ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗಾಗಿ ಪ್ರತಿಭಟನೆ

Last Updated 21 ಏಪ್ರಿಲ್ 2015, 10:52 IST
ಅಕ್ಷರ ಗಾತ್ರ

ರಾಮನಗರ:  ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿರುವ ನಗರಸಭೆ ಅಧ್ಯಕ್ಷ ಚೇತನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ನಗರದ ಚಾಮುಂಡಿಪುರದ ನಾಗರಿಕರು ನಗರಸಭೆ ಎದುರು ಸೋಮವಾರ ಪ್ರತಿಭಟಿಸಿದರು.

ಒಂದನೇ ವಾರ್ಡ್‌ಗೆ ಸೇರಿದ ಚಾಮುಂಡಿಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿರುವ ಬಗ್ಗೆ ಕಳೆದ ಶುಕ್ರವಾರ ರಾತ್ರಿ 9ರಲ್ಲಿ ನಾಗರಿಕರು ನಗರಸಭೆ ಅಧ್ಯಕ್ಷ ಚೇತನಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿದ್ದು, ಸಮರ್ಪಕ ನೀರು ಪೂರೈಕೆಗೆ ಮನವಿ ಮಾಡಲಾಗಿತ್ತು. ಆದರೆ, ಈ ಸಮಯದಲ್ಲಿ ಅಧ್ಯಕ್ಷ ಚೇತನಕುಮಾರ್ ಅವರ ಮೊಬೈಲ್‌ ದೂರವಾಣಿಯಿಂದ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜನರ ಮೇಲೆ ಹರಿಹಾಯ್ದರು. ಕರೆ ಮಾಡಿದ್ದ ತಮ್ಮನ್ನು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದಾರೆ ಎಂದು ಚಾಮುಂಡಿಪುರದ ನಿವಾಸಿ ಲೋಕೇಶ್ ಆರೋಪಿಸಿದರು.

ದೂರವಾಣಿ ಕರೆ ಮಾಡಿದ ಬೆನ್ನಲ್ಲೇ ಚೇತನಕುಮಾರ್ ಮತ್ತು ಶಿವಕುಮಾರ್ ಅವರಿಬ್ಬರೂ ತಮ್ಮ ಬಡಾವಣೆಗೆ ತೆರಳಿದ್ದು, ತಮ್ಮ ವಿರುದ್ಧ ಮತ್ತೆ ಹರಿಹಾಯ್ದರು. ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ನಾವೂ ಕೂಡ ತರಾಟೆಗೆ ತೆಗೆದುಕೊಂಡೆವು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಚೇತನಕುಮಾರ್ ಮತ್ತು ಶಿವಕುಮಾರ್ ಅವರಿಬ್ಬರೂ ಬಡಾವಣೆಗೆ ಆಗಮಿಸಿ, ತಮ್ಮೊಂದಿಗೆ ಅನಾಗರಿಕವಾಗಿ ವರ್ತಿಸಿದ ಸಂದರ್ಭದಲ್ಲಿ ಪಾನಮತ್ತರಾಗಿದ್ದರು. ಜವಾಬ್ದಾರಿ ಸ್ಥಾನದಲ್ಲಿದ್ದು, ಹೀಗೆ ವರ್ತಿಸಿರುವುದು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಚಾಮುಂಡಿಪುರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜಾಗುತ್ತಿದೆ. ಬಡಾವಣೆ ವಾಸಿಗಳು ದಲಿತರೆನ್ನುವ ಕಾರಣಕ್ಕೆ ನಮ್ಮ ಸಮಸ್ಯೆಯನ್ನು ನಿರ್ಲಕ್ಷಿಸಲಾಗಿದೆಯೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಮಾತಿನ ಚಕಮಕಿ ವೇಳೆ ಡಿ.ಕೆ. ಶಿವಕುಮಾರ್, ನಮ್ಮ ಮೇಲೆ ಹರಿಹಾಯುವ ಜತೆಗೆ ಪ್ರಾಣ ಬೆದರಿಕೆಯನ್ನೂ ಒಡ್ಡಿದ್ದಾರೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದ ಆಗ್ರಹಿಸಿದರು. ಈ ಬಗ್ಗೆ ಚಾಮುಂಡಿಪುರದ ಲೋಕೇಶ್ ಅವರು ಪುರ ಠಾಣೆ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದರು.

ನಗರಸಭೆ ಅಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ದೂರಿನ ಬಗ್ಗೆ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿರುವ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪ್ರತಿಭಟನಾಕಾರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿಗೂ ಸೋಮವಾರ ಮನವಿ ಸಲ್ಲಿಸಿದರು.

ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಗೂಂಡಾಗಳಂತೆ ವರ್ತಿಿಸುತ್ತಿದ್ದಾರೆ.  ಅವಾಚ್ಯಶಬ್ಧಗಳಿಂದ ನಿಂದನೆ, ಜಾತಿ ನಿಂದನೆ ಮತ್ತು ಪ್ರಾಣ ಬೆದರಿಕೆ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಈಗಾಗಲೇ ರೂ 4.80 ಲಕ್ಷ ವೆಚ್ಚದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ನಗರಸಭೆ ಅಧ್ಯಕ್ಷ ಚೇತನ್ ಕುಮಾರ್ ಪ್ರತಿಭಟನಾಕಾರರಿಗೆ ತಿಳಿಸಿದರು.

ಆದರೆ ಪ್ರತಿಭಟನಾಕಾರರು ನಗರಸಭೆ ಅಧ್ಯಕ್ಷರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ನಗರಸಭೆ ಅಧ್ಯಕ್ಷ ಚೇತನಕುಮಾರ್ ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವುದಿಲ್ಲ ಎಂದು ಹೊರಟು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT