ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರು ಜಲಪಾತಗಳ ಬೆಟ್ಟ

Last Updated 31 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಒಂದು ಕಾಲಕ್ಕೆ ತುಂಬಿ ಹರಿಯುತ್ತಿದ್ದ ಅರ್ಕಾವತಿ ನದಿ ಇವತ್ತು ಬತ್ತಿ ಹೋಗಿದೆ. ಆದರೆ ಅರ್ಕಾವತಿ ನದಿ ಹುಟ್ಟುವ ನಂದಿಬೆಟ್ಟದ ಪಂಚಗಿರಿ ಶ್ರೇಣಿಗಳಲ್ಲಿ ಒಂದಾದ ಚನ್ನಗಿರಿ ಅಥವಾ ಚನ್ನರಾಯಸ್ವಾಮಿ ಬೆಟ್ಟದಲ್ಲಿ ಮಾತ್ರ ಮಳೆಗಾಲ ಆರಂಭವಾಯಿತೆಂದರೆ ಸಣ್ಣಪುಟ್ಟ ಜಲಪಾತಗಳು ಧುಮ್ಮಿಕ್ಕುವುದನ್ನು ಇಂದಿಗೂ ಕಾಣಬಹುದು.

ದೊಡ್ಡಬಳ್ಳಾಪುರ ತಾಲ್ಲೂಕು ಹಾಗೂ ನಂದಿ ಬೆಟ್ಟದ ಸಾಲಿನ ಪಂಚಗಿರಿ ಶ್ರೇಣಿಗಳಲ್ಲೇ ಜಲಪಾತವನ್ನು ಹೊಂದಿರುವ ಏಕೈಕ ಬೆಟ್ಟ ಚನ್ನಗಿರಿ. ಇಲ್ಲಿನ ಏಳಮ್ಮೆದೊಣೆಯ ಬೃಹತ್ ಬಂಡೆಯ ಮೇಲಿಂದ ಮಳೆಗಾಲ ಆರಂಭವಾಯಿತೆಂದರೆ ಸಾಕು ಹಾಲಿನ ಹೊಳೆಯಂತೆ ಸುಮಾರು ೧೦೦ ಅಡಿಗೂ ಎತ್ತರದಿಂದ ಮೈದುಂಬಿ ಹರಿಯುವ ಜಲಪಾತ ನೋಡುಗರಿಗೊಂದು ಹಬ್ಬ.

ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿ ಚನ್ನರಾಯಸ್ವಾಮಿ ಬೆಟ್ಟದ ತಪ್ಪಲಿನವರೆಗೂ ರಸ್ತೆ ಇದೆ. ಬೆಟ್ಟಕ್ಕೆ ಹತ್ತಲು ಮೆಟ್ಟಿಲುಗಳು ಇಲ್ಲ. ಕಾಲುದಾರಿ ಮೂಲಕ ಹತ್ತಿಯೇ ಮೇಲೆಕ್ಕೆ ಹೋಗಬೇಕು. ಬೆಂಗಳೂರಿನಿಂದ ಯಲಹಂಕ, ರಾಜಾನುಕುಂಟೆ ದೊಡ್ಡಬಳ್ಳಾಪುರ, ಮೆಳೆಕೋಟೆ ಮೂಲಕ ಚಿಕ್ಕಬಳ್ಳಾಪುರಕ್ಕೆ ಹೋಗುವ ದಾರಿಯಲ್ಲಿ ಸಾಗಿದರೆ ಚಿಕ್ಕರಾಯಪ್ಪನಹಳ್ಳಿ ಗ್ರಾಮ ಸಿಗುತ್ತದೆ. ಅಲ್ಲಿಂದ ಕಾಲುನಡಿಗೆ ಮೂಲಕ ಹೋಗಲು ದಾರಿ ಇದೆ.

‘ತಾಲ್ಲೂಕು ಕೇಂದ್ರದಿಂದ 22 ಕಿ.ಮೀ ದೂರದ ಚಿಕ್ಕರಾಯಪ್ಪನಹಳ್ಳಿ ಗ್ರಾಮದ ಸಮೀಪ ಇರುವ ಚನ್ನರಾಯಸ್ವಾಮಿ ಬೆಟ್ಟ ನಂದಿಬೆಟ್ಟಕ್ಕಿಂತಲೂ (ನಂದಿ ಬೆಟ್ಟದ ಎತ್ತರ 4,851 ಅಡಿ) ಸ್ವಲ್ಪ ಎತ್ತರ ಇದೆ’ ಎನ್ನುತ್ತಾರೆ ಚಿಕ್ಕರಾಯಪ್ಪನಹಳ್ಳಿ ಗ್ರಾಮದ ರೈತ ಚನ್ನೇಗೌಡ. 

ಈ ಬೆಟ್ಟದ ಮೇಲಿನ ಚನ್ನಕೇಶವ ಸ್ವಾಮಿ ದೇವಾಲದ  ಬಾಗಿಲಿನಲ್ಲೇ ಉತ್ತರ ಪಿನಾಕಿನ ನದಿ ಹುಟ್ಟುತ್ತದೆ. ಪಂಚಗಿರಿ ಶ್ರೇಣಿಗಳಲ್ಲಿ ಬರುವ ಇತರೆ ಬೆಟ್ಟಗಳೆಂದರೆ ನಂದಿಗಿರಿ, ಸ್ಕಂದಗಿರಿ (ಕಳವಾರಬೆಟ್ಟ), ದಿಬ್ಬಗಿರಿ, ಬ್ರಹ್ಮಗಿರಿ, ಚನ್ನಗಿರಿ (ಚನ್ನರಾಯಸ್ವಾಮಿ ಬೆಟ್ಟ).
ನಂದಿಬೆಟ್ಟದ ಅಕ್ಕಪಕ್ಕದಲ್ಲೆ ಸಾಲಾಗಿ ಬರುವ ಬೆಟ್ಟಗಳ ಪೈಕಿ ಬೆಟ್ಟದತುದಿಯಲ್ಲಿನ ವಿಸ್ತೀರ್ಣದಲ್ಲಿ ನಂದಿಗಿರಿಯ ನಂತರದ ಸ್ಥಾನ ಚನ್ನಗಿರಿಯದು. ಈ ಗಿರಿಯ ಮೇಲಿನ ಚನ್ನರಾಯಸ್ವಾಮಿ ದೇವಾಲಯಕ್ಕೆ ಬರುವ ಭಕ್ತಾದಿಗಳ ಮತ್ತು ಬೆಟ್ಟದ ಮೇಲಿನ ಪ್ರಾಣಿಗಳ ಅನುಕೂಲಕ್ಕಾಗಿ ಟಿಪ್ಪು ಸುಲ್ತಾನ್ ಆಡಳಿತ ಕಾಲದಲ್ಲಿ ದೊಡ್ಡಗೌಡ ಎಂಬಾತನಿಗೆ ಜವಾಬ್ದಾರಿ ವಹಿಸಿ ಪುಟ್ಟ ಕೆರೆಯೊಂದನ್ನು ನಿರ್ಮಾಣ ಮಾಡಿಸಿದ್ದರಿಂದ ಈ ಕೆರೆಯನ್ನು ಇಂದಿಗೂ ದೊಡ್ಡಗೌಡನ ಕೆರೆ ಎಂದೇ ಕರೆಯಲಾಗುತ್ತಿದೆ. ಈ ಕೆರೆಯಿಂದ ಹೊರಬರುವ ನೀರೇ ಏಳೆಮ್ಮೆದೊಣೆ ಮೂಲಕ ಹಾಲಿನ ಜಲಪಾತವಾಗಿ ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುತ್ತ ಚಿಕ್ಕರಾಯಪ್ಪನಹಳ್ಳಿ ಕೆರೆಗೆ ಬಂದು ಸೇರುತ್ತದೆ. ಈ ಕೆರೆಯಿಂದ ಮುಂದೆ ಸಾಗುವ ನೀರು ಚನ್ನಾಪುರ ಕೆರೆಯ ಮೂಲಕ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಾಲಿನ ಮೆಳೆಕೋಟೆ, ಕೊನಘಟ್ಟ, ಶಿವಪುರ, ನಾಗರಕೆರೆ, ಹೆಸರಘಟ್ಟ ಕೆರೆ ಅಲ್ಲಿಂದ ಕನಕಪುರ ಸಮೀಪ ಸಂಗಮದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. 

ಇದು ಸುಗಮ ದಾರಿ...
ಚನ್ನರಾಯಸ್ವಾಮಿ ಬೆಟ್ಟಕ್ಕೆ ಹೋಗಲು ಎರಡು ದಾರಿಗಳಿವೆ. ಚನ್ನಾಪುರದ ಮೂಲಕ ಬೆಟ್ಟಕ್ಕೆ ಹೊರಟರೆ ಕಡಿದಾದ ಒಂದು ಬಂಡೆ ಮಾತ್ರ ಎದುರಾಗುತ್ತದೆ. ಉಳಿದಂತೆ ಬಹುತೇಕ ದಾರಿ ಅಷ್ಟಾಗಿ ಕಡಿದಾಗಿಲ್ಲ, ಜಲಪಾತಗಳು ಕಡಿಮೆ. ಚಿಕ್ಕರಾಯಪ್ಪನಹಳ್ಳಿ ಗ್ರಾಮದ ಮೂಲಕ ಹೊರಟರೆ ಕಿರು ಜಲಪಾತಗಳ ಸಂಖ್ಯೆ ಹೆಚ್ಚು, ದಾರಿ ಕಡಿದಾಗಿದೆ. ಬೆಟ್ಟಕ್ಕೆ ಹತ್ತುವವರಿಗೆ ಮಳೆಗಾಲದಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ. ಅತ್ಯಂತ ರುಚಿಯಾದ, ಶುದ್ಧವಾದ ಹಾಗೂ ಗಿಡಮೂಲಿಕೆಗಳ ಔಷಧಿಯುಕ್ತ ನೀರು ದೊರೆಯುತ್ತದೆ. ಬೇಸಿಗೆಯಲ್ಲಿ ಬೆಟ್ಟದ ಮೇಲಿನ ಕಲ್ಯಾಣಿಯಲ್ಲಿ ನೀರು ಇರುತ್ತದೆ. ಆದರೆ ಕುಡಿಯಲು ಅಷ್ಟೊಂದು ಶುದ್ಧವಾಗಿಲ್ಲ. ಬೆಟ್ಟದ ಮೇಲೆ ಎರಡು ದೇವಾಲಯಗಳಿವೆ. ಒಂದು ಆಂಜನೇಯಸ್ವಾಮಿ, ಮತ್ತೊಂದು ಚನ್ನಕೇಶ್ವಸ್ವಾಮಿ. ರಾತ್ರಿ ಬೆಟ್ಟದ ಮೇಲೆ ಉಳಿದುಕೊಳ್ಳುವುದಿದ್ದರೆ ಕಲ್ಯಾಣಿಗೆ ಅಂಟಿಕೊಂಡಂತೆ ಪುಟ್ಟದೊಂದು ಮಂಟಪ ಇದೆ. ಈ ಮಂಟಪದಲ್ಲೇ ಅಡುಗೆ ಮಾಡಿಕೊಳ್ಳಬಹುದು. ಯಾವುದೇ ಕಾಡು ಪ್ರಾಣಿಗಳ ಕಾಟ ಇಲ್ಲ. ಇದೇ ಪ್ರಥಮ ಬಾರಿಗೆ ಹೋಗುವುದಿದ್ದರೆ ಸ್ಥಳೀಯ ಗ್ರಾಮಸ್ಥರನ್ನು ಜೊತೆಯಲ್ಲಿ ಕರೆದೊಯ್ದರೆ ದಾರಿಯ ಹುಡುಕಾಟ ತಪ್ಪುತ್ತದೆ. ಏಕೆಂದರೆ ಬೆಟ್ಟಕ್ಕೆ ಹತ್ತಲು ನಿರ್ದಿಷ್ಟ ದಾರಿ ಇಲ್ಲ.  

ನಿಶ್ಶಬ್ದ ತಾಣ
ನಂದಿ ಬೆಟ್ಟದ ಮೇಲೆ ಸದಾ ಪ್ರವಾಸಿಗರು ತುಂಬಿರುವುದು ಸಹಜ. ಇದರಿಂದಾಗಿ ಒಂದಿಷ್ಟು ಸಮಯ ಏಕಾಂತವಾಗಿ ಕುಳಿತು ಕಾಲಕಳೆಯುವುದು ಕೊಂಚ ಕಷ್ಟ. ಆದರೆ ಚನ್ನರಾಯಸ್ವಾಮಿ ಬೆಟ್ಟಕ್ಕೆ ರಸ್ತೆ ಸೌಕರ್ಯ ಇಲ್ಲದಿರುವುದರಿಂದ ಬೆಟ್ಟಕ್ಕೆ ಕಾಲ್ನಡಿಗೆ ಮೂಲಕವೇ ಹತ್ತಬೇಕು. ಹೀಗಾಗಿ ಚಾರಣಿಗರು ಮಾತ್ರ ಇರುತ್ತಾರೆ. ಶ್ರಾವಣ ಶನಿವಾರ, ಕಾರ್ತಿಕ ಮಾಸದ ಸೋಮವಾರಗಳಲ್ಲಿ ಇಲ್ಲಿನ ಆಂಜನೇಯಸ್ವಾಮಿ ಹಾಗೂ ಗುಹೆಯಲ್ಲಿರುವ ಚನ್ನಕೇಶವಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಈ ಸಮಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಇರುತ್ತದೆ. ಬೆಳಗ್ಗೆ ಹೊರಟರೆ ಸಂಜೆ ಮನೆಗೆ ತಲುಪಲು ಸೂಕ್ತ ಸ್ಥಳ ಚನ್ನರಾಯಸ್ವಾಮಿ ಬೆಟ್ಟ.                                    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT