ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರೂಪಗಳೂ ಪ್ರಜಾಪ್ರಭುತ್ವವೂ

ಚರ್ಚೆ
Last Updated 5 ಜುಲೈ 2015, 19:30 IST
ಅಕ್ಷರ ಗಾತ್ರ

ದಲಿತ ಚಳವಳಿಗೆ ಸಂಬಂಧಿಸಿದಂತೆ  ‘ಪ್ರಜಾವಾಣಿ’ಯಲ್ಲಿ ನಡೆಯುತ್ತಿರುವ ಚರ್ಚೆಯನ್ನು ಗಮನಿಸುತ್ತಾ ಬಂದಂತೆ ಹೇರಳ ದುಗುಡವಾಗಿ ಈ ಪತ್ರ.  ವಡ್ಡಗೆರೆ ನಾಗರಾಜಯ್ಯ ಅವರು ದಲಿತ ಚಳವಳಿಯ ಪ್ರಭಾವದ ಕಾವಿನಲ್ಲಿ ಮೂಡಿದ ಕವಿ ಮತ್ತು ಸಂಸ್ಕೃತಿ ಚಿಂತಕರಾಗಿ, ನಮ್ಮನ್ನು ದಲಿತರು ಬಿಡಿಸಿಕೊಳ್ಳಬೇಕಾದ ಬಿಕ್ಕಟ್ಟುಗಳ ಚಕ್ರವ್ಯೂಹಕ್ಕೆ ದೂಡಿರುವುದರ ಬಗ್ಗೆ ಏನು ಹೇಳಬೇಕೋ ತಿಳಿಯದಾಗಿದೆ. ಅಂತೆಯೇ ಕುಎಂಬೈ ಅವರಿಗೂ (ಚರ್ಚೆ, ಜುಲೈ 3) ಇದೇ ಮಾತು ಅನ್ವಯ. ಇವಂತೂ ಬರಿಗಣ್ಣಲ್ಲಿ ಕಾಣಬಹುದಾದ ಇರುವೆಯನ್ನು ಟೆಲಿಸ್ಕೋಪಿನಲ್ಲಿ ನೋಡಿ ಎಂದು ಉತ್ತೇಜಿಸುವಂತಿವೆ.
ಚಾಮರಾಜನಗರದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ ದಲಿತ ಯುವ ಸಾಹಿತ್ಯ ಸಮಾವೇಶಕ್ಕೆ ಅಡ್ಡಿಪಡಿಸಿದ ಘಟನೆ ಒಪ್ಪುವಂಥದ್ದಲ್ಲವಾದರೂ ಅದನ್ನೇ ಇನ್ನೊಂದು ಭಿನ್ನ ಕಣ್ಣೋಟದ ಮೂಲಕವೂ ನೋಡುವುದು ಸಾಧ್ಯವಿತ್ತು.

ಉದಾಹರಣೆಗೆ ಒಂದೇ ಜಾತಿಗೆ ಸೇರಿದ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ... ಇವರ ಜೊತೆಗೆ ಯಾರೂ ಊಹಿಸಲಾಗದ ವಿಸ್ತಾರ ತಲುಪಿದವರು ಎನ್ನಬಹುದಾದ ದೇಜಗೌ ಮತ್ತೂ ಇವರೆಲ್ಲರ ಬೆನ್ನಿಗೆ ಅವರ ಜಾತಿಯ ಮಠದ ಅಭಯ ಹಸ್ತಗಳು ಮೇಳೈಸಿರುವ ಛಾಯಾಚಿತ್ರವೊಂದು ದಿನ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದು (ಜುಲೈ 1) ಪ್ರಜಾಪ್ರಭುತ್ವದ ಘನತೆ ಎನ್ನುವುದಾದರೆ, ಚಾಮರಾಜನಗರದ ಅಸ್ವಸ್ಥ ದಲಿತ ಯುವಕರ ಗುಂಪೊಂದು ನಡೆಸಿರುವ ದಾಂದಲೆಯೂ ಇಂಥದ್ದೆ ಘನತೆಯದು ಎನ್ನಬೇಕಾಗುತ್ತದೆ.

ಯಾಕೆಂದರೆ ಇವು ಸಾರ್ವಜನಿಕ ಕುರೂಪದ ಎರಡು ಮಾದರಿಗಳಾಗಿಯೂ ಸ್ವೀಕೃತಗೊಳ್ಳುವ ಸಾಧ್ಯತೆಗಳಿವೆ. ಆದರೆ, ಸಂವಿಧಾನ ನ್ಯಾಯದ ತಕ್ಕಡಿಗೆ ಹಾಕಿದಾಗ ದಲಿತ ಯುವಕರ ಈ ಕುರೂಪವನ್ನು ಅಸ್ವಸ್ಥ ಮನಸ್ಸಿನ ಪ್ರಕಟ ಎಂದೇ ಸಾಮಾಜಿಕ ನ್ಯಾಯದ ಕಣ್ಣಿಂದ ನೋಡಬೇಕಾಗುತ್ತದೆ. ಇದು ನಾವು ನಂಬಿರುವ, ಆಚರಿಸುತ್ತಿರುವ,  ಆಚರಿಸಬೇಕಾದ ಪೌರಕರ್ತವ್ಯ.  ಆಗ ಅಸ್ವಸ್ಥ ಗುಂಪುಗಳ ಅಸ್ವಾಸ್ಥ್ಯದ ಮೂಲ, ಅದರ ನಿವಾರಣೋಪಾಯ ಎಲ್ಲವೂ ಸಂವಿಧಾನಬದ್ಧ ಹಕ್ಕುಗಳಾಗಿ ಸಮಾಹಿತವಾಗುತ್ತವೆ. ಆ ಪ್ರಕಾರ ದಲಿತ ನೆಲೆಯ ಅಸ್ವಾಸ್ಥ್ಯಕ್ಕೆ ಕೋಟ್ಯಾನುಕೋಟಿ ಕಾರಣಗಳನ್ನೂ, ಅಂತೆಯೇ ಸಾಕ್ಷ್ಯಗಳನ್ನೂ ಒದಗಿಸಬಹುದು.

ಆದರೆ ಅಂಥ ಕೋಟಿ ಕಾರಣಗಳಲ್ಲಿ ‘ನೀವು ನಿಮ್ಮ ಜಾತಿ ಗುರುತುಗಳನ್ನು ಸಾರ್ವಜನಿಕಗೊಳಿಸುತ್ತಿರುವಾಗ, ನಮಗೆ ನಮ್ಮ ದೇವರಾದ ಅಂಬೇಡ್ಕರ್ ಗುರುತು ಯಾಕಿಲ್ಲ?  ಇದು, (ದಲಿತ ಯುವ ಸಾಹಿತ್ಯ ಸಮಾವೇಶ)  ಸರ್ಕಾರದ ಅಧಿಕೃತ ಕಾರ್ಯಕ್ರಮ ತಾನೆ?’ ಎಂದು ದಲಿತರು ಆಗ್ರಹಿಸುವುದು ಒಪ್ಪಬೇಕಾದ ತರ್ಕವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಆಶಯಗಳನ್ನೇ ಅಣಕಿಸುವಂತೆ ಬಲಿಷ್ಠ ಜಾತಿಗಳ ಇಂಥ ಸಾರ್ವಜನಿಕ ಕುರೂಪಗಳು ಕಣ್ಣೇ ಹುಳಿತಾಗುವಷ್ಟು ಢಾಳಾಗಿಯೇ ಪ್ರಕಟಗೊಳ್ಳುತ್ತಿವೆ. ಆದರೆ ಈ ಬಲಿಷ್ಠರು ಅಸ್ವಸ್ಥಗೊಳ್ಳಲು ನಿಜ ಕಾರಣಗಳು ಏನಾದರೂ ಇದ್ದಲ್ಲಿ ತಿಳಿಸಿದರೆ ನನ್ನ ಅಭಿಪ್ರಾಯ ಬದಲಿಸಿಕೊಳ್ಳುವೆ.

ಕೊನೆಯದಾಗಿ ಫ್ಯಾಸಿಸ್ಟ್ ಹಿಟ್ಲರ್‌ನ ಕಾಲದಲ್ಲಿದ್ದ ಆಸ್ಟ್ರಿಯಾ ದೇಶದ ಯಹೂದಿ ಪತ್ರಕರ್ತ ಕ್ರೌಸ್, ಆವೊತ್ತಿನ ಯಹೂದಿ ನರಹತ್ಯೆಗಿಂತಲೂ ಹೆಚ್ಚು ಸಂವೇದನಾಶೀಲ ಪ್ರತಿಕ್ರಿಯೆ ಪ್ರಕಟಗೊಳಿಸಿದ್ದು ಮುಂದೆ ನೂರು ವರ್ಷಗಳ ನಂತರ ಬರಲಿದ್ದ ಉದಾರವಾದಿ ಆರ್ಥಿಕ ವ್ಯವಸ್ಥೆಯೊಂದರ ಬಗ್ಗೆ. ಸೆಲ್‌ಫೋನ್, ಸ್ಮಾರ್ಟ್ ಫೋನ್, ಐಫೋನ್, ಆಂಡ್ರಾಯ್ಡ್, ಟ್ವಿಟರ್ ಎಂಬ ಇಂಟರ್‌ನೆಟ್ ಸಂವಹನ ರಾಜಕಾರಣದ ನಿರ್ದಯದ ಬಗ್ಗೆ  ಹಾಗೂ ಕೊಲೆಗಡುಕ ಕಾರ್ಪೊರೇಟ್ ಅರ್ಥ ವ್ಯವಸ್ಥೆಯ ಬಗ್ಗೆ. ಅದನ್ನು ಆತ ಅದೆಷ್ಟು ದಾರ್ಶನಿಕ ನಿಷ್ಠೆಯಿಂದ ಹೇಳುತ್ತಾನೆಂದರೆ, ‘ಆ ವ್ಯವಸ್ಥೆ ತನ್ನ ಲಾಭಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ಮನುಷ್ಯರ ಚರ್ಮಗಳಿಂದ ವ್ಯಾಲೆಟ್‌(ಪರ್ಸ್‌ಗಳನ್ನು) ಸಿದ್ಧಪಡಿಸಿಕೊಳ್ಳುತ್ತದೆ’ ಎನ್ನುತ್ತಾನೆ.

ಅದೇ ಈ ಹೊತ್ತಿನಲ್ಲಿ ಇಲ್ಲಿಯೇ ಬೇರುಬಿಟ್ಟಿರುವ ಭೇದವೆಂಬ ಇನ್ನೊಬ್ಬ ಸೈತಾನ ಇಲ್ಲಿದ್ದಾನೆ. ಅವನು, ‘ಜ್ಞಾನದ ನುಡಿಗೆ ಕಿವಿಯಾಗುವ ಕಿವಿಗಳಲ್ಲಿ ಕಾದ ಸೀಸ ಹುಯ್ಯಬೇಕು, ನುಡಿದರೆ ನಾಲಗೆಯನ್ನೇ ಕತ್ತರಿಸಬೇಕು’ ಎನ್ನುತ್ತಾನೆ. ಈ ಹೊತ್ತು ಈ ಜಗತ್ತು ಈ ಇಬ್ಬರು ಹರಿಕಾರರ ಸ್ವತ್ತಾಗಿದೆ. ಭಾರತದಲ್ಲಂತೂ ಇವೆರಡೂ ಒಂದಾಗಿ ವಿಜೃಂಭಿತ ಶಿಖರಗಳಾಗಿವೆ. ಇಂಥ ನೆಲೆಗಳಿಗೆ ನ್ಯಾಯದ ಕಣ್ಣೂ ಇರುತ್ತದೆ ಎಂಬುದನ್ನೇ ಮಾಧ್ಯಮಗಳು ಇಂದು ನಮಗೆ ಕ್ಷಣಕ್ಷಣಕ್ಕೂ ಮನವರಿಕೆ ಮಾಡುತ್ತಿರುವುದು.  ಇದು ಗೊಬೆಲ್‌ನ ಬಳುವಳಿ. ಸುಳ್ಳನ್ನು ನೂರು ಬಾರಿ ಹೇಳಿದರೆ ಅದು ನಿಜವಾಗುತ್ತದೆ ಎನ್ನುವುದೇ ಈ ತತ್ವ. ಇದನ್ನು ತೆಲುಗು ಜನಕವಿ ಗದ್ದರ್ ಒಂದೇ ಒಂದು ರೂಪಕದಲ್ಲಿ ಹೇಳುವುದು ‘ಹುಲಿಮರಿ ಎಂದೂ ಮೇಕೆ ಮರಿಗೆ ನ್ಯಾಯ ಒದಗಿಸಲಾರದೋ, ಓ ತಮ್ಮ’ ಎಂದು.

ಆದರೆ ರೋಗಗ್ರಸ್ತ ಭೇದನ್ಯಾಯವನ್ನು ನೀಗುವ ದಾರಿಯಲ್ಲೇ ನಮ್ಮ ಸಾಮಾಜಿಕ ನ್ಯಾಯದ ವಿವೇಕವು ತಲುಪಬೇಕಾಗಿದೆ, ‘ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡೆ ಗುಹೇಶ್ವರ’ ಎಂದ ಅಲ್ಲಮ ಹಾಗೂ ‘ಹುಲಿಯೂ ಜಿಂಕೆಯೂ ಒಂದೇ ಕೊಳದಲ್ಲಿ ನೀರು ಕುಡಿದು ಸಹಜೀವನ ನಡೆಸುತ್ತವೆ’ ಎಂದ ಅರಬಿಂದೋ ಕಂಡುಕೊಂಡ ನಿಸರ್ಗ ನ್ಯಾಯದ ದರ್ಶನದ ನೆಲೆಗೆ. 
ನಿಜಕ್ಕೂ ಮಾಧ್ಯಮಗಳೂ, ಮಾಧ್ಯಮ ಚರ್ಚೆಗಳೂ ‘ನಿಜ ಭಾರತ’ ಮರೆತು ‘ಪ್ರಕಾಶ ಭಾರತ’ದ ಅಮಲಿನಲ್ಲಿ ತೇಲುವುದು ಒಪ್ಪತಕ್ಕದ್ದೋ ಅಲ್ಲವೋ ಎನ್ನುವುದನ್ನು ಅವರವರೇ ಕಂಡುಕೊಳ್ಳುವಷ್ಟು ಬೌದ್ಧಿಕತೆ, ಅಂತಃಕರಣದ ವಾರಸುದಾರಿಕೆ ನಮಗಿದ್ದೇ ಇದೆ ಎನ್ನುವುದರಲ್ಲಿ ಇನ್ನೂ ವಿಶ್ವಾಸ ತಾಳಿರುವವನು ನಾನು.

ಅಂಥ ತಪ್ಪು ಏನಾಗಿತ್ತು?
ವಡ್ಡಗೆರೆ ನಾಗರಾಜಯ್ಯ ದಲಿತ ಚಿಂತನೆ ಕುರಿತು ಬರೆದ ಲೇಖನದ (ಸಂಗತ, ಜೂನ್‌ 30) ಪೂರ್ವಾರ್ಧವು ಸೂಕ್ತ ವಿಚಾರಗಳಿಂದ ಕೂಡಿದೆ ಮತ್ತು ಸಂಬಂಧಿಸಿದವರೆಲ್ಲ ಆಲಿಸುವುದಂಥದ್ದಾಗಿದೆ. ಆದರೆ ತಮ್ಮ ಲೇಖನದ ಕೊನೆಯ ಪ್ಯಾರಾದಲ್ಲಿ ಬರೆದ ಒಂದು ಮಾತು ಒಪ್ಪಿಗೆಯಾಗಲಿಲ್ಲ. ಪುಣೆ ಒಪ್ಪಂದದ ಸಂದರ್ಭದಲ್ಲಿ ಅಂಬೇಡ್ಕರ್‌ರವರು ಗಾಂಧೀಜಿಯನ್ನು ಮನ್ನಿಸದೇ ಹೋಗಿದ್ದ ಪಕ್ಷದಲ್ಲಿ ಪರಿಣಾಮವು ಬೇರೆ ರೀತಿ ಆಗುವ ಸಾಧ್ಯತೆ ಇತ್ತು ಎಂದು ಬರೆದಿದ್ದಾರೆ.

ಆ ಸಾಧ್ಯತೆ ಯಾವ ಪ್ರಕಾರದ್ದು ಎಂಬುದನ್ನು ಸ್ಪಷ್ಟಪಡಿಸಿಲ್ಲದಿರುವುದು ಅನೇಕ ಪ್ರಕಾರದ ಊಹೆಗಳಿಗೆ ಕಾರಣವಾಗುತ್ತದೆ.
ಅಂಬೇಡ್ಕರರು ಮನ್ನಿಸುವಂಥ ತಪ್ಪು ಕೆಲಸವನ್ನೇನೂ ಗಾಂಧೀಜಿ ಮಾಡಿರಲಿಲ್ಲ. ಹಿಂದೂ ಸಮಾಜದಿಂದ ಅಸ್ಪೃಶ್ಯತೆ ಸಂಪೂರ್ಣವಾಗಿ ಹೋಗಬೇಕು ಮತ್ತು ಸವರ್ಣೀಯರು ತಮ್ಮ ತಪ್ಪಿಗಾಗಿ ಪಶ್ಚಾತ್ತಾಪಪಡಬೇಕು ಎಂಬ ಉದ್ದೇಶ ಗಾಂಧಿ ಅವರದಾಗಿತ್ತು. ರಾಜಕೀಯ ಶಕ್ತಿಯಿಂದ ಮಾತ್ರವೇ ಅಸ್ಪೃಶ್ಯತೆಯ ನಿವಾರಣೆ ಸಾಧ್ಯವಿಲ್ಲ. ಜನರ ಮನೋಭಾವ ಬದಲಾಗಬೇಕೆಂದು ಗಾಂಧಿ ಬಯಸಿದ್ದರು. ರಾಜಕೀಯ ಹಕ್ಕುಗಳು ದೊರೆತಾದ ಮೇಲೆಯೂ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯಗಳೇ ಇದಕ್ಕೆ ಸಾಕ್ಷಿ. -ಸುರೇಂದ್ರ  ಕೌಲಗಿ, ಮೇಲುಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT