ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಪ್ಪಳಿ ‘ಕವಿಮನೆ’ ಕಳವು ಮತ್ತು ಶೇಕ್ಸ್‌ಪಿಯರ್‌ನ ‘ಫಸ್ಟ್ ಫೊಲಿಯೊ’

Last Updated 12 ಡಿಸೆಂಬರ್ 2015, 19:36 IST
ಅಕ್ಷರ ಗಾತ್ರ

ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಸಮಾಜಕ್ಕೆ ಇರುವ ಕುತೂಹಲ ಹಲವು ಸಾಹಸಗಳಿಗೆ, ವಾಮ ಮಾರ್ಗದ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತದೆ ಎನ್ನುವುದಕ್ಕೆ ಶೇಕ್ಸ್‌ಪಿಯರ್‌ನ ‘ಫಸ್ಟ್ ಫೊಲಿಯೊ’ ಸಂಪುಟ ಉತ್ತಮ ಉದಾಹರಣೆ. ಜಗತ್ತಿಗೆ ಶೇಕ್ಸ್‌ಪಿಯರ್‌ನ ಸಾಹಿತ್ಯವನ್ನು ಪರಿಚಯಿಸಿದ ಹಿರಿಮೆ ಮಾತ್ರವಲ್ಲದೆ, ಆತನ ಮುಖಚಹರೆಯನ್ನು ನಮಗೆ ನೀಡಿದ ‘ಫಸ್ಟ್ ಫೊಲಿಯೊ’ ಹಿಂದೆ ಹಲವು ರೋಚಕ ಕಥನಗಳಿವೆ. ನಿಧಿಯನ್ನು ಬೆನ್ನಟ್ಟುವ ಖದೀಮರ ಸಾಹಸಗಳನ್ನು ನೆನಪಿಸುವ ಹಲವು ಕಥನಗಳ ಕಥನ ಇಲ್ಲಿದೆ. ಅಂದಹಾಗೆ, ಭಾರತದ ಎಪ್ಪತ್ತನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭಕ್ಕೆ ‘ಫಸ್ಟ್ ಫೊಲಿಯೊ’ ಸಂಪುಟ ಜೊತೆಯಾಗಲಿದೆ.

ಕುಪ್ಪಳಿಯಲ್ಲಿನ ಕುವೆಂಪು ಸ್ಮಾರಕ ‘ಕವಿಮನೆ’ಯಲ್ಲಿ ಇತ್ತೀಚೆಗೆ ನಡೆದ ಕಳ್ಳತನದ ಘಟನೆ ಅನೇಕರನ್ನು ಆತಂಕಕ್ಕೊಳಗಾಗಿಸಿದೆ. ಇದರ ಹಿಂದೆ ಕಾಣದ ಮುಖಗಳು ಇರಬಹುದೇನೊ ಎಂಬ ಸಂಶಯವನ್ನು ಕೆಲವರಲ್ಲಿ ಮೂಡಿಸಿದ್ದರೆ ಆಶ್ಚರ್ಯವೇನಿಲ್ಲ. ಕುಪ್ಪಳಿಯ ‘ಅನಿಕೇತನ’ಕ್ಕೆ ಧುಮುಕಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವ ಸುದ್ದಿ ಊಹಾಪೋಹಗಳಿಗೆ ಸದ್ಯಕ್ಕೆ ಪೂರ್ಣ ವಿರಾಮ ಹಾಕಿದೆ. ‘ಕವಿಮನೆ’ ಘಟನೆಯನ್ನು ಹಿನ್ನೆಲೆಯಲ್ಲಿ ಇಂಥ ಸಾಂಸ್ಕೃತಿಕ ಕಳ್ಳತನದ ಘಟನೆಗಳು ವಿಶ್ವದ ಬೇರೆ ಕಡೆಗಳಲ್ಲಿ ನಡೆದಿವೆಯೇ ಎಂದು ತಡಕಾಡಿದರೆ ಅನೇಕ ರೋಚಕ ಕಥೆಗಳು ಎಡತಾಕುತ್ತವೆ.

ವಿಶ್ವವಿಖ್ಯಾತ ವರ್ಣಚಿತ್ರಗಳ ಕಳ್ಳತನ, ಸ್ಮಗ್ಲಿಂಗ್‌ಗಳ ಬಗ್ಗೆ ಬರಹಗಳಿವೆ. ಇಂಥ ಘಟನೆಗಳನ್ನು ಆಧರಿಸಿದ ಸಿನಿಮಾಗಳೂ ಇವೆ. ಆದರೆ ಕವಿಯೊಬ್ಬನ/ ನಾಟಕಕಾರನೊಬ್ಬನ ಪುಸ್ತಕವೊಂದರ ಹಿಂದೆ ನೂರಾರು ಜನ ಬಿದ್ದಿದ್ದಾರೆ ಎನ್ನುವುದನ್ನು ಬಲ್ಲಿರಾ? ನಾಲ್ಕು ಶತಮಾನಗಳ ಹಿಂದಿನ ಆ ಪುಸ್ತಕಕ್ಕೆ ಇರುವ ಇಂದಿನ ಮಾರುಕಟ್ಟೆ ಬೆಲೆ ಸುಮಾರು 50 ಕೋಟಿ ರೂಪಾಯಿ! ಆ ಕೃತಿ ಬೇರೆ ಯಾವುದೂ ಅಲ್ಲ– ಜಗತ್ತಿನ ಶ್ರೇಷ್ಠ ನಾಟಕಕಾರ/ ಕವಿ ಎಂದು ಹಲವರಿಂದ ಕರೆಯಿಸಿಕೊಳ್ಳುವ ವಿಲಿಯಂ ಶೇಕ್ಸ್‌ಪಿಯರ್‌ನ 36 ನಾಟಕಗಳ ಮೊದಲ ಸಂಪುಟ ‘ಫಸ್ಟ್ ಫೊಲಿಯೊ’!

1564ರಲ್ಲಿ ಜನಿಸಿ 1616ರಲ್ಲಿ ಮರಣ ಹೊಂದಿದ ಈ ಮಹಾಕವಿ ತನ್ನ 154 ಸಾನೆಟ್ ಮತ್ತು 38 ನಾಟಕಗಳ ಮೂಲಕ ಪ್ರತಿದಿನ ಹೊಸಹುಟ್ಟ ಪಡೆಯುತ್ತಲೇ ಇದ್ದಾನೆ. ನಾಲ್ಕು ಶತಮಾನಗಳನ್ನು ದಾಟಿ, ಜಗತ್ತಿನ ಮೂಲೆ ಮುಡುಕುಗಳಲ್ಲೂ ನಗುವ ಶೇಕ್ಸ್‌ಪಿಯರ್ ಜಗತ್ತಿನ ಬಹುತೇಕ ಭಾಷೆಗಳಲ್ಲಿ ಅನುವಾದಗೊಂಡಿದ್ದಾನೆ. ಇಂಗ್ಲಂಡ್ ದೇಶಕ್ಕೆ ಆತ ಅಗಾಧ ಸಂಪತ್ತು, ಹಿರಿಮೆ ಮತ್ತು ಗರ್ವ. ಇಂತಹ ಜಾಗತಿಕ ಸಾಹಿತ್ಯದ ಅರಸ ಶೇಕ್ಸ್‌ಪಿಯರ್ ತನ್ನ ಜೀವಿತಾವಧಿಯಲ್ಲಿ ತಾನು ಬರೆದ ನಾಟಕಗಳನ್ನು ಪ್ರಕಟಿಸಿಯೇ ಇರಲಿಲ್ಲ ಎನ್ನುವುದು ಒಂದು ಸೋಜಿಗ. ಸಣ್ಣ ನಾಟಕ ಕಂಪೆನಿಯೊಂದಿಗೆ ತನ್ನ ಕಲಾ ಬದುಕನ್ನು ಶುರು ಮಾಡಿದ ಶೇಕ್ಸ್‌ಪಿಯರ್, ನಂತರದಲ್ಲಿ ಬೃಹತ್ತಾಗಿ ಬೆಳೆದು ಸ್ಟ್ರಾಟ್‌ಫೋರ್ಡ್‌ನಲ್ಲಿ ಅತಿ ದುಬಾರಿ ಮನೆಯನ್ನು ಖರೀದಿಸಿದ್ದ.

ನಟನಾಗಿ, ಕವಿಯಾಗಿ, ನಾಟಕಕಾರನಾಗಿ, ನಾಟಕ ಕಂಪೆನಿಯ ಮಾಲೀಕನಾಗಿ ಬಹು ಎತ್ತರಕ್ಕೆ ಬೆಳೆದರೂ ಆತ ತನ್ನ ನಾಟಕಗಳನ್ನು ಪ್ರಕಟಿಸಿಯೇ ಇರಲಿಲ್ಲ! 15–16ನೇ ಶತಮಾನದಲ್ಲಿ ಪುಸ್ತಕೋದ್ಯಮ ಅಷ್ಟಾಗಿ ಬೆಳೆಯದೇ ಇದ್ದ ಕಾರಣವೋ ಏನೋ ನಮ್ಮ ಈ ಬಾರ್ಡ್ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ. ಆದರೆ ಆತನ ಜೀವಿತಾವಧಿಯಲ್ಲಿಯೇ ಕೈ ಬರಹದ ಪ್ರತಿಗಳಿಗೆ ಬೇಡಿಕೆಯಿತ್ತು. ಅದರಲ್ಲೂ ಶೇಕ್ಸ್‌ಪಿಯರ್‌ನ ಹಸ್ತಪ್ರತಿಗಳನ್ನು (Quartoss) ಹೊಂದಲು ಕಂಪೆನಿಗಳ ನಡುವೆ ತೀವ್ರ ಸ್ಪರ್ಧೆಯಿತ್ತು. ನಾಟಕದ ತಾಲೀಮಿಗಾಗಿ ಬಳಸುತ್ತಿದ್ದ ಈತನ ಕೈ ಬರಹದ ಪ್ರತಿಗಳನ್ನು ಕದ್ದು ತರಲು ಕೆಲವು ಕಂಪೆನಿಗಳು ಕಳ್ಳರನ್ನು ನೇಮಿಸುತ್ತಿದ್ದವಂತೆ. ಹೀಗಾಗಿಯೇ ಇರಬೇಕು, ಶೇಕ್ಸ್‌ಪಿಯರ್‌ನ ಕೈ ಬರಹದಲ್ಲಿದ್ದ ಕೆಲವು ಪ್ರತಿಗಳು ಸಿಗದೆ ಮಾಯವಾದವು.  

ಸೃಜನಶೀಲ ಕೃತಿಗಳು ಪ್ರಕಟವಾಗುವುದೇ ಅಪರೂಪವಾಗಿದ್ದ ಕಾಲಘಟ್ಟದಲ್ಲಿ ‘ಹಕ್ಕುಸ್ವಾಮ್ಯ’ (ಕಾಪಿರೈಟ್) ಎನ್ನುವ ಚಿಂತನೆಯೇ ಹುಟ್ಟಿರಲಿಲ್ಲ. ವೈಚಾರಿಕ ಬರಹಗಳ, ತತ್ವಶಾಸ್ತ್ರದ ಪುಸ್ತಕಗಳು ಮಾತ್ರ ಪ್ರಕಟವಾಗುತ್ತಿದ್ದ ಆ ಸಮಯದಲ್ಲಿ ಶೇಕ್ಸ್‌ಪಿಯರ್ ತನ್ನ ನಾಟಕಗಳನ್ನು ಪ್ರಕಟಿಸಲು ಮನಸ್ಸು ಮಾಡದಿದ್ದುದು ಆಶ್ಚರ್ಯವೇನಲ್ಲ. ಲಂಡನ್ ನಗರದ ಸುತ್ತಮುತ್ತ ಭರ್ಜರಿ ಆಸ್ತಿ ಮಾಡಿಕೊಂಡಿದ್ದ ಆತ ತನ್ನ ಮೂರು ಮಕ್ಕಳಿಗೆ ಆಸ್ತಿಯನ್ನು ಹಂಚಿ, ನಾಟಕಗಳ ಹಕ್ಕನ್ನು ತನ್ನ ಕಂಪೆನಿಯ ನಟರೂ ಒಡನಾಡಿ ಗೆಳೆಯರೂ ಆದ ಜಾನ್ ಹೆಮ್ಮಿಂಗ್ಸ್ ಮತ್ತು ಹೆನ್ರಿ ಕಾಂಡೆಲ್ ಎನ್ನುವವರಿಗೆ ನೀಡಿದ್ದ.

ಶೇಕ್ಸ್‌ಪಿಯರ್ ತೀರಿಹೋದ ಎಂಟು ವರ್ಷಕ್ಕೆ ಈ ಪ್ರಾಣ ಸ್ನೇಹಿತರು ನಡೆಸಿದ ಸಾಹಸದಿಂದಲೇ ಪ್ರಸ್ತುತ ನಮಗೆ ಆತ ದಕ್ಕಿರುವುದು! ಶೇಕ್ಸ್‌ಪಿಯರ್‌ನ 36 ನಾಟಕಗಳ ಒಂದು ಸಂಪುಟವನ್ನು ಈ ಇಬ್ಬರು ಸಂಪಾದಿಸಿ ಮೊದಲ ಬಾರಿಗೆ ಪ್ರಕಟಿಸಿದರು. ಸೃಜನಶೀಲ ಪುಸ್ತಕಗಳ ಪ್ರಕಟಣೆ ಒಂದು ದುಸ್ಸಾಹಸ ಎನ್ನುವ ಕಾಲಘಟ್ಟದಲ್ಲಿ ಈ ಇಬ್ಬರು ತಮ್ಮ ಗೆಳೆಯನ ಮೇಲಿದ್ದ ಅಗಾಧ ಪ್ರೀತಿಯ ದ್ಯೋತಕವೆನ್ನುವಂತೆ ಪ್ರಕಟಣೆಯ ಸಾಹಸದಲ್ಲಿ ತೊಡಗಿಕೊಂಡು, ಲಂಡನ್‌ನ ಅಂದಿನ ಪುಸ್ತಕೋದ್ಯಮಿಗಳಾದ ಎಡ್ವರ್ಡ್ ಬ್ಲೌಂಟ್ ಮತ್ತು ವಿಲಿಯಂ ಅವರ ಸಹಕಾರದಿಂದ ಶೇಕ್ಸ್‌ಪಿಯರ್‌ನ 36 ನಾಟಕಗಳ ಸಂಪುಟವನ್ನು ಹೊರತಂದರು. 14 ಇಂಚ್ ಉದ್ದ, 9 ಇಂಚ್ ಅಗಲ ಹಾಗೂ 3 ಇಂಚ್ ದಪ್ಪದ 908 ಪುಟಗಳ ಮೊದಲ ಸಂಪುಟ 1623ರಲ್ಲಿ ಹೊರಬಂದಿತು.

ಈ ಗಜಗಾತ್ರದ, ಶೇಕ್ಸ್‌ಪಿಯರ್‌ನ ಮೊದಲ ಪ್ರಕಟಿತ ನಾಟಕ ಸಂಪುಟವನ್ನು ಇಂಗ್ಲಿಷ್ ಸಾಹಿತ್ಯ ವಲಯದಲ್ಲಿ ‘ಫಸ್ಟ್ ಫೊಲಿಯೊ’ (First Folio) ಎಂದು ಕರೆಯಲಾಗುತ್ತದೆ. ‘Mr. William Shakespeare’s Comedies, Histories & Tragidies’ ಎನ್ನುವ ಶೀರ್ಷಿಕೆಯಲ್ಲಿ, ಮೂರು ವಿಭಾಗಗಳಲ್ಲಿ ಪ್ರಕಟವಾದ ಈ ‘ಫಸ್ಟ್ ಫೊಲಿಯೊ’ವನ್ನು ಹೊಂದುವುದು ಒಂದು ಹಿರಿಮೆಯಾಗಿ, ಅಂತಸ್ತು-ಘನತೆಯ ವಿಚಾರವಾಗಿ ಅಂದು ಪರಿಗಣಿಸಲಾಗಿತ್ತು. ಇಂದಿಗೂ ಅದರ ಆಕರ್ಷಣೆ ಕಡಿಮೆಯಾಗಿಲ್ಲ. ಅತಿ ಶ್ರೀಮಂತರಿಗೆ ಅದೊಂದು ಖಯಾಲಿ. ಹಾಗಾಗಿಯೇ ಶೇಕ್ಸ್‌ಪಿಯರ್‌ನ ‘ಫಸ್ಟ್ ಫೊಲಿಯೊ’ ಹಿಂದೆ ಅದೆಷ್ಟೋ ಮಂದಿ ಈಗಲೂ ಅಲೆಯುತ್ತಿದ್ದಾರೆ. ಶೇಕ್ಸ್‌ಪಿಯರ್ ನಾಟಕಗಳ ಈ ಮೊದಲ ಸಂಪುಟದ ಪ್ರಕಟಣೆಯ ನಂತರ 1632ರಲ್ಲಿ ‘ಸೆಕೆಂಡ್ ಫೊಲಿಯೊ’, 1664ರಲ್ಲಿ ‘ಥರ್ಡ್ ಫೊಲಿಯೊ’ ಹಾಗೂ 1685ರಲ್ಲಿ ‘ಫೋರ್ಥ್ ಫೊಲಿಯೊ’ ಪ್ರಕಟಗೊಂಡಿದ್ದರೂ ‘ಫಸ್ಟ್ ಫೊಲಿಯೊ’  ಮೇಲೆಯೇ ಕೆಲವರಿಗೆ ಹುಚ್ಚು. ಕೆಲವು ಶ್ರೀಮಂತರ ಹುಚ್ಚಿನ ಕಾರಣವಾಗಿ ‘ಫಸ್ಟ್ ಫೊಲಿಯೊ’ದ ಬೇಟೆ ನಿರಂತರವಾಗಿ ನಡೆಯುತ್ತಲೇ ಇದೆ.

‘ಫಸ್ಟ್‌ ಫೊಲಿಯೊ’ದ ಸುಮಾರು 750–1000 ಪ್ರತಿಗಳು ಪ್ರಕಟಗೊಂಡಿವೆ. ಪ್ರತಿಯೊಂದರ ಬೆಲೆ ಒಂದು ಪೌಂಡ್ (ಸುಮಾರು 70 ರೂ). ಆ ಕಾಲದಲ್ಲದು ದುಬಾರಿ! ಅಂದು ಬಹುಶ್ರೀಮಂತನೊಬ್ಬನ ವಾರ್ಷಿಕ ವರಮಾನವೇ 4 ಪೌಂಡ್! ಹೀಗಾಗಿ ಸಂಪುಟ ಪ್ರಕಟಗೊಂಡಾಗ ಅದನ್ನು ಬೆರಳಣಿಕೆಯ ಜನ ಮಾತ್ರ ಖರೀದಿಸಿದ್ದರಿಂದ ಪ್ರಕಾಶಕರು ಭಾರೀ ನಷ್ಟ ಅನುಭವಿಸಿದರು. ಸಾವಿರ ಪ್ರತಿಗಳಲ್ಲಿ ಇಂದು ಉಳಿದಿರುವುದು, ಅಥವಾ ಬೆಳಕಿಗೆ ಬಂದಿರುವುದು ಕೇವಲ 233 ಮಾತ್ರ. ಮತ್ತು ಆ 233 ಪ್ರತಿಗಳಲ್ಲಿ ಎಲ್ಲಾ ಪುಟಗಳನ್ನು ಹೊಂದಿರುವ ಸಂಪುಟಗಳು ಕೇವಲ 40!

‘ಫಸ್ಟ್‌ ಫೊಲಿಯೊ’ ಕೃತಿಗಳನ್ನು ಹರಾಜಿನಲ್ಲಿಟ್ಟು ದುಡ್ಡು ಮಾಡಿಕೊಂಡವರು ಇದ್ದಾರೆ. ಅದನ್ನು ಕಳ್ಳತನದಲ್ಲಿ ಹೊಂದಲು ದುಡ್ಡು ಕಳೆದುಕೊಂಡವರೂ ಇದ್ದಾರೆ! ಶೇಕ್ಸ್‌ಪಿಯರ್ ಎಂಬ ಬರಹಗಾರನೊಬ್ಬನ ಚಿನ್ನದ ಮೊಟ್ಟೆಯಿಡುವ ಪುರಾತನ ಪುಸ್ತಕವನ್ನು ಹೇಗಾದರೂ ಹೊಂದಿ ದಿಢೀರನೆ ಕೋಟ್ಯಧಿಪತಿ ಆಗಿಬಿಡಬೇಕೆಂಬ ಕನಸು ಕಾಣುತ್ತ ಅದೆಷ್ಟೊ ಮಂದಿ ಇಂದಿಗೂ ಶತಪ್ರಯತ್ನ ಮಾಡುತ್ತ ತಿರುಗುತ್ತಿದ್ದಾರೆ! ಇವರೆಲ್ಲರಿಗೆ ಕಿಕ್ ನೀಡುವಂತಹ ಘಟನೆಯೊಂದು 2001ರಲ್ಲಿ ನಡೆಯಿತು. ‘ಮೈಕ್ರೊಸಾಫ್ಟ್’ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬನಾದ ಪಾಲ್ ಅಲೆನ್ ಈ ‘ಫಸ್ಟ್ ಫೊಲಿಯೊ’ದ ಪ್ರತಿಯೊಂದನ್ನು 60 ಲಕ್ಷ ಡಾಲರ್ (ಸುಮಾರು 40 ಕೋಟಿ ರೂಪಾಯಿ) ಕೊಟ್ಟು ಖರೀದಿಸಿದ. 2002ರಲ್ಲಿ ಮತ್ತೊಬ್ಬ ‘ದೊಡ್ಡಣ್ಣ’ ಸರ್ ಪಾಲ್ ಗೇಟಿ ಎನ್ನುವ ಉದ್ಯಮಿ 70 ಲಕ್ಷ ಡಾಲರ್ ನೀಡಿ ‘ಫಸ್ಟ್ ಫೊಲಿಯೊ’ ಕೃತಿಯನ್ನು ತನ್ನದಾಗಿಸಿಕೊಂಡು ಬೀಗಿದ! ಪ್ರಕಟಣೆಗೊಂಡ ವೇಳೆಯಲ್ಲಿ ತನ್ನ ಪ್ರಕಾಶಕನಿಗೆ ನಷ್ಟ ನೀಡಿದ ಪುಸ್ತಕವೊಂದು ಕಾಲಾನುಕ್ರಮದಲ್ಲಿ ಜಗತ್ತಿನ ಅತಿ ದುಬಾರಿ ಪುಸ್ತಕ ಎನಿಸಿಕೊಳ್ಳುವುದು ಕಾಲದ ಒಂದು ವ್ಯಂಗ್ಯ!

ಶೇಕ್ಸ್‌ಪಿಯರ್‌ನ ‘ಫಸ್ಟ್ ಫೊಲಿಯೊ’ವನ್ನು ಕದಿಯುವ, ಕದ್ದು ಸ್ಮಗ್ಲಿಂಗ್ ಮಾಡುವ ಭೂಗತ ಚಟುವಟಿಕೆಗಳೂ ಎಗ್ಗಿಲ್ಲದೆ ನಡೆಯುತ್ತಿವೆ. ಇಂಗ್ಲೆಂಡ್‌ನಿಂದ ಹೊರಟ ಇದರ ಬೇಟೆ ಯುರೋಪ್ ಗಡಿಯನ್ನು ದಾಟಿ ಅಮೆರಿಕಾ, ಏಷ್ಯಾ ಎಂದು ಓಡುತ್ತಲೇ ಇದೆ. ಆಕ್ಸ್‌ಫರ್ಡ್, ಡರ್ಹಾಂ ಮುಂತಾದ ಕೆಲವು ವಿಶ್ವವಿದ್ಯಾಲಯಗಳ ಲೈಬ್ರರಿಗಳು ಜತನದಂತೆ ಕಾಯುತ್ತಿದ್ದ ಪ್ರತಿಗಳನ್ನು ಸಿಬ್ಬಂದಿಗಳ ಕಣ್ತಪ್ಪಿಸಿ ಖದೀಮರು ಎಗರಿಸಿಕೊಂಡು ಹೋದ ಉದಾಹರಣೆಗಳೂ ಇವೆ. 1635–1674ರಲ್ಲೇ ಆಕ್ಸ್‌ಫರ್ಡ್ ವಿ.ವಿಯ ಲೈಬ್ರರಿಯಿಂದ ಯಾರೋ ಇದರ ಪ್ರತಿಯೊಂದನ್ನು ಲಪಟಾಯಿಸಿದ್ದರು. 1998ರಲ್ಲಿ ಡರ್ಹಾಂ ವಿ.ವಿಯ ಲೈಬ್ರರಿಯಿಂದ ಮತ್ತೊಂದು ಪ್ರತಿಯನ್ನು ಕದಿಯಲಾಗಿತ್ತು.

ಇಷ್ಟು ಮಾತ್ರವಲ್ಲದೆ, ಇದರ ನಕಲಿ ಪ್ರತಿಯನ್ನು ಸೃಷ್ಟಿಸಿ ಮಾರಿರುವ ಖತರ್‌ನಾಕ್ ಕಳ್ಳರೂ ಇದ್ದಾರೆ. ಹಾಗೆಯೇ, ಇದರ ಹತ್ತಿಪ್ಪತ್ತು ಪುಟಗಳನ್ನಿಟ್ಟುಕೊಂಡೇ ಆಟವಾಡಿದ ಮಹನೀಯರೂ ಇದ್ದಾರೆ. ಇವರಲ್ಲೊಬ್ಬ ಚಾಲಾಕಿ ಕಳ್ಳ ತನ್ನ ಬಳಿ ಇರುವ ‘ಫಸ್ಟ್ ಫೊಲಿಯೊ’ದ ಪ್ರತಿಯನ್ನು ಬ್ಯಾಂಕ್‌ನವರನ್ನು ನಂಬಿಸಿ, ಲಕ್ಷಗಟ್ಟಲೆ ಸಾಲ ಪಡೆದು ಮಜಾ ಮಾಡಿದ್ದ. ಸಾಲ ವಸೂಲಾತಿಗೆ ಬ್ಯಾಂಕ್‌ನವರು ಬಂದಾಗ ತನ್ನ ಪುಸ್ತಕವನ್ನು ಮಾರಿ ಸಾಲ ತೀರಿಸುತ್ತೇನೆಂದು ತನ್ನ ಪ್ರತಿಯನ್ನು ವಾಪಸ್ ಪಡೆದು ಮತ್ತೊಂದು ಬ್ಯಾಂಕ್‌ನಲ್ಲಿ ಅಡವಿಟ್ಟು ಮತ್ತೆ ಹಣ ಪಡೆದಿದ್ದ! ಇಂತಹ ನೂರಾರು ಸ್ವಾರಸ್ಯಕರ ಕಥೆಗಳನ್ನು ಹೊಂದಿರುವ ಶೇಕ್ಸ್‌ಪಿಯರ್‌ನ ‘ಫಸ್ಟ್ ಫೊಲಿಯೊ’ ಕುರಿತು ಕೆಲವರು ಸಂಶೋಧನೆ ನಡೆಸಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ Paul Collins ನ ‘The Book of William: How Shakespeare’s First Folio Conquered the world’ ಪ್ರಮುಖವಾದುದು. ಇಂತಹ ಬರಹಗಳು ಶೇಕ್ಸ್‌ಪಿಯರ್‌ನ ಗಂಭೀರ ಓದುಗರನ್ನು ಸೆಳೆದಷ್ಟೇ ಸಾಮಾನ್ಯ ಓದುಗರನ್ನೂ ಸೆಳೆಯುತ್ತಿವೆ.

ಅಕಡೆಮಿಕ್ ವಲಯದಾಚೆ ಹಬ್ಬಿ ಪತ್ತೇದಾರಿ ಕಥೆಯ ಸ್ವರೂಪ ಪಡೆದುಕೊಳ್ಳುತ್ತಿರುವ ‘ಫಸ್ಟ್ ಫೊಲಿಯೊ’ ಕಳ್ಳಬೇಟೆಯ ವಿವರಗಳು ದಿನದಿನಕ್ಕೆ ಬೆಳೆಯುತ್ತಲೇ ಹೋಗುತ್ತಿವೆ. ಇವುಗಳಲ್ಲಿ 5–6 ವರ್ಷಗಳ ನಿರಂತರ ಸಂಶೋಧನೆ, ಪತ್ತೇದಾರಿಕೆ ನಡೆಸಿ 2011ರಲ್ಲಿ ಹೊರಬಂದ The Shakespeare First Folios: A Desrcriptive Catalogue ಮತ್ತು The Shakespeare Thefts: In search of First Folios ಎಂಬ ಎರಡು ಕೃತಿಗಳು ಮಹತ್ವವಾದವು. ಎರಿಕ್‌ ರಾಸ್‌ಮುಸ್ಸೆನ್ (Eric Rasmussen) ಎಂಬ ವಿದ್ವಾಂಸನ ಮುಂದಾಳತ್ವದಲ್ಲಿ ನಡೆದ ಆ ಅಧ್ಯಯನ First Folio ಕುರಿತಾದ ಮತ್ತಷ್ಟು ಮಾಹಿತಿಗಳ ನೀಡಿತು.

ಪ್ರಸ್ತುತ ಲಭ್ಯವಿರುವ ‘ಫಸ್ಟ್ ಫೊಲಿಯೊ’ಗಳ ಒಡೆಯರ ವಿಳಾಸ ಹಿಡಿದು, ದೇಶ-ವಿದೇಶ ಸುತ್ತಿದ ಎರಿಕ್ ರಾಸ್‌ಮುಸ್ಸೆನ್ ಮತ್ತವನ ತಂಡ ಎದುರಿಸಿದ ತವಕತಲ್ಲಣಗಳನ್ನು ಆ ಪುಸ್ತಕ ನಮ್ಮೆದುರಿಗಿಡುತ್ತದೆ. ಜಪಾನ್ ಉದ್ಯಮಿಯೊಬ್ಬನ ಬಳಿ ‘ಫಸ್ಟ್ ಫೊಲಿಯೊ’ ಪ್ರತಿಯೊಂದು ಇದೆಯೆಂದುಕೊಂಡು ಹೋದರೆ ಆತ ಸತ್ತು 13 ವರ್ಷಗಳು ಕಳೆದಿದ್ದವು. ಆದರೆ ಆ ಪ್ರತಿ ಆ ಮನೆಯಲ್ಲೇ ಇರುವುದು ಖಾತ್ರಿಯಾಗಿ ಅದನ್ನು ತೋರಿಸುವಂತೆ ಕೇಳಿದಾಗ, ನಾಲ್ಕು ಶತಮಾನಗಳಷ್ಟು ಹಳೆಯದಾದ ಆ ಪ್ರತಿಯನ್ನು ಎರಿಕ್‌ಗೆ ತೋರಿಸಲು ಆ ಮನೆಯವರು ನಿರಾಕರಿಸಿದರು! ಇಂತಹ ಹತ್ತಾರು ಸಂಗತಿಗಳ ಜೊತೆಗೆ ‘ಫಸ್ಟ್ ಫೊಲಿಯೊ’ವನ್ನು ದಕ್ಕಿಸಿಕೊಳ್ಳಲು ಶತಮಾನಗಳಿಂದ ಹೆಣಗುತ್ತಲೇ ಇರುವ ಹಲವರ ಸಾಹಸಕಥೆಗಳನ್ನೂ ರಾಸ್‌ಮುಸ್ಸೆನ್ ಹೇಳಿದ್ದಾನೆ.

ಆ ಪುಸ್ತಕವನ್ನು ತಮ್ಮದಾಗಿಸಿಕೊಳ್ಳಲು ಕೆಲವರು ಎಂಥಹ ವಾಮಮಾರ್ಗಗಳಲ್ಲಿ ಯತ್ನಿಸಿದರು ಎನ್ನುವುದನ್ನೂ ಬರೆಯುತ್ತಾನೆ. ಅವುಗಳಲ್ಲಿ ಒಂದು ಹೀಗಿದೆ:

ಇಂಗ್ಲೆಂಡ್ ವಿಶ್ವವಿದ್ಯಾಲಯವೊಂದರ ಲೈಬ್ರರಿಯಲ್ಲಿ ‘ಫಸ್ಟ್ ಫೊಲಿಯೊ’ವನ್ನು ಜನಸಾಮಾನ್ಯರ ಪ್ರದರ್ಶನಕ್ಕೆ ಇಟ್ಟಿರುವುದು ಗೊತ್ತಾಗಿ ಕಳ್ಳರ ಗುಂಪೊಂದು ಅದನ್ನು ಲಪಟಾಯಿಸಲು ಯೋಜನೆ ರೂಪಿಸುತ್ತದೆ. ಮೊದಲು ಲೈಬ್ರರಿಗೆ ಭೇಟಿ ಕೊಟ್ಟು ಪ್ರತಿಯನ್ನು ನೋಡಿಕೊಂಡು ಬರುವ ಕಳ್ಳರ ತಂಡ, ಅದಾದ ಒಂದು ತಿಂಗಳಿಗೆ ‘ಫಸ್ಟ್ ಫೊಲಿಯೊ’ ಬೇಟೆಗೆ ಹೊರಡುತ್ತದೆ. ಮಧ್ಯಾಹ್ನ ಊಟದ ಸಮಯದಲ್ಲಿ ಗ್ರಂಥಾಲಯ ಪ್ರವೇಶಿಸುವ ಈ ತಂಡದ ಒಬ್ಬಾತ ಅತ್ಯಂತ ಗಂಭೀರ ಮುಖಭಾವ ಹೊಂದಿರುತ್ತಾನೆ.

ಅವನ ಜೊತೆ ಇದ್ದ ಉಳಿದ ಮೂವರು, ಕೌಂಟರ್ ಬಳಿ ಹೋಗಿ ಅಮೇರಿಕಾದ ಯೂನಿವರ್ಸಿಟಿಯಿಂದ ಬಹುದೊಡ್ಡ ಪ್ರೊಫೆಸರ್ ಒಬ್ಬರು ‘ಫಸ್ಟ್ ಫೊಲಿಯೊ’ ಅಧ್ಯಯನ ನಡೆಸಲು ಬಂದಿದ್ದು, ಅವರಿಗೆ ಸಹಾಯ ನೀಡುವಂತೆ ಕೇಳಿಕೊಳ್ಳುತ್ತಾರೆ. ಖುಷಿಗೊಂಡ ಸಿಬ್ಬಂದಿ ಅವರನ್ನು ಒಳಗೆ ಕರೆದುಕೊಂಡು ಹೋಗಿ ಲಾಕರ್ ತೆಗೆದು ಪ್ರತಿಯನ್ನು ನೀಡುತ್ತಾರೆ. ಗಂಭೀರ ಅಧ್ಯಯನದಲ್ಲಿ ತೊಡಗಿದ ಪ್ರೊಫೆಸರ್‌ರನ್ನು ಕಂಡು ಹಿಗ್ಗಿದ ಸಿಬ್ಬಂದಿ, ಅಧ್ಯಯನಕ್ಕೆ ಧಕ್ಕೆ ಆಗದಿರಲೆಂದು ಎಲ್ಲರನ್ನೂ ಆ ಕೋಣೆಯಿಂದ ಹೊರಗೆ ಕಳುಹಿಸಿ ತಾವೂ ಹೊರಹೋಗುತ್ತಾರೆ.

ಏಕಾಂತರದಲ್ಲಿ ಸುಮಾರು ಒಂದು ತಾಸಿನ ಅಧ್ಯಯನದ ನಂತರ ಹೊರಬರುವ ಅಮೆರಿಕನ್ ಪ್ರೊಫೆಸರ್, ಲೈಬ್ರರಿಯ ಸಿಬ್ಬಂದಿಗೆ ಧನ್ಯವಾದ ಹೇಳಿ ತಮ್ಮ ಗೆಳೆಯರೊಂದಿಗೆ ಹಿಂತಿರುಗುತ್ತಾರೆ. ‘ಫಸ್ಟ್ ಫೊಲಿಯೊ’ ಮತ್ತೆ ಲಾಕರ್‌ ಸೇರುತ್ತದೆ. ಇದಾದ ಒಂದು ತಿಂಗಳ ನಂತರ ಯಾವುದೋ ಕಾರಣಕ್ಕೆ ಆ ಪ್ರತಿಯನ್ನು ಹೊರತೆಗೆದಾಗಲೇ ‘ಅದೊಂದು ನಕಲಿ ಫಸ್ಟ್ ಫೊಲಿಯೊ!’ ಎನ್ನುವ ಆಘಾತಕಾರಿ ಸತ್ಯ ಬೆಳಕಿಗೆ ಬಂದುದು. ಅಸಲಿ ಪ್ರತಿಯನ್ನು ನಕಲಿ ಅಮೆರಿಕನ್ ಪ್ರೊಫೆಸರ್ ತಂಡ ಲಪಟಾಯಿಸಿತ್ತು.

ಕೊನೆಗೂ ಕಳ್ಳರ ಪತ್ತೆ ಆಗಲೇ ಇಲ್ಲ. ‘ಫಸ್ಟ್ ಫೊಲಿಯೊ’ ಪ್ರಕಟಗೊಂಡ ಸಮಯದಿಂದ ಈವರೆಗೂ ಪ್ರತಿಗಳು ಚಲಿಸಿದ ಹಾದಿಯ ಚುಂಗು ಹಿಡಿದು ನಡೆದ ರಾಸ್‌ಮುಸ್ಸೆನ್ 2008ರಲ್ಲಿ ಶೇಕ್ಸ್‌ಪಿಯರ್‌ನ ಈ ಸಂಪುಟವನ್ನು ಕಾಳಸಂತೆಯಲ್ಲಿ ಮಾರಲು ಯತ್ನಿಸಿದ ಅಮೆರಿಕಾದ ರೇಮಂಡ್ ರಿಕೆಟ್ ಸ್ಕಾಟ್ ಎಂಬ ವ್ಯಕ್ತಿಯನ್ನು ಬಂಧಿಸಲು ಪೊಲೀಸರಿಗೆ ಸಹಾಯ ಮಾಡಿದ. ಪುರಾತನ ವಸ್ತುಗಳ ಬ್ರೋಕರ್ ಎಂದು ಹೇಳಿಕೊಂಡು ತಿರುಗುತ್ತಿದ್ದ ರೇಮಂಡ್ 1998ರಲ್ಲಿ ಡರ್ಹಾಂ ವಿ.ವಿಯಿಂದ ಕದ್ದ ‘ಫಸ್ಟ್ ಫೊಲಿಯೊ’ವನ್ನು ಮಾರಲು ಯತ್ನಿಸಿದಾಗ ಸಿಕ್ಕಿಬಿದ್ದ.

ಹತ್ತು ವರ್ಷಗಳ ಕಾಲ ಆ ಪ್ರತಿ ಸಿಗದೆ ಸುಸ್ತಾಗಿ ಹೋಗಿದ್ದ ವಿ.ವಿ, ಸಿಕ್ಕಿರುವ ಪ್ರತಿಯನ್ನು ಪರಿಶೀಲಿಸುವಂತೆ ರಾಸ್‌ಮುಸ್ಸೆನ್‌ರ ತಂಡವನ್ನು ಕೇಳಿಕೊಂಡಿತು. ವಶಪಡಿಸಿಕೊಂಡ ‘ಫಸ್ಟ್ ಫೊಲಿಯೊ’ ಡರ್ಹಾಂ ವಿ.ವಿಯ ಪ್ರತಿಯೇ ಎಂದು ರಾಸ್‌ಮುಸ್ಸೆನ್ ದೃಢೀಕರಿಸಿದರು. ನ್ಯಾಯಾಲಯ ರೇಮಂಡ್‌ಗೆ ಎಂಟು ವರ್ಷ ಸಜೆ ವಿಧಿಸಿತು. ಜೈಲಿಗೆ ಹೋದ ಎರಡು ವರ್ಷಕ್ಕೆ ಅವನು ತನ್ನ ಸೆಲ್‌ನೊಳಗೆ ಸಂಶಯಾಸ್ಪದವಾಗಿ ಸತ್ತು ಬಿದ್ದಿದ್ದ.

ಜಗತ್ತಿನ ಈ ಅತಿ ದುಬಾರಿ ಸಾಹಿತ್ಯ ಕೃತಿಯ ಹೆಚ್ಚು ಪ್ರತಿಗಳನ್ನು ಹೊಂದಿದವನು ಜಾನ್ ಹ್ಯಾರಿಸ್. 19ನೇ ಶತಮಾನದ ಆರಂಭದಲ್ಲಿ ಜೀವಿಸಿದ್ದ ಈತ ಫೋರ್ಜರಿ ಮಾಡುವುದರಲ್ಲಿ ಎತ್ತಿದ ಕೈ. ಅಸಲಿ ವಸ್ತುಗಳನ್ನು ಯಥಾವತ್‌ ಹೋಲುವ ಥೇಟ್ ನಕಲಿ ವಸ್ತುಗಳನ್ನು ತಯಾರಿಸುತ್ತಿದ್ದ ಹ್ಯಾರಿಸ್ ‘ಫಸ್ಟ್ ಫೊಲಿಯೊ’ ಒಡೆಯರಿಗೆ ಬೇಕಾದವನಾಗಿದ್ದ. ತಮ್ಮ ಬಳಿ ಇರುವ ಅನನ್ಯ ಕೃತಿಯಲ್ಲಿ ಕೆಲವು ಪುಟಗಳು ಮಾಯವಾಗಿವೆ ಎಂದೋ ಹರಿದು ಹೋಗಿದೆ ಎಂದೋ ಇವನನ್ನು ಎಡತಾಕುತ್ತಿದ್ದವರಿಗೆ ಮೋಸ ಮಾಡಿ, ಆ ಕೃತಿಯನ್ನು ತನ್ನದಾಗಿಸಿಕೊಳ್ಳುತ್ತಿದ್ದ. ಈ ‘ಫೋರ್ಜರಿ ಕಿಂಗ್’ ಹತ್ತಿಪ್ಪತ್ತು ಅಸಲಿ ‘ಫಸ್ಟ್ ಫೊಲಿಯೊ’ಗಳಿಗೆ ಒಡೆಯನಾಗಿ ಬೇಗನೇ ಶ್ರೀಮಂತನಾದ! ಇವನ ಕೈಚಳಕ ಕಂಡು ಬೆಚ್ಚಿದ ಇಂಗ್ಲೆಂಡ್‌ ವಿಶ್ವವಿದ್ಯಾಲಯಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳು ತಮ್ಮ ಬಳಿ ಇರುವ ಪ್ರತಿಗಳ ಅಸಲಿತನವನ್ನು ಪರೀಕ್ಷಿಸಿಕೊಂಡವು. ‘ಬ್ರಿಟಿಷ್ ಮ್ಯೂಸಿಯಂ’ ಇವನನ್ನು ಕರೆಯಿಸಿ ಯಾರು ಯಾರಿಗೆ, ಎಷ್ಟೆಷ್ಟು ನಕಲು ಪ್ರತಿಗಳನ್ನು ನೀಡಿದ್ದಾನೆ ಎನ್ನುವುದರ ವಿವರ ಪಡೆದುಕೊಂಡಿತು.

1905ರಲ್ಲಿ ಆಕ್ಸ್‌ಫರ್ಡ್ ವಿ.ವಿಯ ವಿದ್ಯಾರ್ಥಿಯೊಬ್ಬ ತನ್ನ ಮನೆಯ ಪುಸ್ತಕ ಕಪಾಟಿನಲ್ಲಿ ಸಿಕ್ಕ ಶೇಕ್ಸ್‌ಪಿಯರ್‌ನ ‘ಫಸ್ಟ್ ಫೊಲಿಯೊ’ವನ್ನು ಆ ವಿ.ವಿಗೆ ಉಡುಗೊರೆ ಕೊಟ್ಟ. ಆಕ್ಸ್‌ಫರ್ಡ್ ವಿ.ವಿ ಆ ಪ್ರತಿಯನ್ನು ಪರಿಶೀಲನೆಗೆ ಒಡ್ಡಿದಾಗ, 1635– 1674ರ ಅವಧಿಯಲ್ಲಿ ತನ್ನ ಗ್ರಂಥಾಲಯದಿಂದ ಕಾಣೆಯಾಗಿದ್ದ ಪ್ರತಿ ಅದೆನ್ನುವುದು ಬೆಳಕಿಗೆ ಬಂತು! ಜಪಾನ್‌ನ ಒಂದು ವಿ.ವಿ ಹರಾಜಿನಲ್ಲಿ ಭಾಗವಹಿಸಿ ದಶಲಕ್ಷ ಡಾಲರ್‌ಗಳನ್ನು ಕೊಟ್ಟು ‘ಫಸ್ಟ್ ಫೊಲಿಯೊ’ ಪ್ರತಿಯೊಂದನ್ನು ತನ್ನದಾಗಿಸಿಕೊಂಡು ಬೀಗಿತು! ಇವೆಲ್ಲವಕ್ಕಿಂತ ಸ್ವಾರಸ್ಯಕರವಾಗಿರುವ ಸಂಗತಿಯೆಂದರೆ, ಕ್ಯಾಲಿಫೋರ್ನಿಯಾದ ಕೋಟ್ಯಧಿಪತಿ ಇರ್ವಿನ್ ಎನ್ನುವ ವ್ಯಕ್ತಿ, ದಶಲಕ್ಷ ಡಾಲರ್‌ಗಳನ್ನು ತೆತ್ತು ಖರೀದಿಸಿದ್ದ ಈ ಪುಸ್ತಕದ ಪ್ರತಿಯೊಂದನ್ನು ಕ್ಯಾಲಿಫೋರ್ನಿಯಾ ವಿ.ವಿಗೆ ಉಡುಗೊರೆ ಕೊಟ್ಟುಬಿಟ್ಟ! ಜಗತ್ತಿನ ಈ ದುಬಾರಿ ಪುಸ್ತಕಕ್ಕೆ ವ್ಯಯ ಮಾಡಿದ ಹಣವನ್ನು ಲೆಕ್ಕಿಸದೆ ದಾನ ಮಾಡಿದ ಕಾರಣವೇನೆಂದರೆ– ಆ ಬೃಹತ್ ಗಾತ್ರದ ರದ್ದಿ ಪುಸ್ತಕದ ನಾತವನ್ನು ಸಹಿಸಿಕೊಳ್ಳಲು ಅವನಿಗೆ ಸಾಧ್ಯವಾಗಲಿಲ್ಲವಂತೆ!

ಹಲವಾರು ಸ್ವಾರಸ್ಯಕರ ಘಟನೆಗಳನ್ನು ತನ್ನ ಪುಸ್ತಕದಲ್ಲಿ ಹೇಳುವ ರಾಸ್‌ಮುಸ್ಸೆನ್ ಮತ್ತೊಂದು ಆಘಾತಕರ ಸುದ್ದಿಯನ್ನೂ ಕೊಡುತ್ತಾನೆ. ಶೇಕ್ಸ್‌ಪಿಯರ್‌ನ ‘ಫಸ್ಟ್ ಫೊಲಿಯೊ’ ಪ್ರತಿಯನ್ನು ಹೊಂದಿದ ಅನೇಕರು, ಪುಸ್ತಕ ಖರೀದಿಸಿದ ಮರು ವರ್ಷವೇ/ ತಿಂಗಳೇ ಸಾವಿಗೀಡಾಗುತ್ತಿದ್ದರು ಎನ್ನುವ ವಿವರವನ್ನೂ ನೀಡಿದ್ದಾನೆ. ಶೇಕ್ಸ್‌ಪಿಯರ್ ನಾಟಕಗಳ ಈ ಸಂಪುಟವನ್ನು ಮೊದಲ ಬಾರಿಗೆ ಪ್ರಕಟಿಸಿದ ಪ್ರಕಾಶಕರಲ್ಲಿ ಒಬ್ಬನಾದ ವಿಲಿಯಂ 1623ರಲ್ಲಿ ನಿಧನ ಹೊಂದುತ್ತಾನೆ. 1912ರಲ್ಲಿ ಇಂಗ್ಲೆಂಡ್‌ನಿಂದ ಅಮೆರಿಕದ ನ್ಯೂಯಾರ್ಕ್ ನಗರಕ್ಕೆ ಹೊರಟು ಹಾದಿ ಮಧ್ಯದಲ್ಲಿ ಕಡಲೊಳಗೆ ಮುಳುಗಿ ಹೋದ ಟೈಟಾನಿಕ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಒಬ್ಬಾತನ ಬಳಿ ಈ ‘ಫಸ್ಟ್ ಫೊಲಿಯೊ’ದ ಕೃತಿಯೊಂದು ಇತ್ತಂತೆ.

ಇಂತಹ ಕಾಲಾತೀತವಾದ, ಅತಿ ದುಬಾರಿ ಸಾಹಿತ್ಯಕೃತಿಯನ್ನು ವ್ಯಕ್ತಿಯೋರ್ವ ಹೊಂದುವುದು ಕಾನೂನು ಬಾಹಿರವಲ್ಲದ ಕಾರಣ, ಈ ರೀತಿಯ ಹುಚ್ಚು ಬೇಟೆ ನಿರಂತರವಾಗಿ ನಡೆಯುತ್ತಲೇ ಬರುತ್ತಿದೆ! ಅದಕ್ಕೆ ರಾಸ್‌ಮುಸ್ಸೆನ್‌ ಅವರಂತಹವರ ಸಂಶೋಧನೆಗಳು ಪರೋಕ್ಷವಾಗಿ ನೆರವು ನೀಡುತ್ತದೆ ಎನ್ನುವುದನ್ನೂ ಅಲ್ಲಗೆಳಯಲಾಗದು. ಈ ‘ಫಸ್ಟ್ ಫೊಲಿಯೊ’ ನಮ್ಮ ಭಾರತದಲ್ಲೂ ಇರಬಹುದು ಎಂಬ ಅನುಮಾನವನ್ನು ರಾಸ್‌ಮುಸ್ಸೆನ್ ವ್ಯಕ್ತಪಡಿಸುತ್ತಾನೆ. ಆದರೆ, ಆ ಪ್ರತಿಯ ಕುರುಹು ನಮ್ಮಲ್ಲಿನ್ನೂ ಸಿಕ್ಕಿಲ್ಲ. ಆದರೆ ಇಂಗ್ಲೆಂಡ್‌ನಲ್ಲಿ ಇರುವ ಇದರ ಪ್ರತಿಯೊಂದು 2017ರಲ್ಲಿ ಭಾರತಕ್ಕೆ ಬರಲಿದೆ!

ಮೊನ್ನೆ ನಮ್ಮ ಪ್ರಧಾನಿ ಇಂಗ್ಲೆಂಡ್‌ಗೆ ಹೋಗಿದ್ದಾಗ ಅಲ್ಲಿಯ ಪ್ರಧಾನಿ ಡೇವಿಡ್ ಕ್ಯಾಮರೂನ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಭಾರತದ 70ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಶೇಕ್ಸ್‌ಪಿಯರ್‌ನ ‘ಫಸ್ಟ್ ಫೊಲಿಯೊ’ ಹಾಗೂ ಇಂಗ್ಲೆಂಡ್‌ನ ಹಿರಿಮೆಗೆ ಕಾರಣವಾಗಿರುವ ಮತ್ತೊಂದು ಪುಸ್ತಕ,  1225ರಲ್ಲಿ ಪ್ರಕಟಗೊಂಡ ಕಿಂಗ್ ಜಾನ್ ರಚಿಸಿದ Magna Carta ನಮ್ಮಲ್ಲಿಗೆ ಬರಲಿವೆ. ಕುವೆಂಪು ಸ್ಮಾರಕ ‘ಕವಿಮನೆ’ಗೆ ನುಗ್ಗಿದ ವ್ಯಕ್ತಿಯ ಹಿಂದೆ ಇಂತಹ ಜಾಲವೊಂದಿರಲಾರದು ಎಂದು ಆಶಿಸುತ್ತ, ಆತನ ಆರ್ಥಿಕ ಸಂಕಷ್ಟಗಳೇ ಇಂತಹ ಕಳ್ಳತನಕ್ಕೆ ಕಾರಣವಾದುದರಿಂದ ಈ ಘಟನೆಗೆ ನಾವೆಲ್ಲರೂ ಹೊಣೆಗಾರರು ಎಂದು ಭಾವಿಸಬಹುದೇನೊ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT