ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿವುಡ ಮೂಗ ಮಕ್ಕಳ ‘ಎತ್ತರ’ದ ಸಾಧನೆ

Last Updated 7 ಫೆಬ್ರುವರಿ 2016, 19:31 IST
ಅಕ್ಷರ ಗಾತ್ರ

ಒಂದು ವರ್ಷದ ಹಿಂದಿನ ಪ್ರಸಂಗ. ಕಿವುಡ ಮತ್ತು ಮೂಗ ಮಕ್ಕಳ ರಾಜ್ಯ ಮಟ್ಟದ ಸಮಾವೇಶ ವಿಜಯಪುರದಲ್ಲಿ ನಡೆದಿತ್ತು. ಶಬ್ದ ಜಗತ್ತಿನಿಂದ ದೂರವಿರುವ ಮತ್ತು ಮಾತಿನ ಕಲೆಯಿಂದ ವಂಚಿತರಾದ ಮಕ್ಕಳು ಅಲ್ಲಿ ನಾನಾ ಬಗೆಯ ಪ್ರತಿಭೆ ಪ್ರದರ್ಶಿಸಿದ್ದರು. ಸಮಾವೇಶ ಮುಗಿದಾಗ ಎಲ್ಲರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರಿದವರ ಪೈಕಿ ಗದಗ ಜಿಲ್ಲೆ ಲಕ್ಷ್ಮೇಶ್ವರದ ಬಿ.ಡಿ.ತಟ್ಟಿ ಶಾಲೆಯ ಮಕ್ಕಳೂ ಇದ್ದರು. ಇದಕ್ಕೆ ಕಾರಣ ಅವರು ಅಂದು ಪ್ರದರ್ಶಿಸಿದ ಅಮೋಘ ಮಲ್ಲಕಂಬ.

ಒಂದು ವರ್ಷದ ನಂತರ, ಫೆಬ್ರುವರಿ ಐದರಂದು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಸಮರ್ಥನಂ ಅಂಧರ ಅಭಿವೃದ್ಧಿ ಸಂಸ್ಥೆ ಅಂಗವಿಕಲರ ಮ್ಯಾರಥಾನ್‌ ಹಮ್ಮಿಕೊಂಡಿತ್ತು. ಇಲ್ಲಿಯೂ ಈ ಮಕ್ಕಳ ಪ್ರದರ್ಶನವಿತ್ತು. ಮೈದಾನದಲ್ಲಿ ಸೇರಿದ್ದ ನೂರಾರು ಮಂದಿ ಇವರ ಕಸರತ್ತಿಗೆ ಮನಸೋತಿದ್ದರು.
ಹಗ್ಗ ಮತ್ತು ಕಂಬದಲ್ಲಿ ಕಸರತ್ತು ಮಾಡುವ ಮಲ್ಲಕಂಬದಲ್ಲಿ ಈ ಶಾಲೆಯ ಮಕ್ಕಳು ಪಳಗಿದ್ದಾರೆ.  ಗುರುಗಳು ಸಂಜ್ಞೆಯ ಮೂಲಕ ನೀಡುವ ಆದೇಶಗಳ ಮೂಲಕ ತರಬೇತಿ ಪಡೆಯುವ ಈ ಮಕ್ಕಳಿಗೆ ಪ್ರದರ್ಶನದ ಸಂದರ್ಭದಲ್ಲಿ ಪ್ರೇಕ್ಷಕರ ಚಪ್ಪಾಳೆಯ ಸದ್ದಾಗಲಿ, ಅಭಿನಂದನೆಯ ನುಡಿಯಾಗಲಿ ಕೇಳುವುದಿಲ್ಲ. ಆದರೂ ಕಲಿತ ಕಲೆಯನ್ನು ಅಚ್ಚುಕಟ್ಟಾಗಿ ಜನರ ಮುಂದಿಟ್ಟು ಮೆಚ್ಚುಗೆ ಗಳಿಸುತ್ತಾರೆ.

ತರಬೇತಿ ಆರಂಭಗೊಂಡ ಬಗೆ...
ರಾಜ್ಯದಲ್ಲಿ ಮಲ್ಲಕಂಬವನ್ನು ಪರಿಚಯಿಸಿ, ಬೆಳೆಸಿದ ಖ್ಯಾತಿ ಲಕ್ಷ್ಮೇಶ್ವರದ ಎನ್‌.ಎಸ್‌.ಪಾಟೀಲ ಅವರದು. ಕಿವುಡ–ಮೂಗ ಮಕ್ಕಳಿಗೆ ತರಬೇತಿ ನೀಡುವುದಕ್ಕೂ ಪ್ರೇರಣೆ ಅವರೇ. ಶ್ರವಣ ದೋಷ ಇರುವ ಮಕ್ಕಳಿಗಾಗಿಯೇ ನಡೆಯುತ್ತಿರುವ ಬಿ.ಡಿ.ತಟ್ಟಿ ಶಾಲೆಯ ಮಕ್ಕಳಿಗೆ ಆಗಾಗ ಅನಾರೋಗ್ಯ ಕಾಡುತ್ತಿತ್ತು. ಈ ವಿಷಯವನ್ನು ಶಾಲೆಯ ಆಡಳಿತ ಮಂಡಳಿಯವರು ಪಾಟೀಲ ಅವರ ಗಮನಕ್ಕೆ ತಂದಾಗ ಆರೋಗ್ಯ ಕಾಪಾಡಲು ಉತ್ತಮ ಮದ್ದು ಮಲ್ಲಕಂಬ ಎಂದು ಹೇಳಿದರು. ಈ ಮಾತು ಅಲ್ಲಿ ಮಲ್ಲಕಂಬ ತರಬೇತಿ ಆರಂಭಗೊಳ್ಳಲು ಕಾರಣವಾಯಿತು.

ಎರಡು ವರ್ಷಗಳ ಹಿಂದೆ ಆರಂಭಗೊಂಡ ತರಬೇತಿ ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ನಡೆಯುತ್ತಿದೆ. ಗಿರೀಶ ಜಿಡ್ಡಿಮನಿ ಮತ್ತು ಎಂ.ಐ.ಕಣಕೆ ತರಬೇತಿಯ ಉಸ್ತುವಾರಿ ಹೊತ್ತುಕೊಂಡಿದ್ದಾರೆ. ಈ ಮಕ್ಕಳು ಈಗಾಗಲೇ ರಾಜ್ಯದ ವಿವಿಧ ಕಡೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. 

‘ಶಾಲೆಯವರು ಮಕ್ಕಳನ್ನು ಪದೇ ಪದೇ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ತಪ್ಪಿದೆ. ಮಕ್ಕಳಲ್ಲಿ ಉಲ್ಲಾಸ ಹೆಚ್ಚಿ ಪಠ್ಯ ಕಲಿಕಾ ಸಾಮರ್ಥ್ಯವೂ ಹೆಚ್ಚಿದೆ’ ಎಂಬುದು ತರಬೇತುದಾರರ ಅನಿಸಿಕೆ.

ವಾಕ್‌ – ಶ್ರವಣ ದೋಷವಿದ್ದರೂ ಸಂಜ್ಞೆಯ ಮೂಲಕ ಹೇಳಿದ್ದನ್ನು ಬೇಗನೇ ಕಲಿತುಕೊಳ್ಳುವ ಇವರ ಪೈಕಿ ಇಬ್ಬರು ಈಗಾಗಲೇ ರಾಷ್ಟ್ರೀಯ ಮಟ್ಟದ ಆಯ್ಕೆ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಶ್ರೀದೇವಿ ಮಡಿವಾಳರ ಅಂತರರಾಜ್ಯ ಸ್ಪರ್ಧೆಗೂ ಆಯ್ಕೆಯಾಗಿದ್ದರು. ಮಂಜುನಾಥ ಲಮಾಣಿ ಶಿಬಿರದಲ್ಲಿ ಪಾಲ್ಗೊಂಡು ವಾಪಸಾಗಿದ್ದರು.

‘ಇತರ ಮಕ್ಕಳಿಗೆ ಕಲಿಸಿದಂತೆ ಇವರಿಗೆ ತಂತ್ರಗಳನ್ನು ಹೇಳಕೊಡಲು ಸಾಧ್ಯವಿಲ್ಲ. ಎಲ್ಲವೂ ಸನ್ನೆಯ ಮೂಲಕವೇ ಆಗಬೇಕು. ಈ ಸವಾಲನ್ನು ಮೆಟ್ಟಿ ನಿಂತು ಮಕ್ಕಳನ್ನು ಒಳ್ಳೆಯ ಮಲ್ಲಕಂಬ ಪಟುಗಳನ್ನಾಗಿ ಮಾಡಲು ಸಾಧ್ಯವಾಗಿದೆ. ಈಗ ಎಲ್ಲ ಮಕ್ಕಳಂತೆ ಇವರೂ ಕಂಬದ ಮೇಲೆ ಕಸರತ್ತನ್ನು ಮಾಡುತ್ತಿದ್ದಾರೆ. ಅವರ ಬೆಳವಣಿಗೆಯಲ್ಲಿ ನಮಗೆ ಸಾರ್ಥಕತೆ ಇದೆ’ ಎಂದು ಹೇಳುತ್ತಾರೆ ಗಿರೀಶ ಜಿಡ್ಡಿಮನಿ ಮತ್ತು ಎಂ.ಐ.ಕಣಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT