ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ ಪಟು ನರಸಿಂಗ್‌ ಯಾದವ್‌ ಒಲಿಂಪಿಕ್ಸ್‌ ಕನಸು ನುಚ್ಚುನೂರು?

ಕೂಟದ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ಹೊತ್ತಿನಲ್ಲಿ ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತು l ಒಲಿಂಪಿಕ್ಸ್ ಕ್ರೀಡಾ ಗ್ರಾಮ ಪ್ರವೇಶ ಪತ್ರ ರದ್ದು
Last Updated 24 ಜುಲೈ 2016, 23:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕುಸ್ತಿಪಟು ನರಸಿಂಗ್‌ ಯಾದವ್‌ ಅವರು ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾಗಿದೆ. ಹೀಗಾಗಿ ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವರ ಕನಸು ಬಹುತೇಕ ಕಮರಿದೆ.

ನರಸಿಂಗ್‌ ಅವರು ನಿಷೇಧಿತ ಉದ್ದೀಪನಾ ಮದ್ದು ಸೇವಿಸಿದ್ದು ಖಚಿತವಾಗಿದೆ ಎಂದು ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕದ (ನಾಡಾ) ಮಹಾ ನಿರ್ದೇಶಕ ನವೀನ್‌ ಅಗರವಾಲ್‌ ಅವರು ಭಾನುವಾರ ತಿಳಿಸಿದ್ದಾರೆ.

‘ನರಸಿಂಗ್‌ ಅವರ ಮೂತ್ರದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆಯ ವೇಳೆ ಅದರಲ್ಲಿ ನಿಷೇಧಿತ ಉದ್ದೀಪನಾ ಮದ್ದಿನ ಅಂಶ ಇರುವುದು ಪತ್ತೆಯಾಗಿದೆ’ ಎಂದು ಅಗರವಾಲ್‌ ಹೇಳಿದ್ದಾರೆ.

‘ಯಾದವ್‌ ಅವರು ಶಿಸ್ತು ಸಮಿತಿಯ ಮುಂದೆ ಶನಿವಾರ ಹಾಜರಾಗಿದ್ದರು. ಈ ವೇಳೆ ಸಮಿತಿಯ ಸದಸ್ಯರು ಅವರನ್ನು ವಿಚಾರಣೆ ಒಳಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕಬೇಕಿದೆ. ಅಲ್ಲಿಯವರೆಗೂ ಏನನ್ನೂ ಹೇಳಲು ಇಷ್ಟಪಡುವುದಿಲ್ಲ’ ಎಂದಿದ್ದಾರೆ.

‘ನರಸಿಂಗ್‌ ಅವರ ಒಲಿಂಪಿಕ್ಸ್‌  ಭವಿಷ್ಯದ ಬಗ್ಗೆ ಈಗಲೇ ಖಚಿತವಾಗಿ ಏನೂ ಹೇಳಲು ಸಾಧ್ಯವಿಲ್ಲ. ತನಿಖೆ ಪೂರ್ಣಗೊಂಡ ಬಳಿಕ ಎಲ್ಲವನ್ನೂ ಬಹಿರಂಗ ಮಾಡುತ್ತೇವೆ’ ಎಂದು ಅವರು ತಿಳಿಸಿದ್ದಾರೆ.

ನರಸಿಂಗ್‌ ಅವರು ನಿಷೇಧಿತ ಅನಾಬೊಲಿಕ್‌ ಸ್ಟೆರಾಯಿಡ್‌ ‘ಮೆಥಾಂಡಿಯೆನನ್‌’ ಮದ್ದನ್ನು ದೇಹಕ್ಕೆ ತೆಗೆದುಕೊಂಡಿದ್ದರು ಎನ್ನಲಾಗಿದೆ.  ಆದ್ದರಿಂದ   ಅವರ ಒಲಿಂಪಿಕ್ಸ್‌ ಪ್ರವೇಶ ಪತ್ರವನ್ನೂ ರದ್ದು ಮಾಡಲಾಗಿದೆ.

ಅವರು ಮದ್ದು ಸೇವಿಸಿದ್ದು ಬಹಿರಂಗವಾಗುತ್ತಿದ್ದಂತೆ ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ)  ಅವರ ಮೇಲೆ ತಾತ್ಕಾಲಿಕ ನಿಷೇಧ ಹೇರಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಆದರೆ ಈ ವಿಷಯವನ್ನು ಡಬ್ಲ್ಯುಎಫ್‌ಐ ಖಚಿತಪಡಿಸಿಲ್ಲ.

ಯಾದವ್‌ ಅವರು ಹೋದ ವರ್ಷ ನಡೆದಿದ್ದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ ಪುರುಷರ 74 ಕೆ.ಜಿ. ವಿಭಾಗದಲ್ಲಿ ಕಂಚು ಗೆದ್ದು ರಿಯೊಗೆ ರಹದಾರಿ ಪಡೆದಿದ್ದರು.

ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದ ಸುಶೀಲ್‌ ಕುಮಾರ್‌ ಅವರೂ  ಈ ವಿಭಾಗದಲ್ಲಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು.
ನರಸಿಂಗ್‌ ಮತ್ತು ತಮ್ಮ ನಡುವೆ ಟ್ರಯಲ್ಸ್‌ ನಡೆಸಿ ಇಬ್ಬರಲ್ಲಿ ಯಾರು ಗೆಲ್ಲುತ್ತಾರೊ ಅವರನ್ನು ಒಲಿಂಪಿಕ್ಸ್‌ಗೆ ಕಳುಹಿಸಬೇಕೆಂದು ಒತ್ತಾಯಿಸಿದ್ದರು. ಈ ಸಂಬಂಧ ಸುಶೀಲ್‌ ನ್ಯಾಯಾಲಯದ ಮೊರೆ ಕೂಡ ಹತ್ತಿದ್ದರು.

ಆದರೆ ಡಬ್ಲ್ಯುಎಫ್‌ಐ ಮತ್ತು ದೆಹಲಿ ಹೈಕೋರ್ಟ್‌, ಸುಶೀಲ್‌ ಅವರ ಮನವಿಯನ್ನು ಮಾನ್ಯ ಮಾಡಿರಲಿಲ್ಲ. ಹೀಗಾಗಿ  ನರಸಿಂಗ್‌ ಅವರ ಹೆಸರು ಅಂತಿಮಗೊಳಿಸಲಾಗಿತ್ತು.

‘ಯಾದವ್‌ ಉದ್ದೀಪನಾ ಮದ್ದು ಸೇವಿಸಿದ್ದು ಖಚಿತವಾಗಿದೆ ಎಂದು ನಾಡಾ ಹೇಳಿದೆ. ಹೀಗಾಗಿ ಶಿಸ್ತು ಸಮಿತಿ ಮುಂದೆ ಹಾಜರಾಗಿ ವಿವರಣೆ ನೀಡಲು ಅವರಿಗೆ ಅವಕಾಶ ನೀಡಲಾಗಿತ್ತು. ಅವರಿಂದ ಎಲ್ಲಾ ರೀತಿಯ ಮಾಹಿತಿ ಪಡೆಯಲಾಗಿದೆ.

ಶೀಘ್ರದಲ್ಲಿಯೇ  ನರಸಿಂಗ್‌ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ. ಈ ಪ್ರಕರಣದ ಸಂಬಂಧ ವಾಡಾ ಹೆಚ್ಚಿನ ತನಿಖೆ ನಡೆಸಿ ಶೀಘ್ರವೇ ಅಂತಿಮ ವರದಿ ನೀಡಲಿದೆ’ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.

‘ಯಾರೇ ತಪ್ಪು ಮಾಡಿದರೂ  ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ವಿಷಯದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಸರ್ಕಾರ ಕೂಡ ಮಧ್ಯ ಪ್ರವೇಶಿಸುವುದಿಲ್ಲ.  ಈ ಸಂಬಂಧ ಪಾರದರ್ಶಕ ತನಿಖೆ ನಡೆಸಲು ವಾಡಾಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ’ ಎಂದೂ ಹೇಳಲಾಗಿದೆ.

ಸುಶೀಲ್‌ಗೆ ಅವಕಾಶ ಇಲ್ಲ
ನರಸಿಂಗ್‌ ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದಿರುವ ಕಾರಣ ಅವರ ಬದಲಿಗೆ ಸುಶೀಲ್‌ ಕುಮಾರ್‌ ಅವರನ್ನು  ಒಲಿಂಪಿಕ್ಸ್‌ಗೆ ಕಳುಹಿಸುವುದು ಅಸಾಧ್ಯ.
ಹೀಗಾಗಿ ಪುರುಷರ 74 ಕೆ.ಜಿ. ಫ್ರೀಸ್ಟೈಲ್‌ ಕುಸ್ತಿ ವಿಭಾಗದಲ್ಲಿ ಒಲಿಂಪಿಕ್ಸ್‌ ಮುನ್ನವೇ ಭಾರತದ ಸವಾಲು ಅಂತ್ಯಗೊಳ್ಳುವ ಸಾಧ್ಯತೆ ಇದೆ.

‘ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕುಸ್ತಿಪಟುಗಳ ಅಂತಿಮ ಪಟ್ಟಿ ಸಲ್ಲಿಸಲು ಜುಲೈ 18 ಕೊನೆಯ ದಿನವಾಗಿತ್ತು. ಹೀಗಾಗಿ ನರಸಿಂಗ್‌ ಬದಲಿಗೆ ಸುಶೀಲ್‌  ಅವರನ್ನು ರಿಯೊಗೆ ಕಳುಹಿಸುವುದು ಅಸಾಧ್ಯ’ ಎಂದು ಭಾರತ ಒಲಿಂಪಿಕ್‌ ಸಮಿತಿಯ ಮಹಾಕಾರ್ಯದರ್ಶಿ ರಾಜೀವ್‌ ಮೆಹ್ತಾ ತಿಳಿಸಿದ್ದಾರೆ.

‘ನಾನು ಯಾವ ತಪ್ಪನ್ನೂ ಮಾಡಿಲ್ಲ’
‘ನಾನು ನಿರ್ದೋಷಿ. ವೃತ್ತಿ ಬದುಕಿನಲ್ಲಿ ಒಮ್ಮೆಯೂ ನಿಷೇಧಿತ ಮದ್ದು ಸೇವಿಸಿಲ್ಲ. ರಿಯೊ ಒಲಿಂಪಿಕ್ಸ್‌ನಲ್ಲಿ  ಪಾಲ್ಗೊಳ್ಳುವುದನ್ನು ತಪ್ಪಿಸುವ ಉದ್ದೇಶದಿಂದ  ವಿನಾ ಕಾರಣ ನನ್ನನ್ನು ಈ ಹಗರಣದಲ್ಲಿ ಸಿಲುಕಿಸಲಾಗಿದೆ. ನನ್ನ ವಿರುದ್ಧ ಕೆಲವರು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ’ ಎಂದು ನರಸಿಂಗ್‌ ಪ್ರತಿಕ್ರಿಯಿಸಿದ್ದಾರೆ.

*
ನರಸಿಂಗ್‌ ತುಂಬಾ ಪ್ರಾಮಾಣಿಕ. ಅವರು ಉದ್ದೀಪನಾ ಮದ್ದು ಸೇವಿಸಿದ್ದಾರೆ ಎಂಬುದನ್ನು ನಾನು ಒಪ್ಪುವುದಿಲ್ಲ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಂತೆ ತಡೆಯಲು ಅವರ ವಿರುದ್ಧ ವ್ಯವಸ್ಥಿತ ಸಂಚು ನಡೆಸಲಾಗಿದೆ
-ಜಗಮಲ್‌ ಸಿಂಗ್‌,
ನರಸಿಂಗ್‌ ಯಾದವ್‌ ಕೋಚ್‌

ಮುಖ್ಯಾಂಶಗಳು

*74 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಬೇಕಿದ್ದ ಯಾದವ್‌
*ನಾಡಾ ತಂಡದಿಂದ ಪರೀಕ್ಷೆ
*ಮದ್ದು ಸೇವಿಸಿದ್ದ ಖಚಿತವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT