ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀ ಬೋರ್ಡ್‌ ಆ್ಯಪ್‌ಗಳ ಸುತ್ತಮುತ್ತ...

Last Updated 12 ಜುಲೈ 2016, 19:30 IST
ಅಕ್ಷರ ಗಾತ್ರ

2007ರಲ್ಲಿ ಆ್ಯಪಲ್‌ ಕಂಪೆನಿ ಐಫೋನ್‌ ಬಿಡುಗಡೆ ಮಾಡುವವರೆಗೂ  ಸ್ಪರ್ಶ ಸಂವೇದಿ ಪರದೆಯಲ್ಲಿ (ಟಚ್‌ ಸ್ಕ್ರೀನ್‌) ಬರೆಯುವುದರ (ಟೈಪ್‌ ಮಾಡುವುದು) ಬಗ್ಗೆ ಯಾರೂ ಯೋಚಿಸಿರಲಿಲ್ಲ.  ಆ ನಂತರ, ಎಲ್ಲ ಮೊಬೈಲ್‌ ಕಂಪೆನಿಗಳು ಟಚ್‌ ಸ್ಕ್ರೀನ್‌ ಮೊಬೈಲ್‌ಗಳನ್ನು ಪರಿಚಯಿಸಿದವು.

ಸ್ಮಾರ್ಟ್‌ ಫೋನ್‌,  ಟ್ಯಾಬ್ಲೆಟ್‌ ಬಳಕೆದಾರರಂತೂ  ಗಾಜಿನ ಪರದೆ ಮೇಲೆ ಅಕ್ಷರಗಳನ್ನು ಗೀಚುವುದರಲ್ಲಿ ಈಗ ಪಳಗಿ  ಹೋಗಿದ್ದಾರೆ. ಆ್ಯಪಲ್‌, ಗೂಗಲ್‌, ವಿಂಡೋಸ್‌ ಅಥವಾ ಇತರ ಕಂಪೆನಿಗಳ ಫೋನ್‌ಗಳಲ್ಲಿ  ಅಳವಡಿಸಲಾಗಿರುವ (ಬ್ಯುಲ್ಟ್‌ ಇನ್‌) ಕೀ–ಬೋರ್ಡ್‌ಗಳನ್ನು ಹೊರತುಪಡಿಸಿಯೂ ಆ್ಯಪ್‌ಗಳ ಲೋಕದಲ್ಲಿ ಹಲವಾರು ಕೀ ಬೋರ್ಡ್‌ಗಳ ಆಯ್ಕೆಗಳು ಬಳಕೆದಾರರಿಗೆ ಲಭ್ಯವಿವೆ. 

ಅಂತಹ ಕೆಲವು ಕೀ–ಬೋರ್ಡ್‌ ಆ್ಯಪ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಜಿ–ಬೋರ್ಡ್‌:

ಗೂಗಲ್‌ ನಿರ್ಮಿತ ‘ಜಿ–ಬೋರ್ಡ್‌’ ಆ್ಯಪ್‌ ಅದರ ಪ್ರತಿಸ್ಪರ್ಧಿ ಕಂಪೆನಿ ಆ್ಯಪಲ್‌ ಫೋನ್‌ಗಳಲ್ಲಿಯೂ ಲಭ್ಯ. ಅತ್ಯಂತ ಸರಳ ವಿನ್ಯಾಸದ ಜಿ–ಬೋರ್ಡ್‌, ಇತರ ಎಲ್ಲ ಕೀ–ಬೋರ್ಡ್‌ಗಳಂತೆ ಕಾರ್ಯನಿರ್ವಹಿಸುತ್ತದೆ. ಆ್ಯಪಲ್‌ನ ಕಿಬೋರ್ಡ್‌ ರೀತಿಯಲ್ಲೇ ಇರುವ ಜಿ–ಬೋರ್ಡ್‌ನಲ್ಲಿ ಬೇರೆ ಕೆಲವು ಸೌಲಭ್ಯಗಳು ಇವೆ. ಗೂಗಲ್‌ ಸರ್ಚ್‌ ಆಯ್ಕೆಯೂ ಕೀಬೋರ್ಡ್‌ನಲ್ಲಿರುವುದು ಇದರ ವಿಶೇಷ. ಸಂದೇಶಗಳನ್ನು ಟೈಪ್‌ ಮಾಡುತ್ತಿರುವಂತೆಯೇ, ಗೂಗಲ್‌ ಗುಂಡಿ ಒತ್ತಿದರೆ, ಸರ್ಚ್‌ ಬಾಕ್ಸ್‌ ಬರುತ್ತದೆ. ಬಳಕೆದಾರ ಅಲ್ಲಿ ಟೈಪಿಸಿದ ಸಂಗತಿಯನ್ನು ಗೂಗಲ್‌ ಶೋಧಿಸಿ ತೋರಿಸುತ್ತದೆ. ಅವುಗಳನ್ನು ಕಾಪಿ ಮಾಡಿ, ಪೇಸ್ಟ್‌ ಮಾಡಿ ಸಂದೇಶ ಕಳುಹಿಸಬಹುದು.

ಗ್ಲೈಡ್‌ ಟೈಪಿಂಗ್‌ಗೂ (ಅಕ್ಷರಗಳ ಮೇಲೆ ಬೆರಳು ಓಡಿಸಿ ಬರೆಯುವುದು)  ಇದರಲ್ಲಿ ಅವಕಾಶ ಇದೆ. ಆ್ಯಪ್‌ನ ವೈಶಿಷ್ಟ್ಯಗಳನ್ನು ನಮಗೆ ಬೇಕಾದಂತೆ ರೂಪಿಸಬಹುದು (ಕಸ್ಟಮೈಜ್‌). ಬಳಕೆದಾರರು ಟೈಪ್‌ ಮಾಡಿರುವುದನ್ನು ತಾನು ದಾಖಲಿಸಿಟ್ಟುಕೊಳ್ಳುವುದಿಲ್ಲ ಎಂದು ಗೂಗಲ್‌ ಹೇಳುತ್ತಿದೆ. ಅಂದ ಹಾಗೆ, ಈ ಆ್ಯಪ್‌ ಉಚಿತವಾಗಿ ಲಭ್ಯ.

ಸ್ವಿಫ್ಟ್‌ ಕೀ
ಮತ್ತೊಂದು ಪ್ರಮುಖ ಕೀ ಬೋರ್ಡ್‌ ಆ್ಯಪ್‌ ಸ್ವಿಫ್ಟ್‌ಕೀ. ಬಳಕೆದಾರ ಸ್ನೇಹಿ ಎಂದೇ ಗುರುತಿಸಿಕೊಂಡಿದೆ. ಬಳಕೆದಾರ ಟೈಪಿಸುವಾಗ ಮಾಡುವ ತಪ್ಪುಗಳನ್ನು ಸ್ವಯಂ ಆಗಿ ತಿದ್ದುವ (ಆಟೊ ಕರೆಕ್ಟ್‌) ವಿಶಿಷ್ಟ ಗುಣ  ಸ್ವಿಫ್ಟ್‌ ಕೀಗೆ ಇದೆ.ಅಷ್ಟೇ ಅಲ್ಲ,  ಎರಡು ಅಕ್ಷರಗಳನ್ನು ಬರೆದಾಗಲೇ ಮುಂದಿನ ಅಕ್ಷರ ಅಥವಾ ಪದ ಏನಿರಬಹುದು ಎಂಬುದನ್ನೂ ಊಹಿಸಿ ಪರದೆ ಮೇಲೆ ತೋರಿಸುತ್ತದೆ.  ಬಳಕೆದಾರರ ಬರವಣಿಗೆ ಶೈಲಿಯನ್ನು ಅರ್ಥ ಮಾಡಿಕೊಳ್ಳಲು ಈ ಆ್ಯಪ್‌  ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸುತ್ತದೆ. ಬಳಕೆದಾರ ಬಳಸುವ ಪದಪುಂಜಗಳು, ಎಮೊಜಿಗಳ ಬಗ್ಗೆ ಅರಿತುಕೊಳ್ಳುವ ಸಾಮರ್ಥ್ಯವೂ ಇದಕ್ಕಿದೆ.

ಬಳಕೆದಾರ ಬಳಸುವ ಭಾಷೆಯನ್ನು ಪತ್ತೆ ಹಚ್ಚಿ, ಅದನ್ನು ತಿಳಿದುಕೊಂಡು, ಅದರ ಅನುಸಾರ ತಪ್ಪಿರುವ ಅಕ್ಷರ, ಪದಗಳನ್ನು ತಿದ್ದುಪಡಿ ಮಾಡುವ ಕೆಲಸವನ್ನೂ ಸ್ವಿಫ್ಟ್‌ಕೀ ಮಾಡುತ್ತದೆ. ಗ್ಲೈಡ್‌ ಟೈಪಿಂಗ್‌ ಮಾಡಬಹುದು. ಕೀ ಬೋರ್ಡ್‌ ವಿನ್ಯಾಸವನ್ನು ಸ್ವಲ್ಪ ಪ್ರಮಾಣದಲ್ಲಿ ಕಸ್ಟಮೈಜ್‌ ಕೂಡ ಮಾಡಬಹುದು. ಹಿನ್ನೆಲೆ ಬಣ್ಣವನ್ನು ಬದಲಾಯಿಸಬಹುದು. ಐಒಎಸ್‌ ಮತ್ತು ಆಂಡ್ರಾಯ್ಡ್‌ ಕಾರ್ಯನಿರ್ವಹಣಾ ವ್ಯವಸ್ಥೆ ಹೊಂದಿರುವ ಮೊಬೈಲ್‌ಗಳಲ್ಲಿ ಈ ಆ್ಯಪ್‌ ಅನ್ನು  ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. (ಕೆಲವು ಬಣ್ಣಬಣ್ಣದ ಥೀಮ್‌ಗಳಿಗೆ 1ರಿಂದ 2 ಡಾಲರ್‌ ಅಂದರೆ ₹68ರಿಂದ ₹136ರವರೆಗೆ ತೆರಬೇಕಾಗುತ್ತದೆ).

ಫ್ಲೆಕ್ಸಿ
ಸ್ವಿಫ್ಟ್‌ಕೀ ತರಹದ ಮತ್ತೊಂದು ಕೀ ಬೋರ್ಡ್‌ ಆ್ಯಪ್‌ ಫ್ಲೆಸ್ಕಿ. ಐಒಎಸ್‌ ಮತ್ತು ಆಂಡ್ರಾಯ್ಡ್‌ ಫೋನ್‌ಗಳಿಗೆ ಇದು ಉಚಿತ. ಇದು ಬಹುಪಾಲು ಸ್ವಿಫ್ಟ್‌ಕೀಯ ಎಲ್ಲ ಗುಣಲಕ್ಷಣಗಳನ್ನು ಹೊಂದಿದೆ.  ಇದರಲ್ಲಿ ಕೀ ಬೋರ್ಡ್‌ ವಿನ್ಯಾಸದ  ಬಣ್ಣ ಮತ್ತು  ಗಾತ್ರವನ್ನು ಬದಲಾಯಿಸಬಹುದು, ಪದಗಳ ತಿದ್ದುವಿಕೆಗೆ ಇದು ಸಹಕಾರಿ.
ಈ ಆ್ಯಪ್‌ನ ಮತ್ತೊಂದು ವೈಶಿಷ್ಟ್ಯ ಎಂದರೆ, ಇದರಲ್ಲಿ ಒಂದೇ ಕೈಯಲ್ಲಿ ಟೈಪ್‌ ಮಾಡಬಹುದು. ಮತ್ತೊಂದು ಕೈಯಲ್ಲಿ ಏನಾದರೂ ವಸ್ತು ಹಿಡಿದುಕೊಂಡಿರುವ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಏನಾದರೂ ಸಂದೇಶ ಬರೆಯಬೇಕು ಎಂದಿದ್ದರೆ ಇದು ಹೆಚ್ಚು ಉಪಯುಕ್ತ.

ಕೀ ಬೋರ್ಡ್‌ನಲ್ಲಿ  ಅಕ್ಷರಗಳು, ಸಂಖ್ಯೆಗಳು ಎಲ್ಲೆಲ್ಲಿ ಇರಬೇಕು ಎಂಬುದನ್ನು ನಿಗದಿಪಡಿಸುವ ಅವಕಾಶ ಇದರಲ್ಲಿದೆ. ಹಾಗಾಗಿ, ಬಳಕೆದಾರರಿಗೆ ಅಕ್ಷರಗಳನ್ನು, ಸಂಖ್ಯೆಗಳ ಸಾಲನ್ನು ತಮಗೆ ಬೇಕಾದ ರೀತಿ ಬದಲಾಯಿಸಿಕೊಳ್ಳಬಹುದು.

ಸ್ವೈಪ್‌
ಹಳೆಯ ಕೀ ಬೋರ್ಡ್‌ ಆ್ಯಪ್‌ಗಳಲ್ಲಿ ಇದೂ ಒಂದು.  ತನ್ನ ಪ್ರತಿಸ್ಪರ್ಧಿ ಆ್ಯಪ್‌ಗಳಲ್ಲಿರುವ ಗುಣ ವಿಶೇಷಗಳನ್ನು (ಮುಂದಿನ ಪದ ಊಹಿಸುವುದು, ಭಿನ್ನ ಥೀಮ್‌ಗಳು ಇತ್ಯಾದಿ) ಇದೂ ಹೊಂದಿದೆ. ಆದರೆ, ಹೊಸ ಹೊಸ ಶೈಲಿ ಮತ್ತು ವೈಶಿಷ್ಟ್ಯಗಳನ್ನು ಅಳವಡಿಸುವಲ್ಲಿ ಸ್ವೈಪ್‌ ಹಿಂದೆ ಬಿದ್ದಿದೆ. ಈ ಆ್ಯಪ್‌ ಬೇಕೆಂದರೆ, ಐಒಎಸ್‌, ಆಂಡ್ರಾಯ್ಡ್‌ ಬಳಕೆದಾರರು 1 ಡಾಲರ್‌ (₹68) ತೆರಬೇಕು.

ವರ್ಡ್‌ ಫ್ಲೋ
ಮೈಕ್ರೊಸಾಫ್ಟ್‌ ರೂಪಿಸಿರುವ ಈ ಆ್ಯಪ್‌, ಹಲವು ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತದೆ. ಗ್ಲೈಡ್‌ ಟೈಪಿಂಗ್‌, ಅಕ್ಷರ ಸ್ವಯಂ ತಿದ್ದುಪಡಿ, ಮುಂದಿನ ಪದ ಸಲಹೆ ಸೇರಿದಂತೆ ಬಹುತೇಕ ಎಲ್ಲ ಕೀ ಬೋರ್ಡ್‌ ಆ್ಯಪ್‌ಗಳಲ್ಲಿರುವ ವೈಶಿಷ್ಟ್ಯಗಳನ್ನು ಇದೂ ಹೊಂದಿದೆ. ಉಳಿದೆಲ್ಲ ಆ್ಯಪ್‌ಗಳಿಗೆ ಹೋಲಿಸಿದರೆ ಇದು ಅಕರ್ಷಕವಾಗಿದೆ.  ಕೀ ಬೋರ್ಡ್‌ನ ಹಿಂಭಾಗದಲ್ಲಿ ಬಣ್ಣದ ಥೀಮ್‌ಗಳ ಬದಲಾಗಿ ಚಿತ್ರಗಳನ್ನು ಅಳಡಿಸುವ ಅವಕಾಶ ಇದರಲ್ಲಿದೆ. ಒಂದೇ ಕೈಯಲ್ಲಿ ಟೈಪ್‌ ಮಾಡಬಹುದಾದ (ಮೋಡ್‌) ಆಯ್ಕೆ ಆ್ಯಪ್‌ನಲ್ಲಿದೆ.

ಇದರಲ್ಲಿ ಕೀಬೋರ್ಡ್‌, ಮೊಬೈಲ್‌ ಪರದೆಯ ಒಂದು ಮೂಲೆಗೆ ಕಮಾನಿನ ಆಕಾರದಲ್ಲಿ ಇರುತ್ತದೆ. ಬಳಕೆದಾರ ತನ್ನ ಹೆಬ್ಬೆರಳನ್ನು ಬಳಸಿ ಬೇಕಾದ ಅಕ್ಷರವನ್ನು ಟೈಪ್‌ ಮಾಡಬಹುದು. ಬಾಗಿರುವ ಈ ಕೀಬೋರ್ಡ್‌  ಬರವಣಿಗೆಗೆ ಸಹಕಾರಿ. ಆದರೆ, ಇದರಲ್ಲಿ ಟೈಪ್‌ ಮಾಡಲು ಪರಿಣತಿ ಸಾಧಿಸಲು ಸ್ವಲ್ಪ ಸಮಯ ಬೇಕಾದೀತು.  ಉಚಿತವಾಗಿರುವ ಈ ಆ್ಯಪ್‌, ಸದ್ಯ ಐಒಎಸ್‌ಗಳಲ್ಲಿ (ಐಫೋನ್‌) ಮಾತ್ರ ಲಭ್ಯ.

-ಕಿಟ್‌ ಈಟೊನ್‌, ದ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT