ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆ ರೇಸ್‌ಗಿಲ್ಲದ ನಿಷೇಧ ಕಂಬಳಕ್ಕೆ ಯಾಕೆ...?

Last Updated 15 ನವೆಂಬರ್ 2014, 11:00 IST
ಅಕ್ಷರ ಗಾತ್ರ

ಉಡುಪಿ: ಕಂಬಳವನ್ನು ನಿಷೇಧಿಸಿರುವುದು ಕರಾವಳಿಯ ಕಂಬಳ ಪ್ರಿಯರಲ್ಲಿ ತೀವ್ರ ನಿರಾಸೆ ಮೂಡಿಸಿದೆ. ನವೆಂಬರ್‌ನಿಂದ ಮಾರ್ಚ್‌ ವರೆಗೆ ವಿವಿಧ ದಿನಾಂಕಗಳಂದು ಬೇರೆ ಬೇರೆ ಸ್ಥಳಗಳಲ್ಲಿ ನಡೆಯುತ್ತಿದ್ದ ಕಂಬಳ ಕರಾವಳಿ­ಗರಿಗೆ ಭರಪೂರ ಮನರಂಜನೆ ನೀಡುತ್ತಿತ್ತು. ಪ್ರವಾಸಿಗರನ್ನೂ ಸೆಳೆಯುತ್ತಿತ್ತು. ನಾನೂರು ವರ್ಷಗಳ ಇತಿಹಾಸ ಇರುವ ಕಂಬಳ ಸಾಂಪ್ರದಾಯಿಕ ರೀತಿಯಲ್ಲಿ ಮುಂದುವರೆಯಲಿ ಎಂಬುದು ಎಲ್ಲರ ಆಶಯವಾಗಿದೆ.

‘ಕಂಬಳ ಕೃಷಿಕರ ಜಾನಪದ ಕ್ರೀಡೆಯಾಗಿದ್ದು ಇದಕ್ಕೆ ನಿಷೇಧ ಹೇರುವುದು ಸರಿಯಲ್ಲ. ಪ್ರಾಣಿ ಹಿಂಸೆ ತಡೆಯಲು ನಿಷೇಧ ಮಾಡಿ ಎಂದು ನ್ಯಾಯಾ­ಲಯ ಹೇಳಿದೆ. ಆದರೆ ಕುರಿ, ಆಡುಗಳನ್ನು ಆಹಾರದ ಉದ್ದೇಶಕ್ಕಾಗಿ ಕೊಲ್ಲಲಾಗುತ್ತದೆ. ಹಾಗೆ ನೋಡಿದರೆ ಕುದುರೆ ರೇಸ್‌ನಲ್ಲಿ ಸಹ ಸವಾರ ಕುದುರೆಯನ್ನು ಹೊಡೆದು ಹಿಂಸಿಸುತ್ತಾನೆ. ಕುದುರೆ ರೇಸ್‌ಗೆ ಇಲ್ಲದ ನಿಷೇಧ ಕಂಬಳಕ್ಕೆ ಯಾಕೆ’ ಎಂದು ಪ್ರಶ್ನಿಸುತ್ತಾರೆ ಕಂಬಳ ತೀರ್ಪುಗಾರ ವಿಜಯ ಕುಮಾರ್‌ ಕಂಗಿನಮನೆ.

‘ದಶಕಗಳ ಹಿಂದೆ ಕಂಬಳ ಸಂಪೂರ್ಣವಾದ ಗ್ರಾಮೀಣ ಕ್ರೀಡೆಯಾಗಿತ್ತು. ಕೃಷಿಕರು ಮನ­ರಂಜನೆ­ಗಾಗಿ ಕಂಬಳದಲ್ಲಿ ಪಾಲ್ಗೊಳ್ಳುತ್ತಿದ್ದರು. ಆಗ ಕೋಣಗಳಿಗೆ ಹಿಂಸೆ ನೀಡುತ್ತಿರಲಿಲ್ಲ. ಈಗ ಸ್ವಲ್ಪ ಬದಲಾವಣೆ ಆಗಿರುವುದು ನಿಜ, ಆದರೆ ಹಿಂದಿನ ಹಾಗೆಯೇ ಕಂಬಳ ಮುಂದುವರೆ­ಯಬೇಕು’ ಎಂದು ಅವರು ಹೇಳುತ್ತಾರೆ.

‘ಕರಾವಳಿಯ ಜಾನಪದ ಕ್ರೀಡೆಯಾಗಿರುವ ಕಂಬಳವನ್ನು ನಿಷೇಧ ಮಾಡುವುದು ಸರಿ­ಯಲ್ಲ. ನೂರಾರು ಜನರು ಕಂಬಳವನ್ನೇ ನಂಬಿ­ಕೊಂಡು ಜೀವನ ನಡೆಸುತ್ತಿದ್ದಾರೆ. ನಿಷೇಧ­ವಾದರೆ ಬಡವರು ಮತ್ತು ಶ್ರೀಮಂತರು ಇಬ್ಬರಿಗೂ ತೊಂದರೆ ಆಗಲಿದೆ. ಆದ್ದರಿಂದ ಕಂಬಳವನ್ನು ಹಿಂದಿನ ಹಾಗೆಯೇ ಮುಂದುವರೆಸಿಕೊಂಡು ಹೋಗಬೇಕು’ ಎನ್ನುತ್ತಾರೆ ಕಂಬಳ ಓಟಕ್ಕಾಗಿ ಕ್ರೀಡಾರತ್ನ ಪ್ರಶಸ್ತಿ ಪಡೆದಿರುವ ದೇವೇಂದ್ರ ಕೋಟ್ಯಾನ್‌.

ಈ ವರ್ಷದ ಕಂಬಳವಂತೂ ನಡೆಯ­ದಿರುವುದು ಖಚಿತವಾಗಿದೆ. ಕಂಬಳ ನಡೆಯ­ಬೇಕು ಎಂದರೆ ಮತ್ತೆ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದು ಅನಿವಾರ್ಯ. ನ್ಯಾಯಾ­ಲಯದಲ್ಲಿ ಅರ್ಜಿ ಸಲ್ಲಿಸಿದರೂ ಅದು ಇತ್ಯರ್ಥವಾಗಲು ಸಮಯ ಬೇಕಾಗುತ್ತದೆ. ನ್ಯಾಯಾಲಯ ರಿಯಾಯಿತಿ ನೀಡಿದರೆ ಮಾತ್ರ ಕಂಬಳದ ವೈಭವ ಮತ್ತೆ ನೋಡಲು ಸಿಗಲಿದೆ.

ನಿಲ್ಲಬಾರದು..
‘ದಶಕಗಳ ಹಿಂದೆ ಕಂಬಳ ಸಂಪೂರ್ಣವಾದ ಗ್ರಾಮೀಣ ಕ್ರೀಡೆ­ಯಾಗಿತ್ತು. ಕೃಷಿಕರು ಮನ­ರಂಜನೆಗಾಗಿ ಕಂಬಳದಲ್ಲಿ ಪಾಲ್ಗೊ­ಳ್ಳು­ತ್ತಿ­ದ್ದರು. ಆಗ ಕೋಣಗಳಿಗೆ ಹಿಂಸೆ ನೀಡುತ್ತಿರ­ಲಿಲ್ಲ. ಈಗ ಸ್ವಲ್ಪ ಬದಲಾವಣೆ ಆಗಿರುವುದು ನಿಜ, ಆದರೆ ಹಿಂದಿನ ಹಾಗೆಯೇ ಕಂಬಳ ಮುಂದುವರೆಯಬೇಕು, ಯಾವುದೇ ಕಾರಣಕ್ಕೂ ನಿಲ್ಲಬಾರದು’
-ವಿಜಯ ಕುಮಾರ್‌, ಕಂಬಳ ತೀರ್ಪುಗಾರ

‘ನೂರಾರು ಜನರು ಕಂಬಳವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ನಿಷೇಧವಾದರೆ ಬಡವರು ಮತ್ತು ಶ್ರೀಮಂತರಿಗೂ ತೊಂದರೆ ಆಗಲಿದೆ. ಆದ್ದರಿಂದ ಕಂಬಳವನ್ನು ಹಿಂದಿನ ಹಾಗೆಯೇ ಮುಂದುವರೆಸಿಕೊಂಡು ಹೋಗಬೇಕು’
-ದೇವೇಂದ್ರ ಕೋಟ್ಯಾನ್‌, ಕಂಬಳ ಓಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT