ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಬ್ಳೆ, ಕೊಹ್ಲಿಗೆ ಮೊದಲ ಪರೀಕ್ಷೆ

ಕ್ರಿಕೆಟ್‌: ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್ ಸರಣಿ ಇಂದಿನಿಂದ
Last Updated 20 ಜುಲೈ 2016, 20:15 IST
ಅಕ್ಷರ ಗಾತ್ರ

ಆ್ಯಂಟಿಗಾ (ಪಿಟಿಐ):  ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ 14 ವರ್ಷಗಳಿಂದ ಉಳಿಸಿಕೊಂಡು ಬಂದಿರುವ ಜಯದ ದಾಖಲೆ. ಆಟಗಾರರಲ್ಲಿ ಹುಮ್ಮಸ್ಸು ತುಂಬಿರುವ ಹೊಸ ಕೋಚ್‌ ಅನಿಲ್‌ ಕುಂಬ್ಳೆ. ನಾಯಕರಾಗಿ ವಿಂಡೀಸ್‌ ನೆಲದಲ್ಲಿ ಮೊದಲ ಪಂದ್ಯ ಆಡಲಿರುವ ವಿರಾಟ್‌ ಕೊಹ್ಲಿ. ಅಭ್ಯಾಸ ಪಂದ್ಯದಲ್ಲಿ ತಂಡ ನೀಡಿದ ಅಮೋಘ ಪ್ರದರ್ಶನ.
ಈ ಎಲ್ಲಾ ಅಂಶಗಳು ಭಾರತ ತಂಡದ ಆಟಗಾರರಲ್ಲಿ ಅದಮ್ಯ ವಿಶ್ವಾಸ ತುಂಬಿವೆ.  ಇದೇ ವಿಶ್ವಾಸದಿಂದ ಪ್ರವಾಸಿ ತಂಡ ವಿಂಡೀಸ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಹಣಾಹಣಿಗೆ ಸಜ್ಜಾಗಿದೆ. ಇದಕ್ಕೆ ಆ್ಯಂಟಿಗಾದಲ್ಲಿ ಗುರುವಾರ ವೇದಿಕೆ ಸಿದ್ಧಗೊಂಡಿದೆ.

2014ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ವೇಳೆ ಮಹೇಂದ್ರ ಸಿಂಗ್‌ ದೋನಿ ಅವರು ಟೆಸ್ಟ್‌ ಮಾದರಿಯಿಂದ ನಿವೃತ್ತಿಯಾಗಿದ್ದರು. ಆಗ ತಂಡದ ನೇತೃತ್ವ ವಹಿಸಿಕೊಂಡ ಬಳಿಕ ವಿರಾಟ್‌ ಕೊಹ್ಲಿ ಬಹುತೇಕ ಸರಣಿಗಳಲ್ಲಿ ಯಶಸ್ಸು ಕಂಡಿದ್ದಾರೆ. ಇವರ ಮುಂದಾಳತ್ವದಲ್ಲಿ ಭಾರತ ತಂಡ ಇದುವರೆಗೂ ಹತ್ತು ಟೆಸ್ಟ್‌ ಆಡಿದ್ದು ಐದು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಮೂರು ಪಂದ್ಯಗಳು ಡ್ರಾ ಆಗಿವೆ. ಆದರೆ, ಕೊಹ್ಲಿ ನಾಯಕರಾದ ಬಳಿಕ ವಿಂಡೀಸ್‌ ವಿರುದ್ಧ ಆಡುತ್ತಿರುವುದು ಮೊದಲು.
ಹೋದ ತಿಂಗಳಷ್ಟೇ ತಂಡದ ಕೋಚ್‌ ಆಗಿರುವ ಕರ್ನಾಟಕದ ಅನಿಲ್‌ ಕುಂಬ್ಳೆ ಅವರಿಗೂ  ಇದು ಮೊದಲ ಪ್ರವಾಸ. ಆದ್ದರಿಂದ ನೂತನ ಕೋಚ್‌ ಮತ್ತು ನಾಯಕನಿಗೆ ಈ ಸರಣಿ ಹೊಸ ‘ಟೆಸ್ಟ್’ ಎನಿಸಿದೆ.

ಅಷ್ಟೇ ಅಲ್ಲ, ಕೆರಿಬಿಯನ್‌ ನಾಡಿನ ತಂಡದ ವಿರುದ್ಧ ಭಾರತ 2002ರಿಂದ ಆಡಿರುವ ಪಂದ್ಯಗಳಲ್ಲಿ ಒಮ್ಮೆಯೂ ಸೋತಿಲ್ಲ.  ಉಭಯ ತಂಡಗಳು 15 ಮುಖಾಮುಖಿಯಾಗಿವೆ.  ಭಾರತ ಎಂಟರಲ್ಲಿ ಗೆಲುವು ಪಡೆದಿದೆ. ಏಳು ಪಂದ್ಯಗಳು ಡ್ರಾ ಆಗಿದ್ದವು. ಇತಿಹಾಸದ ಈ ಗೆಲುವಿನ ಬಲವೂ ಭಾರತದ ಆಟಗಾರರ ವಿಶ್ವಾಸ ಹೆಚ್ಚಿಸಿದೆ.
ಹೊಸ ಕೋಚ್‌, ಹೊಸ ಉತ್ಸಾಹ: ಟೆಸ್ಟ್‌ ಮಾದರಿಯಲ್ಲಿ ಒಟ್ಟು ಹೆಚ್ಚು ವಿಕೆಟ್‌ ಪಡೆದ ಭಾರತದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಅನಿಲ್‌ ಕುಂಬ್ಳೆ ಕೋಚ್‌ ಆಗಿರುವುದರಿಂದ ಆಟಗಾರರಲ್ಲಿ ಹೆಚ್ಚು ಉತ್ಸಾಹ ಬಂದಿದೆ. ತಂಡದ ಪ್ರಮುಖ ಸ್ಪಿನ್ನರ್‌ಗಳಾದ ಆರ್‌. ಅಶ್ವಿನ್‌, ರವೀಂದ್ರ ಜಡೇಜ ಮತ್ತು ಅಮಿತ್‌ ಮಿಶ್ರಾ ಅವರ ಜವಾಬ್ದಾರಿ ಹೆಚ್ಚಾಗಿದೆ.

ಕೋಚ್‌ ಆದ ಮೊದಲ ದಿನದಿಂದಲೂ ಕುಂಬ್ಳೆ ಅವರು ‘ಬೌಲರ್‌ಗಳು  ಸಾಮರ್ಥ್ಯ ಸಾಬೀತು ಮಾಡಿ ತಮ್ಮಲ್ಲಿನ ನಾಯಕತ್ವ ಗುಣವನ್ನು ತೋರಿಸಬೇಕು’ ಎಂದು ಹೇಳುತ್ತಲೇ ಬಂದಿದ್ದಾರೆ. ಹೋದ ವಾರ ಸೇಂಟ್‌ ಕಿಟ್ಸ್‌ನಲ್ಲಿ ನಡೆದ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಭಾರತದ ಸ್ಪಿನ್ನರ್‌ಗಳೇ ವಿಜೃಂಭಿಸಿದ್ದರು. ಆದ್ದರಿಂದ ಟೆಸ್ಟ್‌ ಸರಣಿಯಲ್ಲಿ  ಸ್ಪಿನ್ನರ್‌ಗಳಿಂದ ಹೆಚ್ಚು ನಿರೀಕ್ಷೆಯಿದೆ. 

ಹ್ಯಾಟ್ರಿಕ್‌ ಅವಕಾಶ:  ಈ ಬಾರಿಯ ಸರಣಿಯಲ್ಲಿ ಜಯ ಪಡೆದು ಹ್ಯಾಟ್ರಿಕ್‌ ಸಾಧಿಸುವ ಗುರಿ ನಾಯಕ ಕೊಹ್ಲಿ ಅವರ ಮುಂದಿದೆ.
2007ರಲ್ಲಿ ರಾಹುಲ್‌ ದ್ರಾವಿಡ್‌ ಅವರ ನಾಯಕತ್ವದ ತಂಡ ಇಲ್ಲಿ ಆಡಿದ್ದ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ 1–0ರಲ್ಲಿ ಗೆದ್ದುಕೊಂಡಿತ್ತು. ದೋನಿ ಅವರು ನಾಯಕರಾಗಿದ್ದ ವೇಳೆಯೂ ಭಾರತ ಇಲ್ಲಿ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1–0ರಲ್ಲಿ ಗೆದ್ದಿತ್ತು. ಆದ್ದರಿಂದ ಹ್ಯಾಟ್ರಿಕ್‌ ಸಾಧಿಸಲು ಕೊಹ್ಲಿ ಅವರಿಗೆ ಈಗ ಉತ್ತಮ ಅವಕಾಶ ಲಭಿಸಿದೆ. ಜೊತೆಗೆ ಕೊಹ್ಲಿ ಅವರಿಗೆ ನಾಯಕರಾಗಿ ಸತತ ಮೂರನೇ ಸರಣಿ ಜಯಿಸಲು ಈಗ ವೇದಿಕೆ ಸಿಕ್ಕಿದೆ.  ಇವರ ನಾಯಕತ್ವದಲ್ಲಿ ಭಾರತ ತಂಡ 2–1ರಲ್ಲಿ ಶ್ರೀಲಂಕಾ ಮೇಲೂ, ದಕ್ಷಿಣ ಆಫ್ರಿಕಾ ಎದುರು 3–0ರಲ್ಲಿ ಸರಣಿ ಗೆದ್ದಿತ್ತು.|

ತಂಡ ಆಯ್ಕೆಯ ಸವಾಲು: ಲಂಕಾ, ಹರಿಣಗಳ ನಾಡಿನ ಟೆಸ್ಟ್‌ ಸರಣಿ ಮತ್ತು ಅಭ್ಯಾಸ ಪಂದ್ಯಗಳಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡಿರುವ ಕಾರಣ ಅಂತಿಮ ಹನ್ನೊಂದರ ತಂಡವನ್ನು ಆಯ್ಕೆ ಮಾಡುವುದು ಕೊಹ್ಲಿ ಮತ್ತು ಕುಂಬ್ಳೆ ಅವರಿಗೆ ಸವಾಲಾಗಿ ಪರಿಣಮಿಸಿದೆ.
ವೇಗದ ಬೌಲಿಂಗ್‌ಗೆ ಒತ್ತು ನೀಡಬೇಕಾದ ಕಾರಣ ಐವರು ವೇಗಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಆದ್ದರಿಂದ ಬಲಗೈ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ರೋಹಿತ್‌ಗೆ ಎರಡನೇ ಅಭ್ಯಾಸ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಲಭಿಸಿರಲಿಲ್ಲ.
ಇವರ ಜೊತೆಗೆ ಆಲ್‌ರೌಂಡರ್ ಸ್ಟುವರ್ಟ್‌ ಬಿನ್ನಿ, ಅಮಿತ್‌ ಮಿಶ್ರಾ, ಟೆಸ್ಟ್ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಮತ್ತು ಕೆ.ಎಲ್‌. ರಾಹುಲ್‌ ಇವರಲ್ಲಿ ಇಬ್ಬರಿಗಷ್ಟೇ ಅವಕಾಶ ಕೊಡಬೇಕಾಗುತ್ತದೆ. ಆದ್ದರಿಂದ ಅಂತಿಮ ಹನ್ನೊಂದರ ತಂಡ ಆಯ್ಕೆ ಕುತೂಹಲಕ್ಕೆ ಕಾರಣವಾಗಿದೆ.

ಸಂಕಷ್ಟದಲ್ಲಿ ವಿಂಡೀಸ್‌: ತಮ್ಮ ದೇಶದ ಕ್ರಿಕೆಟ್ ಮಂಡಳಿ ಜೊತೆಗಿನ ತಿಕ್ಕಾಟದಿಂದಾಗಿ ಕೆಲ ಪ್ರಮುಖ ಆಟಗಾರರಿಗೆ ವಿಂಡೀಸ್‌ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಇದು ಆತಿಥೇಯರ ಸಂಕಷ್ಟವನ್ನು ಹೆಚ್ಚಿಸಿದೆ.
ವಿಂಡೀಸ್‌ ಕ್ರಿಕೆಟ್‌ ಮಂಡಳಿ 13 ಸದಸ್ಯರು ಒಳಗೊಂಡ ತಂಡ ಪ್ರಕಟಿಸಿದ್ದು ಕೆಲವರಷ್ಟೇ ಅನುಭವಿಗಳು. ಡರೆನ್‌ ಬ್ರಾವೊ ಮತ್ತು ಮರ್ಲಾನ್‌ ಸ್ಯಾಮುಯೆಲ್ಸ್‌ ನೂರಕ್ಕಿಂತಲೂ ಹೆಚ್ಚು ಟೆಸ್ಟ್‌ ಆಡಿದ ಅನುಭವ ಹೊಂದಿದ್ದಾರೆ. ನಾಯಕ ಜಾಸನ್‌ ಹೋಲ್ಡರ್‌ ಕೂಡ ಹಿರಿಯ ಆಟಗಾರರ ಮೇಲೆ ಅವಲಂಬಿತರಾಗಿದ್ದಾರೆ.

ತಂಡಗಳು:  ಭಾರತ:  ವಿರಾಟ್‌ ಕೊಹ್ಲಿ (ನಾಯಕ),  ಮುರಳಿ ವಿಜಯ್‌, ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌. ಚೇತೇಶ್ವರ ಪೂಜಾರ,  ಅಜಿಂಕ್ಯ ರಹಾನೆ, ರೋಹಿತ್‌ ಶರ್ಮಾ, ವೃದ್ಧಿಮಾನ್‌ ಸಹಾ, ಆರ್‌. ಅಶ್ವಿನ್‌, ಅಮಿತ್‌ ಮಿಶ್ರಾ, ರವೀಂದ್ರ ಜಡೇಜ, ಸ್ಟುವರ್ಟ್‌ ಬಿನ್ನಿ, ಭುವನೇಶ್ವರ ಕುಮಾರ್‌,  ಮೊಹಮ್ಮದ್‌ ಶಮಿ, ಶಾರ್ದೂಲ್‌ ಠಾಕೂರ್‌, ಉಮೇಶ್‌ ಯಾದವ್‌ ಮತ್ತು ಇಶಾಂತ್‌ ಶರ್ಮಾ.

ವೆಸ್ಟ್ ಇಂಡೀಸ್‌: ಜಾಸನ್ ಹೋಲ್ಡರ್‌ (ನಾಯಕ), ಕ್ರೆಗ್‌ ಬ್ರಾಥ್‌ವೈಟ್‌, ರಾಜೇಂದ್ರ ಚಂದ್ರಿಕಾ,  ಡರೆನ್‌ ಬ್ರಾವೊ, ಮರ್ಲಾನ್‌ ಸ್ಯಾಮುಯೆಲ್ಸ್‌, ಜರ್ಮೈನ್‌ ಬ್ಲಾಕ್‌ವುಡ್‌,  ರೋಸ್ಟನ್‌ ಚೇಸ್‌, ಲಿಯಾನ್‌ ಜಾನ್ಸನ್‌,  ಶೇನ್‌ ಡಾರ್ವಿಚ್‌, ದೇವೇಂದ್ರ ಬಿಶೂ, ಕಾರ್ಲಸ್‌ ಬ್ರಾಥ್‌ವೈಟ್‌, ಶನಾನ್‌ ಗ್ಯಾಬ್ರಿಯಿಲ್ ಮತ್ತು ಮ್ಯೂಗಿಯೆಲ್‌ ಕಮಿನ್ಸ್‌.

ಪಂದ್ಯ ಆರಂಭ: ರಾತ್ರಿ 7.30ಕ್ಕೆ (ಭಾರತೀಯ ಕಾಲಮಾನ)
ನೇರ ಪ್ರಸಾರ: ಟೆನ್‌್–1 ಹಾಗೂ ಟೆನ್‌–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT