ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕ ಮಹಿಳೆಯ ಕಡೆಗಣನೆ ಸಲ್ಲದು

ಎಂಎನ್‌ಸಿ ಸವಾಲು ಎದುರಿಸಲು ಮಾರ್ಗರೇಟ್ ಆಳ್ವಾ ಸಲಹೆ
Last Updated 28 ಮಾರ್ಚ್ 2015, 9:02 IST
ಅಕ್ಷರ ಗಾತ್ರ

ಮೈಸೂರು: ಕೃಷಿ ಕ್ಷೇತ್ರದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ದೊಡ್ಡದು. ಆದರೆ, ಭೂಸ್ವಾಧೀನ ಮಾಡುವ ಸಂದರ್ಭದಲ್ಲಿ ಭೂಮಾಲೀಕರ ಕುಟುಂಬದ ಒಬ್ಬ ಪುರುಷನಿಗೆ ನೌಕರಿ ನೀಡಲಾಗುತ್ತದೆ. ಮಹಿಳೆಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ ಆಕ್ಷೇಪವ್ಯಕ್ತಪಡಿಸಿದರು.

ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಮೈಸೂರು ಘಟಕ, ಯಂಗ್ ಇಂಡಿಯನ್ಸ್‌ ಆಶ್ರಯದಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ‘ಮಹಿಳಾ ನಾಯಕತ್ವ; ವಾಣಿಜ್ಯ ಕ್ಷೇತ್ರದಲ್ಲಿ ಮಹಿಳೆಯರ ಬೆಳವಣಿಗೆ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಬಂದ ಮೇಲೆ ಮಹಿಳೆಯರ ಜೀವನದ ಮೇಲೆ ಹಲವು ರೀತಿಯ ಪರಿಣಾಮ ಬೀರಿವೆ. ಭೂಸ್ವಾಧೀನ ಪ್ರಕ್ರಿಯೆಗಳು ಹೆಚ್ಚಾಗಿವೆ. ಬಹುರಾಷ್ಟ್ರೀಯ ಕಂಪೆನಿಗಳ (ಎಂಎನ್‌ಸಿ) ಸವಾಲನ್ನು ಮಹಿಳಾ ಉದ್ಯಮಿಗಳು ಎದುರಿಸಬೇಕಾಗಿದೆ. ಆಹಾರ ಸಂಸ್ಕರಣೆ ಮತ್ತು ಉತ್ಪಾದನೆ ಕ್ಷೇತ್ರದ ಬೆಳವಣಿಗೆಯಲ್ಲಿ ಗೃಹ ಕೈಗಾರಿಕೆಗಳದ್ದು ಸಿಂಹಪಾಲು. ಆದರೆ, ಬಹುರಾಷ್ಟ್ರೀಯ ಕಂಪೆನಿಗಳ ಉತ್ಪನ್ನಗಳು ಗೃಹ ಕೈಗಾರಿಕೆಗಳನ್ನು ನಾಶ ಮಾಡುತ್ತಿವೆ’ ಎಂದು ಅಭಿಪ್ರಾಯಪಟ್ಟರು.  

‘ಮಹಿಳೆಯರು ಧೈರ್ಯ, ಬದ್ಧತೆ ಮತ್ತು ಸಾಮರ್ಥ್ಯ ಮೈಗೂಡಿಸಿಕೊಂಡರೆ ಮಾತ್ರ ಜೀವನದಲ್ಲಿ ಯಶಸ್ಸಿನ ತುತ್ತತುದಿಗೆ ಏರಲು ಸಾಧ್ಯ, ಅತ್ಯುನ್ನತ ಸಾಧನೆ ಮಾಡಿರುವ ಮಹಿಳೆಯರ ಕುರಿತು ತಿಳಿದುಕೊಳ್ಳುವ ಮೂಲಕ ಸ್ಫೂರ್ತಿಗೊಳ್ಳಬೇಕು. ಮಹಿಳಾ ಉದ್ಯಮಗಳ ಮಾತು ಬಂದಾಗಲೆಲ್ಲ. ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲೆಪುಡಿ ಕೈಗಾರಿಕೆಗಳನ್ನು ಹೆಸರಿಸಲಾಗುತ್ತದೆ.

ಈಗ ಸ್ವಲ್ಪ ಬದಲಾವಣೆಯಾಗಿ ಪಿಜ್ಜಾ, ಪಾರ್ಲರ್ (ಬ್ಯೂಟಿ ಪಾರ್ಲರ್), ಪ್ರೀ ಸ್ಕೂಲಿಂಗ್ (ಮಕ್ಕಳ ಪಾಲನೆ ಸೇವಾವಲಯ) ಆಗಿದೆ. ಆದರೆ, ಪುರುಷರಿಗೆ ಮಾತ್ರ ಮಾಹಿತಿ ತಂತ್ರಜ್ಞಾನ, ಎಂಜಿನಿಯರಿಂಗ್, ವೈದ್ಯಕೀಯ, ಶಿಕ್ಷಣ ಇತ್ಯಾದಿ ಕ್ಷೇತ್ರಗಳನ್ನು ಗುರುತಿಸಲಾಗುತ್ತದೆ. ಇವತ್ತು ಮಹಿಳೆಯರು ಕೂಡ ಐಐಟಿ, ವೈದ್ಯಕೀಯ ಸೇರಿದಂತೆ ಎಲ್ಲ ವಿಷಯಗಳಲ್ಲಿಯೂ ಶಿಕ್ಷಣ ಪಡೆಯುತ್ತಿದ್ದಾರೆ. ಆದರೂ, ಪುರುಷಪ್ರಧಾನ ಸಮಾಜದ ಮನೋಭಾವ ಬದಲಾಗಿಲ್ಲ’ ಎಂದು ವಿಷಾದಿಸಿದರು.

‘ಇತ್ತೀಚಿನ ಸರ್ಕಾರಗಳ ಬಜೆಟ್‌ನಲ್ಲಿ ಮಹಿಳೆಯರ ಕಲ್ಯಾಣ ಮತ್ತು ಭದ್ರತೆಗಾಗಿ ಮೀಸಲಿಡುವ ಅನುದಾನವು ಕಡಿತಗೊಂಡಿದೆ. ಹೆಣ್ಣುಮಕ್ಕಳ ಕಲ್ಯಾಣದ ಕುರಿತು ಪುರುಷರು ನಿರ್ಧಾರ ಮಾಡುತ್ತಿರುವುದು ಇಂತಹ ಗೊಂದಲಗಳಿಗೆ ಕಾರಣ. ರಾಜಕೀಯದಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲು ನೀಡುತ್ತಿರುವುದು ಅಭಿವೃದ್ಧಿಗೆ ಸಹಕಾರಿಯಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ನಾಲ್ಕು ಗೋಡೆಗಳ ನಡುವೆ ಇದ್ದ ಸ್ತ್ರೀಯರು ಪಂಚಾಯಿತಿಗಳ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಮಹಿಳೆಯರು ರಾಜಕೀಯದಲ್ಲಿ ಬೆಳೆಯುವುದು ಬಹಳ ದೊಡ್ಡ ಸವಾಲು. ನನ್ನ ಅತ್ತೆ, ಮಾವ ಮತ್ತು ನನ್ನ ಪತಿಯ ಪ್ರೋತ್ಸಾಹ ಇರದೇ ಹೋಗಿದ್ದರೆ ನಾನು ಯಶಸ್ವಿಯಾಗುತ್ತಿರಲಿಲ್ಲ. ಆದ್ದರಿಂದ ಕೌಟುಂಬಿಕ ಬೆಂಬಲ ಮತ್ತು ಭದ್ರತೆ ಬಹುಮುಖ್ಯವಾಗುತ್ತವೆ’ ಎಂದರು. ಕಾರ್ಯಕ್ರಮದಲ್ಲಿ ಸಿಐಐ ಅಧ್ಯಕ್ಷ ಎನ್. ಮುತ್ತುಕುಮಾರ್, ಮೈಸೂರು ಘಟಕದ ಸಹಅಧ್ಯಕ್ಷೆ ರಮ್ಯಾ ಬೋಪಣ್ಣ, ಉಪಾಧ್ಯಕ್ಷ ಅರ್ಜುನ್ ಎಂ ರಂಗಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT