ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಕ್ಷೇತ್ರದಲ್ಲಿ ಅಭಿಮನ್ಯು ಸಂಜೀವ್‌ ಚತುರ್ವೇದಿ

ವ್ಯಕ್ತಿ
Last Updated 8 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

2015ರ ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿರುವ ಐಎಫ್‌ಎಸ್‌ ಅಧಿಕಾರಿ ಸಂಜೀವ್‌ ಚತುರ್ವೇದಿ ಅವರ ಕತೆ ಕುರುಕ್ಷೇತ್ರದಲ್ಲಿ ಹೋರಾಡಿದ ಅಭಿಮನ್ಯುವಿನಂತೆಯೇ ಆಗಿದೆ. ಭ್ರಷ್ಟಾಚಾರದಿಂದ ತುಂಬಿದ ಸರ್ಕಾರಿ ಕ್ಷೇತ್ರವೆಂಬ ಚಕ್ರವ್ಯೂಹದಲ್ಲಿ ಛಲ ಬಿಡದೆ ಹೋರಾಡುತ್ತಿರುವ ಈ ಅಭಿಮನ್ಯುವಿಗೆ ಇನ್ನೂ ಚಕ್ರವ್ಯೂಹದಿಂದ ಹೊರಬರುವ  ದಾರಿ ಕಾಣುತ್ತಿಲ್ಲ.

ಎಲ್ಲ ಕಡೆಯೂ ಕತ್ತಿ, ಗುರಾಣಿಗಳನ್ನು ಹಿಡಿದು ನಿಂತವರೇ ಕಾಣುತ್ತಿದ್ದಾರೆ. ಕೊನೆಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಬೆಂಬಲಕ್ಕೆ ಬರುತ್ತಿಲ್ಲವಲ್ಲ ಎಂಬ ಸಂಕಟ ಅವರನ್ನು ಕಾಡುತ್ತಿದೆ. ಒಂದು ವರ್ಷದಿಂದ ಯಾವುದೇ ಕೆಲಸವಿಲ್ಲದೆ ಸುಮ್ಮನೆ ಕುಳಿತಿರುವ ಅವರಿಗೆ ಕರ್ತವ್ಯ ನಿರ್ವಹಣೆಗೆ ಹಾದಿ ಕಾಣಿಸುತ್ತಿಲ್ಲ.

1974ರ ಡಿಸೆಂಬರ್‌ 21ರಂದು ಜನಿಸಿದ ಸಂಜೀವ್‌ ಚತುರ್ವೇದಿ ಬಿಟೆಕ್‌ ಪದವೀಧರ. 2002ರ ಐಎಫ್‌ಎಸ್ ಅಧಿಕಾರಿ. ಹರಿಯಾಣ ಕೇಡರ್‌. ಐಎಫ್‌ಎಸ್‌ನಲ್ಲಿ ಎರಡನೇ ರ್‍ಯಾಂಕ್ ಪಡೆದ ಚತುರ್ವೇದಿ ಮೊದಲು ಅಧಿಕಾರ ವಹಿಸಿಕೊಂಡಿದ್ದು ಕುರುಕ್ಷೇತ್ರದಲ್ಲಿ. ಅಲ್ಲಿ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಅವರು ಸರಸ್ವತಿ ವನ್ಯಜೀವಿ ಧಾಮದಲ್ಲಿ ನಡೆದ ಹಗರಣಗಳನ್ನು ಬಯಲಿಗೆಳೆದರು. ಹಲವಾರು ಗುತ್ತಿಗೆದಾರರ ವಿರುದ್ಧ ಎಫ್‌ಐಆರ್‌ ದಾಖಲಿಸಿದರು. ಆದರೆ ಇದೆಲ್ಲದರಿಂದ ಅವರಿಗೆ ಸಿಕ್ಕ ಬಹುಮಾನ ಅಮಾನತು ಎಂಬ ಶಿಕ್ಷೆ.


ಹರಿಯಾಣ ಸರ್ಕಾರ ಗುತ್ತಿಗೆದಾರರನ್ನು ಶಿಕ್ಷಿಸುವ ಬದಲು ಹಗರಣಗಳನ್ನು ಬಯಲಿಗೆ ಎಳೆದ ಸಂಜೀವ್‌ ಚತುರ್ವೇದಿ ಅವರನ್ನೇ ಶಿಕ್ಷೆಗೆ ಗುರಿಮಾಡಿತು. ಇದನ್ನು ವಿರೋಧಿಸಿ ಒಂದು ಸ್ವಯಂ ಸೇವಾ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿತು. ಸಂಜೀವ್‌ ಪರ ತೀರ್ಪು ಬಂತು.
2007ರಲ್ಲಿ ಸಂಜೀವ್‌ ಅವರನ್ನು ಫತೇಬಾದ್‌ಗೆ ವರ್ಗ ಮಾಡಲಾಯಿತು. ಅಲ್ಲಿ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಅವರು, ಶಾಸಕ ಪ್ರಹ್ಲಾದ್‌ ಸಿಂಗ್‌ ಅವರ ಸಂಬಂಧಿಗಳು ಸರ್ಕಾರಿ ಹಣದಲ್ಲಿ ಕೆಲವು ಅಪರೂಪದ ಮರಗಳನ್ನು ತಮ್ಮ ಉದ್ಯಾನಕ್ಕೆ ಸಾಗಿಸಿದ ಹಗರಣವನ್ನು ಬಯಲಿಗೆಳೆದರು. ಗಿಡಮೂಲಿಕೆ ವನ ನಿರ್ಮಾಣದ ಹೆಸರಿನಲ್ಲಿ ಹಣ ಲೂಟಿ ಮಾಡಿದ್ದನ್ನು ಬಯಲು ಮಾಡಿದರು. ಇದರಲ್ಲಿ ಸಚಿವರು, ಶಾಸಕರು ಹೇಗೆ ಭಾಗಿಯಾಗಿದ್ದಾರೆ ಎನ್ನುವುದನ್ನು ಬಿಚ್ಚಿಟ್ಟರು. ಸಸಿ ನೆಡುವ ಯೋಜನೆಯ ಹೆಸರಿನಲ್ಲಿ ರಾಜಕಾರಣಿಗಳು, ಗುತ್ತಿಗೆದಾರರು, ಅಧಿಕಾರಿಗಳು ಹೇಗೆ ಹಣ ಹೊಡೆಯುತ್ತಾರೆ ಎನ್ನುವುದನ್ನು ಬಹಿರಂಗ ಮಾಡಿದರು.

2009ರಲ್ಲಿ ಸಂಜೀವ್‌ ತೋಮರ್‌ ಎಂಬ ರೇಂಜರ್‌ ಆತ್ಮಹತ್ಯೆ ಮಾಡಿಕೊಂಡರು. ಸಂಜೀವ್‌‌ ಚತುರ್ವೇದಿ ಅವರ ಕಿರುಕುಳದಿಂದಲೇ ಇವರು ಆತ್ಮಹತ್ಯೆ ಮಾಡಿಕೊಂಡರು ಎಂಬ ಪುಕಾರು ಎದ್ದಿತು. ಇದಕ್ಕೆ ಸಂಬಂಧಿಸಿದಂತೆ ಚತುರ್ವೇದಿ ಅವರ ವಿರುದ್ಧ ಎಫ್‌ಐಆರ್‌ ಕೂಡ ದಾಖಲಾಯಿತು. ಸಸಿ ನೆಡುವ ಯೋಜನೆಯಲ್ಲಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ಆರೋಪವೂ ಚತುರ್ವೇದಿ ಅವರ ಮೇಲೆ ಬಂತು. ಆದರೂ ಛಲ ಬಿಡದ ಚತುರ್ವೇದಿ ತಮ್ಮ ಕೆಲಸವನ್ನು ಮುಂದುವರಿಸಿದರು.


ಆದರೆ ಹರಿಯಾಣ ಸರ್ಕಾರ ಅವರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಲಿಲ್ಲ. ಈ ನಡುವೆ ಅವರ ವೈಯಕ್ತಿಕ ಜೀವನ ಕೂಡ ಸಂಕಷ್ಟಕ್ಕೆ ಈಡಾಯಿತು. ಅವರ ಪತ್ನಿಯ ತಂದೆ ಚತುರ್ವೇದಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದರು. ನಂತರ ಇದು ವಿವಾಹ ವಿಚ್ಛೇದನದಲ್ಲಿ ಅಂತ್ಯವಾಯಿತು. 2010ರಲ್ಲಿ ಅವರು ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರಿಗೆ ಪತ್ರ ಬರೆದು ಹರಿಯಾಣ ಸರ್ಕಾರ ತಮಗೆ ಕಿರುಕುಳ ನೀಡುತ್ತಿದ್ದು, ತಮ್ಮನ್ನು ಕೇಂದ್ರ ಸೇವೆಗೆ ವರ್ಗ ಮಾಡಬೇಕು ಎಂದು ವಿನಂತಿಸಿಕೊಂಡರು. ರಾಷ್ಟ್ರಪತಿ ಅವರು ಈ ವಿಷಯದ ಬಗ್ಗೆ ಪರಿಶೀಲಿಸಲು ಸಂಪುಟ ಕಾರ್ಯದರ್ಶಿಗೆ ಹೇಳಿದರು. ಆಗ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಚತುರ್ವೇದಿ ಅವರ ಮೇಲೆ ಹೊರಿಸಲಾಗಿದ್ದ ಎಲ್ಲ ಆರೋಪಗಳ ಬಗ್ಗೆ ತನಿಖೆ ನಡೆಸಲು ಇಬ್ಬರು ಅಧಿಕಾರಿಗಳನ್ನು ನೇಮಿಸಿತು. ನಂತರ ಇದರ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು. ಆಮೇಲೆ ಕೇಂದ್ರ ವಿಚಕ್ಷಣಾ ದಳ ಈ ಬಗ್ಗೆ ತನಿಖೆ ನಡೆಸಿ ಚತುರ್ವೇದಿ ಅವರ ಮೇಲಿನ ಎಲ್ಲ ಆರೋಪಗಳನ್ನು ತಳ್ಳಿಹಾಕಿತು. 2011ರ ಜನವರಿ 19ರಂದು ರಾಷ್ಟ್ರಪತಿ ಅವರು ಚತುರ್ವೇದಿ ಅವರ ಮೇಲಿನ ಎಲ್ಲ ಆರೋಪಗಳನ್ನು ರದ್ದು ಮಾಡಿದರು.

ಆ ನಂತರ ಚತುರ್ವೇದಿ ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಉಪ ನಿರ್ದೇಶಕರನ್ನಾಗಿ ಮಾಡಿ ಹೆಚ್ಚುವರಿಯಾಗಿ ಮುಖ್ಯ ವಿಚಕ್ಷಣಾಧಿಕಾರಿ ಹೊಣೆಯನ್ನು ನೀಡಲಾಯಿತು. ಅಲ್ಲಿಯೂ ಅವರು ಹಗರಣಗಳನ್ನು ಬಯಲಿಗೆಳೆಯುವ ಕೆಲಸವನ್ನು ಮುಂದುವರಿಸಿದರು.  200 ಭ್ರಷ್ಟಾಚಾರ ಪ್ರಕರಣಗಳನ್ನು ಹೊರಕ್ಕೆ ತಂದರು. ಅದರಲ್ಲಿ 78 ಪ್ರಕರಣಗಳಲ್ಲಿ ಸಂಬಂಧಿಸಿದವರಿಗೆ ಶಿಕ್ಷೆಯಾಯಿತು. 87 ಪ್ರಕರಣಗಳಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಯಿತು. 20 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಲಾಯಿತು. ಇಷ್ಟೆಲ್ಲಾ ಮಾಡುವ ಹೊತ್ತಿಗೆ ಚತುರ್ವೇದಿ ಮತ್ತೆ ಸಂಕಷ್ಟಕ್ಕೆ ಸಿಲುಕಿದರು. ಯಾಕೆಂದರೆ ಇಲ್ಲಿಯೂ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಹಗರಣಗಳಲ್ಲಿ ಭಾಗಿಯಾಗಿದ್ದರು. ಅದಕ್ಕಾಗಿಯೇ ಚತುರ್ವೇದಿ ಅವರನ್ನು ಮುಖ್ಯ ವಿಚಕ್ಷಣಾಧಿಕಾರಿ ಹುದ್ದೆಯಿಂದ ತೆರವುಗೊಳಿಸಲಾಯಿತು. ಸಂಸ್ಥೆಯ ಉಪ ನಿರ್ದೇಶಕರ ಹುದ್ದೆಯಲ್ಲಿ ಅವರನ್ನು ಮುಂದುವರಿಸಿದ್ದರೂ ಅವರಿಗೆ ಯಾವುದೇ ಕೆಲಸವನ್ನು ವಹಿಸಲಾಗಿಲ್ಲ.

ಭ್ರಷ್ಟಾಚಾರವನ್ನು ಯಾವುದೇ ಸಂದರ್ಭದಲ್ಲಿಯೂ ತಾವು ಸಹಿಸುವುದಿಲ್ಲ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚತುರ್ವೇದಿ ಪತ್ರ ಬರೆದಿದ್ದರೂ ಪ್ರಧಾನ ಮಂತ್ರಿ ಕಚೇರಿಯಿಂದ ಇನ್ನೂ ಯಾವುದೇ ಉತ್ತರ ಬಂದಿಲ್ಲ. ಮುಖ್ಯ ವಿಚಕ್ಷಣಾಧಿಕಾರಿ ಹುದ್ದೆಯಿಂದ ಚತುರ್ವೇದಿ ಅವರನ್ನು ಬಿಡುಗಡೆ ಮಾಡಿರುವುದನ್ನು ಕೇಂದ್ರ ಆರೋಗ್ಯ ಸಚಿವರು ಸಮರ್ಥಿಸಿಕೊಳ್ಳುತ್ತಿದ್ದರೂ ಅದಕ್ಕೂ ಮೋದಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ತಾವು ಕೆಲಸ ಮಾಡಿದ ಎಲ್ಲ ಕಡೆಯೂ ಭ್ರಷ್ಟಾಚಾರದ ಹಗರಣಗಳನ್ನು ಬಯಲಿಗೆಳೆಯುವ ಚತುರ್ವೇದಿ ಈಗ ಯಾರಿಗೂ ಬೇಡವಾಗಿದ್ದಾರೆ. ಆದರೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮಾತ್ರ ಚತುರ್ವೇದಿ ಅವರನ್ನು ದೆಹಲಿ ಸರ್ಕಾರದ ಸೇವೆಗೆ ಕೊಡಿ ಎಂದು ವಿನಂತಿಸಿಕೊಂಡಿದ್ದಾರೆ.  ಆ ಬಗ್ಗೆಯೂ ಕೇಂದ್ರ ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಮತ್ತು ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರೇ ತಮಗೆ ಸ್ಫೂರ್ತಿ ಎಂದು ಸಂಜೀವ್‌ ಚತುರ್ವೇದಿ ಹೇಳುತ್ತಾರೆ. ಗುಜರಾತಿನಲ್ಲಿ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಅತಿ ಎತ್ತರದ ಪ್ರತಿಮೆ ಸ್ಥಾಪನೆಗೆ ಹೊರಟಿರುವ ಮೋದಿಗೆ ಪಟೇಲ್‌ ಅವರ ಇನ್ನೊಬ್ಬ ಅನುಯಾಯಿಯ ಮೊರೆ ಮಾತ್ರ ಕೇಳುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT