಿಯೇ ಸರಿ ಇಲ್ಲದಿರುವಾಗ ಈ ರೀತಿ ಕಿರುಕುಳ ನೀಡುವುದು ಎಷ್ಟು ಸರಿ’ ಎಂದು ಕೇಂದ್ರದ ಸಿಬ್ಬಂದಿಯೊಬ್ಬರು ಬೇಸರದಿಂದ ಹೇಳಿದರು.

‘ಸಾಯಿನಗರದಿಂದ ಕೇಂದ್ರದ ಆವರಣ ಪ್ರವೇಶಿಸುವ ಜಾಗಕ್ಕೆ ಸಂಬಂಧಿಸಿದಂತೆ ವಿವಾದ ಇದ್ದು, ವ್ಯಾಜ್ಯ ಕೋರ್ಟ್‌ನಲ್ಲಿದೆ. ಒಂದೆರಡು ಬಾರಿ ಇಲ್ಲಿ ನಿರ್ಮಿಸಿದ್ದ ಆವರಣ ಗೋಡೆಯನ್ನು ಇದೇ ಕಾರಣ ಮುಂದೊಡ್ಡಿ ಕೆಡವಿ ಹಾಕ­ಲಾಗಿದೆ. ಹೀಗಾಗಿ ಸಾರ್ವಜನಿಕರು ಈ ಆವರಣ­ದೊಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಲು ಸಾಧ್ಯವಾಗುತ್ತಿಲ್ಲ’ ಎಂದೂ ಅಸಹಾಯಕತೆ ವ್ಯಕ್ತಪಡಿಸಿದರು.

ಈ ಪೈಕಿ ಮಂದಮತಿ ಮಹಿಳೆಯರ ಅನುಪಾಲನಾ ಕೇಂದ್ರದಲ್ಲಿ 68 ಜನರಿದ್ದಾರೆ. ಇದು ಕೇಂದ್ರದ ಸಾಮರ್ಥ್ಯಕ್ಕಿಂತ ಅಧಿಕ ಸಂಖ್ಯೆಯಾಗಿದ್ದು, ಇಲ್ಲಿರುವ ಮಹಿಳೆಯರ ಸಂಖ್ಯೆಗೆ ತಕ್ಕಂತೆ ಸಿಬ್ಬಂದಿ ಇಲ್ಲದಿರುವುದು ತೊಂದರೆಯೆನಿಸಿದೆ.

‘ಕೇಂದ್ರದಲ್ಲಿ ಒಟ್ಟು 17 ಮಂಜೂರಾದ ಹುದ್ದೆಗಳಿದ್ದು, ಈ ಪೈಕಿ 9 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂವರು ಸಿಬ್ಬಂದಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೂಪರಿಂಟೆಂಡೆಂಟ್‌  ಹುದ್ದೆ ಕಳೆದ 5 ವರ್ಷಗಳಿಂದ ಖಾಲಿ ಇದೆ’ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ ವಿವರಿಸುತ್ತಾರೆ.

‘ಸಂಜೆ ಹೊರಗಿನವರು ಆವರಣದೊಳಗೆ ನುಗ್ಗಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಕಿಡಿಗೇಡಿಗಳು ತೊಂದರೆ ಕೊಡುತ್ತಾರೆ ಎಂಬ ದೂರುಗಳಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಗಸ್ತು ಹೆಚ್ಚಿಸುವಂತೆ ಮಾಡಿದ ಮನವಿಗೆ ಪೊಲೀಸರೂ ಸ್ಪಂದಿಸುವರು. ಆದರೆ, ಕಿರುಕುಳ ಸಂಪೂರ್ಣ ನಿಂತಿಲ್ಲ’ ಎಂದು ಇಲಾಖೆಯ ಉಪನಿರ್ದೇಶಕಿ ತ್ರಿಶಲಾ ಅಪ್ಪಣ್ಣವರ ತಿಳಿಸಿದರು.

‘ಮೂರು ಸಂಸ್ಥೆಗಳು ಸೇರಿದಂತೆ ಒಟ್ಟು162 ಜನರು ದಾಖಲಾಗಿದ್ದಾರೆ. ಹೀಗಾಗಿ ಕೇಂದ್ರಕ್ಕೆ ಒಬ್ಬ ಫಿಜಿಯೋಥೆರಪಿಸ್ಟ್‌, ಒಬ್ಬ ಮನೋವೈದ್ಯ ಹಾಗೂ ಪೂರ್ಣಾವಧಿಯ ತಜ್ಞವೈದ್ಯರ ಅಗತ್ಯವಿದೆ. ಈ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಕೋರಿ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇನೆ’ ಎಂದೂ ವಿವರಿಸಿದರು.

‘ಮುಖ್ಯದ್ವಾರ ಬಂದ್‌ ಮಾಡಿ, ಸಾಯಿನಗರದ ಕಡೆ ಹೊಸದಾಗಿ ಗೇಟ್‌ ಅಳವಡಿಸಲು ಕ್ರಮ ಕೈಗೊಳ್ಳವಂತೆಯೂ ಸಂಬಂಧಪಟ್ಟ ಅಧಿಕಾರಿಗಳನ್ನು ಕೋರಲಾಗುವುದು’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT