ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಿ.ವಿ: ದೂರು ಸಲ್ಲದು

Last Updated 7 ಜುಲೈ 2015, 19:51 IST
ಅಕ್ಷರ ಗಾತ್ರ

ಬೆಳಗಾವಿಯಲ್ಲಿ ನಡೆದಿರುವ ವಿಧಾನಮಂಡಲದ ಅಧಿವೇಶನದಲ್ಲಿ ಇತ್ತೀಚೆಗೆ ಕೃಷಿ ಬಗ್ಗೆ ನಡೆದ ಚರ್ಚೆಯಲ್ಲಿ ಬಸವರಾಜ ಬೊಮ್ಮಾಯಿ, ಕೃಷಿ ವಿಶ್ವವಿದ್ಯಾಲಯಗಳ ಅಸ್ತಿತ್ವವನ್ನೇ ಪ್ರಶ್ನಿಸಿದರು. ರೈತರ ಸಮಸ್ಯೆಗಳಿಗೆ ಇವು ಒಂದೇ ಒಂದು ಸಲಹೆಯನ್ನೂ ನೀಡಿದ ಇತಿಹಾಸವಿಲ್ಲ ಎಂದು ಜರಿದರು. ಮತ್ತೊಬ್ಬ ಶಾಸಕ ಗೋವಿಂದ ಕಾರಜೋಳ, ಕೃಷಿ ವಿ.ವಿ.ಗಳು ಪದವೀಧರರನ್ನು ಉತ್ಪಾದಿಸುವ ಕಾರ್ಖಾನೆಗಳು ಎಂದು ಆರೋಪಿಸಿದರು. ಇದಕ್ಕೆ ಅನೇಕ ಶಾಸಕರು ದನಿಗೂಡಿಸಿದರು. ಜನಪ್ರತಿನಿಧಿಗಳ ಈ ಆರೋಪಗಳಲ್ಲಿ ಸತ್ಯಾಂಶ ಇಲ್ಲ. ಹೀಗಾಗಿ ಇದಕ್ಕೆ ನನ್ನಂತಹ ಅನೇಕ ಕೃಷಿ ಪದವೀಧರರ ವಿರೋಧವಿದೆ.

ಸ್ವಾತಂತ್ರ್ಯ ಪಡೆದ ಆರಂಭದಲ್ಲಿ ಭಾರತ ಹಸಿವಿನಿಂದ ನರಳುತ್ತಿತ್ತು. ಅಮೆರಿಕದಂಥ ಮುಂದುವರಿದ ದೇಶಗಳಿಂದ ಆಹಾರವನ್ನು ಆಮದು ಮಾಡಿಕೊಂಡು ಜನರಿಗೆ ಅನ್ನ ಒದಗಿಸುವ ಸಂಕಷ್ಟದಲ್ಲಿತ್ತು.  1950ರಲ್ಲಿ ಕೇವಲ 5 ಕೋಟಿ ಟನ್‌ನಷ್ಟಿದ್ದ ಆಹಾರ ಉತ್ಪಾದನೆ ಇಂದು 25 ಕೋಟಿ ಟನ್‌ನಷ್ಟಾಗಿದೆ.  ಇದಕ್ಕೆ ಕೃಷಿ ವಿಜ್ಞಾನಿಗಳ ಅವಿರತ ಶ್ರಮ ಕಾರಣ. ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಬೇಳೆ ಕ್ರಾಂತಿಯಂತಹ ಎಲ್ಲ ಕ್ರಾಂತಿಗಳೂ ಕೃಷಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಹೈಬ್ರಿಡ್ ತಳಿಗಳಿಂದ ಸಾಧ್ಯವಾಯಿತು. ಪ್ರಸ್ತುತ ಕೃಷಿಯಲ್ಲಿ ಯಂತ್ರ ಬಳಕೆ, ಸಸ್ಯ ಸಂರಕ್ಷಣೆ, ಮಣ್ಣಿನ ಆರೋಗ್ಯ, ಕೊಯ್ಲಿನೋತ್ತರ ಸಂಸ್ಕರಣೆಯಂತಹ ವಿವಿಧ ತಾಂತ್ರಿಕತೆಯನ್ನು ರೂಪಿಸಿದ್ದು ಕೃಷಿ ವಿಜ್ಞಾನಿಗಳೇ.

ರಾಗಿಯಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ ಡಾ. ಲಕ್ಷ್ಮಣಯ್ಯ, ಪರಾಗಸ್ಪರ್ಶದ ಮೂಲಕ ಇಂಡಾಪ್ ಸರಣಿ ತಳಿಗಳನ್ನು ಅಭಿವೃದ್ಧಿಪಡಿಸಿದರು. ರಾಗಿ ಬೆಳೆಯಲ್ಲಿ ಹೈಬ್ರಿಡ್ ತಳಿ ಅಭಿವೃದ್ಧಿ ಅಸಾಧ್ಯ ಎಂದು ಪ್ರಪಂಚದ ಅನೇಕರು ನಂಬಿದ್ದಾಗ ಈ ವಿಜ್ಞಾನಿ ಚಮತ್ಕಾರವನ್ನೇ ಮಾಡಿದ್ದರು. ಈ ತಳಿಗಳನ್ನು ಇಡೀ ದಕ್ಷಿಣ ಭಾರತದಲ್ಲಿ ಇಂದಿಗೂ ರೈತರು ಬೆಳೆಯುತ್ತಿದ್ದಾರೆ.

ಹಾಗೆಯೇ ಅನೇಕ ಕೀಟಗಳ ಬಾಧೆಗೆ ಒಳಗಾಗಿದ್ದ ಹತ್ತಿಯಲ್ಲಿ ಬಿ.ಟಿ. ಹತ್ತಿಯನ್ನು ಅಭಿವೃದ್ಧಿ ಮಾಡಿ ರೈತರಿಗೆ ಕೋಟ್ಯಂತರ ರೂಪಾಯಿಯ ಆದಾಯ ತಂದಿದ್ದು ಕೃಷಿ ವಿಜ್ಞಾನಿಗಳು. ಇದೇ ರೀತಿ ಸೂರ್ಯಕಾಂತಿಯಲ್ಲಿ ಡಾ. ಸೀತಾರಾಮ್‌ ಅವರು ಕೆ.ಬಿ.ಎಸ್.ಎಚ್.  ಸರಣಿ ತಳಿಗಳನ್ನು ಬಿಡುಗಡೆಗೊಳಿಸಿದ್ದರು. ಭತ್ತದಲ್ಲಿ ವಿವಿಧ ಮಣ್ಣಿನ ಗುಣಕ್ಕೆ ತಕ್ಕಂತೆ ತಳಿಗಳನ್ನು ಅಭಿವೃದ್ಧಿಗೊಳಿಸಿರುವುದಲ್ಲದೆ, ಅಲ್ಪ ನೀರಿನಲ್ಲಿ ಬೆಳೆಯಬಹುದಾದ ಏರೋಬಿಕ್‌ ಭತ್ತದ ತಳಿಗಳನ್ನೂ ಕಾಣಬಹುದು. ಹೊಸ ಕಬ್ಬಿನ ತಳಿಗಳನ್ನು ಅಭಿವೃದ್ಧಿಗೊಳಿಸಿದ್ದರಿಂದ ಹೆಚ್ಚು ಸಕ್ಕರೆ ಉತ್ಪಾದನೆ ಸಾಧ್ಯವಾಗಿದೆ. ಕಾಳುಗಳಲ್ಲೂ ಹೊಸ ಕ್ರಾಂತಿಯೇ ಆಗಿದೆ. ತೆಂಗು, ಅಡಿಕೆ, ಬಾಳೆ, ಮಾವು, ಹಲಸು ಮತ್ತಿತರ ಹಣ್ಣು, ತರಕಾರಿಗಳಲ್ಲೂ ಅತ್ಯುತ್ತಮ ತಳಿಗಳನ್ನು ಕೃಷಿ ವಿ.ವಿ.ಗಳು ಬಿಡುಗಡೆ ಮಾಡಿವೆ. ವಾರಕ್ಕೆ ಎರಡು ಬಾರಿ ಹವಾಮಾನ ಆಧಾರಿತ ಕೃಷಿ ಮಾಹಿತಿಯನ್ನು ರೈತರಿಗೆ ಒದಗಿಸುತ್ತಿವೆ.

ಹಸಿರು ಕ್ರಾಂತಿ ಕಾಲದಲ್ಲಿ ಬಾಬು ಜಗಜೀವನರಾಂ ಕೃಷಿ ಸಚಿವರಾಗಿದ್ದಾಗ ಉದಾತ್ತ ಕೊಡುಗೆ ನೀಡಿ, ಕೃಷಿ ವಿ.ವಿ.ಗಳ ಸ್ಥಾಪನೆ, ಕೃಷಿ ನೀತಿಗೆ ಉತ್ತೇಜನ ನೀಡಿದ್ದರು. ಆದರೆ ಇಂದು ಅಂತಹ ಸಹಕಾರವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕಾಣುತ್ತಿಲ್ಲ. ಇಂದಿರಾ ಗಾಂಧಿ, ಚರಣ್ ಸಿಂಗ್, ಲಾಲ್ ಬಹದ್ದೂರ್‌ ಶಾಸ್ತ್ರಿ ಮುಂತಾದ ರಾಜಕಾರಣಿಗಳಿಗೆ ಕೃಷಿ ಬಗೆಗಿದ್ದ ಆಸಕ್ತಿ, ಬದ್ಧತೆಯನ್ನು ಇಂದಿನ ರಾಜಕಾರಣಿಗಳಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ.

ಉತ್ತರ ಮತ್ತು ದಕ್ಷಿಣಕ್ಕೆ ಸೀಮಿತ ಎಂಬಂತೆ ಧಾರವಾಡ ಮತ್ತು ಬೆಂಗಳೂರು ಕೃಷಿ ವಿ.ವಿ.ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು. 2004ರಿಂದೀಚೆಗೆ 6 ವಿ.ವಿ.ಗಳು ತಲೆ ಎತ್ತಿವೆ. ಆದರೆ ಕೃಷಿಯಿಂದ ಪಶು ಮತ್ತು ತೋಟಗಾರಿಕಾ ವಿಜ್ಞಾನವನ್ನು ಬೇರ್ಪಡಿಸಿ ಪ್ರತ್ಯೇಕ ವಿ.ವಿ.ಗಳನ್ನು ಮಾಡುವ ಜರೂರೇನಿತ್ತು? ದೂರದ ಊರಿನಿಂದ ಬರುವ ರೈತ ತನ್ನ ಬೆಳೆ ಸಮಸ್ಯೆ ನಿವಾರಿಸಿಕೊಳ್ಳಲು ಕೃಷಿ ವಿ.ವಿ.ಗೆ ಭೇಟಿ ನೀಡಿ, ನಂತರ ತೋಟದ ಸಮಸ್ಯೆಗೆ ತೋಟಗಾರಿಕೆ ವಿ.ವಿ. ಹಾಗೂ ಹಸುಗಳ ಸಮಸ್ಯೆ ಬಗೆಹರಿಸಿಕೊಳ್ಳಲು ಪಶು ವಿಜ್ಞಾನ ವಿ.ವಿ.ಗೆ ಅಲೆದಾಡುವ ಸ್ಥಿತಿ ತಂದಿಟ್ಟಿದ್ದು ಸರ್ಕಾರ. ವಿ.ವಿ.ಗಳು ಹೆಚ್ಚಾದಂತೆ ತನ್ನ ನಿಷ್ಠಾವಂತ ಪ್ರಾಧ್ಯಾಪಕರನ್ನು ಹೊಸ ವಿ.ವಿ.ಗಳ ಕುಲಪತಿ, ಕುಲಸಚಿವರು ಅಥವಾ ಡೀನ್‌ಗಳನ್ನಾಗಿ ನೇಮಿಸಬಹುದೆಂಬ ಜನಪ್ರತಿನಿಧಿಗಳ ಒಳಮರ್ಮ ಎಲ್ಲರಿಗೂ ತಿಳಿದಿದೆ. 

ಇಂದು ಕೃಷಿ ಇಲಾಖೆ ಕೇವಲ ಬೀಜ, ಗೊಬ್ಬರಗಳನ್ನು ವಿತರಿಸುವ ಕೇಂದ್ರವಾಗಿರುವುದರಿಂದ ಹಾಗೂ ಕಡಿಮೆ ಸಿಬ್ಬಂದಿ ವರ್ಗ ಇರುವುದರಿಂದ ಹೊಲ ಗದ್ದೆಗಳಿಗೆ ಹೋಗಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ. ವಿ.ವಿ.ಗಳು ಮತ್ತು ಇಲಾಖೆಯಲ್ಲಿನ ನ್ಯೂನತೆಗಳು ತಿಳಿದಿದ್ದರೂ ತಿಳಿಯದಂತೆ ಸರ್ಕಾರಗಳು ಜಾಣ ಕಿವುಡುತನ ಪ್ರದರ್ಶಿಸುತ್ತಿವೆ. ರೈತರ ಸರಣಿ ಆತ್ಮಹತ್ಯೆಗೆ ಬೇರೆ ಬೇರೆ ಕಾರಣಗಳಿವೆ. ಇವುಗಳನ್ನು ಬಗೆಹರಿಸುವುದು ಸರ್ಕಾರಗಳ ಜವಾಬ್ದಾರಿ ಹೊರತು ವಿ.ವಿ.ಗಳದ್ದಲ್ಲ.

ಇನ್ನು ಕೃಷಿ ವಿ.ವಿ.ಗಳು ಪದವೀಧರರನ್ನು ತಯಾರಿಸುವ ಕಾರ್ಖಾನೆಗಳು ಎಂಬ ಆರೋಪಕ್ಕೆ ಉತ್ತರಿಸುವುದಾದರೆ, ಪ್ರತಿ ವರ್ಷವೂ ಪ್ರವೇಶಾತಿ ಸಂದರ್ಭದಲ್ಲಿ ಸರ್ಕಾರ ಸೀಟುಗಳ ಸಂಖ್ಯೆಯನ್ನು ಏರಿಸುತ್ತಲೇ ಬಂದಿದೆ. ಹಾಗೆಯೇ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಲು ಎನ್‌ಆರ್‌ಐ ಕೋಟಾ ತೆರೆದಿದೆ. ಈ  ಕೋಟಾದಡಿ ಸೀಟು ಗಿಟ್ಟಿಸಿಕೊಳ್ಳಲು ವರ್ಷಕ್ಕೆ ಸುಮಾರು ₨ 5 ಲಕ್ಷ ಪಾವತಿಸಬೇಕಾಗುತ್ತದೆ. ದುಬಾರಿ ಶುಲ್ಕ ಕಟ್ಟಿ ರೈತ ಅಥವಾ ಸಾಮಾನ್ಯ ಮಕ್ಕಳು ಹೇಗೆ ಓದಲು ಸಾಧ್ಯ? ಇದೆಲ್ಲ ರಾಜಕಾರಣಿಗಳು, ಅವರ ಹಿಂಬಾಲಕರು, ರಿಯಲ್ ಎಸ್ಟೇಟ್ ಉದ್ಯಮಿಗಳ ಮಕ್ಕಳಿಗೆ ಮೀಸಲಾದ ಸೀಟುಗಳು ಎನ್ನಬಹುದಲ್ಲವೆ?

ಇನ್ನೊಂದು ಗಂಭೀರ ವಿಷಯ, ಕಳೆದ ವರ್ಷದಿಂದ ಬೆಂಗಳೂರು ಉತ್ತರ ತಾಲ್ಲೂಕಿನ ಮಧುರೈ ಎಂಬಲ್ಲಿ ಖಾಸಗಿ ಸಂಸ್ಥೆಯೊಂದಕ್ಕೆ 4 ವರ್ಷದ ಕೃಷಿ ಪದವಿ ನಡೆಸಲು ಅನುಮತಿ ನೀಡಲಾಗಿದೆ. ಈ ಪದವಿಗೆ ಇನ್ನೂ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಅನುಮತಿ ದೊರೆತಿಲ್ಲ. ಹಾಗಿದ್ದರೂ ಈ ಸಂಸ್ಥೆ ವಿರುದ್ಧ ಸರ್ಕಾರ  ಕ್ರಮಕ್ಕೆ ಮುಂದಾಗಿಲ್ಲ. ಕೇಂದ್ರದ ಉದ್ದೇಶಿತ ಭೂ ಮಸೂದೆ ಜಾರಿಯಾದರೆ ರೈತರ ಆತ್ಮಹತ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇಲ್ಲದಿಲ್ಲ. ಬಿ.ಟಿ. ತರಕಾರಿ ಮತ್ತಿತರ ಬೆಳೆಗಳ ಸಂಶೋಧನೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಸರ್ಕಾರ, ಅವುಗಳನ್ನು ಬಳಕೆಗೆ ಬಿಡುಗಡೆಮಾಡಲು ಮೀನಮೇಷ ಎಣಿಸುತ್ತದೆ. ಆದರೂ ಸಂಶೋಧನೆಗೆ ಹಣ ಬಿಡುಗಡೆ ಮಾಡುತ್ತದೆ. ಇದರಿಂದ ಬೊಕ್ಕಸಕ್ಕೆ ನಷ್ಟವಲ್ಲವೆ?

ಹೀಗೆ ಸರ್ಕಾರದ ನಿಲುವಿನಲ್ಲೆ ನ್ಯೂನತೆ ಸಾಕಷ್ಟಿದ್ದರೂ, ಒಂದಿಷ್ಟು ನ್ಯಾಯಸಮ್ಮತವಾಗಿ ಕಾರ್ಯ ನಿರ್ವಹಿಸುತ್ತಿರುವ ಕೃಷಿ ವಿ.ವಿ. ಮತ್ತು ವಿಜ್ಞಾನಿಗಳನ್ನು ದೂರುವುದು ಸಮಂಜಸವಲ್ಲ. ಸರ್ಕಾರ, ಕೃಷಿ ವಿ.ವಿ.ಗಳಿಗೆ ಮತ್ತಷ್ಟು ಸಹಕಾರ ನೀಡಿ ರೈತರನ್ನು ತಲುಪಬೇಕಾಗಿದೆ.  ತಜ್ಞರ ಸಮಿತಿ ರಚಿಸಿ ಕೃಷಿ ವಲಯವನ್ನು ಸದೃಢವಾಗಿಸುವ ಮಾರ್ಗೋಪಾಯ ಕಂಡುಕೊಂಡರೆ ನಿಜಕ್ಕೂ ಮತ್ತೊಮ್ಮೆ ಎರಡನೇ ಕೃಷಿ ಕ್ರಾಂತಿಯನ್ನು ಕಾಣಬಹುದು. 
- ಲೇಖಕ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸಹ ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT