ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರು ಬೆರಳ ದೇವಾಲಯ

ಕಥೆ
Last Updated 16 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಸಂತ ಜೋಸೇಫರ ಸೆಮಿನರಿ ಬಿಟ್ಟ 15 ವರ್ಷಗಳ ನಂತರ ಪಾದರಿ ಪೆರುಮಾಳ ಮಚ್ಚನ್ ಆಕಸ್ಮಿಕ ಭೇಟಿಯಾಗಿತ್ತು. ಅದೂ ಬೆಂಗಳೂರಿನ ರೈಲು ನಿಲ್ದಾಣದಲ್ಲಿ. ಆತ ಕೊಯಮತ್ತೂರಿಗೆ ಹೊರಟಿದ್ದ. ನಾನು ಹಾಸನಕ್ಕೆ.

‘ಅರೇ ಮಚ್ಚನ್ ಎಲ್ಲಿಗಯ್ಯ ಹೋಗಿದ್ದಿ, ಇಷ್ಟುದಿನ’ ಎಂದು ಆತನನ್ನ ಬರಸೆಳೆದು ಅಪ್ಪಿದಾಗ ಆತ ಹಿಂದಿನಂತೆಯೇ ನಕ್ಕು ನನ್ನನ್ನ ಎದೆಗೆ ಒತ್ತಿಕೊಂಡಿದ್ದ. ಆ ಬಿಸಿ ಅಪ್ಪುಗೆ, ಅವನ ದೈಹಿಕ ಸ್ಪರ್ಶ ಮನಸ್ಸಿಗೆ ಮುದ ನೀಡಿತು. ಬಹಳ ದಿನಗಳ ನಂತರದ ಭೇಟಿಯ ಆವೇಗ ಇಳಿದಾಗ ಆತ ಕೊಯಮತ್ತೂರಿಗೆ ಹತ್ತಿರದ ಕಿರು ಬೆರಳ ದೇವಾಲಯದಲ್ಲಿ ಪ್ರೀಸ್ಟ್‌ ಆಗಿದ್ದಾನೆ ಅನ್ನುವುದು ತಿಳಿಯಿತು. ಜೊತೆಗೆ, ‘ನೀನು ಕಿರು ಬೆರಳ ದೇವಾಲಯದ ಹೆಸರು ಕೇಳಿದ್ದಿ ಅಲ್ಲವೆ’ ಎಂದು ಪ್ರಶ್ನಿಸಿದ. ನಾನು ಈವರೆಗೂ ಈ ಹೆಸರು ಕೇಳಿರಲಿಲ್ಲ.

‘ಇಲ್ಲ ಮಚ್ಚನ್. ಇದೇ ಮೊದಲ ಬಾರಿ ಈ ಹೆಸರನ್ನ ಕೇಳುತ್ತಿರುವುದು’ ಎಂದೆ. ‘ಥು ನಿನ್ನ, ತಮಿಳುನಾಡಿನಾದ್ಯಂತ ಹೆಸರು ಮಾಡಿರುವ, ಪ್ರತಿ ನಿತ್ಯ ಲಕ್ಷಾಂತರ ಭಕ್ತರು ಆಗಮಿಸುವ, ವಾರಕ್ಕೆ ಕಾಣಿಕೆಯೇ ಹತ್ತು ಲಕ್ಷ ರೂಪಾಯಿ ದಾಟುವ ಒಂದು ಚರ್ಚ್‌ ಬಗ್ಗೆ ಪಾದರಿಯಾದ ನಿನಗೇ ಗೊತ್ತಿಲ್ಲ ಅಂದರೆ ಶೇಮ್ ಶೇಮ್’ ಎಂದ.

ಅವನ ಶೇಮ್ ಶೇಮ್ ನಿಂದ ವಿಚಲಿತನಾಗದೆ ನಾನು, ‘ಈಗ ತಿಳಿಯಿತಲ್ಲ. ಇನ್ನು ನಿನ್ನ ಆ ಚರ್ಚ್‌ಗೆ ಬರತೀನಿ ಬಿಡು’ ಎಂದೆ. ‘ಬರಬೇಕಯ್ಯ, ಬರಬೇಕು... ಕಿರು ಬೆರಳ ಸಂತರ ಕೃಪೆಗೆ ನೀನು ಒಳಗಾಗಬೇಕು’ ಎಂದು ಮಚ್ಚನ್ ಪುಲ್‌ಪತ್ರಿಯ ಮೇಲೆ ನಿಂತ ಪಾದರಿಯ ಹಾಗೆ ಆವೇಶದಿಂದ ನುಡಿದ. ‘ಅದಿರಲಿ, ನೀನು ಎಲ್ಲಿದಿಯಾ?’ ಎಂದು ಕೇಳಿದ.

‘ಹಾಸನದಲ್ಲಿ ಒಂದು ಸಣ್ಣ ಚರ್ಚ್‌. ನೂರೈವತ್ತು ಕ್ರೈಸ್ತ ಕುಟುಂಬಗಳು, ಎಲ್ಲ ಬಡವರು, ರೈತರು, ಅವರ ಸೇವೆ ಮಾಡಿಕೊಂಡು ಇದ್ದೇನೆ’. ‘ಸೆಮಿನರಿಯ ಮುದಿ ಪಾದರಿಗಳು ಹೇಳುತ್ತಿದ್ದ ಸೇವೆ ಅಲ್ಲವೆ....’ ಮಚ್ಚನ್ ನಕ್ಕ. ಅವನ ಆ ನಗೆ ಕಿವಿಗೆ ಬೀಳದೆ ಬಹಳ ದಿನಗಳಾಗಿದ್ದವು. ಸೆಮಿನರಿಯ ಯಾವುದೇ ತರಗತಿ ಇರಲಿ, ಅಲ್ಲಿ ಪ್ರಧಾನವಾಗಿ ಹೇಳಿ ಕೊಡುವ ಧರ್ಮಶಾಸ್ತ್ರ, ಫಿಲಾಸಫಿ, ಇತ್ಯಾದಿಗಳ ಜೊತೆಯಲ್ಲಿ ಅಲ್ಲಿಯ ಪಾದರಿಗಳು ಹೆಚ್ಚು ಒತ್ತು ಹಾಕುತ್ತಿದ್ದುದು ಜನಸೇವೆಯ ಮೇಲೆ.

ವಿಷಯ ಯಾವುದೇ ಇರಲಿ, ಅವರು ನೇರವಾಗಿ ಜನಸೇವೆಗೆ ಬಂದು ತಲುಪುತ್ತಿದ್ದರು. ಕ್ರಿಸ್ತನ ಎಲ್ಲ ಬೋಧನೆಗಳ ತಿರುಳು ಸೇವೆ ಸೇವೆ ಸೇವೆ. ಮನುಷ್ಯನನ್ನ ಅವನಿರುವ ಸ್ಥಿತಿಯಿಂದ ಮೇಲಕ್ಕೆ ಎತ್ತುವುದೇ ಕ್ರೈಸ್ತ ಧರ್ಮದ ತಿರುಳು, ಗುರಿ, ಸಂದೇಶ ಅನ್ನುವುದೇ ಅವರ ಆಶಯವಾಗಿರುತ್ತಿತ್ತು. ಆದರೆ ಇಂತಹ ಮಾತುಗಳನ್ನ ಮಚ್ಚನ್ ತಮಾಷೆಯಿಂದ ಕಾಣುತ್ತಿದ್ದ. ಈ ಸೇವೆಯ ವಿಷಯ ಬಂತು ಅಂದರೆ ಆತ ಇಳಿದನಿಯಲ್ಲಿ ‘ಕೈಲಾಸ ಸುತ್ತಿ ಮೈಲಾರ’ ಅನ್ನುತ್ತಿದ್ದ.

‘ಈ ಮುದಿಯರು ಕೊನೆಗೆ ಬಂದು ನಿಲ್ಲೋದು ಇಲ್ಲಿಗೇನೆ... ಸೇವೆ ಸೇವೆ ಸೇವೆ... ನಾನು ಹೇಳೋದು ಏನು ಗೊತ್ತೆ? ದೇವರಿಗಾಗಿ ಎಲ್ಲ ಮಾಡಿ, ಆದರೆ ನಿಮಗಾಗಿ ಏನಾದರೂ ಸೇವ್ ಮಾಡಿ.... ಬ್ಯಾಂಕಿನಲ್ಲಿ ಒಂದಿಷ್ಟು ಹಣ, ಒಂದು ಕಾರಿಗಾಗಿ ಹಣ, ಒಂದು ಮನೆಗಾಗಿ ಹಣ, ವಯಸ್ಸಾದಾಗ ಪಾದರಿಗಳ ಓಲ್ಡ್‌ ಏಜ್ ಹೋಮಿನಲ್ಲಿ ಕೊಳೆಯುವಾಗ ನಿಮ್ಮ ಖರ್ಚಿಗಾಗಿ ಹಣ ಸೇವ್ ಮಾಡಿ. ನಂತರ ಸೇವೆ.. ಸೇವೆ.. ಸೇವೆ...’.

ಅವನು ಮುದಿಯರು ಎಂದು ಅವನು ಹೇಳುತಿದ್ದುದು ಸೆಮಿನರಿಯಲ್ಲಿ ಕೆಲಸ ಮಾಡುವ ವಯಸ್ಸಾದ ಪಾದರಿಗಳಿಗೆ. ಹೀಗೆ ಹೇಳಿ ನಗುತ್ತಿದ್ದ ಈತ. ಉಳಿದ ಸೆಮಿನರಿಗಳನ್ನ ನಗಿಸುತ್ತಿದ್ದ. ಇವನ ನಗೆ ಅದೆಲ್ಲವನ್ನ ಈಗ ನೆನಪಿಗೆ ತಂದುಕೊಟ್ಟಿತು. ‘ಮಚ್ಚನ್ ಈಗ ಇಲ್ಲಿಗೆ ಬಂದದ್ದು ಏನು?’

‘ನನಗೆ ಕೈತುಂಬಾ ಕೆಲಸ. ನಿಜ ಹೇಳಬೇಕು ಅಂದರೆ ಬಿಡುವಿಲ್ಲದಷ್ಟು ಕೆಲಸ. ಇಲ್ಲಿಯ ಬಿಷಪ್ ಅವರನ್ನ ಒಂದು ಕಾರ್ಯಕ್ರಮಕ್ಕೆ ಕರೆಯಬೇಕಿತ್ತು, ಬಂದೆ. ಬಾ ರೈಲ್ವೆ ಪ್ಲಾಟ್‌ಫಾರಂ ಟೀ ಚೆನ್ನಾಗಿ ಇರುತ್ತೆ. ಕುಡಿಯುತ್ತ ಮಾತನಾಡೋಣ. ನನ್ನ ರೈಲಿಗೆ ಸಮಯ ಇದೆ’.

ಪ್ಲಾಟ್‌ಫಾರಂ ತುದಿಯಲ್ಲಿ ಕುಳಿತೆವು. ಮಾತನಾಡುವುದೆಲ್ಲ ಅವನದೇ ಆಯಿತು. ಆತ ತನ್ನ ಬಗ್ಗೆಯೇ ಹೇಳಿದ. ಸೆಮಿನರಿ ವ್ಯಾಸಂಗ ಮುಗಿದ ಕೂಡಲೇ ಅವನಿಗೆ ಇಟಲಿಗೆ ಹೋಗುವ ಅವಕಾಶ ದೊರೆಯಿತು. ಇಟಲಿಗೆ ಹೋದ ಕೂಡ. ಅಲ್ಲಿ ಮೂರು ವರುಷ ಇದ್ದ. ಈ ಸಂದರ್ಭದಲ್ಲಿ ಅಲ್ಲಿಯ ಜನರ ಬಗ್ಗೆ ತಿಳಿದುಕೊಂಡ.

ಅವನು ಅಲ್ಲಿ ಗಮನಿಸಿದ ಒಂದು ವಿಶೇಷ ಅಂದರೆ ಜನ ಸಂತರನ್ನ ಪೂಜಿಸುವುದು, ಆರಾಧಿಸುವುದು. ಕ್ರೈಸ್ತ ಧರ್ಮಕ್ಕಾಗಿ ದುಡಿದು ಪ್ರಾಣ ನೀಗಿದ ಸಂತರ ಹೆಸರಿನಲ್ಲಿ ಅಲ್ಲಲ್ಲಿ ಇಗರ್ಜಿಗಳನ್ನ ಕಟ್ಟಿಸಿ ಅವನ್ನ ಯಾತ್ರಾಸ್ಥಳಗಳನ್ನಾಗಿ ಮಾಡಿರುವುದು. ಜೊತೆಗೆ ಆ ಸಂತರ ಸ್ಮರಣೆಗಾಗಿ ಇಗರ್ಜಿಯಲ್ಲಿ ಒಂದೊಂದು ವಸ್ತುವನ್ನ ಇರಿಸಿರುವುದು.

ಆ ಸಂತರ ದೇಹದ ಒಂದು ಅಂಗ, ಅವರ ಕೂದಲು, ಅವರ ಕಾಲಿನ ಬೆರಳು, ಅವರು ಬಳಸುತ್ತಿದ್ದ ಬಟ್ಟೆಯ ಒಂದು ತುಣುಕು, ಪಾದರಿಯ ಕೈನ ಉಂಗುರ– ಹೀಗೆ ಕೆಲ ವಸ್ತುಗಳನ್ನ ವಿಶೇಷವಾಗಿ ಇರಿಸಿ ಜನರನ್ನ ಸೆಳೆಯುವುದು. ಜನ ಕೂಡ ಇಂತಹಾ ಒಂದು ವಸ್ತು ಅಲ್ಲಿದೆ ಅಂದರೆ ಅದನ್ನ ಅಮೂಲ್ಯವಾದದ್ದು ಅನ್ನುವಂತೆ ನೋಡಿ ಮರಳಾಗುವುದು.

‘‘ಇಟಲಿಯಲ್ಲಿ ನಾನು ಸಂತ ಮಾರ್ಟಿನ್ನರ ಕಣ್ಣಿನ ಕರಿಗೊಂಬೆ ದೇವಾಲಯ, ಕಾಲಿನ ಹೆಬ್ಬೆರಳ ಆಲಯ, ಎಡಗೈ ಆಲಯ, ಕೂದಲ ಆಲಯ, ಎಂದೆಲ್ಲ ಆಲಯಗಳನ್ನ ನೋಡಿದೆ. ಜನ ಮುಗಿ ಬಿದ್ದು ಇಲ್ಲಿಗೆಲ್ಲ ಬರುತ್ತಿದ್ದರು. ಇಲ್ಲಿ ಹಣದ ಹೊಳೆ ಹರಿಯುವುದು, ಜನರ ಭಕ್ತಿ, ಪ್ರಾರ್ಥನೆ ಇಲ್ಲಿ ನಡೆಯೋದು.ದಿನಹೋದ ಹಾಗೆ ಜನ ಭಕ್ತಿ ಪರವಶರಾಗಿ ಚರ್ಚ್‌ಗೆ ಬರೋರು.

ಅಲ್ಲಿಯ ಸಂತ ಮಾರ್ಟಿನ್ ಕೂಡ ಓರ್ವ ಸಂತನೇ ಆಗಿದ್ದ. ಏಸು ಕ್ರಿಸ್ತನ ತತ್ವ ಸಿದ್ಧಾಂತಗಳನ್ನ ಜನರಿಗೆ ತಲುಪಿಸಲು ಹಲವಾರು ವರ್ಷಗಳವರೆಗೆ ಇಟಲಿಯಲ್ಲಿ ದುಡಿದ. ಕ್ರಿಸ್ತನ ಮಾರ್ಗದಲ್ಲಿ ದೇವರ ಕೆಲಸ ಮಾಡಿ ಜನರ ಪ್ರೀತಿ–ಗೌರವಕ್ಕೆ ಪಾತ್ರನಾದ. ಅವನು ಸತ್ತ ನಂತರ ಅಲ್ಲಿಯ ಪಾದರಿಗಳು ಅವನನ್ನ ಪವಾಡ ಪುರುಷ ಎಂದು ಕರೆದರು. ಅವನ ಶವ ಕೊಳೆಯದೆ ಹಾಗೇ ಉಳಿದಿದೆ ಎಂದು ಸಾರಿದರು. ಆ ಶವದ ಒಂದೊಂದು ಅಂಗವನ್ನ ಒಂದೊಂದು ಚರ್ಚ್‌ನಲ್ಲಿ ಇರಿಸಿ ಅದೊಂದು ಅದ್ಭುತ ಎಂದರು.

ಕಣ್ಣಿನ ಕರಿ ಗೊಂಬೆ ದೇವಾಲಯ, ಕಾಲಿನ ಹೆಬ್ಬೆರಳ ದೇವಾಲಯ, ಕೂದಲ ಆಲಯ ಎಂದೆಲ್ಲ ಆಲಯಗಳು ಹುಟ್ಟಿಕೊಂಡವು. ನಾನು ಅಲ್ಲಿರುವ ತನಕ ಇದೆಲ್ಲವನ್ನ ನೋಡಿದೆ. ಈ ಆಲಯಗಳು ವಿಪರೀತವಾಗಿ ಹಣ ಮಾಡುವುದನ್ನು ನೋಡಿದೆ.

ಮೂರು ವರ್ಷಗಳ ನಂತರ ನನ್ನನ್ನ ಮತ್ತೆ ಭಾರತಕ್ಕೆ ಕಳುಹಿಸಿದರು. ಕೊಯಮತ್ತೂರಿನ ಸಂತ ದಿಯಾಗೋ ದೇವಾಲಯದ ಪ್ರೀಸ್ಟ್‌ ನಾನಾದೆ. ಸಣ್ಣದೊಂದು ದೇವಾಲಯ. ಯಾಂತ್ರಿಕವಾಗಿ ಬರುವ ಜನ, ನಿತ್ಯ ಕಾಣಿಕೆ ಡಬ್ಬಿಗೆ ಬೀಳುವ ಕೆಲ ಚಿಲ್ಲರೆ ಹಣ. ಒಂದು ಜಾತ್ರೆ ಇಲ್ಲ, ಒಂದು ವಿಶೇಷ ದಿನ ಇಲ್ಲ. ಜನ ತಾವಾಗಿ ದೇವರನ್ನ ಕಾಣಲು, ಹರಕೆ ತೀರಿಸಿಕೊಳ್ಳಲು ಬರುವುದಿಲ್ಲ.

ದೇವರ ಎದುರಿನ ಹುಂಡಿಸದಾ ಬರಿದು. ಇಟಲಿಯ ಕಣ್ಣಿನ ಕರಿಗೊಂಬೆ ದೇವಾಲಯದಲ್ಲಿದ್ದ ನನಗೆ ತೀವ್ರವಾದ ನಿರಾಶೆ ಆಯಿತು. ಈ ಚಿಂತೆಯಲ್ಲಿ ಇದ್ದಾಗಲೇ ನನಗೆ ಒಂದು ವಿಚಾರ ಹೊಳೆಯಿತು. ಇಟಲಿಯ ದೇವಾಲಯದ ನನ್ನ ಮಿತ್ರರಿಗೆ ನಾನು ಸಂಪರ್ಕಿಸಿದೆ. ಅವರು ಉತ್ತಮ ಸಲಹೆ ನೀಡಿದರು. ನಾನು ಎಲ್ಲ ಸಿದ್ಧತೆಗಳನ್ನ ಮಾಡಿಕೊಂಡು ಮತ್ತೆ ಇಟಲಿಗೆ ಹೋದೆ.

ಅಲ್ಲಿಯ ಪಾದರಿ ಮತ್ತು ಬಿಷಪ್‌ರನ್ನ ಭೇಟಿಯಾದೆ. ನನ್ನ ಆಶಯವನ್ನ ಅವರ ಮುಂದೆ ಇರಿಸಿದೆ. ಭಾರತದಂತಹ ಧಾರ್ಮಿಕ ಮನೋಭಾವ ಇರುವ ದೇಶದಲ್ಲಿ ಮಾರ್ಟಿನ್ನರ ಪ್ರವೇಶ ಒಂದು ಪವಾಡವನ್ನೇ ಮಾಡಬಲ್ಲದು ಎಂದು ಅವರನ್ನೆಲ್ಲ ನಂಬಿಸಿದೆ. ಅಲ್ಲಿಂದ ಹಿಂತಿರುಗಿ ಬರುವಾಗ ನನ್ನಲ್ಲಿ ಸಂತರ ಕಿರು ಬೆರಳಿನ ಪವಿತ್ರ ಅವಶೇಷ ಇತ್ತು.

ಕೊಯಮತ್ತೂರಿನ ಸಂತ ದಿಯಾಗೋ ದೇವಾಲಯದಲ್ಲಿ ಮಹಾ ವಿಜೃಂಭಣೆಯಿಂದ ಒಂದು ಮೆರವಣಿಗೆ ನಡೆಯಿತು. ಸಂತ ಮಾರ್ಟಿನ್ನರ ಎರಡನೇ ಕಿರು ಬೆರಳನ್ನ ಜನ ಭಯಭಕ್ತಿಯಿಂದ ಸ್ವಾಗತಿಸಿದರು. ಪ್ರಧಾನ ಪೀಠದ ಮಗ್ಗುಲಲ್ಲಿ ವಿಶೇಷ ವೇದಿಕೆಯ ಮೇಲೆ ಕಿರು ಬೆರಳಿನ ಪ್ರತಿಷ್ಠಾಪನೆ ನಡೆಯಿತು. ‘ಬಹಳ ದೂರದಿಂದ ಸಂತ ಮಾರ್ಟಿನ್ನರು ತಮ್ಮ ಕಿರು ಬೆರಳಿನ ರೂಪದಲ್ಲಿ ಇಲ್ಲಿಗೆ ಬಂದಿದ್ದಾರೆ.

ನಿಮ್ಮ ನಡುವೆ ಇರುತ್ತಾರೆ. ನಿಮ್ಮ ಕಷ್ಟ–ನೋವನ್ನು ಪರಿಹರಿಸುತ್ತಾರೆ. ನೀವು ಬೇಡಿಕೊಂಡಿದ್ದೆಲ್ಲ ನಿಮಗೆ ಸಿಗುವುದು. ನೀವು ಹುಡುಕಿರಿ, ನಿಮಗೆ ದೊರೆಯುವುದು’ ಎಂದೆಲ್ಲ ಬಿಷಪ್ ಗುರುಗಳು ನುಡಿದರು.

ಅಂತೆಯೇ ಆಯಿತು. ಮಾರ್ಟಿನ್ನರ ಕಿರು ಬೆರಳು ಬರುತ್ತಿದ್ದ ಹಾಗೆಯೇ ಪವಾಡಗಳು, ಅಚ್ಚರಿಗಳು ನಡೆದವು. ಇಗರ್ಜಿಗೆ ಬರುವ ಜನರ ಸಂಖ್ಯೆ ಹೆಚ್ಚಿತು.

ಕಿರು ಬೆರಳಿನ ಕೀರ್ತಿ ಎಲ್ಲೆಲ್ಲಿಗೋ ತಲುಪಿ ಜನ ಧಾವಿಸಿ ಬಂದರು. ಲಕ್ಷಾಂತರ ಜನರ ಬೇಡಿಕೆ ಹೆಚ್ಚಿತು. ಮಕ್ಕಳಿಲ್ಲದವರಿಗೆ ಮಕ್ಕಳು, ಕೆಲಸವಿಲ್ಲದವರಿಗೆ ಕೆಲಸ, ಮನೆಯಲ್ಲಿ ಶಾಂತಿ ಇಲ್ಲದವರಿಗೆ ಶಾಂತಿ, ವ್ಯವಹಾರದಲ್ಲಿ ನಷ್ಟವಾದವರಿಗೆ ಲಾಭ, ಆರೋಗ್ಯ ಸರಿ ಇಲ್ಲದವರಿಗೆ ಆರೋಗ್ಯ, ದೊರೆಯಿತು. ಇಲ್ಲಿ ಇಗರ್ಜಿಯಲ್ಲಿ ನವೇನಾಗಳು, ಪ್ರಾರ್ಥನೆಗಳು, ಪೂಜೆಗಳು ಪ್ರಾರಂಭವಾದವು. ಉರುಳು ಸೇವೆ, ಮುಡಿ ಒಪ್ಪಿಸುವುದು, ಎಂದೆಲ್ಲ ಪ್ರಾರಂಭವಾಯಿತು. ಇಂದು ಇಡೀ ಭಾರತದಲ್ಲಿ ಇರುವ ಪ್ರಖ್ಯಾತ ಇಗರ್ಜಿಗಳಲ್ಲಿ ಇದೂ ಒಂದು.

ಇಲ್ಲಿಯ ಜನ ತುಂಬಾ ಬಡತನದಲ್ಲಿ ಇದ್ದರು. ಆದರೆ ಇಂದು ಅವರೆಲ್ಲ ಬೇರೆ ಬೇರೆ ಉದ್ಯೋಗ ಮಾಡಿ ಶ್ರೀಮಂತರಾಗಿದ್ದಾರೆ. ನನ್ನ ಹಳ್ಳಿಯ ಒಬ್ಬೊಬ್ಬರೂ ಎರಡು ಮೂರು ಮನೆ ಕಟ್ಟಿಸಿದ್ದಾರೆ. ಅವರ ಮಕ್ಕಳು ವೈದ್ಯರಾಗಿ, ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಂತ ದಿಯಾಗೋ ಇಗರ್ಜಿ ಇರುವ ಹಳ್ಳಿ ಇವತ್ತು ದೊಡ್ಡ ಶ್ರೀಮಂತ ಊರು. ಆದರೆ ನೀನು ಇದರ ಹೆಸರು ಕೇಳಿಲ್ಲ ಅನ್ನುವಿ. ಇರಲಿ, ನಾಳೆ ಬಂದು ನೋಡು, ಅಚ್ಚರಿ ಪಡುವಿ’’ ಎಂದ ಮಚ್ಚನ್.

ಮಾತಿನ ಒಂದು ಹಂತಕ್ಕೆ ಮುಟ್ಟುತ್ತಿರಲು ರೈಲು ನಿಲ್ದಾಣದಲ್ಲಿ ಜನರ ಗಡಿಬಿಡಿ ಹೆಚ್ಚಿತು. ಮಚ್ಚನ್ ಎದ್ದ. ‘ಅಲ್ಲಿ ಹೋದಮೇಲೆ ನಾನು ಕೂಡ ಶ್ರೀಮಂತ ಪಾದರಿ. ನನ್ನ ಬಳಿ ಮೂರು ಕಾರುಗಳಿವೆ. ನಾಲ್ಕು ಸೈಟುಗಳಿವೆ. ಬ್ಯಾಂಕಿನಲ್ಲಿ ಹಣ ಇದೆ’’ ಎಂದ. ನಿಂತ ರೈಲಿನತ್ತ ಹೆಜ್ಜೆ ಹಾಕುತ್ತ– ‘ನಿನಗೊಂದು ಸಲಹೆ ಕೊಡಬೇಕು ನಾನು. ನೀನೂ ಕೂಡ ಸಂತ ಮಾರ್ಟಿನ್ನರ ದೇಹದ ಒಂದು ಪವಿತ್ರ ತುಣುಕನ್ನ ತಂದು ನಿನ್ನ ದೇವಾಲಯದಲ್ಲಿ ಇರಿಸು. ಅಂದರೆ ಅದೊಂದು ಪವಾಡ ಆಗುತ್ತದೆ. ಯೋಚಿಸು... ನಾನು ಪತ್ರ ಬರೆಯುತ್ತೇನೆ’ ಎನ್ನುತ್ತ ಬಂದ ರೈಲಿನೊಳಗೆ ಮಚ್ಚನ್ ತೂರಿಕೊಂಡ. ನಾನು ಹಾಸನದ ರೈಲಿಗಾಗಿ ಕಾದು ನಿಂತೆ.
***
ಮಚ್ಚನ್ ಇಲ್ಲಿಗೇನೆ ಸುಮ್ಮನುಳಿಯಲಿಲ್ಲ. ಅವನಿಂದ ಪತ್ರಗಳ ಮೇಲೆ ಪತ್ರಗಳು ಬಂದವು. ಕಿರು ಬೆರಳ ದೇವಾಲಯದ ಫೋಟೋಗಳನ್ನ ಕಳುಹಿಸಿದ.

ಅಲ್ಲಿಯ ಕಟ್ಟಡಗಳು, ಜಾತ್ರೆಗೆ ಬಂದ ಜನ, ವಿಶಾಲವಾದ ವಿಸ್ತಾರವಾದ ಚರ್ಚ್‌, ಗಂಟೆ ಗೋಪುರ, ಚರ್ಚ್‌ ಮುಂದಿನ ಮಾತೆ ಲೂರ್ದಳ ಗವಿಯ ಚಿತ್ರ, ಕಲ್ಯಾಣ ಮಂಟಪ, ಯುವಕರ ವೇದಿಕೆ, ಮಹಿಳಾ ವೇದಿಕೆ, ಇತರೇ ಸಮುದಾಯದವರ ಕಟ್ಟಡಗಳ ಸಾಲು, ರಂಗಮಂದಿರ, ಹೀಗೆ ಹಲವಾರು ಛಾಯಾಚಿತ್ರಗಳನ್ನ ಆತ ಲಗತ್ತಿಸಿದ. ಬಸ್ಸು, ಕಾರು, ವಾಹನಗಳಲ್ಲಿ ಬರುವ ಜನರೇ ಅಲ್ಲದೆ ಇಲ್ಲಿಗೇನೆ ಕೊಯಮತ್ತೂರಿನಿಂದ ಬರುವ ರೈಲು ಕೂಡ ಇದೆ ಎಂದು ಬರೆದ.

ಮೂವತ್ತು ವರ್ಷಗಳ ಹಿಂದಿನ ಊರಿನ ಒಂದು ಚಿತ್ರ ಇರಿಸಿ ಅದರ ಮಗ್ಗುಲಲ್ಲಿ ಇಂದಿನ ಊರಿನ ಚಿತ್ರ ಇರಿಸಿ, ‘ನೋಡು, ಊರು ಹೇಗೆ ಬದಲಾಗಿದೆ’ ಎಂದು ಬರೆದ.  ‘ನೀನು ಮನಸ್ಸು ಮಾಡು. ನಾನು ದಾರಿ ತೋರಿಸುತ್ತೇನೆ. ನಿನ್ನ ಊರನ್ನ ಒಂದು ಪವಿತ್ರ ಕೇಂದ್ರವನ್ನಾಗಿ ಮಾಡು’ ಎಂದು ತಿಳಿಸಿದ್ದ.

ಮಚ್ಚನ್ ಬರೆದ ಪತ್ರಗಳ ಮೇಲೆ ಗಾಜಿನ ಬುರುಡೆಯನ್ನ ಇರಿಸಿ ನಾನು ನನ್ನೂರ ಕ್ರೈಸ್ತರ ಬಗ್ಗೆ ಚಿಂತಿಸಿದೆ. ನೂರೈವತ್ತು ಕ್ರೈಸ್ತ ಕುಟುಂಬಗಳು. ಎಲ್ಲ ರೈತರು. ಒಂದು–ಎರಡು ಎಕರೆ ಜಮೀನು ಮಾಡಿಕೊಂಡಿರುವವರು. ಪ್ರತಿ ಭಾನುವಾರ ಚರ್ಚ್‌ಗೆ ಬರುತ್ತಾರೆ. ನಿತ್ಯ ದೇವರ ಪೀಠದ ಮುಂದೆ ಮೇಣದ ಬತ್ತಿ ಹೊತ್ತಿಸಿ ಮನೆಯಲ್ಲಿ ಪ್ರಾರ್ಥನೆ ಮಾಡುತ್ತಾರೆ.

ಎಲ್ಲ ಸರಳವಾಗಿ, ನೇರವಾಗಿ ಬದುಕುತ್ತಿದ್ದಾರೆ. ಊರಿನಲ್ಲಿ ಕೂಡ ಯಾವುದೇ ಗೊಂದಲವಿಲ್ಲ, ಗದ್ದಲವಿಲ್ಲ. ಊರು ಸದಾ ಶಾಂತ. ಎಲ್ಲರ ಪಾಲಿಗೆ ಇಲ್ಲಿ ನೆಮ್ಮದಿ ಇದೆ. ಕ್ರಿಸ್ತ ತೋರಿದ ದಾರಿ ಎಲ್ಲರ ಪಾಲಿಗೆ ಸಂತಸ ತಂದು ಕೊಟ್ಟಿದೆ. ಜನ ಏನೇ ತೊಂದರೆ ಬರಲಿ ನನ್ನ ಬಳಿ ಬರುತ್ತಾರೆ. ಸಮಸ್ಯೆಯನ್ನ ಮುಂದಿಡುತ್ತಾರೆ. ನನಗೆ ಅರಿತ ಪರಿಹಾರವನ್ನ ಮುಂದಿಡುತ್ತೇನೆ. ‘ಕ್ರಿಸ್ತನನ್ನ ನಂಬಿ’ ಅನ್ನುತ್ತೇನೆ. ಜನ ಏನೋ ಭರವಸೆ ಇರಿಸಿಕೊಂಡು ಹೋಗುತ್ತಾರೆ.
***
ಬಹಳ ದಿನಗಳ ನಂತರ ಮಚ್ಚನ್ ಪತ್ರ ಬರೆಯುವುದರ ಬದಲು ಫೋನ್ ಮಾಡುತ್ತಾನೆ. ‘ನೋಡಯ್ಯಾ.... ನಾನು ಸಂತ ಮಾರ್ಟಿನ್ನರ ದೇವಾಲಯದ ಆಡಳಿತ ಮಂಡಲಿ ಹಾಗೂ ಸಂಬಂಧಪಟ್ಟ ಬಿಷಪ್‌ರ ಹತ್ತಿರ ಮಾತನಾಡಿದ್ದೇನೆ. ಅವರು ಸಂತರ ಇನ್ನೊಂದು ಕಿರು ಬೆರಳನ್ನ ನಿನಗೆ ಕೊಡಲು ಒಪ್ಪಿದ್ದಾರೆ.

ನೀನು ಕೂಡಲೇ ಒಂದಿಷ್ಟು ಹಣದ ವ್ಯವಸ್ಥೆ ಮಾಡಿಕೊಂಡು ಹೊರಟು ಬಾ. ನೀನು ಈ ಕಿರು ಬೆರಳನ್ನ ಕೊಂಡೊಯ್ದು ನಿನ್ನ ಚರ್ಚ್‌ನಲ್ಲಿ ಪ್ರತಿಷ್ಠಾಪಿಸಿದರೆ ನಿನ್ನ ಚರ್ಚ್‌ನ ಅದೃಷ್ಟ ಬದಲಾಗುತ್ತದೆ. ಅದೊಂದು ಮಹಾನ್ ಪುಣ್ಯ ಕ್ಷೇತ್ರವಾಗುತ್ತದೆ. ಸುಮ್ಮನೆ ಕಾಲಹರಣ ಮಾಡಬೇಡ. ಆ ಚರ್ಚ್‌ನವರು ಇನ್ನೊಂದು ಕಿರು ಬೆರಳನ್ನ ಕೊಡುತ್ತಾರೆ ಅನ್ನುವುದು ತಿಳಿದು ಬಹಳ ಜನ ಮುಂದೆ ಬರುತ್ತಿದ್ದಾರೆ. ಇದು ನಿನ್ನ ಕೈ ತಪ್ಪುವ ಮುನ್ನ ಬಾ’.
ನಾನು ನಡುವೆ ಬಾಯಿ ಹಾಕಿದೆ– ‘ಮಚ್ಚನ್ ನನಗೆ ಅದರಲ್ಲಿ ನಂಬಿಕೆ ಇಲ್ಲ’.

‘ಯಾಕೆ, ಯಾಕೆ?’ ‘ಇದೀಗ ನಾನು ಇಲ್ಲಿಯ ಜನರನ್ನ ಕ್ರಿಸ್ತನ ದಾರಿಯಲ್ಲಿ ಕೊಂಡೊಯ್ಯುತ್ತಿದ್ದೇನೆ. ಆ ದಾರಿಯಿಂದ ಜನರನ್ನ ಬೇರೆ ದಾರಿಗೆ ಸೆಳೆಯಲು ನಾನು ಸಿದ್ಧನಿಲ್ಲ’.

ದೂರವಾಣಿ ತನ್ನಿಂದ ತಾನೇ ಸ್ತಬ್ಧಗೊಳ್ಳುತ್ತದೆ. ಗಾಜಿನ ಬುರುಡೆಯ ಭಾರ ಹೊತ್ತು ನನ್ನ ಮೇಜಿನ ಮೇಲೆ ಕುಳಿತ ಕಾಗದಗಳನ್ನ ಮುದ್ದೆ ಮಾಡಿ, ಕೆಳಗಿನ ಕಸದ ಬುಟ್ಟಿಗೆ ಹಾಕಿ ನಾನು ನಿಶ್ಚಿಂತೆಯಿಂದ ನಿಟ್ಟುಸಿರುಬಿಡುತ್ತೇನೆ.

(ಪುಲ್‌ಪತ್ರಿ = ಉಪನ್ಯಾಸ ನೀಡುವ ವೇದಿಕೆ. ನವೇನಾ = ಒಂಬತ್ತು ದಿನಗಳ ಒಂದು ಪ್ರಾರ್ಥನೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT