ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಡ್ನಿ ತೆಗೆಯಲು ಸರಳ ದಾರಿ

Last Updated 22 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಮುಂಚೆ ಓಪನ್‌ ಸರ್ಜರಿ ಮೂಲಕ ಮೂತ್ರಪಿಂಡ ದಾನ ಮಾಡುತ್ತಿದ್ದ ಮಂದಿಯು ಐದರಿಂದ ಆರು ವಾರಗಳವರೆಗೆ ಚೇತರಿಸಿಕೊಳ್ಳಬೇಕಿತ್ತು. ಆದರೆ ‘ಟ್ರ್ಯಾನ್ಸ್‌ವಜೈನಲ್‌ ಡೋನರ್‌ ನೆಫ್ರೆಕ್ಟೋಮಿ’ ಎಂಬ ನೂತನ ಚಿಕಿತ್ಸೆಯು ಮುಂದುವರಿದ ತಂತ್ರಜ್ಞಾನವಾಗಿದ್ದು, ದಾನ ಮಾಡುವವರಿಗೆ ಭಯವನ್ನು ಹೋಗಲಾಡಿಸುತ್ತದೆ. ಮಹಿಳೆಯರಿಗೆ ಮಾತ್ರ ಮಾಡಲಾಗುವ ಈ ಶಸ್ತ್ರಚಿಕಿತ್ಸೆಯಲ್ಲಿ ದಾನ ಮಾಡಿದವರು ವಾರದಲ್ಲೇ ಗುಣಮುಖರಾಗುತ್ತಾರೆ.

ಎರಡು ಕಿಡ್ನಿಗಳ (ಮೂತ್ರಪಿಂಡ) ವೈಫಲ್ಯದಿಂದ ನರಳುತ್ತಿದ್ದ ದೀಪಿಕಾಗೆ (42 ವರ್ಷ) 41ವರ್ಷದ ತಂಗಿ ನಾಗಶ್ರೀಯೇ  (ಸಹೋದರಿಯರಿಬ್ಬರ ಹೆಸರು ಬದಲಾಯಿಸಲಾಗಿದೆ) ಒಂದು ಕಿಡ್ನಿಯನ್ನು ದಾನ ಮಾಡಿ ಜೀವ ಉಳಿಸಿಕೊಂಡ ಮನಕಲಕುವ ಘಟನೆ ಇತ್ತೀಚೆಗೆ ನಡೆಯಿತು. ಸ್ವತಃ ಮನೆಯವರಿಂದಲೇ ವಿರೋಧ ವ್ಯಕ್ತವಾದರೂ ಅಕ್ಕನ ಜೀವವನ್ನು ಉಳಿಸುವ ಉದ್ದೇಶದಿಂದ ತಂಗಿ ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದರು.

ದಾನ ಮಾಡಿದ ವಾರದಲ್ಲೇ ನಾಗಶ್ರೀ ಬೈಕ್‌ ಓಡಿಸುವುದು ಸೇರಿದಂತೆ ಎಂದಿನಂತೆ ಕೆಲಸ ಕಾರ್ಯದಲ್ಲಿ ತೊಡಗಿದರು. ಶಸ್ತ್ರಚಿಕಿತ್ಸೆಯ ಯಾವುದೇ ಗುರುತು ಇಲ್ಲದೇ, ಹೆಚ್ಚು ನೋವು ಇಲ್ಲದ ಟ್ರ್ಯಾನ್ಸ್‌ವಜೈನಲ್‌ ಡೋನರ್‌ ನೆಫ್ರೆಕ್ಟೋಮಿ (ಕೀ ಹೋಲ್‌ ಶಸ್ತ್ರ ಚಿಕಿತ್ಸೆ) ಎಂಬ ನೂತನ ವಿಧಾನದ ಶಸ್ತ್ರಚಿಕಿತ್ಸೆ ಮೂಲಕ ಕಿಡ್ನಿದಾನ ಪಡೆಯಲಾಗಿತ್ತು.

ಈ ನೂತನ ವಿಧಾನದ ಮೂಲಕ ತಂಗಿಯಿಂದ ಅಕ್ಕನಿಗೆ ಕಿಡ್ನಿ ಕಸಿ ಮಾಡಿದ ರಾಜ್ಯದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆ (ಎಚ್‌ಎಎಲ್‌ ವಿಮಾನ ನಿಲ್ದಾಣ ರಸ್ತೆಯಲ್ಲಿರುವ) ಪಾತ್ರವಾಗಿದೆ. ಓಪನ್‌ ಸರ್ಜರಿ ಮೂಲಕ ದಾನ ಮಾಡಿದರೆ ಕಿಬ್ಬೊಟ್ಟೆಯಲ್ಲಿ ಹತ್ತರಿಂದ ಹನ್ನೆರಡು ಇಂಚು ಚಿಕಿತ್ಸೆಯ ಗುರುತು ಎದ್ದುಕಾಣುತ್ತಿತ್ತು. ದಾನ ಮಾಡುವವರು ತಿಂಗಳು ಗಟ್ಟಲೇ ನೋವನ್ನು ಅನುಭವಿಸುತ್ತಿದ್ದರು.

ಆದರೆ ಟ್ರ್ಯಾನ್ಸ್‌ವಜೈನಲ್‌ ಡೋನರ್‌ ನೆಫ್ರೊಕ್ಟಮಿ ಶಸ್ತ್ರಚಿಕಿತ್ಸೆಯಲ್ಲಿ ದಾನ ಮಾಡುವ ಹೆಣ್ಣಿನ ಕಿಬ್ಬೊಟ್ಟೆಯಲ್ಲಿ ಚಿಕ್ಕ ರಂಧ್ರ ಮಾಡಿ ಕಿಡ್ನಿಯನ್ನು ದೇಹದ ಒಳಗೇ ಬೇರ್ಪಡಿಸಲಾಗುತ್ತದೆ. ನಂತರ ಆ ಕಿಡ್ನಿಯನ್ನು ಯೋನಿ ನಾಳದ ಮುಖಾಂತರ ಎಂಡೊ ಕ್ಯಾಚ್‌ ಚೀಲವನ್ನು ಬಳಸಿ ಹೊರ ತೆಗೆಯಲಾಗುತ್ತದೆ. ಎರಡು ಗಂಟೆಯೊಳಗೆ ಈ ಶಸ್ತ್ರಚಿಕಿತ್ಸೆ ಮುಗಿಯುತ್ತದೆ. ಮೂತ್ರಪಿಂಡ ದಾನ ಮಾಡಿದವರಿಗೆ ಶಸ್ತ್ರಚಿಕಿತ್ಸೆ ನಡೆಸಿದ ದೇಹದ ಭಾಗದಲ್ಲಿ ಯಾವುದೇ ಹೊಲಿಗೆಯ ಗುರುತುಗಳಿರುವುದಿಲ್ಲ. ಕನಿಷ್ಠ ನೋವು ಸಹ ಕಂಡುಬರುವುದಿಲ್ಲ. ಹಾಗೆಯೇ ಬಹುಬೇಗನೇ ಅವರು ಚೇತರಿಸಿಕೊಳ್ಳುತ್ತಾರೆ. ಇದು ಈ ಚಿಕಿತ್ಸೆಯ ವಿಶೇಷ.

‘18ರಿಂದ 65 ವರ್ಷ ಒಳಗಿನವರೂ ಮೂತ್ರಪಿಂಡ ದಾನ ಮಾಡಬಹುದು. ಆರೋಗ್ಯವಂತ ಮೂತ್ರಪಿಂಡಗಳನ್ನು ಮಾತ್ರ ಕಸಿ ಮಾಡಲಾಗುತ್ತದೆ. ಮೂತ್ರಪಿಂಡ ಕಸಿಗೆ ಮೂರು ವಿಧಾನಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಓಪನ್‌ ಸರ್ಜರಿ, ಲ್ಯಾಪ್ರೊಸ್ಕೊಪಿ ಸರ್ಜರಿ ಹಾಗೂ ಟ್ರ್ಯಾನ್ಸ್‌ವಜೈನಲ್‌ ಡೋನರ್‌ ನೆಫ್ರೆಕ್ಟೋಮಿ. ಮುಂಚೆ ಓಪನ್‌ ಸರ್ಜರಿ ಮೂಲಕ ಮೂತ್ರಪಿಂಡ ದಾನ ಮಾಡುತ್ತಿದ್ದ ಮಂದಿಯು ಐದರಿಂದ ಆರು ವಾರಗಳವರೆಗೆ ಚೇತರಿಸಿಕೊಳ್ಳಬೇಕಿತ್ತು.

ಆದರೆ  ‘ಟ್ರ್ಯಾನ್ಸ್‌ವಜೈನಲ್‌ ಡೋನರ್‌ ನೆಫ್ರೆಕ್ಟೋಮಿ’ ಚಿಕಿತ್ಸೆಯು ಮುಂದುವರಿದ ತಂತ್ರಜ್ಞಾನವಾಗಿದ್ದು, ದಾನ ಮಾಡುವವರಿಗೆ ಹೆಚ್ಚಿನ ಭಯವನ್ನು ಹೋಗಲಾಡಿಸುತ್ತದೆ. ಮಹಿಳೆಯರಿಗೆ ಮಾತ್ರ ಮಾಡಲಾಗುವ ಈ ವಿನೂತನ ಶಸ್ತ್ರಚಿಕಿತ್ಸೆಯಲ್ಲಿ ದಾನ ಮಾಡಿದವರು ಬಹುಬೇಗ ಗುಣಮುಖರಾಗುತ್ತಾರೆ. ಮನುಷ್ಯನ ಎರಡು ಕಿಡ್ನಿಗಳೂ ಶೇ.90ರಷ್ಟು ಹಾನಿಯಾದಾಗ ಬದಲಿ ಕಿಡ್ನಿ ಅವಶ್ಯಕವಾಗುತ್ತದೆ.

ಹಳೆಯ ಶಸ್ತ್ರಚಿಕಿತ್ಸೆಗೆ ತಗುಲುತ್ತಿದ್ದ ವೆಚ್ಚಕ್ಕಿಂತ ಎಂಟು ಸಾವಿರ ರೂಪಾಯಿ ಹೆಚ್ಚಿಗೆ ಹಣ ಖರ್ಚಾಗುತ್ತದೆ’ ಎನ್ನುತ್ತಾರೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ಡಾ. ದೀಪಕ್‌ ದುಬೆ. 

‘ನಮ್ಮ ಮನೆಯಲ್ಲಿ ಅಂಗ ದಾನ ಮಾಡಿದವರಲ್ಲಿ ನಾನೇ ಮೊದಲಿಗಳು. ಅಕ್ಕನಿಗೆ ಕಿಡ್ನಿ ವೈಫಲ್ಯವಾದ ಸುದ್ದಿ ಕೇಳಿ ಆಘಾತವಾಯಿತು. ಒಡಹುಟ್ಟಿದ ಅಕ್ಕನ ಜೀವಕ್ಕೆ ಆಸರೆಯಾಗಬಹುದೆಂದು ತಿಳಿದು ನನ್ನ ಒಂದು ಕಿಡ್ನಿ ದಾನ ಮಾಡಲು ಮುಂದಾದೆ.

ಅದಕ್ಕಾಗಿ ಈ ಮುಂಚೆ ಮೂತ್ರಪಿಂಡ ದಾನ ಮಾಡಿದವರನ್ನು ವಿಚಾರಿಸಿ ಮಾಹಿತಿ ಪಡೆದೆ. ಮನೆಯವರನ್ನು ಒಪ್ಪಿಸಲು ನಾಲ್ಕೈದು ತಿಂಗಳೇ ಬೇಕಾಯಿತು.

ಕಿಡ್ನಿ ವೈಫಲ್ಯದ ಲಕ್ಷಣಗಳು
*ಮೂತ್ರ ಕಡಿಮೆ ಹೋಗುವುದು
*ದೇಹ ವಾಸನೆಯಿಂದ ಕೂಡಿರುವುದು
*ತಲೆ ನೋವು
*ರಕ್ತದೊತ್ತಡ
*ಸುಸ್ತು ಹಾಗೂ ನಿಶ್ಯಕ್ತಿ

ಜೊತೆಗೆ ನೋವಿಲ್ಲದ, ಶಸ್ತ್ರಚಿಕಿತ್ಸೆಯ ಗುರುತು ಇಲ್ಲದ ಇಂಥ ಚಿಕಿತ್ಸಾ ವಿಧಾನ ಇರುವ ಬಗ್ಗೆ ತಿಳಿದು ಖುಷಿಯಾಯಿತು. ಕಿಡ್ನಿ ದಾನ ಮಾಡಿದ ವಾರದಲ್ಲೇ ನಿತ್ಯ ಕಾಯಕ ಮುಂದುವರಿಸಿದೆ. ಬೈಕ್‌ಅನ್ನೂ ಓಡಿಸುತ್ತೇನೆ’ ಎಂದು ನೋವಿನ ನಡುವೆಯೂ ಮಾತು ಹಂಚಿಕೊಂಡರು ಕಿಡ್ನಿ ದಾನ ಮಾಡಿದ ನಾಗಶ್ರೀ.

ಕೊಚ್ಚಿಯ ಮೆಡಿಕಲ್ ಟ್ರಸ್ಟ್‌ ಆಸ್ಪತ್ರೆ ದೇಶದಲ್ಲಿ ಮೊದಲ ಬಾರಿ (2013) ‘ಟ್ರ್ಯಾನ್ಸ್‌ವಜೈನಲ್‌ ಡೋನರ್‌ ನೆಫ್ರೆಕ್ಟೋಮಿ’ ಚಿಕಿತ್ಸೆ ಮಾಡಿದ ಆಸ್ಪತ್ರೆ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಈ ವಿಧಾನದ ಮೂಲಕ ಶಸ್ತ್ರಚಿಕಿತ್ಸೆ ಮಾಡುತ್ತಿರುವ ಆಸ್ಪತ್ರೆಗಳು ವಿಶ್ವದಲ್ಲಿ ಬೆರಳೆಣಿಕೆಯಷ್ಟಿವೆ. ಆ ಸಾಲಿಗೆ ಈಗ ಮಣಿಪಾಲ್‌ ಆಸ್ಪತ್ರೆ ಸೇರಿದೆ.
ಮಾಹಿತಿಗೆ: 080–25023344/4444

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT