ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರ್ಚಿಗಾಗಿ ಶಾಸಕರ ಕಿತ್ತಾಟ: ಈಶ್ವರಪ್ಪ

ಗೂಂಡಾಗಳಂತೆ ವರ್ತಿಸುತ್ತಿರುವ ಕಾಂಗ್ರೆಸ್‌ ಕಾರ್ಯಕರ್ತರು: ಆರೋಪ
Last Updated 25 ಜೂನ್ 2016, 10:32 IST
ಅಕ್ಷರ ಗಾತ್ರ

ಯಾದಗಿರಿ: ಅಧಿಕಾರಕ್ಕಾಗಿ ಕಾಂಗ್ರೆಸ್‌ ನಲ್ಲಿ ಒಳಜಗಳ ಪ್ರಾರಂಭವಾಗಿದ್ದು, ಇದೀಗ ಅದು ಬೀದಿಕಾಳಗವಾಗಿ ಮಾರ್ಪಟ್ಟಿದೆ. ಸಚಿವ ಸ್ಥಾನ ಸಿಕ್ಕಿಲ್ಲವೆಂದು ಒಬ್ಬರು, ತೆಗೆದು ಹಾಕಲಾಗಿದೆ ಎಂದು ಮತ್ತೊಬ್ಬರ ಬೆಂಬಲಿಗರು ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುತ್ತಿದ್ದಾರೆ.

ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರಹೊಣೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ಶಹಾಪುರ ತಾಲ್ಲೂಕಿನ ಖಾನಾಪುರದಲ್ಲಿ ಜನಸಂಪರ್ಕ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. 

ಅಧಿಕಾರಕ್ಕಾಗಿ ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಅಭಿವೃದ್ಧಿ ಕಾರ್ಯ ಮಾಡದೆ ಜನರನ್ನು ಮರೆತಿದ್ದು, ಕೇವಲ ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿದ್ದಾರೆ. ಪ್ರತಿಭಟನೆ ಹೆಸರಲ್ಲಿ ಕಾಂಗ್ರೆಸ್ ಕಾರ್ಯರ್ತರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಚಿವ ಸ್ಥಾನಕ್ಕಾಗಿ ಪ್ರತಿಭಟನೆ ಮಾಡುವುದಾದರೆ, ಕಾಂಗ್ರೆಸ್‌ ಕಚೇರಿ ಮುಂದೆ ಮಾಡಲಿ. ಆದರೆ, ಸಾರ್ವಜನಿಕ ಆಸ್ತಪಾಸ್ತಿ ಹಾನಿ ಮಾಡಿ ಪ್ರತಿಭಟನೆ ಮಾಡುವ ಹಕ್ಕು ಯಾರಿಗೂ ಇಲ್ಲ. ಇಂತಹವರ ವಿರುದ್ಧ ಮುಖ್ಯಮಂತ್ರಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. 

ನಾಯಕತ್ವ ಬದಲಾವಣೆ: ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ನಾಯಕತ್ವ ಬದಲಾವಣೆ ಆಗಿದ್ದೇ ಆದರೆ, ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ 5ನಿಮಿಷ ಉಳಿಯುವುದಿಲ್ಲ. ಬೇರೆ ಪಕ್ಷಕ್ಕೆ ಹೋಗುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್‌ನ ಬಂಡಾಯ ಶಾಸಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾ ಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.  

ಅಸಮರ್ಥ ಸಚಿವರು: ಅಸಮರ್ಥ ಸಚಿವರನ್ನು ಕೈಬಿಡಲಾಗಿದೆ ಎಂದು ಹೇಳುತ್ತಿರುವ ಸಿಎಂ ಸಿದ್ದರಾಮಯ್ಯ, ಭ್ರಷ್ಟರನ್ನು ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. 

ಸಚಿವ ಎಚ್.ಸಿ.ಮಹಾದೇವಪ್ಪ ಅವರು ಮರಳು ಲೂಟಿ ಮಾಡುತ್ತಿದ್ದಾರೆ. ಅವರ ಪುತ್ರನನ್ನು ಪೊಲೀಸರು ಹೆಗಲ ಮೇಲೆ ಹೊತ್ತು ಕುಣಿದಾಡುತ್ತಿದ್ದಾರೆ. ಈ ರೀತಿಯ ವ್ಯಕ್ತಿಗಳನ್ನು ಸಂಪುಟದಲ್ಲಿ ಉಳಿಸಿಕೊಂಡು ಅಕ್ರಮ ದಂಧೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸಂಪುಟದಲ್ಲಿ ಇನ್ನಷ್ಟು ಅಸಮರ್ಥರು ಮತ್ತು ಭ್ರಷ್ಟರು ಇದ್ದಾರೆ. ಅವರನ್ನೂ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT