ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುಚಿತ್ರಗಳ ಸುಗ್ಗಿಯ ಕಾಲ

Last Updated 31 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಸುಚಿತ್ರ ಕಿರು ಚಿತ್ರೋತ್ಸದಲ್ಲಿ ನಿರ್ಣಾಯಕಿಯಾಗಿ ಆಗಮಿಸಿದ್ದ ಬರ್ಲಿನ್‌ನ ಮೈಕಾ ಮಿಯ ಹಾನ್ ಅವರು ಬರ್ಲಿನ್‌ ಹಾಗೂ ಭಾರತೀಯ ಕಿರು ಚಿತ್ರಗಳ ಕುರಿತು ‘ಮೆಟ್ರೊ’ ಜೊತೆ ಮಾತನಾಡಿದರು.

‘ಮೊದಲು ನನ್ನ ನಾಡಿನ ಬಗ್ಗೆ ಹೇಳುತ್ತೇನೆ. ಬರ್ಲಿನ್‌ನಿಂದ ಕೇವಲ 280ರಿಂದ 300 ಕಿ.ಮೀ. ದೂರದಲ್ಲಿರುವ ತಣ್ಣನೆಯ ಊರು ಹ್ಯಾಂಬರ್ಗ್‌. ಪ್ರಶಾಂತವಾಗಿ ಹರಿವ ನದಿ ಇದ್ದಂತೆ’ ಎನ್ನುವ ಮೈಕಾ ಮಿಯ ಹಾನ್, ಸುಮಾರು ಹದಿನೈದು ವರ್ಷಗಳಿಂದ ‘ಕಿರುಚಿತ್ರ’ ವಲಯದಲ್ಲಿ ಪಳಗಿದವರು.

ಕಿರುಚಿತ್ರಗಳ ಬಗ್ಗೆ ಅಪಾರ ಒಲುಮೆ ಬೆಳೆಸಿಕೊಂಡ ಮೈಕಾ, ಇತ್ತೀಚೆಗೆ ಸುಚಿತ್ರ ಫಿಲ್ಮ್‌ ಸೊಸೈಟಿ ಏರ್ಪಡಿಸಿದ್ದ ಕಿರುಚಿತ್ರೋತ್ಸವಕ್ಕೆ ನಿರ್ಣಾಯಕಿಯಾಗಿ ಬಂದಾಗ ಮೆಟ್ರೊ ಮುಂದೆ ತಮ್ಮ ಅನುಭವ ಹರಡಿದರು.
* * *
ಬರ್ಲಿನ್‌ನಲ್ಲಿ ಕಿರುಚಿತ್ರಗಳ ಒಂದು ಸುದೀರ್ಘ ಇತಿಹಾಸವೇ ಇದೆ. 1951ರಿಂದಲೂ ನಮ್ಮಲ್ಲಿ ಅತ್ಯುತ್ತಮ ಕಿರು ಚಿತ್ರಗಳು ತಮ್ಮದೇ ಆದ ಸ್ಥಾನವನ್ನು ಉಳಿಸಿಕೊಂಡು ಬಂದಿವೆ.

2015 ಬರ್ಲಿನ್‌ನ ಚಿತ್ರ ಜಗತ್ತಿನ ಪಾಲಿಗೆ ಒಂದು ಮಹತ್ವಪೂರ್ಣ ಕಾಲಘಟ್ಟ. ಇಲ್ಲಿನ ಕಿರುಚಿತ್ರ ಜಗತ್ತು ಸುಮಾರು 64 ವರ್ಷಗಳನ್ನು ಪೂರೈಸಿದೆ. ಬರ್ಲಿನ್ ಈಗ 65ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ  ಸಂಭ್ರಮದಲ್ಲಿದೆ. ಈ ನಡುವೆ ಸುಚಿತ್ರ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಇಲ್ಲಿನ ಚಿತ್ರಗಳ ಒಳ–ಹೊರಗನ್ನು ಅರಿಯಲು ನನಗೊಂದು ಅತ್ಯುತ್ತಮ ಅವಕಾಶ ಸಿಕ್ಕಿದ್ದು ಸುದೈವ ಎಂದುಕೊಂಡಿದ್ದೇನೆ.

ಯುವ ಮನಸ್ಸುಗಳ ಹರಿವು
ಇತ್ತೀಚೆಗೆ ಹೆಚ್ಚು ಹೆಚ್ಚು ಯುವಜನತೆ ಇತ್ತ ಮುಖ ಮಾಡುತ್ತಿದ್ದಾರೆ. ಇದು ಬರ್ಲಿನ್ ಮತ್ತು ಭಾರತದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತ ಕಂಡುಬರುತ್ತಿರುವ ಬೆಳವಣಿಗೆ. ಬೇರೆ ಬೇರೆ ಉದ್ಯೋಗದಲ್ಲಿರುವ, ಬೇರೆ ಬೇರೆ ಕೌಟುಂಬಿಕ ಹಿನ್ನೆಲೆ ಹೊಂದಿರುವ, ವಿವಿಧ ಸ್ತರಗಳ ಯುವ ಜನರು ಕಿರು ಚಿತ್ರಗಳತ್ತ ಒಲವು ಹೊಂದಿದ್ದು, ಹೇಗಾದರೂ ಮಾಡಿ ತಮ್ಮ ಚಿತ್ರ ಕನಸಿಗೆ ಬಲ ತುಂಬಿಕೊಳ್ಳುವ ಕಸರತ್ತು ನಡೆಸಿದ್ದಾರೆ. ಕಿರುಚಿತ್ರ ಜಗತ್ತು ಹೀಗೆ ದಿನದಿಂದ ದಿನಕ್ಕೆ ಶ್ರೀಮಂತವಾಗುತ್ತಿದೆ.

ಬದಲಾವಣೆಯ ಸುಳಿಗಾಳಿ
1990ರ ದಶಕದಲ್ಲಿ ಒಂದು ಚಿತ್ರೋತ್ಸವ ನಡೆದರೆ ಸುಮಾರು 100, 200 ಕಿರು ಚಿತ್ರಗಳು ಬಂದರೆ ಹೆಚ್ಚಿತ್ತು. ಆದರೆ 2015ರ ವೇಳೆಗೆ ಕಿರು ಚಿತ್ರಗಳ ನಿರ್ಮಾಣದ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಚಿತ್ರಗಳು ಸಲ್ಲಿಕೆಯಾಗುತ್ತಿವೆ. ಅದು ಬೆಂಗಳೂರಿನ ಸುಚಿತ್ರ ಚಿತ್ರೋತ್ಸವವೇ ಆಗಲಿ, ಬರ್ಲಿನ್‌ನ ಅಂತರರಾಷ್ಟ್ರೀಯ ಚಿತ್ರೋತ್ಸವವೇ ಆಗಲಿ... ನಿರ್ಣಾಯಕರಿಗೆ ಅಷ್ಟೂ ಚಿತ್ರಗಳನ್ನು ನೋಡುವುದು ಮತ್ತು ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡುವುದು ಸವಾಲಾಗಿ ಪರಿಣಮಿಸುತ್ತಿದೆ. ನನ್ನ ಪಾಲಿಗಂತೂ ಜಗತ್ತಿನಾದ್ಯಂತ ಇದು ಕಿರುಚಿತ್ರಗಳ ಸುಗ್ಗಿಯ ಕಾಲ.

ಸರಳವೂ–ಸುಲಭವೂ ಕಠಿಣವೂ
ಇತ್ತೀಚೆಗೆ ಕಿರು ಚಿತ್ರಗಳನ್ನು ತೆಗೆಯುವುದು ಸರಳವೂ ಸುಲಭವೂ ಆಗಿದೆ ಎನ್ನುವುದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಒಂದು ಮೊಬೈಲ್‌ನಿಂದಲೂ ಈಗ ಚಿತ್ರ ಮಾಡಬಹುದು. ತಂತ್ರಜ್ಞಾನ ಮುಂದು­ವರಿದಿದೆ. ಇದೊಂದು ಸವಾಲಿನ ಕೆಲಸವೂ ಆಗಿದೆ. ಏಕೆಂದರೆ ಇಲ್ಲಿ ಹಾಡುಗಳು, ಫೈಟುಗಳು, ಸ್ಟಂಟ್‌ಗಳು ಇರುವುದಿಲ್ಲ. ಮಾದಕ ನಟಿ, ಸಿಕ್ಸ್‌ಪ್ಯಾಕ್‌ ನಾಯಕನ ಜಾದು ನಿಲ್ಲುವುದಿಲ್ಲ. ಕಥೆ, ಅದನ್ನು ಪರಿಣಾಮಕಾರಿಯಾಗಿ ತೋರಿಸುವ ಕಲೆ, ಕ್ಯಾಮೆರಾ ಚಳಕ ಪ್ರಧಾನ.

ಭಾರತೀಯ ಚಿತ್ರಗಳು ವೈವಿಧ್ಯಮಯ
ಬರ್ಲಿನ್ ಆಗಲಿ, ಭಾರತ ಇರಲಿ, ಪ್ರತಿಯೊಂದು ಕಿರು ಚಿತ್ರವೂ ಆ ನೆಲ, ಕಾಲ, ಭಾಷೆ, ಸಂಸ್ಕೃತಿಯ ಸೊಗಡನ್ನು ಪ್ರತಿನಿಧಿಸುತ್ತದೆ. ಭಾಷೆ, ಸಂಸ್ಕೃತಿ–ಸಂಸ್ಕಾರಗಳು ಬದಲಾದಂತೆ ಚಿತ್ರಗಳ ತಿರುಳೂ ಬದಲಾಗುತ್ತದೆ. ಜಗತ್ತಿನ ಇತರೆ ಭಾಗಗಳಿಗೆ ಹೋಲಿಸಿದರೆ ಭಾರತೀಯ ಚಿತ್ರಗಳು ಹೆಚ್ಚು ವೈವಿಧ್ಯಮಯವಾಗಿವೆ. ಇಲ್ಲಿ ಹಲವಾರು ಸಂಸ್ಕೃತಿಗಳಿವೆ, ನೂರಾರು ಭಾಷೆಗಳಿವೆ, ಸಾವಿರಾರು ಜಾತಿ–ಕುಲಗಳಿವೆ... ಹೀಗಾಗಿ ಇಲ್ಲಿನ ಚಿತ್ರಗಳಲ್ಲಿ ವೈವಿಧ್ಯಮಯ ಕಥೆಗಳು ಸಿಗುತ್ತವೆ. ಆದರೆ ನಮ್ಮ ಕಡೆ ಹಾಗಾಗುವುದಿಲ್ಲ.

ಪ್ರೀತಿಯೇ ಬಂಡವಾಳ
ಹವ್ಯಾಸಿ, ಸೃಜನಶೀಲ, ಕಲಾತ್ಮಕ ಮನಸ್ಸುಗಳಿಗೆ ಮಾತ್ರ ಇಲ್ಲಿ ಉಳಿಗಾಲವಿದೆ. ಹಣ ಇಲ್ಲಿ ದೊಡ್ಡ ಸಂಗತಿ ಏನೂ ಇಲ್ಲ. ಪ್ರೀತಿ ಒಂದಿದ್ದರೆ, ಆ ಪ್ರೀತಿಗೆ ಸಮಾನ ಮನಸ್ಸುಗಳ ಬೆಂಬಲವೂ ಸಿಗುತ್ತದೆ. ಹಣದ ತೀವ್ರವಾದ ಮುಗ್ಗಟ್ಟುಗಳನ್ನು ಇಟ್ಟುಕೊಂಡೂ ಈ ಜಗತ್ತಿನಲ್ಲಿ ಈಜಿದವರಿದ್ದಾರೆ, ಈಜಿ ಗೆದ್ದವರಿದ್ದಾರೆ.

ಇತ್ತೀಚೆಗೆ ದೊಡ್ಡ ನಿರ್ದೇಶಕರು ಈ ನೀರಿಗೆ ಇಳಿದಿರುವುದೂ ಇದೆ. ಈ ಚಿತ್ರಗಳು ನೀಡುವ ಖುಷಿಯೇ ಬೇರೆ. ಹಣ–ಪ್ರಶಸ್ತಿ, ಮನ್ನಣೆಗಳನ್ನೆಲ್ಲ ಮೀರಿದ ಆತ್ಮತೃಪ್ತಿಯನ್ನು ಈ ವಲಯ ಧಾರಾಳವಾಗಿ ಧಾರೆ ಎರೆಯುತ್ತದೆ. ಚಿತ್ರ ಮಾಡಬೇಕು ಎಂದು ನಿರ್ಧರಿಸಿದಲ್ಲಿ ಮುಂದಿನದೆಲ್ಲವನ್ನು ಚಿತ್ರವೇ ಕಲಿಸುತ್ತ ಸಾಗುತ್ತದೆ. ಸ್ಕ್ರಿಪ್ಟ್‌‌ ಬರೆಯುವುದರಿಂದ ಹಿಡಿದು ಕ್ಯಾಮೆರಾ, ಎಡಿಟಿಂಗ್‌, ಸೌಂಡ್‌ ಮಿಕ್ಸಿಂಗ್‌ ಎಲ್ಲವನ್ನೂ ಚಿತ್ರವೇ ಕಲಿಸುತ್ತ ಹೋಗುತ್ತದೆ. ಮೊದಲ ಚಿತ್ರದಲ್ಲಿ ಎಷ್ಟು ತಪ್ಪುಗಳನ್ನು ಮಾಡುವಿರೋ ಅಷ್ಟೂ ಪಾಠಗಳನ್ನು ಕಲಿಯುತ್ತೀರಿ. ಮುಂದಿನ ಚಿತ್ರಕ್ಕೆ ಹೊಸ ತಪ್ಪು, ಹೊಸ ಪಾಠಗಳು... ಹೀಗೆ ಸಾಗುತ್ತದೆ.

ಮೈಕಾ ವೃತ್ತಿ–ಪ್ರವೃತ್ತಿ...
1971ರಲ್ಲಿ ಹ್ಯಾನೋವರ್‌ನಲ್ಲಿ ಜನಿಸಿದ ಮೈಕಾ, ಹ್ಯಾಂಬರ್ಗ್‌ನಲ್ಲಿ ವಿಷುಯಲ್‌ ಕಮ್ಯುನಿಕೇಶನ್‌ ಅಧ್ಯಯನ ಮಾಡಿದರು. ನಂತರ ಬೆಲ್ಲಾಸ್ ಆರ್ಟ್ಸ್, ಟೆಲಿವಿಷನ್, ಸಿನಿಮಾ ಬಗ್ಗೆ ಓದಿದರು. 2001ರಿಂದ ಈಚೆಗೆ ಸ್ವತಂತ್ರ ಲೇಖಕಿಯಾಗಿ, ನಿರ್ಮಾಪಕಿಯಾಗಿ, ನಿರ್ದೇಶಕಿಯಾಗಿ ಹಾಗೂ ಛಾಯಾಗ್ರಾಹಕಿಯಾಗಿ ತೊಡಗಿಕೊಂಡಿದ್ದಾರೆ. ಸಿನಿಮಾ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು, ಸಿನಿಮಾ ಕಾರ್ಯಾಗಾರ, ಶಿಬಿರಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ನೀಡುವುದು ಹಾಗೂ ಚಿತ್ರೋತ್ಸವಗಳಲ್ಲಿ ನಿರ್ಣಾಯಕಿಯಾಗಿ ಪಾಲ್ಗೊಳ್ಳುವುದು ಅವರ ನೆಚ್ಚಿನ ಕೆಲಸ.
***
ಬರ್ಲಿನ್‌ನ ಹ್ಯಾಂಬರ್ಗ್‌ಗೂ ಭಾರತದ ಬೆಂಗಳೂರಿಗೂ ಸಾಕಷ್ಟು ವ್ಯತ್ಯಾಸವಿದೆ. ಅದು ಪ್ರಶಾಂತವಾಗಿ ಹರಿಯುವ ನದಿ ಇದ್ದಂತೆ, ಇದು ಧುಮ್ಮಿಕ್ಕುವ ಸಾಗರವಿದ್ದಂತೆ. ಆದರೆ ಈ ಟ್ರಾಫಿಕ್‌ನ ಕಿರಿಕಿರಿಯ ನಡುವೆಯೂ, ಇಲ್ಲಿನ ಮಸಾಲೆ ದೋಸೆಯ ಸವಿ ಇಷ್ಟವಾಗುತ್ತದೆ.
-ಮೈಕಾಮಿಯ ಹಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT