ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಬಾರರ ಕೈಯಲ್ಲರಳಿದ ದೀಪಗಳು

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಗ್ರಾಮೀಣ ಕರಕುಶಲಕರ್ಮಿಗಳು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆಯ ಸೂಕ್ತ ಲಾಭ ದೊರಕಿಸಿಕೊಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ‘ಗ್ರಾಮೀಣ ಅಂಗಡಿ’ ದೀಪಾವಳಿ ಹಬ್ಬದ ಪ್ರಯುಕ್ತ ‘ಗ್ರಾಮೀಣ’ ಎಂಬ ಹೆಸರಿನ, ಸುಟ್ಟಾವೆ ಮಣ್ಣಿನ ಎಣ್ಣೆ ದೀಪಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಿದೆ.

ಶಿವಮೊಗ್ಗ, ಮಂಡ್ಯ, ರಾಮನಗರ ಜಿಲ್ಲೆಯ ಕುಂಬಾರರ ಕೈಚಳಕದಿಂದ  ತಯಾರಾದ ಆನೆ, ನವಿಲು, ಹಂಸ ಸೇರಿದಂತೆ ವಿವಿಧ ಪ್ರಾಣಿ ಹಾಗೂ ಪಕ್ಷಿಗಳ ರೂಪಗಳ ದೀಪಗಳಿವೆ. ಗಣೇಶ ಮತ್ತು ಲಕ್ಷ್ಮಿ ದೀಪಗಳು, ಜೋಡಿ ದೀಪಗಳು, ತೂಗುಯ್ಯಾಲೆ ದೀಪಗಳು, ನೆರಳು ದೀಪಗಳು, ಕಲಶ ದೀಪಗಳು, ಹೂವಿನ ದೀಪಗಳು, ಕಂಬ ದೀಪಗಳು... ಹೀಗೆ ನೂರಕ್ಕೂ ಹೆಚ್ಚು ವೈವಿಧ್ಯಮಯ ದೀಪಗಳು ಪ್ರದರ್ಶನದ ಆಕರ್ಷಣೆಯಾಗಿವೆ.

‘ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷವಾದ ದೀಪಗಳನ್ನು ತಯಾರಿಸಿ ಕೊಡುವಂತೆ ಗ್ರಾಮೀಣ ಕುಂಬಾರರಿಗೆ ತಿಳಿಸಲಾಗಿತ್ತು. ಅವರ ಮೂರು ತಿಂಗಳ ಪರಿಶ್ರಮದಿಂದಾಗಿ ಗ್ರಾಹಕರು ಮೆಚ್ಚುವಂಥ ಬಗೆಬಗೆಯ ದೀಪಗಳು ಈಗ ಮಾರಾಟಕ್ಕೆ ಲಭ್ಯ’ ಎನ್ನುತ್ತಾರೆ ‘ಗ್ರಾಮೀಣ ಅಂಗಡಿ’ಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಬಿ.ರಾಜಶೇಖರಮೂರ್ತಿ.

‘ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಯಂತ್ರಗಳಿಂದ ಇಲ್ಲವೇ ಅಚ್ಚು ಹಾಕಿ ತಯಾರಿಸಲಾದ ದೀಪಗಳು ಮಾರಾಟಕ್ಕೆ ಇರುತ್ತವೆ. ಆದರೆ ಇಲ್ಲಿ ಗ್ರಾಮೀಣ ಪ್ರದೇಶದ ಕುಂಬಾರರು ಸ್ವತಃ ತಯಾರಿಸಿದ ದೀಪಗಳಿವೆ. ದೀಪಗಳ ತಯಾರಿಕೆಗೆ ರಾಸಾಯನಿಕರಹಿತ ಬಣ್ಣವನ್ನು ಬಳಸಿರುವುದು ಮತ್ತೊಂದು ವಿಶೇಷ. ಸ್ವಚ್ಛಗೊಳಿಸಿದರೂ ಹೊಳಪು ಮಾಸುವುದಿಲ್ಲ. ಮರುಬಳಕೆಗೆ ಕೂಡ ಯೋಗ್ಯ. ಈ ದೀಪಗಳು ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕದಂತಿದ್ದು, ಹಬ್ಬಕ್ಕೆ ಉತ್ತಮ ಮೆರುಗು ನೀಡಲಿದೆ’ ಎನ್ನುತ್ತಾರೆ ಅವರು.

‘ಗ್ರಾಮೀಣ’ ಸುಟ್ಟಾವೆ ಮಣ್ಣಿನ ಎಣ್ಣೆ ದೀಪಗಳ ಪ್ರದರ್ಶನ ಮತ್ತು ಮಾರಾಟ ಇದೇ ಅಕ್ಟೋಬರ್‌ 22ರವರೆಗೆ ನಡೆಯಲಿದ್ದು, ಶೇ 30ರಷ್ಟು ರಿಯಾಯಿತಿ ದರದಲ್ಲಿ ದೀಪಗಳು ದೊರಕಲಿವೆ. ಅಲ್ಲದೇ ಹಬ್ಬದ ಅಂಗವಾಗಿ ಬಾಗಲಕೋಟೆ, ಇಳಕಲ್‌, ಕೊಪ್ಪಳ, ಭಾಗ್ಯನಗರ ಹಾಗೂ ಉಡುಪಿ ನೇಕಾರರ ಸಹಕಾರ ಸಂಘ ಮತ್ತು ಗದಗ, ಬೆಟಗೇರಿ, ಹುಬ್ಬಳ್ಳಿ–ಧಾರವಾಡದ ಅಪ್ಪಟ ಹತ್ತಿಯ ಕೈಮಗ್ಗದ ಸೀರೆಗಳನ್ನು ಶೇಕಡಾ 20 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಮಕ್ಕಳ ಉಡುಪುಗಳು ಹಾಗೂ ಗ್ರಾಮೀಣ ಅಂಗಡಿಯಲ್ಲಿರುವ ಲಾವಂಚ, ಕರಕುಶಲ ವಸ್ತುಗಳು, ಬಿದಿರಿನ ಚಿತ್ತಾರಗಳು, ಸಾವಯವ ಸಾಬೂನುಗಳು, ಸಾವಯವ ಆಹಾರ ಪದಾರ್ಥಗಳು ಮುಂತಾದ ಎಲ್ಲ ವಸ್ತುಗಳಿಗೂ ಶೇಕಡಾ 10 ರಿಂದ 30 ರಿಯಾಯಿತಿ ಇರಲಿದೆ.
ಹೆಚ್ಚಿನ ಮಾಹಿತಿಗೆ: ‘ಗ್ರಾಮೀಣ ಅಂಗಡಿ’, ನಂ.8, 11ನೇ ಮುಖ್ಯರಸ್ತೆ, 39ನೇ ಎ ಕ್ರಾಸ್‌, 4ನೇ ಟಿ ಬ್ಲಾಕ್‌, ಜಯನಗರ, ಬೆಂಗಳೂರು–41. ಮೊಬೈಲ್‌: 9731105526, 9448324727.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT