ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗಾಗಿ ಸುದೀರ್ಘ ಚರ್ಚೆ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೆರೆದುಕೊಂಡ ಸಮಸ್ಯೆಗಳು
Last Updated 30 ಜುಲೈ 2015, 9:46 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ಬಸವಕಲ್ಯಾಣ, ಹುಮನಾಬಾದ್ ಹಾಗೂ ಭಾಲ್ಕಿ ತಾಲ್ಲೂಕಿನ ಗ್ರಾಮಗಳು ಎದುರಿಸುತ್ತಿರುವ ಕುಡಿಯುವ ನೀರಿನ ತೀವ್ರ ಸಮಸ್ಯೆಯ ವಿಷಯವಾಗಿ ಬುಧವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ  ಶ್ರೀದೇವಿ ಸುಭಾಷ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂರು ತಾಲ್ಲೂಕುಗಳ ಸದಸ್ಯರೇ ಗ್ರಾಮಸ್ಥರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು  ಪ್ರಸ್ತಾಪಿಸಿದರಲ್ಲದೇ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಫೆಬ್ರುವರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೂ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಮಳೆಗಾಲ ಕಳೆಯುತ್ತ ಬಂದರೂ ಮೌನವಾಗಿದ್ದಾರೆ ಎಂದು ಆರೋಪಿಸಿದರು.

ಗ್ರಾಮಗಳಲ್ಲಿನ ತೆರೆದ ಬಾವಿ ಹಾಗೂ ಕೆರೆ ಬತ್ತಿವೆ. ಕೊಳವೆ ಬಾವಿಗಳಲ್ಲಿನ ನೀರಿನ ಮಟ್ಟ ಸಹ ತಳಮಟ್ಟಕ್ಕೆ  ಹೋಗಿದೆ. ಗ್ರಾಮದ ಜನತೆ ಬಾವಿಗಳಲ್ಲಿನ ಕೊಳಕು ನೀರು ತಂದು ಅನಿವಾರ್ಯವಾಗಿ ಸೇವಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಮಿನರಲ್ ವಾಟರ್ ಕುಡಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಳ್ಳಿಖೇಡ(ಬಿ) ಕ್ಷೇತ್ರದ ಸದಸ್ಯ ಮಹಾಂತಯ್ಯ ತೀರ್ಥ ಮಾತನಾಡಿ, ಗ್ರಾಮದಲ್ಲಿ ಜನ ರಸ್ತೆ ಅಥವಾ ಗಟಾರು ನಿರ್ಮಾಣ ಮಾಡುವಂತೆ ಕೇಳುತ್ತಿಲ್ಲ. ಮೊದಲು ಕುಡಿಯಲು ನೀರು ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ.  ಹೆಣ್ಣು ಮಕ್ಕಳು ತಲೆಯ ಮೇಲೆ ನೀರು ಹೊತ್ತು ತಂದು ಬೇಸತ್ತಿದ್ದಾರೆ. ಟ್ಯಾಂಕರ್ ಮೂಲಕ ನೀರು ಪೂರೈಸುವುದಾಗಿ ಹೇಳುತ್ತೀರಿ, ಎಲ್ಲಿದೆ ಟ್ಯಾಂಕರ್ ಎಂದು ಪ್ರಶ್ನಿಸಿದರು.

ಗ್ರಾಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದಾರೆ ಎನ್ನುವ ಭರವಸೆಯ ಮೇಲೆ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಅವರಿಗೆ ಏನು ಉತ್ತರ ಕೊಡಬೇಕು. ಅಧಿಕಾರಿಗಳು ಏಕೆ ಕೆಲಸ ಮಾಡುತ್ತಿಲ್ಲ. ಬಾವಿಗಳಲ್ಲಿ ಹೂಳು ತೆಗೆಯುತ್ತಿಲ್ಲ. ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಲು ಕಾರ್ಮಿಕರು ಬರುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಯಾರನ್ನೂ ಭೇಟಿಯಾಗಿದ್ದೀರಿ, ಏಕೆ ಕೆಲಸ ಆಗುತ್ತಿಲ್ಲ ಎಂದು ಕೇಳಿದರು. ಸಣ್ಣ ನೀರಾವರಿ ಯೋಜನೆಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ.  ಈ ಪ್ರಕರಣದ ತನಿಖೆಯಾಗಬೇಕು. ಅದಕ್ಕಾಗಿ ಸಮಿತಿಯೊಂದನ್ನು ರಚಿಸಬೇಕು ಎಂದು ಒತ್ತಾಯಿಸಿದರು.

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿದವರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುತ್ತಿಲ್ಲ. ಅಲ್ಲದೇ ದಿನಗೂಲಿ  ₨204 ಇರುವ ಕಾರಣ ಕೆಲಸ ಮಾಡಲು ಮುಂದೆ ಬರುತ್ತಿಲ್ಲ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಹೇಗಾದರೂ ಮಾಡಿ ಬಾವಿಯ ಹೂಳು ಎತ್ತಿ ಗ್ರಾಮಸ್ಥರಿಗೆ ಕುಡಿಯುವ ನೀರು ಕೊಡೋಣ. ನಾನು ಸಹ ಒಂದು ದಿನ ಅಲ್ಲಿಗೆ ಬಂದು ಶ್ರಮದಾನ ಮಾಡುತ್ತೇನೆ ಎಂದು ಸಿಇಓ ಬಿ.ಶರತ್ ಹೇಳಿದರು.

ಬಸವಕಲ್ಯಾಣ ತಾಲ್ಲೂಕಿನ ಹುಲಸೂರ ಕ್ಷೇತ್ರದ ಲತಾ ಹಾರಕೂಡೆ ಮಾತನಾಡಿ, ಅಧಿಕಾರಿಗಳು ಏಕಂಬಾ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುತ್ತಿಲ್ಲ. ಕೊಳವೆ ಬಾವಿಗಳನ್ನು ತೋಡುವಂತೆ ಮನವಿ ಮಾಡಿದರೆ ಅಧಿಕಾರಿಗಳು ಹಳೆಯ ಬಾವಿಗಳ ಲೆಕ್ಕ ಹೇಳಿ ಹೊಸ ಕೊಳವೆ ಬಾವಿ ತೋಡಲಾಗಿದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಸವಕಲ್ಯಾಣ ತಾಲ್ಲೂಕಿನಲ್ಲಿ 23 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಏಕಂಬಾದ ಶಾಲಾ ಆವರಣದಲ್ಲಿ 550 ಅಡಿ ಕೊಳವೆ ಬಾವಿ ತೋಡಿದಾಗ ನೀರು ಬಂದಿತ್ತು. ಆದರೆ ಗ್ರಾಮಸ್ಥರು 700 ಅಡಿ ವರೆಗೆ ಕೊರೆಸುವಂತೆ ಹಠ ಹಿಡಿದರು.

ಅವರ ಒತ್ತಾಯಕ್ಕೆ ಮಣಿದು 650 ಅಡಿ ವರೆಗೆ ಕೊರೆಸಿದಾಗ ಬಂದ ನೀರು ಹೊರಟು ಹೋಯಿತು ಎಂದು ಬಸವಕಲ್ಯಾಣದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಚಿರಡೆ ಸಭೆಗೆ ಮಾಹಿತಿ ನೀಡಿದರು.
ಈ ನಡುವೆ ಅಧಿಕಾರಿ ಹಾಗೂ ಸದಸ್ಯೆ ಲತಾ ಹಾರಕೂಡೆ ನಡುವೆ ಕೊಳವೆಬಾವಿ ಕೊರೆದ ವಿಷಯವಾಗಿಯೇ ಜಟಾಪಟಿ ನಡೆಯಿತು. ಸಿಇಓ ಮಧ್ಯ ಪ್ರವೇಶಿಸಿ, ಸದಸ್ಯರಿಗೆ ಲಿಖಿತ ಮಾಹಿತಿ ಒದಗಿಸಿ, ಸದಸ್ಯರೊಂದಿಗೆ ಸ್ಥಳಕ್ಕೆ ಭೇಟಿ ಸಮಸ್ಯೆ ನಿವಾರಿಸಿಕೊಳ್ಳಬೇಕು ಸೂಚಿಸಿ ಅವರ ಜಟಾಪಟಿಗೆ ಅಂತ್ಯ ಹಾಡಿದರು.

ಮುಡಬಿಯ ಚಂದ್ರಶೇಖರ, ಭಾಲ್ಕಿಯ ಮದಕಟ್ಟಿಯ ವೆಂಕಟ ಶರಣಪ್ಪ ಮೊದಲಾದವರು ತಮ್ಮ ಕ್ಷೇತ್ರಗಳ ವ್ಯಾಪ್ತಿಯ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವುದನ್ನು ಸಭೆಯ ಗಮನಕ್ಕೆ ತಂದರು. ಮುಖ್ಯಮಂತ್ರಿಗಳಿಗೆ ಮನವಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬರಗಾಲ ಸನ್ನಿವೇಶ ಕಂಡು ಬರುತ್ತಿರುವುದರಿಂದ ಜಿಲ್ಲಾಧಿಕಾರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶಾಸಕರ ಸಭೆ ನಡೆಸಿ ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ.

ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ ಎಂದು ಸಿಇಓ ಬಿ.ಶರತ್ ತಿಳಿಸಿದರು. ಕಳೆದ ವರ್ಷ ಆಗಸ್ಟ್ 28ರಂದು ಬಸವಕಲ್ಯಾಣದಲ್ಲಿ ಸುರಿದ ಭಾರಿ ಮಳೆಗೆ ಶಿರಗಾಪುರದ ಬ್ಯಾರೇಜ್‌ನಿಂದ  ಅಕ್ಕಪಕ್ಕದ ಜಮೀನು ಹಾಗೂ ಬಾವಿಗಳಲ್ಲಿ ಹೂಳು ತುಂಬಿದೆ. ಹೂಳು ತೆಗೆಯಲು ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಸವಕಲ್ಯಾಣದ ಉಪ ವಿಭಾಗಾಧಿಕಾರಿ,  ತಾಲ್ಲೂಕು  ಪಂಚಾಯಿತಿ  ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಕಾರ್ಯಕ್ಕೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿಯೂ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕಡಿಮೆ ಮಳೆ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 296.50 ಮೀ.ಮೀ. ಮಳೆಯಾಗಬೇಕಿತ್ತು. ಆದರೆ  156.16 ಮಿ.ಮೀ. ಮಳೆಯಾಗಿದೆ.  ಜಿಲ್ಲೆಯಲ್ಲಿ  ಶೇ.46 ರಷ್ಟು ಮಳೆಯ ಕೊರತೆ ಇದೆ.  ಜಿಲ್ಲೆಯಲ್ಲಿ ಒಟ್ಟು 3,39,600 ಹೆಕ್ಟೇರ್ ಪ್ರದೇಶದಲ್ಲಿ  ಬಿತ್ತನೆ ಆಗಬೇಕಿತ್ತು.  ಜು.27ರ ವರೆಗೆ 2,93,066 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಆಗಿದೆ. 40 ರಿಂದ -45 ದಿವಸಗಳ ಬೆಳೆ ಇದೆ.  ತೇವಾಂಶ ಕೊರತೆಯಿಂದ ಗಿಡಗಳು ಬಾಡುತ್ತಿವೆ ಎಂದು  ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ತಂಗುಬಾಯಿ ಪರಾಂಜಪೆ,  ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ ಸದಸ್ಯರು, ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆಯ ಆರಂಭದಲ್ಲಿ ಮಾಜಿ ರಾಷ್ಟ್ರಪತಿ, ಭಾರತರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ನಿಧನಕ್ಕೆ ಹಾಗೂ ಜಿಲ್ಲೆಯಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯೆಯ ದೂರವಾಣಿ ಕರೆ ಸ್ವೀಕರಿಸದ ಸಹಾಯಕ ಕೃಷಿ ಅಧಿಕಾರಿಗೆ ಷೋಕಾಸ್ ನೋಟಿಸ್್ ಜಾರಿ ಮಾಡಲಾಗುವುದು.
   -ರವೀಂದ್ರನಾಥ ಸೂಗೂರು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT