ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಿ ಕಿರಿ ಪ್ರಶ್ನೆ ತಂದ ಫಲಿತಾಂಶ

Last Updated 19 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಆತ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿದ್ದ. ಹಾಸಿಗೆಗೆ ಒರಗಿದ್ದ. ಹನಿ ನೀರಿಗೂ ಗುಬ್ಬಿಯಂತೆ ಬಾಯಿಬಿಡುತ್ತಿದ್ದ. ಅಂಗಾತ ಮಲಗಿದವನನ್ನು ಪ್ರತಿ ಗಂಟೆಗೊಮ್ಮೆ ಮಗ್ಗಲು ಬದಲಿಸಬೇಕು. 2 ತಾಸಿಗೊಮ್ಮೆ ಫಿಜಿಯೋಥೆರಫಿ. ಔಷಧೋಪಚಾರ. ಬೆಳಗಿನಲಿ ಪ್ರಾರಂಭವಾದ ದಿನಚರಿ ರಾತ್ರಿ ವಾರ್ಡ್‌ ಬಾಗಿಲು ಮುಚ್ಚಿದರೂ ಮುಗಿಯುತ್ತಿದ್ದಿಲ್ಲ. ರಾತ್ರಿ ಮತ್ತೆ ಗಂಟೆಗೊಮ್ಮೆ ಒಳ ಹೋಗಿ ಔಷಧಿ ಕೊಟ್ಟು, ಬೆಡ್ ಪಾನ್‌ ಬದಲಿಸಿ ಬಂದು ವರಾಂಡದ ಮೆಟ್ಟಿಲ ಮೇಲೆ ಒರಗಬೇಕು.

ದಿನ ಬೆಳಗಿನ 7ಕ್ಕೆ ಆಸ್ಪತ್ರೆಯ ಸ್ವಚ್ಛತಾ ಕಾರ್ಯ. ರೋಗಿಗಳ ಸಂಬಂಧಿಕರನ್ನು ಹೊರಹಾಕುತ್ತಿದ್ದರು. ಮತ್ತೇ ಒಂದು ತಾಸು ಡಾಕ್ಟರ್ ರೌಂಡ್ ಮುಗಿವವರೆಗೆ ಹೊರ ಇರಬೇಕಾಗಿತ್ತು. ಇದೇ ಸಂದರ್ಭದಲ್ಲಿ ಕೆಇಎಸ್ ಪರೀಕ್ಷೆ ಕಟ್ಟಿದ್ದೆ. ಗಂಡನೂ ಕಟ್ಟಿದ್ದ. ಪರೀಕ್ಷೆಗೆ ಮುನ್ನ ಬೆನ್ನು ಹುರಿಗೆ ಏಟು ಆಗಿ, ಆಸ್ಪತ್ರೆ ಸೇರಿದ್ದ. ಜೊತೆಗೆ ಮಾವನವರಿದ್ದರು. ಮರಾಠಿ ಅಷ್ಟೊಂದು ಬರುತ್ತಿರಲಿಲ್ಲ. ಮೆಟ್ಟಲಿನ ಮೇಲೆ ಹೋಗಿ ಬರುವವರನ್ನು ನೋಡುತ್ತ ಒಬ್ಬಳೇ ಕುಳಿತಿರುತ್ತಿದ್ದೆ. ಆಗ ಮಾವ ಇಲ್ಲಿ ಕುಳಿತು ಏನು ಮಡುತ್ತಿ? ಸುಮ್ಮನೇ ಸಮಯ ಹಾಳು..! ಪರೀಕ್ಷೆಗಾದರೂ ಓದಬಾರದೇನು..?  ಪ್ರಶ್ನಿಸುತ್ತಿದ್ದರೆ, ಕಿರಿ ಕಿರಿ ಅನಿಸುತ್ತಿತ್ತು. ನನ್ನ ಸಂಕಟ ಹೇಗೆ ಅರ್ಥವಾಗಬೇಕು..? ಆಕಾಶ ಹರಿದು ಬಿದ್ದಂತೆ. ಓದಲು ಮನಸೆಲ್ಲಿದೆ?

ಪರೀಕ್ಷೆಗೆ ಹೋಗಲಾರೆನೆಂದೆ. ಗಂಡ ಮಾವ ಕೂಡಿ ‘ಯಾಕೆ ಹೋಗುವುದಿಲ್ಲ..? ಇಲ್ಲಿದ್ದೇನು.. ಮಾಡುವೆ..? ಹೇಗೋ ಆಗುತ್ತೆ’ ಎಂದರು. ಊರಿಗೆ ಬಂದೆ. ಮನೆಯಲ್ಲಿ ನೂರೆಂಟು ಪ್ರಶ್ನೆಗಳ ಬಾಣ.  ‘ಯಾಕೆ ಬಂದೆ..? ಅಲ್ಲಿ ಗಂಡ ಸಾವಿನ ದವಡೆಯಲ್ಲಿದ್ದರೆ ನಿನಗೆಂಥ ಪರೀಕ್ಷೆ ಹುಚ್ಚು? ಶಿಕ್ಷಕ ನೌಕರಿ ಸಾಕಿಲ್ಲವೇನು? ಅವನಿಗೇನಾದರೂ ಆಗಲಿ, ಐತಿ ನಿನ್ನ ವಾಲಗ..!’ ಎಂದು ಕೂಗಾಡಿದ್ದರಲ್ಲೂ ಅರ್ಥವಿತ್ತು. ಅಂತ ಕಠಿಣ ಪರಸ್ಥಿತಿಯಲ್ಲಿ ಯಾರೂ ಬಿಟ್ಟು ಬರುತ್ತಿದ್ದಿಲ್ಲ, ಬಂದು ಬಿಟ್ಟಿದ್ದೆ. ಧಾರವಾಡಕ್ಕೆ ಪರೀಕ್ಷೆ ಬರೆಯಲು ಹೋದೆ. ಹಾಲ್ ಟಿಕೆಟ್ ಹಿಡಿದು ಕೊಠಡಿ ಹುಡುಕುತ್ತಿದ್ದೆ. ಅಲ್ಲೇ ಮಿತ್ರನೊಬ್ಬ ಎದುರಾದ.

ಅವನಿಗೆ ನನ್ನ ಗಂಡನ ಆಪರಷೇಶನ್ ಸುದ್ದಿ ಗೊತ್ತಿತ್ತು. ‘ನೀನ್ಯಾಕೆ..ಇಲ್ಲಿ..?’ ಎಂದ. ಪರೀಕ್ಷೆಗೆ ಎಂದೆ. ‘ಪರೀಕ್ಷೆ ಒಯ್ದು ಬೆಂಕಿ ಹಚ್ಚು..? ನಿನ್ನ ಗಂಡ ಅಕಸ್ಮಾತ್ ಅಲ್ಲೇ ಡ್ಯಂ ಅಂದರ ಏನು ಮಾಡತೀ..? ಜೀವ ನೆಟ್ಟಗಿದ್ದರೆ ನೂರು ಪರೀಕ್ಷೆ ಕಟ್ಟಬಹುದು’ ಎಂದು ಅಸಮಾಧಾನದಿಂದ ಮುಖ ಕಿವುಚಿದ.
ಉತ್ತರ ಪತ್ರಿಕೆಯಲ್ಲಿ ಗೀಚತೊಡಗಿದೆ. ಅದರ ಮೇಲೆ ಕಣ್ಣೀರ ಹನಿಗಳು ಜಾರತೊಡಗಿದವು. ಆತ್ಮಶಕ್ತಿ... ಧ್ಯೆರ್ಯ ತೆಗೆದುಕೋ ಬಂದಾಗಿದೆ ಮುಗಿಸು ಎಂದಿತು. ಹೇಗೆ ಬರೆದೆನೋ ಗೊತ್ತಿಲ್ಲ, ಬರೆದಿದ್ದೆ ಅಷ್ಟೇ..!

ಮಾವ, ಮಿತ್ರ, ಹಿರಿಯರಿಂದ ಮುಳ್ಳಿನಂತೆ ಚುಚ್ಚಿದ್ದ ಪ್ರಶ್ನೆಗಳಿಂದ ನಾನು ಪತ್ರಾಂಕಿತ ಬಿ ಶ್ರೇಣಿ ಹುದ್ದೆಗೆ ಆಯ್ಕೆಯಾಗಿದ್ದೆ. ತನ್ನ ಮಗನ ಸಾಯುವ ಸ್ಥಿತಿಯಲ್ಲಿ ಸ್ಥಿತ ಪ್ರಜ್ಞೆಯಿಂದ ಪರೀಕ್ಷೆಗೆ ಕಳಿಸಿದ್ದ ಮಾವ. ಅಂತಹ ನೋವಿನಲ್ಲೂ ನಗುತ್ತ ಪರೀಕ್ಷೆ ಬರಿಯುವುದಿಲ್ಲವಾ..? ಎನ್ನುತ್ತಿದ್ದ ಗಂಡ ಎಷ್ಟು ಜನ ಹೆಣ್ಣು ಮಕ್ಕಳಿಗೆ ಸಿಕ್ಕಾರು ಹೇಳಿ..? ಪರೀಕ್ಷೆಗೆ ಹಟದಿಂದ ಕಳಿಸಿದ ಗಂಡ ನನ್ನೊಂದಿಗಿಲ್ಲ.. ಲೋಕದ ಪರೀಕ್ಷೆ ಮುಗಿಸಿದ್ದಾನೆ. ಎದೆ ಭಾರವಾಗಿ ಒದ್ದಾಡುತ್ತೇನೆ. ಕಣ್ಣು ಮಂಜಾಗಿ ಫೋಟೊ ಕಟ್ಟಿನ ಕಡೆ ನೋಡುತ್ತೇನೆ. ಮುಗುಳ್ನಗುತ್ತಾನೆ. ಎಲ್ಲರ ಕಿರಿಕಿರಿ ಪ್ರಶ್ನೆಗಳು ನನ್ನನ್ನು ಅಧಿಕಾರಿಯನ್ನಾಗಿ ಮಾಡಿವೆ.
–ಲಲಿತಾ ಕೆ. ಹೊಸಪ್ಯಾಟಿ


ಕಾಟಾಚಾರದ ಅನುಕಂಪ
‘ನಾವಿಬ್ಬರು ನಮಗಿಬ್ಬರು’ ಎಂಬ ಕುಟುಂಬ ಯೋಜನಾ ಘೋಷವಾಕ್ಯ ಬಂದಾಗ ನಾನಿನ್ನೂ ಯೌವ್ವನಕ್ಕೆ ಕಾಲಿಟ್ಟಿದ್ದೆ. ನಮ್ಮದು ತುಂಬು ಕುಟುಂಬ, ನಾವು ಒಂಬತ್ತು ಜನ ಒಡಹುಟ್ಟಿದವರು.  ನನಗೆ ಮಾತ್ರ ಯಾವುದಾದರು ಸರಿಯೇ, ಇಬ್ಬರು ಮಕ್ಕಳೇ ಸಾಕು ಎಂದು ತೀರ್ಮಾನಿಸಿದ್ದೆ. ಸಂಪ್ರದಾಯಸ್ಥ ವೈದಿಕರ ಮಗನೊಂದಿಗೆ ಮದುವೆಯಾಗಿ ಮಲೆನಾಡಿನಿಂದ ಬೆಂಗಳೂರಿಗೆ ಬಂದು ನಮ್ಮ ಸಂಸಾರ ಶುರುವಾಯ್ತು.

ಹೆಣ್ಣು  ಮಗುವಾಗದಿದ್ದರೂ ಪರವಾಗಿಲ್ಲ–ವಂಶೋದ್ಧಾರಕ್ಕೆ ಮತ್ತು ನಮ್ಮ ಮರಣಾನಂತರ ಕ್ರಿಯಾ ಕರ್ಮ ಮಾಡಿ ನಮಗೆ ಮುಕ್ತಿ ಕೊಡಿಸಲು ಗಂಡು ಮಗು ಬೇಕೇಬೇಕು ಎಂಬ ಮನಸ್ಥಿತಿಯಲ್ಲಿದ್ದವರು, ಗಂಡ ಮತ್ತು ಕುಟುಂಬದ ಇತರ ಸದಸ್ಯರು. ಆದರೆ ನನಗೆ    ಇಬ್ಬರೂ ಹೆಣ್ಣು ಮಕ್ಕಳು! ಇನ್ನೊಂದು ಮಗು-ಅದೂ ಗಂಡು ಮಗುವೇ ಬೇಕು ಎಂಬ  ಎಲ್ಲರ ಒತ್ತಡ, ನಿಷ್ಠುರದ ನಡುವೆಯೂ ನಾನು ಒಪ್ಪಲಿಲ್ಲ. ಗುರುತಿನವರಾಗಲೀ, ಹೊಸಬರಾಗಲೀ ಕೇಳುವ ಪ್ರಶ್ನೆ- ಎಷ್ಟು ಮಕ್ಕಳು? ಇಬ್ಬರು.

ಒಂದು ಗಂಡು-ಒಂದು ಹೆಣ್ಣಾ? ಇಲ್ಲಾ, ಇಬ್ಬರೂ ಹೆಣ್ಣು ಮಕ್ಕಳು. ತೃಪ್ತರಾಗುವುದಿಲ್ಲ. ಗಂಡು ಮಗು ಇಲ್ವಾ? ಇವರನ್ನೇ ಗಂಡು ಮಕ್ಕಳ ತರ ಬೆಳೆಸುತ್ತೇನೆ. ನನ್ನ ಸಿದ್ಧ ಉತ್ತರ. ಅದು ಮೂವತ್ತೈದು ವರ್ಷದ ಹಿಂದಿನ ಕತೆ. ಪತಿ ತೀರಿ ಇಪ್ಪತ್ತು ವರ್ಷಗಳಾದವು. ಆ ನಂತರ ಜನರ ಅನುಕಂಪ ಜಾಸ್ತಿಯಾಯ್ತು. ಗಂಡು ಮಕ್ಕಳಿಲ್ವಾ? ಅಯ್ಯೋ ಪಾಪ!

ಪತಿ ನಡೆಸುತ್ತಿದ್ದ ಪುಸ್ತಕದ ಅಂಗಡಿಯನ್ನು ಮತ್ತೂ ಅಭಿವೃದ್ಧಿಪಡಿಸಿ ನಡೆಸುತ್ತಿದ್ದೇನೆ. ಮಕ್ಕಳಿಬ್ಬರನ್ನೂ ಓದಿಸಿ ಮದುವೆಯನ್ನೂ ಮಾಡಿದೆ. ಮಕ್ಕಳ ಮದುವೆಯಾಗಿ ನಾನು ಒಬ್ಬಳೇ ಇರುತ್ತೇನೆಂದು ಗೊತ್ತಾದಾಗ ಜನರ ಅನುಕಂಪ ಇನ್ನೂ ಉಕ್ಕಿ ಹರಿಯುತ್ತಿದೆ. ಗಂಡು ಮಕ್ಕಳಿಲ್ವಾ, ಒಬ್ಬರೇ ಇದೀರಾ? ಮನೆಗೊಬ್ಬರು ಗಂಡು ದಿಕ್ಕು ಬೇಕಲ್ಲವಾ? ಒಬ್ಬ ಮಗಳು ಅಳಿಯನ್ನ ನಿಮ್ಮ ಜೊತೆಯೇ ಇಟ್ಟುಕೊಳ್ಳಿ?

ನನಗೇ ಇಲ್ಲದ ಆತಂಕ, ಕಾಳಜಿ ಈ ಜನರಿಗೆ ಇದೆಯಾ? ಖಂಡಿತ ಇಲ್ಲ. ನಮ್ಮ ಯಾವ ಕಷ್ಟ–ಸುಖವೂ ಇವರಿಗೆ ಬೇಕಾಗಿಲ್ಲ, ಸಂಬಂಧವೂ ಇಲ್ಲ. ಎದುರು ಸಿಕ್ಕಾಗ ಏನಾದರೂ  ಮಾತಾಡಬೇಕಲ್ವಾ. ಹಾಗೆ ತೋರಿಕೆಯ ಅನುಕಂಪ ಅಷ್ಟೇ. ಪುರುಷ ಪ್ರಧಾನ ಸಮಾಜದ ಈ ಮನಸ್ಥಿತಿಯ ಕಿರಿ ಕಿರಿ ಪ್ರಶ್ನೆಗೆ ಒಬ್ಬಳೇ ಎಲ್ಲಾ  ನಿಭಾಯಿಸುತ್ತಿರುವ ನನ್ನ ಬದುಕೇ ಉತ್ತರ. 
 -ವಿಶಾಲಾಕ್ಷಿ  ಶರ್ಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT