ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲದ ಕೇಂದ್ರವಾದ ಪಾರಿರಾಜನ್‌

Last Updated 25 ಮೇ 2015, 19:30 IST
ಅಕ್ಷರ ಗಾತ್ರ

ಕೆಜಿಎಫ್‌:  ಕನ್ನಡವೂ ಸರಿಯಾಗಿ ಗೊತ್ತಿಲ್ಲದ ಪಾರಿರಾಜನ್‌ ಈಗ ಕುತೂಹಲಿಗಳ ಕೇಂದ್ರ ಬಿಂದುವಾಗಿದ್ದಾನೆ.
ಪಟ್ಟಣದ ಭಾರತ್‌ನಗರದಲ್ಲಿರುವ ಪಾರಿರಾಜನ್‌ ಬಾಡಿಗೆ ಮನೆ ಆಕರ್ಷಣೆ ಕೇಂದ್ರವಾಗಿದೆ. ಇಷ್ಟು ದಿನಗಳ ಕಾಲ ಕಾರುಗಳು ಬಂದು ಹೋಗುತ್ತಿದ್ದವು. ಕಾರಿನಲ್ಲಿದ್ದವರು ಯಾರು? ಏನು? ಎಂಬುದರ ಬಗ್ಗೆ ಸ್ಥಳೀಯರು ಸಹ ತಲೆಕೆಡಿಸಿಕೊಂಡಿರಲಿಲ್ಲ. ಬಹುತೇಕ ಬೆಮಲ್‌ ಕಾರ್ಮಿಕರೇ ವಾಸಿಸುತ್ತಿರುವ ಈ ಬಡಾವಣೆಯಲ್ಲಿ ಪಾರಿರಾಜನ್‌ ಬಗ್ಗೆ  ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಿಂದ ನಿವಾಸಿಗಳು ಆಶ್ಚರ್ಯ ಚಕಿತರಾಗಿದ್ದಾರೆ.


ಸರ್ಕಾರಿ ಕಾರಿನಲ್ಲಿ ಆಗಾಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಕೆಜಿಎಫ್‌ಗೆ ಕರೆದುಕೊಂಡು ಬರುವ ಮೂಲಕವೇ ಸ್ಥಳೀಯ ಪೊಲೀಸರಲ್ಲಿ ಹೆದರಿಕೆ ಉಂಟು ಮಾಡಿ, ಸ್ಥಳೀಯ ಪೊಲೀಸ್‌ ಪ್ರಕರಣಗಳ ರಾಜೀ ಮಾಡಿಸುವ ಕೆಲಸವನ್ನು ಪಾರಿರಾಜನ್‌ ಮಾಡುತ್ತಿದ್ದನು.

ಕೋಟ್ಯಂತರ  ವಹಿವಾಟಿನ ಅಕ್ರಮದ ಪ್ರಮುಖ ರೂವಾರಿ ಎನಿಸಿದರೂ ಈತ ಕೆಜಿಎಫ್‌ ಪಟ್ಟಣದಲ್ಲಿ ಸ್ಕೂಟರ್‌ನಲ್ಲಿ ಸಾಮಾನ್ಯನಂತೆ ತಿರುಗಾಡುತ್ತಿದ್ದನು. ಐಷಾರಾಮಿಯಾಗಿ ತಿರುಗಿದ್ದನ್ನು ಇಲ್ಲಿನ ಯಾರೂ ನೋಡಿಲ್ಲ. ನೋಡಿದರೆ ಮುಗ್ದನಂತೆ, ಪೆದ್ದು ಪೆದ್ದಾಗಿ ಕಾಣುವ ಈತನಿಗೆ ಮೊದಲಿಗೆ ಕನ್ನಡವೂ ಸರಿಯಾಗಿ ಬರುತ್ತಿರಲಿಲ್ಲ. ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಖ್ಯ ಬೆಳೆಸಿದ ನಂತರವೇ  ಕನ್ನಡ ಮಾತನಾಡುವುದನ್ನು ಕಲಿತ ಎಂದು ಹೇಳಲಾಗುತ್ತಿದೆ.

ಮೇ 1ರಂದು ಈತನನ್ನು ಬಂಧಿಸಿದ ಸ್ಥಳೀಯ ಪೊಲೀಸರಿಗೆ ಪ್ರಕರಣದ ಲವಶೇಷವೂ ಗೊತ್ತಿರಲಿಲ್ಲ. ಬಂಧನದ ನಂತರ ಪಾರಿರಾಜನ್‌ ಜೊತೆಗಿನ ಐಪಿಎಸ್‌ ಕೊಂಡಿಗಳು ಬಿಚ್ಚಲಾರಂಭಿಸಿದಾಗ ಇಲ್ಲಿನ ಪೊಲೀಸರು ದಂಗು ಬಡಿದರು. ಕೈ ಬರಹದ ಚೀಟಿ ಪತ್ತೆ: ಬಂಧನದ ವೇಳೆ ಆತನಿಂದ ಕೆಲವು ಕೈಬರಹದ ಚೀಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಶಪಡಿಸಿಕೊಂಡಿರುವ ಚೀಟಿಯಲ್ಲಿ ಹತ್ತು ಅಂಕಿಗಳ ನಂಬರ್‌ಗಳನ್ನು ಬರೆಯಲಾಗಿದೆ. ಅವು ಮೊಬೈಲ್‌ ನಂಬರ್‌ ರೀತಿಯಲ್ಲಿವೆ ಎಂದು ತಿಳಿದುಬಂದಿದೆ.

ಪರಪ್ಪನ ಅಗ್ರಹಾರಕ್ಕೆ...
ಕೆಜಿಎಫ್: ಅಕ್ರಮ ಲಾಟರಿ ದಂಧೆಯಲ್ಲಿ ಬಂಧಿತನಾಗಿರುವ ಪಾರಿರಾಜನ್‌ನನ್ನು ಸೋಮವಾರ ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಯಿತು.

ಎದೆನೋವು ಮತ್ತು ಅಧಿಕ ರಕ್ತದೊತ್ತಡದಿಂದ ಪಾರಿರಾಜನ್‌ ನರಳುತ್ತಿದ್ದು, ಆತನಿಗೆ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾಗಿದೆ ಎಂದು ರಾಬರ್ಟಸನ್‌ಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಶಿಫಾರಸು ಮಾಡಿದ್ದಾರೆ. ನಿನ್ನೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದ ಈತನನ್ನು ಇಲ್ಲಿನ ವಿಶೇಷ ಕಾರಾಗೃಹದಲ್ಲಿ ಇಡಲಾಗಿತ್ತು.

ಬೆಂಗಳೂರಿನ ಜೈಲಿಗೆ ಕರೆದುಕೊಂಡು ಹೋಗಿ ಬಿಡಲಾಗುವುದು. ನಂತರ ಅಲ್ಲಿನ ಜೈಲಿನ ಅಧಿಕಾರಿಗಳು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುತ್ತಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT