ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯಲ್ಲಿ ಹೊಸ ಅಲೆ ಎಬ್ಬಿಸಿದ ಪಾಳೇಕರ್

ಪ್ರೇರಣೆ
Last Updated 29 ಮೇ 2016, 19:30 IST
ಅಕ್ಷರ ಗಾತ್ರ

ಶೂನ್ಯ ಬಜೆಟ್‌ನ ನೈಸರ್ಗಿಕ ತೋಟ ನಿರ್ಮಾಣ ಮಾಡುವುದು ಹೇಗೆ ಎಂಬುದನ್ನು ಕುರಿತು ಸುಭಾಷ್‌ ಪಾಳೇಕರ್ ಹಂಚಿಕೊಂಡಿರುವ ಮಾಹಿತಿಗಳನ್ನಿಲ್ಲಿ ಸಂಗ್ರಹಿಸಲಾಗಿದೆ. ಇವು ಕೃಷಿಕರಿಗೆಲ್ಲರಿಗೂ ಉಪಯುಕ್ತ.

ಕೃಷಿ ಭೂಮಿಯಲ್ಲಿ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸದೆ ಬೆಳೆ ಬೆಳೆಯಲು ಸಾಧ್ಯವೇ ಇಲ್ಲ ಎಂಬ ಕಾಲ ಇದು. ಆದರೆ ಈ ಗೊಬ್ಬರಗಳಿಂದ ಭೂಮಿ ಫಲವತ್ತತೆ ಕಳೆದುಕೊಂಡು ಇಳುವರಿ ಕಡಿಮೆಯಾಗಿದೆ. ರಾಸಾಯನಿಕಗಳಿಂದ ಮನುಷ್ಯನ ಆರೋಗ್ಯವೂ ಹದಗೆಡುತ್ತಿದೆ. ಇದನ್ನು ಮನಗಂಡ ರೈತರೊಬ್ಬರು ಸಂಪೂರ್ಣವಾಗಿ  ರಾಸಾಯನಿಕ ರಹಿತ ತೋಟ ನಿರ್ಮಾಣ ಮಾಡುವ ಮೂಲಕ ಯಶಸ್ಸು ಸಾಧಿಸಿದ್ದಾರೆ. ಅವರೇ ಸುಭಾಷ್‌ ಪಾಳೇಕರ್‌.

ಅರ್ಗಿಕಲ್ಚರ್‌ನಲ್ಲಿ ಬಿ.ಎಸ್ಸಿ ಪದವಿ ಪಡೆದಿರುವ ಇವರು ಶೂನ್ಯ ಬಜೆಟ್‌ನಲ್ಲಿ ನೈಸರ್ಗಿಕ ತೋಟ ನಿರ್ಮಿಸುವ ಮೂಲಕ ಯಶಸ್ವಿಯಾಗಿದ್ದಾರೆ. ‘ಕೃಷಿ ಕಾ ರಿಷಿ’ ಎಂಬ ಹೆಸರಿನ ನೈಸರ್ಗಿಕ ತೋಟ ನಿರ್ಮಾಣ ಮಾಡುವ ಮೂಲಕ ದೇಶದಾದ್ಯಂತ ಹೆಸರು ಗಳಿಸಿದ್ದಾರೆ ಪಾಳೇಕರ್. ಇವರ ಈ ನೈರ್ಸಗಿಕ ಕೃಷಿ ಮಾದರಿ ದೇಶದಾದ್ಯಂತ ಪ್ರಖ್ಯಾತಿ ಹೊಂದಿದೆ.

ಪಾಳೇಕರ್ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಬೋಲೇರ್ ಎಂಬ ಹಳ್ಳಿಯ ಕೃಷಿ ಕುಟುಂಬದಲ್ಲಿ ಜನಿಸಿದವರು. ತೋಟಗಾರಿಕೆಯಲ್ಲಿ ಆಸಕ್ತಿಯಿದ್ದ ಕಾರಣ ನಾಗ್‌ಪುರದಲ್ಲಿ ಬಿ.ಎಸ್ಸಿ. ಅಗ್ರಿಕಲ್ಚರ್ ಮುಗಿಸಿದರು. ಸುಮಾರು ದಶಕಗಳ ಕಾಲ ಇವರು ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಿಯೇ ಕೃಷಿ ಮಾಡುತ್ತಿದ್ದರು. ರಾಸಾಯನಿಕ ಗೊಬ್ಬರಗಳನ್ನು ಹಾಕಿದ  ಬೆಳೆಯ ಫಸಲು ಉತ್ತಮವಾಗಿಯೇ ಬರುತ್ತಿತ್ತು.

ಆದರೆ ಹತ್ತು ವರ್ಷಗಳ ನಂತರ ಪಾಳೇಕರ್ ತಮ್ಮ ಕೃಷಿ ಭೂಮಿಯ ಇಳುವರಿ ಕುಸಿತವಾಗುತ್ತಿರುವುದನ್ನು ಸೂಕ್ಷವಾಗಿ ಗಮನಿಸಿದರು. ಈ ಬದಲಾವಣೆಗೆ ಕಾರಣ ಏನು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದರು, ಪಾಳೇಕರ್‌. ರಾಸಾಯನಿಕ ಗೊಬ್ಬರಗಳನ್ನು ಹಾಕಿ ಬೆಳೆದ ಹಣ್ಣು, ತರಕಾರಿಗಳಿಂದ ಜನರು ದೀರ್ಘ ಕಾಲದ ಕಾಯಿಲೆಗಳಿಗೆ ತುತ್ತಾಗುತ್ತಿರುವುದನ್ನು  ಇವರು ಕಂಡುಕೊಂಡರು.

ಇದರಿಂದ ಭೀತಿಗೊಂಡು ಸಂಪೂರ್ಣ ನೈಸರ್ಗಿಕ ತೋಟ ನಿರ್ಮಾಣ ಮಾಡುವ ಕನಸು ಕಂಡರು. ಇದಕ್ಕಾಗಿ ಸುಮಾರು ಎರಡು ವರ್ಷಗಳ ಕಾಲ ಸಂಶೋಧನೆಯನ್ನು ನಡೆಸಿದರು. ಹೀಗೆ ಕಾಡುಪ್ರದೇಶದಲ್ಲಿ ನೈಸರ್ಗಿಕ ತೋಟವನ್ನು ನಿರ್ಮಾಣ ಮಾಡುವ ಕಾರ್ಯ ಆರಂಭಿಸಿದರು. ಶೂನ್ಯ ಬಜೆಟ್‌ನ ತೋಟ ನಿರ್ಮಾಣ ಮಾಡುವ ಮೊದಲು ಅನೇಕ ಬಗೆಯ ಪ್ರಯೋಗಗಳನ್ನು ಮಾಡಿದರು.

ಶೂನ್ಯ ಬಜೆಟ್‌ನ ನೈಸರ್ಗಿಕ ತೋಟ ನಿರ್ಮಾಣ ಮಾಡುವುದು ಹೇಗೆ ಎಂಬುದನ್ನು ಕುರಿತು ಪಾಳೇಕರ್ ಹಂಚಿಕೊಂಡಿರುವ ಮಾಹಿತಿಗಳಲ್ಲಿ ಕೆಲವು ಹೀಗಿವೆ:
ಪ್ರತಿ ಸಸ್ಯವೂ ತನಗೆ ಬೇಕಾದ ನ್ಯೂಟ್ರಿಷಿಯನ್‌ ಅನ್ನು ಶೇ1.5 ರಿಂದ ಶೇ2ರಷ್ಟು ಭೂಮಿಯಿಂದ ಹೀರಿಕೊಳ್ಳುತ್ತದೆ. ಉಳಿದ ಭಾಗವು ಗಾಳಿ ಮತ್ತು ನೀರಿನಿಂದ  ನ್ಯೂಟ್ರಿಷನ್‌ ಸಿಗುತ್ತದೆ. ಹಾಗಾಗಿ ಉತ್ತಮ ಇಳುವರಿ ಪಡೆಯಲು ಮಣ್ಣಿಗೆ ರಾಸಾಯನಿಕಗಳನ್ನು ಸಿಂಪಡಿಸುವುದರಿಂದ ಯಾವುದೇ ಉಪಯೋಗ ವಾಗುವುದಿಲ್ಲ ಎಂದು ಪಾಳೇಕರ್ ಅಭಿಪ್ರಾಯ.

ಹೀಗೆ ನೈಸರ್ಗಿಕವಾಗಿ ಬೆಳೆದ ತೋಟದಲ್ಲಿ ಮರಗಿಡಗಳು ಸಮೃದ್ಧವಾಗಿ ಬೆಳೆದಿದ್ದವು. ಅಲ್ಲದೇ ಸಸ್ಯದ ಬೇರುಗಳು ಕೂಡ ಸಮೃದ್ಧವಾಗಿ ಬೆಳೆದವು. ಮಣ್ಣಿನಲ್ಲಿನ ಸೂಕ್ಷ್ಮಜೀವಿಗಳು ಮಣ್ಣಿನ ಫಲವತ್ತತೆ ಹೆಚ್ಚಲು ಸಹಾಯ ಮಾಡುತ್ತವೆ. ಊರು ತಳಿಯ ಹಸುವಿನ ಸಗಣಿಯನ್ನು ಭೂಮಿಗೆ ಹಾಕುವುದರಿಂದ ಭೂಮಿಯ ಇಳುವರಿ ಹೆಚ್ಚುತ್ತದೆ.

ದನದ ಮಲಮೂತ್ರಗಳನ್ನೇ ಭೂಮಿಗೆ ಹಾಕುವುದರಿಂದ ಭೂಮಿಯ ಫಲವತ್ತತೆಯ ಮಟ್ಟ ಹೆಚ್ಚುವುದಲ್ಲದೇ ಇಳುವರಿ ಕೂಡ ಉತ್ತಮವಾಗುತ್ತದೆ. ಅಷ್ಟೇ ಅಲ್ಲದ ಕಡಿಮೆ ಹಾಲು ನೀಡುವ ಹಸುವಿನ ಸಗಣಿಯಲ್ಲಿ ಮಣ್ಣಿಗೆ ಬೇಕಾಗುವ ನ್ಯೂಟ್ರಿಷನ್ ಅಂಶ ಅಧಿಕವಾಗಿರುತ್ತದೆ. ಇದು ಮಣ್ಣನ್ನು ಪುನರುಜ್ಜೀವನಗೊಳಿಸಲು ಕೂಡ ಸಹಕಾರಿ.

ಸುಮಾರು 40 ಲಕ್ಷ ಮಂದಿ ರೈತರು ಇಂದು ಪಾಳೇಕರ್ ವಿಧಾನವನ್ನು ಅನುಸರಿಸುವ ಮೂಲಕ ತಮ್ಮ ಕೃಷಿ ಭೂಮಿಯನ್ನು ರಾಸಾಯನಿಕ ಮುಕ್ತವನ್ನಾಗಿಸಿದ್ದಾರೆ. ತಮ್ಮ ನೂತನ ಕೃಷಿ ವಿಧಾನವನ್ನು ಜನರಿಗೆ ಮುಟ್ಟಿಸಲು ಪಾಳೇಕರ್ ಸುಮಾರು 25 ದಿನಗಳ ಕಾಲ ಸೆಮಿನಾರ್, ಉಪನ್ಯಾಸ, ಕ್ಷೇತ್ರ ಅಧ್ಯಯನಗಳ ಮೂಲಕ ಜನರಿಗೆ ತಲುಪುವಂತೆ ಮಾಡಿದರು.

ಕೇರಳ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಪಾಳೇಕರ್ ಅವರನ್ನು ತಮ್ಮ ರಾಜ್ಯಕ್ಕೆ ಆಹ್ವಾನಿಸಿದ್ದಾರೆ. ಆ ಮೂಲಕ ತಮ್ಮ ಜನರಿಗೆ ನೈರ್ಸಗಿಕ ಕೃಷಿಯಿಂದಾಗುವ ಉಪಯೋಗಗಳ ಕುರಿತು ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಾರೆ.

ಪಾಳೇಕರ್ ಅವರ  ಈ ನೂತನ ಕೃಷಿ ಪದ್ಧತಿ ಹಾಗೂ ಅದರಿಂದ ಭೂಮಿಯ ಇಳುವರಿಯನ್ನು ಗಮನಿಸಿದ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಹೀಗೆ ಸಾಮಾನ್ಯ ರೈತನೊಬ್ಬನ ಮಗ ಕೃಷಿ ಪದ್ಧತಿಯಲ್ಲಿ ಹೊಸತನವನ್ನು ತಂದು ಈ ಮೂಲಕ ದೇಶದಾದ್ಯಂತ ಹೆಸರು ಗಳಿಸುವ ಮೂಲಕ ದೇಶಕ್ಕೆ ಹೆಮ್ಮೆ ಎನ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT