ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುಪರದೆಯಲ್ಲಿ ಸಾಮಾಜಿಕ ಜಾಲತಾಣ

Last Updated 1 ಸೆಪ್ಟೆಂಬರ್ 2015, 19:35 IST
ಅಕ್ಷರ ಗಾತ್ರ

ಸಮಯದೊಂದಿಗೆ ಓಟಕ್ಕಿಳಿದು ತಂತ್ರಜ್ಞಾನದ ಬಲದೊಂದಿಗೆ ವಿಶಾಲ ಜಗತ್ತನ್ನು ‘ವಿಶ್ವಗ್ರಾಮ’ದ ಫ್ರೇಮಿನಲ್ಲಿ ನೋಡುತ್ತಿರುವ ದಿನಗಳನ್ನೂ ಹಿಂದಿಕ್ಕಿ  ನಾವೆಲ್ಲ ಮುನ್ನಡೆಯುತ್ತಿದ್ದೇವೆ. ಅಗೋಚರ   ಅಂತರ್ಜಾಲದ ಆಗಸದಡಿ ಕುಳಿತು ಪಕ್ಕದ ಬೀದಿಯಲ್ಲಿರುವ ಹಾಗೂ ವಿಶ್ವದ ಅದಾವುದೋ ಮೂಲೆಯಲ್ಲಿರುವ ಸ್ನೇಹಿತರು–ಸಂಬಂಧಿಕರೊಂದಿಗೆ ಸಮಾನ ವೇಗದಲ್ಲಿ ಸಂಪರ್ಕ ಸಾಧಿಸಲು, ಸಂವಹನ ನಡೆಸುವುದು ಇಂದು ಸಾಧ್ಯವಾಗಿದೆ. ಇದನ್ನು ಸಾಮಾಜಿಕ ಜಾಲತಾಣಗಳು ಸಾಧ್ಯವಾಗಿಸಿವೆ.

ಅಷ್ಟಕ್ಕೂ ಸಾಮಾಜಿಕ ಜಾಲತಾಣಗಳ ಪರಿಕಲ್ಪನೆ ಹೊಸದೇನೂ ಅಲ್ಲ. ಮನುಕುಲದ ಹುಟ್ಟಿನಿಂದಲೂ ಇದೆ. ತಾಂತ್ರಿಕತೆಯ ಸಂಕ್ರಮಣ ಕಾಲದಲ್ಲಿ ಇದೀಗ ಡಿಜಿಟಲ್‌ ಸ್ವರೂಪ ತಳೆದಿದೆ ಅಷ್ಟೇ.

ಪರಸ್ಪರ ಕೈಕುಲುಕಿ, ಶುಭಕೋರಿ, ಪತ್ರಗಳ ಮೂಲಕ ನಡೆಸುತ್ತಿದ್ದ ಸಂವಹನ ದಿನಗಳೆದಂತೆ ಸುಲಭ, ಸರಳಗೊಂಡು ಫೇಸ್‌ಬುಕ್‌, ಟ್ವಿಟ್ಟರ್‌, ವಾಟ್ಸ್‌ಆ್ಯಪ್‌, ಲಿಂಕ್ಡ್‌ಇನ್‌ಗಳಂಥ ಸಾಮಾಜಿಕ ಜಾಲತಾಣಗಳ ಸ್ವರೂಪದಲ್ಲಿ ಅಸ್ತಿತ್ವದಲ್ಲಿದೆ. ಆ್ಯಪ್‌ಗಳ ಲೆಕ್ಕದಲ್ಲಷ್ಟದಿದ್ದರೂ ಸಹ ಸಾಮಾಜಿಕ ಜಾಲತಾಣಗಳ ಸಂಖ್ಯೆಯೇನೂ ಕಮ್ಮಿಇಲ್ಲ. ಹಲವು ಬಗೆಯ ಆಸಕ್ತಿ, ವಿವಿಧ ಕ್ಷೇತ್ರಗಳನ್ನು ಆಧರಿಸಿ ಹುಟ್ಟುತ್ತಲೇ ಇರುವ ಇಂಥ ತಾಣಗಳನ್ನು  ಎಣಿಸುತ್ತ ಹೋದಂತೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.   

ಹೊಸ ಹೊಸ ಜಾಲತಾಣಗಳು ಆರಂಭಗೊಳ್ಳುತ್ತಿರುವ ವೇಗದಲ್ಲಿಯೇ ಬಹಳ ಜನಪ್ರಿಯತೆಯನ್ನೂ ಹೊಂದುತ್ತಿವೆ. ಮೊದಲಿಗೆ ಡೆಸ್ಕ್‌ಟಾಪ್‌, ಲ್ಯಾಪ್‌ಟಾಪ್‌ಗಳಲ್ಲಿ ಬಳಕೆಯಾಗುತ್ತಿದ್ದ ಬಹುತೇಕ ಜಾಲತಾಣಗಳೀಗ ಮೊಬೈಲ್‌ ಫೋನ್‌ ಕಿರು ಪರದೆಯನ್ನೂ ಆವರಿಸಿಕೊಂಡಿವೆ. ಅಂತೆಯೇ ಮೊದಲಿಗೆ ಮೊಬೈಲ್‌ ಆವೃತ್ತಿಗಳಾಗಿ ಪರಿಚಿತವಾದ  ವಾಟ್ಸ್‌ಆ್ಯಪ್‌ನಂತಹ ಹಲವು ಸೇವೆಗಳು ಡೆಸ್ಕ್‌ಟಾಪ್‌ಗೂ ಬಂದು ಕುಳಿತಿವೆ.

ಸಂಬಂಧಗಳ ಸೇತುವಾಗಿ, ಮನದ  ಬರಹಗಳಿಗೆ ಗೋಡೆಯಾಗಿ... ಹೀಗೆ  ವಿವಿಧ ರೂಪದಲ್ಲಿರುವ ಜಾಲತಾಣಗಳ ಮೋಹಕ್ಕೆ ಒಳಗಾದವರಾರು? ಎಂಬಷ್ಟು ಜನಪ್ರಿಯತೆ ಅವುಗಳದ್ದು. ಅಷ್ಟಕ್ಕೂ ವಿಶ್ವವನ್ನು ವ್ಯಾಪಿಸಿರುವ ಇವುಗಳ ಬತ್ತಳಿಕೆಯಲ್ಲಿರುವ ಬಳಕೆದಾರರೆಷ್ಟು?

ಫೇಸ್‌ಬುಕ್‌
ಈ ಚಿರಪರಿಚಿತ ಜಾಲತಾಣ ಹುಟ್ಟಿಕೊಂಡಿದ್ದು 2004ರ ಫೆಬ್ರುವರಿ 4ರಂದು. ಪ್ರಧಾನ ಕಚೇರಿ ಕ್ಯಾಲಿಫೋರ್ನಿಯಾದ ಮೆನ್ಲೊ ಪಾರ್ಕ್‌ನಲ್ಲಿದೆ.  ಹಾರ್ವರ್ಡ್‌ ಕಾಲೇಜಿನ ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ಮಾರ್ಕ್‌ ಝುಕರ್‌ಬರ್ಗ್‌ ಸ್ಥಾಪಿಸಿದ್ದು. ಅವರೇ ಇದೀಗ ಸಂಸ್ಥೆಯ ಸಿಇಒ. ನೂರು ಕೋಟಿಗೂ  ಹೆಚ್ಚು ಬಳಕೆದಾರರನ್ನು ಹೊಂದಿದ ವಿಶ್ವದ ಏಕೈಕ ಸಾಮಾಜಿಕ ಜಾಲತಾಣ ಎಂಬ ಅಗ್ಗಳಿಕೆ ಇದರದ್ದು. ಇದರ ಮೂಲಕ ಫೋಟೊ, ವಿಡಿಯೊ, ಆ್ಯಪ್‌ಗಳನ್ನು ಹಂಚಿಕೊಳ್ಳಬಹುದು.  ಸದ್ಯ ಒಟ್ಟು 149 ಕೋಟಿ ಬಳಕೆದಾರರಿದ್ದಾರೆ.

ಕ್ಯೂಕ್ಯೂ
ವಿಭಿನ್ನ ಹೆಸರಿನ ಜಾಲತಾಣ ಚೀನಾದ್ದು. ಪೂರ್ತಿ ಹೆಸರು ಟೆನ್‌ಸೆಂಟ್‌ ಕ್ಯೂಕ್ಯೂ. ಹುಟ್ಟುಹಾಕಿದ್ದು ಟೆನ್‌ಸೆಂಟ್‌ ಹೋಲ್ಡಿಂಗ್ಸ್‌ ಕಂಪೆನಿ. ತ್ವರಿತ ಸಂದೇಶ, ಆನ್‌ಲೈನ್ ಸೋಷಿಯಲ್‌ ಗೇಮ್ಸ್‌, ಸಂಗೀತ, ಶಾಪಿಂಗ್, ಮೈಕ್ರೊಬ್ಲಾಗಿಂಗ್‌, ವೈಸ್‌ಚಾಟ್‌ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸುತ್ತದೆ. ಸದ್ಯ 83.20 ಕೋಟಿ ಬಳಕೆದಾರರಿದ್ದಾರೆ.

ವಾಟ್ಸ್‌ಆ್ಯಪ್‌
ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ, ಅಷ್ಟೇ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಮೆಸೇಜಿಂಗ್ ಆ್ಯಪ್‌ ಇದು.
ಯಾಹೂ ಕಂಪೆನಿಯ ಮಾಜಿ ಉದ್ಯೋಗಿಗಳಿಬ್ಬರು ಜತೆಗೂಡಿ 2009ರಲ್ಲಿ ಹುಟ್ಟುಹಾಕಿದ ಸಂಸ್ಥೆ. ಆದರೆ,  2014ರ ಫೆಬ್ರುವರಿಯಲ್ಲಿ ಫೇಸ್‌ಬುಕ್‌  ಇದನ್ನು ಸ್ವಾಧೀನ ಪಡಿಸಿಕೊಂಡಿತು. ಟೆಕ್ಸ್ಟ್‌ ಮೆಸೇಜ್‌, ಚಿತ್ರಗಳು, ಆಡಿಯೊ, ವಿಡಿಯೊ ಸೇರಿದಂತೆ ಹಲವು ಬಗೆಯ ಸೇವೆ ನೀಡುತ್ತಿದೆ. ಸದ್ಯ 80 ಕೋಟಿ ಬಳಕೆದಾರರಿದ್ದಾರೆ.‌

ಫೇಸ್‌ಬುಕ್‌ ಮೆಸೇಂಜರ್‌
ಇದು ಫೇಸ್‌ಬುಕ್‌ನಲ್ಲಿ‌ ಅಂತರ್ಗತವಾಗಿರುವ ಒಂದು  ಸೌಲಭ್ಯ ಅಷ್ಟೆ. 2011ರ ಆಗಸ್ಟ್‌ನಲ್ಲಿ ಮೊಬೈಲ್‌ ಆವೃತ್ತಿಯೂ ಬಿಡುಗಡೆ ಕಂಡಿತು. ಟೆಕ್ಸ್ಟ್‌ ಹಾಗೂ ಆಡಿಯೊ ಮೆಸೇಜಿಂಗ್ ಸೇವೆ ನೀಡುತ್ತಿದೆ. ಸದ್ಯ ಇದಕ್ಕೆ ಜಾಗತಿಕವಾಗಿ 70 ಕೋಟಿ ಬಳಕೆದಾರರಿದ್ದಾರೆ.

ಕ್ಯೂಜೋನ್‌
ಇದು ಸಹ ಚೀನಾದ ತಂತ್ರಜ್ಞಾನ ಸಂಸ್ಥೆ.  ಕ್ಯೂಕ್ಯೂ ಒಡೆತನದ ಟೆನ್‌ಸೆಂಟ್‌ ಕಂಪೆನಿಯೇ 2005ರಲ್ಲಿ ಇದನ್ನು ಹುಟ್ಟು ಹಾಕಿದ್ದು. 
ಬಳಕೆದಾರರು ಇದರಲ್ಲಿ ಬ್ಲಾಗ್‌, ಡೈರಿ ಬರೆಯಬಹುದು, ಚಿತ್ರಗಳನ್ನು ರವಾನಿಸಬಹುದು, ಸಂಗೀತ  ಆಲಿಸಬಹುದು,ವಿಡಿಯೊ ನೋಡಬಹುದು. ಸದ್ಯ ಇದು 66.80 ಕೋಟಿ  ಬಳಕೆದಾರರನ್ನು ಹೊಂದಿದೆ.

ಇವುಗಳಷ್ಟೇ ಅಲ್ಲದೇ, ಟ್ವಿಟ್ಟರ್‌, ಸ್ಕೈಪ್‌, ಗೂಗಲ್‌ ಪ್ಲಸ್‌, ಇನ್‌ಸ್ಟಾಗ್ರಾಮ್, ಸ್ನಾಪ್‌ಚಾಟ್‌, ವೈಬರ್‌... ಹೀಗೆ ಜನಪ್ರಿಯ ಜಾಲತಾಣಗಳ ಪಟ್ಟಿ ಉದ್ದವಿದೆ. ಬುದ್ಧಿವಂತ ಬಳಕೆದಾರರು ತಮ್ಮ ಅಗತ್ಯ, ಸೌಲಭ್ಯಗಳಿಗೆ ಅನುಗುಣವಾಗಿ ಇವುಗಳನ್ನು ಉಪಯೋಗಿಸುತ್ತಿದ್ದಾರೆ ಅಷ್ಟೆ.

ವರಮಾನಕ್ಕೂ ವೇದಿಕೆ...!
ಜಾಗತಿಕ ಇ–ಕಾಮರ್ಸ್‌ ಉದ್ಯಮದ ಪ್ರತಿ 30 ಸೆಕೆಂಡ್‌ಗಳ ವರಮಾನ ಸುಮಾರು ₹7.50 ಕೋಟಿ! ಇದರ ಸಿಂಹಪಾಲು ಆದಾಯ ಬರುವುದು ಸಾಮಾಜಿಕ ಜಾಲತಾಣಗಳಿಂದ ಎನ್ನುತ್ತದೆ ಅಸೋಚಾಂ–ಡೆಲಾಯಿಟ್‌ ವರದಿ. ಈ ಪೈಕಿ, ಫೇಸ್‌ಬುಕ್‌, ಪಿಂಟರೆಸ್ಟ್‌ ಹಾಗೂ ಟ್ವಿಟ್ಟರ್‌್  ವರಮಾನ ಪ್ರತಿ ಅರ್ಧ ನಿಮಿಷಕ್ಕೆ ಕ್ರಮವಾಗಿ 3.45 ಲಕ್ಷರೂಪಾಯಿ, 2.83 ಲಕ್ಷ ರೂಪಾಯಿ ಹಾಗೂ 2.71 ಲಕ್ಷ ರೂಪಾಯಿಗಳಷ್ಟಿದೆ ಎಂದೂ ಅದು ಹೇಳಿದೆ.

ಭಾರತದಲ್ಲಿ ಬಳಕೆ....
ಸಾಮಾಜಿಕ ಜಾಲತಾಣಗಳ ಬಳಕೆ ಹಳ್ಳಿಗಳ ದೇಶವಾದ ಭಾರತದಲ್ಲೂ ಕಡಿಮೆ ಇಲ್ಲ.  ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಬಳಕೆದಾರರ  ಪ್ರಮಾಣ ಕಳೆದೊಂದು  ವರ್ಷದಲ್ಲಿ ಗಣನೀಯವಾಗಿ ಹೆಚ್ಚಿದೆ  ಎನ್ನುತ್ತದೆ ಐಎಎಂಎಐ ಹಾಗೂ ಐಎಂಆರ್‌ಬಿ ವರದಿ. ‌

2015ರ ಏಪ್ರಿಲ್‌ ತನಕದ ಅಂಕಿ–ಅಂಶಗಳ ಪ್ರಕಾರ,  ದೇಶದಲ್ಲಿ  ಸಾಮಾಜಿಕ ಜಾಲತಾಣಗಳ ಬಳಕೆದಾರರ ಸಂಖ್ಯೆ 14.3 ಕೋಟಿಯಷ್ಟಿದೆ. ಈ ಪೈಕಿ ಕಾಲೇಜು ವಿದ್ಯಾರ್ಥಿಗಳ ಪಾಲು ಶೇ 34ರಷ್ಟಾದರೆ, ಯುವಕರ ಪಾಲು ಶೇ 27ರಷ್ಟಿದೆ ಎಂದು ವರದಿ ತಿಳಿಸಿದೆ. ಇನ್ನು, ಸೋಷಿಯಲ್‌ ಮೀಡಿಯಾ ಬಳಕೆದಾರರಲ್ಲಿ ಶೇ 12ರಷ್ಟು ಜನರು ಶಾಲಾ ವಿದ್ಯಾರ್ಥಿಗಳು ಎಂಬುದು ಆಶ್ಚರ್ಯ ಎನಿಸಿದರೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT