ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯಿದು ಪ್ರಯೋಗ ಶಾಲೆ

Last Updated 31 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಎಂಜಿನಿಯರ್ ವೃತ್ತಿ ಬಿಟ್ಟು ಹಳ್ಳಿಗೆ ಮರಳಿ ಕೃಷಿ ಮಾಡುತ್ತಿರುವ ವಿಜೇತ ಅವರು ರೈತರ ಸರಣಿ ಆತ್ಮಹತ್ಯೆ ಕಾಣುತ್ತಿರುವ ಇಂದಿನ ದಿನಗಳಲ್ಲಿ ಭರವಸೆಯ ಬೆಳಕು.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ತೊಡಿಕಾನದ ಮರುವಳ ವಿಜೇತ ಅವರಿಗೆ ಕೃಷಿ ಬಗ್ಗೆ ಚಿಕ್ಕಂದಿನಿಂದಲೂ ಒಲವು. ಕೃಷಿ ಕುಟುಂಬದಲ್ಲೇ ಬೆಳೆದ ಅವರಿಗೆ ಮಣ್ಣಿಗೆ ತಾನೂ ಏನಾದರೂ ಕೊಡಬೇಕೆಂಬ ಹಂಬಲ. ಆದರೆ ಎಲ್ಲರಂತೆ ಅವರ ಅಪ್ಪ-ಅಮ್ಮನಿಗೂ ಮಗ ಕಲಿತು ಎಂಜಿನಿಯರ್ ಆಗಲಿ ಎಂಬ ಬಯಕೆ. ಇದಕ್ಕಾಗಿ ಮಗನನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಿದರು. ಅವರ ಹತ್ತಿರದ ಸಂಬಂಧಿಗಳೆಲ್ಲರೂ ಉನ್ನತ ಹುದ್ದೆ ಹೊಂದಿ ಅಮೆರಿಕ ಇತ್ಯಾದಿ ಹೊರದೇಶಗಳಲ್ಲಿರುವುದೂ ಇದಕ್ಕೆ ಕಾರಣ.

ಪ್ರತಿಭಾವಂತ ವಿದ್ಯಾರ್ಥಿಯಾದ ಅವರು ಹೆತ್ತವರ ಅಪೇಕ್ಷೆಯಂತೆ ಡಿಸ್ಟಿಂಕ್ಷನ್ ಅಂಕಗಳೊಂದಿಗೆ ಎಂಜಿನಿಯರಿಂಗ್ ಪದವೀಧರರಾದರು. ಬೆಂಗಳೂರಿಗೆ ತೆರಳಿ ದೊಡ್ಡ ಸಂಬಳ ಬರುವ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಆದರೆ ಅಲ್ಲಿ ಅವರಿಗೆ ಬಹಳ ಕಾಲ ಉಳಿಯಲಾಗಲಿಲ್ಲ. ಇನ್ನೊಬ್ಬರ ಕೈಕೆಳಗೆ ದುಡಿಯುವುದು ಕಷ್ಟವಾಯಿತು. ನೆಲದ ನಂಟು ಅವರನ್ನು ಸೆಳೆಯುತ್ತಿತ್ತು. ಕೊನೆಗೆ ತಂದೆ, ತಾಯಿ, ಅಜ್ಜಿಯನ್ನು ಒಪ್ಪಿಸಿ ಉತ್ತಮ ವೇತನದ ಕೆಲಸಕ್ಕೆ ರಾಜಿನಾಮೆ ನೀಡಿ ತಮ್ಮ ಕೃಷಿ ಜಮೀನಿಗೆ ಮರಳಿದರು.

ಹಿರಿಯರು ಮಾಡಿಟ್ಟ 50 ಎಕರೆ ಭೂಮಿಯಲ್ಲಿ ಬಂಗಾರದ ಬೆಳೆ ತೆಗೆಯುವ ಕನಸು ಕಂಡು ಸ್ವತಃ ದುಡಿಮೆ ಆರಂಭಿಸಿದರು. ಈ ಸಮಯದಲ್ಲಿ ಅವರಿಗೆ ಬೆಂಗಳೂರಿನ ಖ್ಯಾತ ದಂತವೈದ್ಯರೊಬ್ಬರ ಮಗಳೊಡನೆ ವಿವಾಹವೂ ಆಯಿತು. ಪೇಟೆಯಲ್ಲೇ ಹುಟ್ಟಿ ಬೆಳೆದು ಉನ್ನತ ವಿದ್ಯಾಭ್ಯಾಸವನ್ನು ಪಡೆದ ಅವರ ಮಡದಿಯೂ ಹಳ್ಳಿ ಬದುಕಿಗೆ ಹೊಂದಿಕೊಂಡರು. ಅವರ ಕೃಷಿ ಕೆಲಸಗಳಿಗೆ ಪೂರಕವಾದರು.

ವಿಜೇತ ಅವರು ಮೊದಲು ಹೆಚ್ಚು ದುಡ್ಡು ಬೇಡುವ ಕೃಷಿ ಕಾರ್ಮಿಕರ ಸಂಖ್ಯೆ ಕಡಿಮೆ ಮಾಡಿ ಆ ಜಾಗದಲ್ಲಿ ಯಂತ್ರೋಪಕರಣಗಳನ್ನು ಬಳಸಿಕೊಂಡರು. ತೋಟದ ಮೂಲೆ ಮೂಲೆಗೂ ವಾಹನ ಹೋಗುವಂತೆ ಮಾಡಿದರು. ಖಾಲಿ ಬಿದ್ದ ಜಮೀನಿನಲ್ಲಿ 2,500 ರಬ್ಬರ್ ಗಿಡಗಳನ್ನು ನೆಟ್ಟರು. ಅವರ ಕೃಷಿಭೂಮಿ ವೈವಿಧ್ಯಮಯ ಬೆಳೆಗಳ ಸಂಗಮ! 20 ಎಕರೆಯಷ್ಟು ಜಾಗದಲ್ಲಿ ಅಡಿಕೆ ತೋಟವಿದೆ. 12 ಎಕರೆಯಲ್ಲಿ ತೆಂಗು ಬೆಳೆಸಿದ್ದಾರೆ. ತೆಂಗಿನ ತೋಟದಲ್ಲಿ ಅಂತರಬೆಳೆಯಾಗಿ ಕೋಕೊ ನೆಟ್ಟಿದ್ದಾರೆ. ಕೋಕೊದಿಂದ ಬರುವ ಆದಾಯ ಅವರ ಮಳೆಗಾಲದ ಖರ್ಚನ್ನು ನಿಭಾಯಿಸುತ್ತದೆ.

ಉಳಿದ ಜಾಗದಲ್ಲಿ ಬಾಳೆ, ಹಲಸು, ದೀವಿ ಹಲಸು, ಹಣ್ಣಿನ ಗಿಡಗಳು ಇತ್ಯಾದಿ ಬೆಳೆಗಳಿವೆ. ಒಟ್ಟು 700 ತೆಂಗಿನ ಮರಗಳಿವೆ. ತೆಂಗಿನ ತೋಟದಿಂದ ವಾರ್ಷಿಕ 50 ಸಾವಿರ ತೆಂಗಿನಕಾಯಿ ಉತ್ಪಾದನೆಯಾಗುತ್ತದೆ.

ತೆಂಗಿನಕಾಯಿಯನ್ನು ವ್ಯಾಪಾರಿಗಳು ಮನೆಗೆ ಬಂದು ಖರೀದಿಸುತ್ತಾರೆ. ಅಡಿಕೆ ಮತ್ತು ತೆಂಗಿನ ಮರಗಳಿಗೆ ಕಾಳುಮೆಣಸಿನ ಬಳ್ಳಿ ಹಬ್ಬಿಸಿದ್ದಾರೆ. ಕಳೆದ ವರ್ಷ 150 ಅಗರ್‌ವುಡ್ ಗಿಡ ಹಾಕಿದ್ದಾರೆ. ಹೈನುಗಾರಿಕೆಯೂ ಇದೆ. ನೀರಿಗಾಗಿ ಕೆರೆ, ಹೊಳೆಯ ಅವಲಂಬನೆ. ಡೀಸೆಲ್ ಹಾಗೂ ವಿದ್ಯುತ್‌ನ ಪಂಪ್‌ಸೆಟ್ ಬಳಕೆ. ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸುತ್ತಾರೆ. ಸಾವಯವ ಗೊಬ್ಬರದ ಜತೆಗೆ ಸ್ವಲ್ಪ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರವನ್ನೂ ಹಾಕುತ್ತಾರೆ.

ಸಹೋದ್ಯೋಗಿ ಸ್ನೇಹಿತರು ಪರಿಶ್ರಮದ ಹಳ್ಳಿ ಜೀವನ ಬಿಟ್ಟು ನಗರ ಜೀವನಕ್ಕೆ ಹಿಂದಿರುಗುವಂತೆ ಒತ್ತಾಯಿಸುತ್ತಿದ್ದಾರೆ. ‘ಕಳೆದ ಎಂಟು ವರ್ಷಗಳ ಕೃಷಿ ಬದುಕಿನಲ್ಲಿ ಖುಷಿ ಪಡೆದಿದ್ದೇನೆ. ಮತ್ತೆ ಪೇಟೆಗೆ ಹೋಗುವ ವಿಚಾರವೇ ಇಲ್ಲ’ ಎಂದು ದೃಢವಾಗಿ ಹೇಳುತ್ತಾರೆ.

ಅವರ ಅಪ್ಪ, ಅಮ್ಮನಿಗೆ ಈಗ ಮಗನ ಕೃಷಿ ಸಾಧನೆ ಕುರಿತು ಹೆಮ್ಮೆ ಇದೆ. ತೋಟ ಹಸಿರಾದ ಬಗ್ಗೆ ಮೆಚ್ಚುಗೆ ಇದೆ. ಹಳ್ಳಿಯಲ್ಲಿ ನೆಮ್ಮದಿಯ ವಾತಾವರಣವಿದೆ. ಮಿಶ್ರ ಬೆಳೆ ಬೆಳೆಯಬೇಕು. ಎಲ್ಲದಕ್ಕೂ ಕೆಲಸಗಾರರನ್ನು ನೆಚ್ಚಿಕೊಳ್ಳದೆ ಹೊಸ ಪದ್ಧತಿ ಮತ್ತು ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಕೃಷಿ ಮಾಡಿದರೆ ಲಾಭದಾಯಕ ಎನ್ನುತ್ತಾರೆ ವಿಜೇತ. ಮಾಹಿತಿಗಾಗಿ 9448252880.
***
ಹುಳು ಬೀಳದಿರಲು
ಹುರುಳಿ, ಅವರೆಕಾಳು ಗಿಡಗಳಿಗೆ ಹುಳು ಬೀಳುವುದು ಸಾಮಾನ್ಯ. ಇದನ್ನು ತಪ್ಪಿಸಲು ಸುಲಭ ಮಾರ್ಗವೊಂದಿದೆ. ಅದೇನೆಂದರೆ ರಸ್ತೆಯಲ್ಲಿ ಸಿಗುವ ಮಣ್ಣನ್ನು ಹಿಟ್ಟಿನ ಜರಡಿಯಲ್ಲಿ ಗಾಳಿಸಿ (ಜಾಲಿಸಿ). 1:1 ಪ್ರಮಾಣದಲ್ಲಿ ಕಾಳು – ದೂಳು  ಅಥವಾ ಮಣ್ಣು ಬೆರೆಸಿ ಡಬ್ಬಿಯಲ್ಲಿ ತುಂಬಿಸಿ. ಹೀಗೆ ಬೆರೆಸಿರುವ ಮಿಶ್ರಣಕ್ಕೆ ಅರ್ಧ ಕೆ.ಜಿಯಷ್ಟು ಬೇವಿನ ಹಿಂಡಿಯನ್ನು ಪುಡಿ ಮಾಡಿ ಮಿಕ್ಸ್‌ ಮಾಡಿ. ಇದನ್ನು ಒಂದು ಬಾಟಲಿಯಲ್ಲಿ ಶೇಖರಿಸಿಡಿ. ಇದನ್ನು ಆಗಾಗ್ಗೆ ಗಿಡಗಳ ಮೇಲೆ ಹಾಕುತ್ತಿರಿ.
***
ಕೊತ್ತಂಬರಿ ಬೆಳೆವ ಮುನ್ನ
ಕೈತೋಟದಲ್ಲಿ ಕೊತ್ತಂಬರಿ ಸೊಪ್ಪು ಬೆಳೆಸುವುದಿದ್ದರೆ ಚಳಿಗಾಲದ ಕೊನೆಯಲ್ಲಿ, ಅಂದರೆ ವಸಂತ ಋತುವಿನಲ್ಲಿ ಬೆಳೆಯಲು ಆರಂಭಿಸಿ. ಇದನ್ನು ನೆಡುವ ಮೊದಲು ನೆಲವನ್ನು ಚೆನ್ನಾಗಿ ಉತ್ತುಕೊಳ್ಳಿ. ಚೆನ್ನಾಗಿ ಕೊಳೆತ ಎಲೆ, ಗೊಬ್ಬರ ಅಥವಾ ಕಾಂಪೋಸ್ಟ್  ಅನ್ನು 2-3 ಇಂಚುಗಳ ಮಣ್ಣಿನಲ್ಲಿ ಬೆರೆಸಿ. ಇದು ಮಣ್ಣನ್ನು ಫಲವತ್ತತೆಗೊಳಿಸುತ್ತದೆ. ನಂತರ ಮಣ್ಣನ್ನು ಸರಿಯಾಗಿ ಹಸನು ಮಾಡಿ. ಮಣ್ಣು ಮೃದುವಾಗುತ್ತದೆ. ಹೀಗಾದ ನಂತರವಷ್ಟೇ ಬೆಳೆಯಲು ಆರಂಭಿಸಿ.
***
ಜಂತು ಮುಕ್ತಿಗೆ ಬೆಳ್ಳುಳ್ಳಿ ತೈಲ
ಮೆಣಸಿನಕಾಯಿ, ಚಹಾ, ಕಬ್ಬು, ಬಾರ್ಲಿ, ಗೋಧಿ, ಕಬ್ಬು, ಹತ್ತಿ ಮುಂತಾದ ಗಿಡಗಳನ್ನು ಗಂಟುಬೇರಿನ ಜಂತುಹುಳು ಬಾಧಿಸುವುದರಿಂದ ಸಸ್ಯಗಳ ಬೆಳವಣಿಗೆ ಕುಂಠಿತವಾಗುವುದು ಮಾತ್ರವಲ್ಲದೇ ಎಲೆಗಳೂ ಬಿಳುಚಿಕೊಳ್ಳುತ್ತವೆ. ಇದರ ನಿವಾರಣೆಗೆ ಸಸಿ ನೆಡುವ ಮೊದಲೇ ಮುಂಜಾಗ್ರತೆ ವಹಿಸಬೇಕು. ಒಂದು ಬೆಳ್ಳುಳ್ಳಿ ಗಡ್ಡೆ ಸಾರ ಹಾಗೂ ಬೆಳ್ಳುಳ್ಳಿ ತೈಲ ಅಥವಾ ಸಾಬೂನು ದ್ರಾವಕ ತೆಗೆದು ಅದರಲ್ಲಿ ಸಸಿಗಳನ್ನು ಅದ್ದಿ ನಂತರ ನಾಟಿ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT