ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿ ಆಳಿಗೆ ಬದಲಿ ಯಂತ್ರ

ಹೊಸ ಹೆಜ್ಜೆ 9
Last Updated 20 ಜೂನ್ 2016, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಓಬಳಾಪುರ ಗ್ರಾಮದ ರೈತ ಗೋವಿಂದಪ್ಪನವರ ಜಮೀನು ಈಗ ಸಂಪೂರ್ಣ ಕೂಲಿಯಾಳು ಮುಕ್ತ. ಕೂಲಿಗಳು ಸಿಗದೇ ಪರದಾಡುತ್ತಿದ್ದ ರೈತನಿಗೀಗ ನಿಶ್ಚಿಂತೆ. ಏಕೆಂದರೆ ಹೊಲದಲ್ಲಿ ಯಂತ್ರದ್ದೇ ಕಾರುಬಾರು.

ಕೃಷಿ ಇಲಾಖೆಯ ಮಾರ್ಗದರ್ಶನದಂತೆ ತಮ್ಮ ಎಂಟು ಎಕರೆ ಜಮೀನಿನಲ್ಲಿ ಬೆಳೆಯುವ ಪ್ರತಿಯೊಂದು ಕೃಷಿಗೆ ವಿವಿಧ ಯಂತ್ರಗಳನ್ನು ಬಳಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಇದರಿಂದ ಹಣ ಹಾಗೂ ಸಮಯ ಉಳಿಯುತ್ತಿದ್ದು, ಲಾಭಾಂಶದಲ್ಲಿ ಗಣನೀಯ ಹೆಚ್ಚಳವಾಗಿದೆ ಎನ್ನುತ್ತಾರೆ.

ಈಚೆಗೆ ಕೃಷಿ ಕ್ಷೇತ್ರಕ್ಕೆ ಪರಿಚಯವಾದ ಶೇಂಗಾ ಕಟಾವು ಯಂತ್ರ (ಡಿಗ್ಗರ್) ಮತ್ತು ನೂತನ ವಿನ್ಯಾಸದ ಶೇಂಗಾ ಒಕ್ಕಣೆ ಯಂತ್ರದ ಮೂಲಕ ತಮ್ಮ ಹೊಲದಲ್ಲಿ ಬಿತ್ತನೆ ಮಾಡಿದ್ದ ಶೇಂಗಾವನ್ನು ಕಟಾವು ಮಾಡಿದ್ದಾರೆ. 10 ರಿಂದ 15 ಎಕರೆಯಲ್ಲಿ ಬಿತ್ತನೆ ಮಾಡಿದ ಶೇಂಗಾವನ್ನು ಈ ಯಂತ್ರ ಬಳಸಿ ಕಟಾವು ಮಾಡಲು ಸುಲಭ ಎನ್ನುವುದು ಅವರ ಮಾತು.

ಈ ಯಂತ್ರದ ಖರೀದಿಗೆ ಸುಮಾರು ಒಂಬತ್ತು ಲಕ್ಷ ವೆಚ್ಚ ತಗಲಿದೆ. ಇಷ್ಟು ಬೃಹತ್‌ ಮೊತ್ತ ನೀಡಿ ಯಂತ್ರ ಖರೀದಿಸುವುದು ಹಲವು ರೈತರಿಗೆ ಸಾಧ್ಯವಾಗದು. ಇದನ್ನು ಅರಿತಿರುವ ಕೃಷಿ ಇಲಾಖೆ ಈ ಯಂತ್ರಗಳನ್ನು ಬಾಡಿಗೆ ರೂಪದಲ್ಲಿ ನೀಡುತ್ತಿದೆ. ಸಣ್ಣ ಮತ್ತು ಮಧ್ಯಮ ರೈತರು ಈ ಯಂತ್ರವನ್ನು ಬಳಸಿ ತಮ್ಮ ಕೃಷಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು. 

‘ನಾನು ಕೂಡ ಕೃಷಿ ಇಲಾಖೆಯಿಂದ ಯಂತ್ರಗಳನ್ನು ಬಾಡಿಗೆ ಪಡೆದು ತರುತ್ತೇನೆ. ಶೇಂಗಾ ಕಟಾವು ಯಂತ್ರಕ್ಕೆ 800 ರೂಪಾಯಿ ಬಾಡಿಗೆ. 2–3 ದಿನಗಳಲ್ಲಿಯೇ ಕಟಾವು ಕಾರ್ಯ ಪೂರ್ತಿಗೊಳಿಸಬಹುದು. 8–10 ಕೂಲಿ ಕಾರ್ಮಿಕರ ಕೆಲಸವನ್ನು ಇದು ಮಾಡುತ್ತದೆ. ದಿನಗೂಲಿಗಳಿಗೆ ಪ್ರತಿಯೊಬ್ಬರಿಗೆ ದಿನವೊಂದಕ್ಕೆ 200–300 ರೂಪಾಯಿ ನೀಡಬೇಕಾಗುತ್ತದೆ.

ಅದನ್ನು ಗಣನೆಗೆ ತೆಗೆದುಕೊಂಡರೆ ಪ್ರತಿಯೊಬ್ಬರಿಗೆ ಎರಡೂವರೆ ಸಾವಿರ ರೂಪಾಯಿಗಳಷ್ಟು ಖರ್ಚು ಬರುತ್ತದೆ. ಅದರ  ಬದಲಿಗೆ ಈ ಕಟಾವು ಯಂತ್ರವನ್ನು ಬಳಸುವುದರಿಂದ ನನ್ನ ಎಂಟು ಎಕರೆ ಜಮೀನಿನ ಶೇಂಗಾವನ್ನು ಒಂದು ದಿನದ ಆರು ಗಂಟೆಗೆ ಸಮಯದಲ್ಲಿ ಕಟಾವು ಮಾಡುತ್ತೇನೆ’ ಎನ್ನುತ್ತಾರೆ ಗೋವಿಂದಪ್ಪ.

ಕೃಷಿ ಇಲಾಖೆ ಅಧಿಕಾರಿಗಳು ಯಂತ್ರಗಳ ಬಳಕೆ ಕುರಿತಂತೆ ರೈತರ ಮನವೊಲಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಕೆಲವೊಂದು ಹೊಲಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ನೀಡುವ ಮೂಲಕ ಯಂತ್ರದ ಪ್ರಯೋಜನದ ಕುರಿತು ವಿವರಿಸುತ್ತಿದ್ದಾರೆ. ‘ಕೂಲಿಯಾಳುಗಳನ್ನು ನಂಬಿ ಕುಳಿತುಕೊಳ್ಳುವ ಬದಲು ಇಂಥ ಯಂತ್ರಗಳನ್ನು ಉಪಯೋಗಿಸಿದರೆ  ಲಾಭದತ್ತ ಮುಖ ಮಾಡಬಹುದು’ ಎನ್ನುತ್ತಾರೆ ಕೃಷಿ ವಿಜ್ಞಾನಿ ಡಾ.ಶರಣಪ್ಪ ಜಂಗಂಡಿ. ಅವರ ಸಂಪರ್ಕಕ್ಕೆ 9448697143.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT