ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿವುಡ ಮಕ್ಕಳ ಮೇಲೆ ಶಾಸಕಿ ಕಾಳಜಿ

ಬಜೆಟ್‌ ಚರ್ಚೆ: ವಿಧಾನಸಭೆಯಲ್ಲಿ ಗಮನ ಸೆಳೆದ ವಿನಿಷಾ ನಿರೋ ಮಾತು
Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕೀಯ ಭಾಷಣಗಳ ಅಬ್ಬರವೇ ಹೆಚ್ಚಾಗಿದ್ದ ವಿಧಾನಸಭೆಯಲ್ಲಿ ಶುಕ್ರವಾರ ಕಿವುಡ ಮಕ್ಕಳ ಕುರಿತು ಮಮತೆಯಿಂದ ಮಾತನಾಡುವ ಮೂಲಕ ನಾಮ ನಿರ್ದೇಶಿತ (ಆಂಗ್ಲೋ–ಇಂಡಿಯನ್‌) ಸದಸ್ಯೆ ವಿನಿಷಾ ನಿರೋ ಗಮನಸೆಳೆದರು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಮುಖ್ಯಮಂತ್ರಿ ಅವರು ಅಂಗವಿಕಲರಿಗೆ ಹೆಚ್ಚಿನ ಸವಲತ್ತು ಪ್ರಕಟಿಸಿದ್ದಾರೆ ನಿಜ. ಆದರೆ, ಕಿವುಡ ಮಕ್ಕಳ ಕಡೆಗೆ ಇನ್ನಷ್ಟು ಗಮನಹರಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
‘ರಾಜ್ಯದಲ್ಲಿ ಕಿವುಡ ಮಕ್ಕಳ ಅಭ್ಯಾಸಕ್ಕೆ ವಿಶೇಷ ಶಾಲೆಗಳ ಕೊರತೆ ಇದೆ. ಹತ್ತನೇ ತರಗತಿವರೆಗೆ ಅವರು ಹೇಗೋ ಓದುತ್ತಾರೆ. ಬಳಿಕ ಉನ್ನತ ಅಧ್ಯಯನ ನಡೆಸಲು ಯಾವ ಸೌಲಭ್ಯವೂ ಇಲ್ಲ.

ಈ ಮಕ್ಕಳಿಗಾಗಿಯೇ ಪ್ರತಿ ವಿಭಾಗಕ್ಕೆ ಒಂದರಂತೆ ವಸತಿ ಸಹಿತ ನಾಲ್ಕು ಪಿಯು ಹಾಗೂ ಪದವಿ ಕಾಲೇಜುಗಳನ್ನು ಆರಂಭಿಸಬೇಕು’ ಎಂದು ಆಗ್ರಹಿಸಿದರು. ‘ಕಿವುಡ ಮಕ್ಕಳಿಗೆ ಪಾಠ ಮಾಡಲು ವಿಶೇಷ ತರಬೇತಿ ಪಡೆದ ಶಿಕ್ಷಕರ ಕೊರೆತೆಯಿದ್ದು, ಆ ನಿಟ್ಟಿನಲ್ಲೂ ಸರ್ಕಾರ ಗಮನಹರಿಸಬೇಕು. ಹಾಗೆಯೇ ಕಿವುಡ ಯುವತಿಯರಿಗೆ ಗುಡಿ ಕೈಗಾರಿಕೆ ನಡೆಸಲು ತರಬೇತಿ ನೀಡುವ ಜತೆಗೆ ಧನಸಹಾಯವನ್ನೂ ಮಾಡಬೇಕು’ ಎಂದು ಸಲಹೆ ನೀಡಿದರು.

‘ವಿವಿಧ ಹಂತದ ಪರೀಕ್ಷೆಯಲ್ಲಿ ಶೇ 50ರಷ್ಟು ಅಂಕಪಡೆದು ತೇರ್ಗಡೆಯಾದ ಅಂಗವಿಕಲ ಮಕ್ಕಳಿಗೆ ಸರ್ಕಾರ ಕೊಡುತ್ತಿರುವ ಪ್ರೋತ್ಸಾಹಧನ ತುಂಬಾ ಕಡಿಮೆ ಪ್ರಮಾಣದಲ್ಲಿದೆ. ಪರಿಶಿಷ್ಟ ವಿದ್ಯಾರ್ಥಿಗಳ ಶಿಷ್ಯ ವೇತನವನ್ನು ಹೆಚ್ಚಿಸಿದ ರೀತಿಯಲ್ಲೇ ಅವರ ಪ್ರೋತ್ಸಾಹ ಧನವನ್ನೂ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

‘ಪೊಲೀಸ್‌ ಸಿಬ್ಬಂದಿ ನಾಗರಿಕರ ಜತೆ ಕಠೋರವಾಗಿ ವರ್ತಿಸುತ್ತಾರೆ ಎನ್ನುವ ಆರೋಪ ಸಾಮಾನ್ಯ. ಪೊಲೀಸರಿಗೆ ಅಗತ್ಯ ವಿಶ್ರಾಂತಿ ನೀಡದೆ ನಿರಂತರವಾಗಿ ಒತ್ತಡದಲ್ಲಿ ಕೆಲಸ ಮಾಡುವಂತಹ ಸನ್ನಿವೇಶ ಸೃಷ್ಟಿಸಿದರೆ ಅವರಲ್ಲಿ ಸೌಜನ್ಯದ ವರ್ತನೆಯನ್ನು ಅಪೇಕ್ಷಿಸುವುದು ಹೇಗೆ’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಹಲವು ಸ್ವಯಂಸೇವಾ ಸಂಸ್ಥೆಗಳು ನಿರ್ಗತಿಕರ ಆರೈಕೆ ಮಾಡುತ್ತಿವೆ. ಅಂತಹ ಸಂಸ್ಥೆಗಳಲ್ಲಿ ಆಶ್ರಯಪಡೆದ ನಿರ್ಗತಿಕರಲ್ಲಿ ಬಿಪಿಎಲ್‌ ಕಾರ್ಡ್‌ ಸೇರಿದಂತೆ ಯಾವುದೇ ದಾಖಲೆ ಇರುವುದಿಲ್ಲ. ‘ಅನ್ನಭಾಗ್ಯ’ ಪಡೆಯಲು ನಿಜಕ್ಕೂ ಅರ್ಹರಾದ ಜನ ಅವರು. ಹಲವು ಸಂಸ್ಥೆಗಳು ದೇಣಿಗೆ ಎತ್ತಿ ಅವರ ಹೊಟ್ಟೆ ತುಂಬಿಸುತ್ತಿವೆ. ಅಂತಹ ಸಂಸ್ಥೆಗಳಿಗೆ ‘ಅನ್ನಭಾಗ್ಯ’ದಿಂದ ಧಾನ್ಯ ವಿತರಿಸಬೇಕು’ ಎಂದು ಹೇಳಿದರು.

‘ಸರ್ಕಾರ ಇ–ಆಡಳಿತದ ಬಗೆಗೆ ಮಾತನಾಡುತ್ತಿದೆ. ಆದರೆ, ಕಾಗದರಹಿತ ಆಡಳಿತ ವ್ಯವಸ್ಥೆ ಇನ್ನೂ ರೂಪುಗೊಂಡಿಲ್ಲ. ಆ ಕೆಲಸವನ್ನು ವಿಧಾನಸಭೆಯಿಂದಲೇ ಆರಂಭಿಸಬೇಕು. ಎಲ್ಲ ಶಾಸಕರ ಮೇಜುಗಳ ಮುಂದೆ ಕಂಪ್ಯೂಟರ್ ಅಳವಡಿಸಿ ಉತ್ತರಗಳನ್ನು ಅದರಲ್ಲಿಯೇ ನೀಡಬೇಕು’ ಎಂದು ಸಲಹೆ ಅವರು ನೀಡಿದರು.

‘ದಾಖಲೆ ನೀಡಲು ಪ್ರತಿದಿನ ಬಳಕೆ ಮಾಡುವ ಕಾಗದದ ಪ್ರಮಾಣ ಅಗಾಧವಾಗಿದೆ. ಅದರಿಂದ ಪರಿಸರಕ್ಕೂ ಹಾನಿ ಆಗುತ್ತದೆ. ಪ್ರಶ್ನೆಕೇಳಿದ ಸದಸ್ಯರೊಬ್ಬರಿಗೆ ಲಿಖಿತ ಉತ್ತರ ಕೊಟ್ಟು ಮಿಕ್ಕವರಿಗೆ ಕಂಪ್ಯೂಟರ್‌ನಲ್ಲೇ ನೋಡಲು ಹೇಳಬೇಕು. ಲಿಖಿತ ದಾಖಲೆ ಬೇಕಾದ ಸದಸ್ಯರಿಗೆ ಮಾತ್ರ ಪ್ರಿಂಟ್‌ ತೆಗೆದು ಕೊಡಬಹುದು’ ಎಂದು ವಿವರಿಸಿದರು.

‘ವಿಧಾನಸೌಧ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಸಿಎಫ್‌ಎಲ್‌ ದೀಪಗಳನ್ನೇ ಬಳಸಬೇಕು. ಸೌರ ಹಾಗೂ ಪವನ ವಿದ್ಯುತ್‌ಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು. ‘ದೇಶದಲ್ಲಿ ತುಂಬಾ ಕಡಿಮೆ ಪ್ರಮಾಣದಲ್ಲಿರುವ ಆಂಗ್ಲೋ–ಇಂಡಿಯನ್ನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು’ ಎಂದೂ ಅವರು ಬೇಡಿಕೆಯಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT