ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಖ್ಯಾತ ಕಳ್ಳರಿಗೆ ತಿಮ್ಮಕ್ಕ ಆಪ್ತರಕ್ಷಕಿ

ಜಾಮೀನು ಪಡೆಯಲು 25 ವಕೀಲರ ಜತೆ ಸಂಪರ್ಕ
Last Updated 20 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಳ್ಳರ ಪಾಲಿಗೆ ಆಪ್ತ ರಕ್ಷಕಿಯಂತಿದ್ದ ತಿಮ್ಮಕ್ಕ, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸುವುದಕ್ಕಾಗಿಯೇ ವಿವಿಧ ಜಿಲ್ಲೆಗಳಲ್ಲಿ 25ಕ್ಕೂ ಹೆಚ್ಚು ವಕೀಲರ ಜತೆ ನಿರಂತರ ಸಂಪರ್ಕದಲ್ಲಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಕುಖ್ಯಾತ ಕಳ್ಳರನ್ನು ಗುರುತಿಸುತ್ತಿದ್ದ ತಿಮ್ಮಕ್ಕ, ತಾನೇ ಮುಂದೆ ಹೋಗಿ ಅವರಿಗೆ ಜಾಮೀನು ಕೊಡಿಸುತ್ತಿದ್ದಳು. ನಂತರ ಅವರನ್ನು ತನ್ನ ಕುಟುಂಬದೊಟ್ಟಿಗೆ ಸೇರಿಸಿಕೊಂಡು, ಕಳವು ಮಾಡಿಸುತ್ತಿದ್ದಳು. ಆ ಒಡವೆಗಳನ್ನು ವಿಲೇವಾರಿ ಮಾಡಿ, ಬಂದ ಹಣದಲ್ಲಿ ಆ ಕಳ್ಳನಿಗೆ ಸ್ವಲ್ಪ ಕೊಟ್ಟು ಉಳಿದಿದ್ದನ್ನು ತಾನು ಇಟ್ಟುಕೊಳ್ಳುತ್ತಿದ್ದಳು.

‘ತಿಮ್ಮಕ್ಕಳ ಗಂಡ ಕೃಷ್ಣಪ್ಪ ಕಳವು ಪ್ರಕರಣದಲ್ಲಿ ಜೈಲಿಗೆ ಹೋದಾಗ ಅಲ್ಲಿ ಆತನಿಗೆ ಹರೀಶ್‌ ಬಾಬುವಿನ ಪರಿಚಯವಾಗಿತ್ತು. ಪತಿಗೆ ಜಾಮೀನು ಕೊಡಿಸಲು ಹೋಗಿದ್ದ ತಿಮ್ಮಕ್ಕ, ಬಾಬುಗೂ ಜಾಮೀನು ಕೊಡಿಸಿದ್ದಳು. ಅಲ್ಲಿಂದ ಅವರಿಬ್ಬರ ಸಂಪರ್ಕ ಶುರುವಾಗಿತ್ತು.

‘ಕೃಷ್ಣಪ್ಪ ಮೃತಪಟ್ಟ ನಂತರ ಬಾಬು ಕೃತ್ಯಗಳು ಹೆಚ್ಚಾಗತೊಡಗಿದವು. ಆತ ಕದ್ದು ತರುತ್ತಿದ್ದ ಎಲ್ಲ ಒಡವೆಗಳನ್ನೂ ತಿಮ್ಮಕ್ಕಳಿಗೇ ಕೊಡುತ್ತಿದ್ದ. ನಂತರ ಆಕೆಯ ಮಗ ಕೂಡ ಆತನೊಂದಿಗೆ ಸೇರಿಕೊಂಡ. ಈ ಇಬ್ಬರಿಗೆ ಜಾಮೀನು ಕೊಡಿಸುವುದಕ್ಕಾಗಿ, ಹಲವಾರು ವಕೀಲರನ್ನು ಹುಡುಕಿಕೊಂಡಳು. ಈ ಕಾರ್ಯಕ್ಕೇ ನಿಯೋಜನೆಗೊಂಡಿದ್ದ 25 ವಕೀಲರನ್ನು ಈಗಾಗಲೇ ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ.

‘ನಾಲ್ಕು ಮೊಬೈಲ್‌ಗಳನ್ನು ಇಟ್ಟುಕೊಂಡಿದ್ದ ಮಧು, ನೂರಾರು ಸಿಮ್‌ಗಳನ್ನು ಬಳಸುತ್ತಿದ್ದ. ಒಂದು ಕಡೆ ಕಳವು ಮಾಡಿದರೆ, ಕೂಡಲೇ ಸಿಮ್‌ ಮತ್ತು  ಮೊಬೈಲ್‌ ಎರಡನ್ನೂ ಬದಲಾಯಿಸುತ್ತಿದ್ದ. ಅಲ್ಲದೇ, ತಾಯಿ ಜತೆ ವಾಸ್ತವ್ಯ ಬದಲಿಸಿಬಿಡುತ್ತಿದ್ದ. ಯಾವ ಪ್ರದೇಶದಲ್ಲೂ ಅವರು ಮೂರು ತಿಂಗಳಿಗಿಂತ ಹೆಚ್ಚು ಕಾಲ ಉಳಿದುಕೊಂಡಿಲ್ಲ. ಹೀಗಾಗಿ ಪತ್ತೆ ಕಾರ್ಯ ಕಷ್ಟವಾಗಿತ್ತು.

‘ಎರಡು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಮಧು, ವಾಟ್ಸ್‌ ಆ್ಯಪ್‌ ಮೂಲಕ ಆಕೆ ಜತೆ ಸಂಪರ್ಕದಲ್ಲಿದ್ದ. ಪ್ರೇಯಸಿಯನ್ನು ಹೊರತುಪಡಿಸಿ ಇನ್ನಾರಿಗೂ ಆ ಮೊಬೈಲ್ ಸಂಖ್ಯೆಯನ್ನು ಕೊಟ್ಟಿರಲಿಲ್ಲ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

33 ಪ್ರಕರಣ ದಾಖಲು: ‘ಕಳವು, ದರೋಡೆ, ಡಕಾಯಿತಿ ಸೇರಿದಂತೆ ಹರೀಶ್ ಬಾಬು ಮತ್ತು ಮಧು ವಿರುದ್ಧ ಬೆಂಗಳೂರಿನಲ್ಲಿ 13, ಹಾಸನದಲ್ಲಿ ಆರು, ಶಿವಮೊಗ್ಗದಲ್ಲಿ ಎರಡು, ಚಿಕ್ಕಮಗಳೂರಿನಲ್ಲಿ ಮೂರು, ಚಿತ್ರದುರ್ಗ ನಾಲ್ಕು, ತುಮಕೂರಿನಲ್ಲಿ ಎರಡು, ದಾವಣಗೆರೆ, ಬಳ್ಳಾರಿ ಹಾಗೂ ಮೈಸೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.

ಗುಂಡುಗಳಿದ್ದವು
‘ಕಳ್ಳರನ್ನು ಹಿಡಿಯಲು ತೆರಳಿದ್ದಾಗ ಜಗದೀಶ್ ಅವರ ರಿವಾಲ್ವರ್‌ನಲ್ಲಿ ಗುಂಡುಗಳು ಇದ್ದವು ಎಂಬುದು ಇತರೆ ಕಾನ್‌ಸ್ಟೆಬಲ್‌ಗಳ ವಿಚಾರಣೆಯಿಂದ ಗೊತ್ತಾಗಿದೆ. ಸದ್ಯ ಅದನ್ನು ಕದ್ದೊಯ್ದಿದ್ದ ಕಳ್ಳರು, ಕರ್ನೂಲಿನ ವಸತಿ ಗೃಹವೊಂದರಲ್ಲಿ ಬಿಟ್ಟಿರುವುದಾಗಿ ಹೇಳಿದ್ದಾರೆ’ ಎಂದು ಕೇಂದ್ರ ವಲಯದ ಐಜಿಪಿ ಅರುಣ್ ಚಕ್ರವರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT