ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕರಾದ ಮೈಸೂರಿನ ಚಿಣ್ಣರು!

Last Updated 24 ಏಪ್ರಿಲ್ 2014, 10:55 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿಯ ರಂಗಾಯಣದಲ್ಲಿ ನಡೆಯುತ್ತಿರುವ ಚಿಣ್ಣರಮೇಳದಲ್ಲಿ ಬುಧವಾರ ಮಕ್ಕಳು ನೆಲವನ್ನು ಹದ ಮಾಡಿ, ಉತ್ತಿ– ಬಿತ್ತಿದರು, ಗೊಬ್ಬರವನ್ನು ಮಾಡಿ ಕೃಷಿಕರಂತೆಯೇ ಬೆವರು ಸುರಿಸಿದರು.

ಹೌದು, ಕೃಷಿಕ ಸ್ವಾಮಿ ಆನಂದ್‌ ಅವರಿಂದ ಭಾರತೀಯ ಕೃಷಿಕನ ಬದುಕು– ಬವಣೆ, ‘ಹಸಿರುಕ್ರಾಂತಿ’ಯ ಪರಿಣಾಮ, ಇಳುವರಿ ಹೆಚ್ಚಿಸುವ ನೆವದಲ್ಲಿ ರೈತರ ದೇಹವನ್ನು ಚಕ್ಕಳೆ ಮಾಡಿದ ರಸಗೊಬ್ಬರ ಕಾರ್ಖಾನೆಗಳ ಕರಾಳಮುಖಗಳ ದಿಗ್ದರ್ಶನ ಪಡೆದ ಮಕ್ಕಳು, ಸಾವಯವ ಕೃಷಿಯ ಶ್ರೇಷ್ಠತೆಯನ್ನು ತಿಳಿದರು. ಅಷ್ಟೇ ಅಲ್ಲದೆ, ತಮಗಾಗಿ ರಂಗಾಯಣ ನೀಡಿದ್ದ ಅಂಗೈಯಗಲದ ಭೂಮಿಯಲ್ಲಿ ಒಂದು ದಿನದ ಕೃಷಿಕರಾಗಿ ಗೇಯ್ಮೆ ಮಾಡಿ ಆನಂದಿಸಿದರು.

ಸ್ವಾಮಿ ಆನಂದ್‌ ಕೃಷಿ ಪದ್ಧತಿಗಳ ಕುರಿತು ವಿವರಣೆ ನೀಡುತ್ತಾ, ಇಂದು ನಗರ ಪ್ರದೇಶದಲ್ಲಿ ಬೆಳೆದ ಮಕ್ಕಳಿಗೆ ಕೃಷಿಯ ಮಹತ್ವವೇ ತಿಳಿದಿರುವುದಿಲ್ಲ. ಗ್ರಾಮೀಣ ಸಂಸ್ಕೃತಿಯ ಕಡೆ ನಗರದವರು ತೋರುವ ನಿರ್ಲಕ್ಷ್ಯದಿಂದ ಮಕ್ಕಳಿಗೆ ಆಹಾರ ವಿಧಾನಗಳು ತಿಳಿಯದಾಗಿವೆ. ರಾಸಾಯನಿಕಗಳೇ ತುಂಬಿದ ವಿಷಪೂರಿತ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಒಂದು ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಮಕ್ಕಳಿಗಾಗಿಯೇ ‘ಮಕ್ಕಳ ಸಣ್ಣ’ ಎಂಬ ರುಚಿಕಟ್ಟಾದ ಭತ್ತದ ತಳಿ ಇತ್ತು. ಇಂದು ಅದನ್ನು ಎಲ್ಲೂ ಬೆಳೆಯುತ್ತಿಲ್ಲ. ರಾಜರು ಇಷ್ಟಪಡುತ್ತಿದ್ದ ಮೈಸೂರು– ಹಾಸನ ಭಾಗಗಳಲ್ಲಿ ಮಾತ್ರ ಬೆಳೆಯಲ್ಪಡುವ ‘ರಾಜಮುಡಿ’ ಭತ್ತ ಕಾಣೆಯಾಗುತ್ತಿದೆ ಎಂದ ಅವರು, ಭತ್ತ ಬೆಳೆಯುವ ಅವಧಿ, ಭತ್ತದ ವಿವಿಧ ತಳಿಗಳಾದ ನಾಗಭತ್ತ, ಪರಿಮಳ ಭತ್ತಗಳ ಮಹತ್ವವನ್ನು ವಿವರಿಸಿದರು.

ಜೀವಾಮೃತ: ಸಾವಯವ ಮಾದರಿಯಲ್ಲಿ ಸೊಪ್ಪು, ತರಕಾರಿ, ಹೂಗಳನ್ನು ಬೆಳೆಯುವ ಕಲೆಯ ಪ್ರಾತ್ಯಕ್ಷಿಕೆಯನ್ನು ಸ್ವಾಮಿ ಆನಂದ್‌ ನೀಡಿದರು. 10ಕೆಜಿ ನಾಟಿ ಹಸುವಿನ ಸಗಣಿಗೆ 10ಲೀಟರ್‌ ಗಂಜಲ, 2ಕೆಜಿ ಬೆಲ್ಲ, ಕಡ್ಲೆಹಿಟ್ಟು ಮತ್ತು ಸಾಗುವಳಿ ಮಾಡುವ ಭೂಮಿಯ ಒಂದು ಹಿಡಿ ಮಣ್ಣಿನ್ನು ಬಳಸಿ ಜೀವಾಮೃತವನ್ನು ತಯಾರಿಸುವ ಕಿರು ಪ್ರಾತ್ಯಕ್ಷಿಕೆಯಲ್ಲಿ ಚಿಣ್ಣರು ಪಾಲ್ಗೊಂಡರು.

‘ಮಡಿಕೆ ಹೂ’ ಅರಳಿತು: ಪಡುವಾರಹಳ್ಳಿಯ ಕುಮಾರ್‌ ಅವರು ಮಡಿಕೆಯನ್ನು ತಯಾರಿಸುತ್ತಿದ್ದರೆ, ಮಕ್ಕಳು ಬೆರಗಿನ ಕಣ್ಣುಗಳಿಂದ ಮಣ್ಣು ಮಡಿಕೆಯಾಗಿ ಅರಳುವ ಪರಿಯನ್ನು ತುಂಬಿಕೊಂಡರು. ಕುಂಬಾರಿಕೆಯ ಚಕ್ರವನ್ನು ಮಕ್ಕಳು ತಿರುಗಿಸುತ್ತಿದ್ದರೆ, ಕುಮಾರ್‌ ಅವರ ಕೈಗಳು ಅಂದದ ಮಡಿಕೆಯನ್ನು ಸೃಷ್ಟಿಸುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT