ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಪಟ್ಟಣಂ ಬಂದರು: ಹೊಸ ಹೆಬ್ಬಾಗಿಲು

Last Updated 21 ಜೂನ್ 2016, 19:30 IST
ಅಕ್ಷರ ಗಾತ್ರ

ಕೃಷ್ಣಪಟ್ಟಣಂ ಬಂದರು, ದೇಶದ ಅತಿ ದೊಡ್ಡ ಖಾಸಗಿ ಬಂದರಾಗಿದ್ದು, ಗ್ರಾಹಕ ಸ್ನೇಹಿಯೂ ಸೇರಿದಂತೆ ಹಲವಾರು ಹೆಗ್ಗಳಿಕೆಗಳನ್ನು ಹೊಂದಿದೆ. ಬಂದರಿನ ಅಭಿವೃದ್ಧಿ ಮತ್ತು ಆಮದು – ರಫ್ತಿಗೆ ಕರ್ನಾಟಕದ ಅನೇಕ ಉದ್ದಿಮೆಗಳು ಈ ಬಂದರನ್ನು ಹೆಚ್ಚಾಗಿ ಅವಲಂಬಿಸುತ್ತಿರುವುದನ್ನು ಅಮಿತ್‌ ಎಂ. ಎಸ್. ಇಲ್ಲಿ ವಿವರಿಸಿದ್ದಾರೆ.

ಕೃಷ್ಣಪಟ್ಟಣಂ ಬಂದರಿಗೆ ಚಾರಿತ್ರಿಕ ಮಹತ್ವವಿದೆ. ಕೃಷ್ಣಪಟ್ಟಣಂ ಎಂಬ ಹೆಸರು ಬಂದದ್ದು ವಿಜಯನಗರದ ಅರಸ ಶ್ರೀಕೃಷ್ಣದೇವರಾಯನಿಂದ. ಕ್ರಿ.ಶ. 1500ರ ಕಾಲಘಟ್ಟದಲ್ಲಿಯೂ ಈ ಪುಟ್ಟ ಹಳ್ಳಿಯ ಊರು ರಫ್ತು–ಆಮದಿನ ಪ್ರಮುಖ ಬಂದರಾಗಿತ್ತು. ಆಗ ಕುದುರೆಗಳು ಸೇರಿದಂತೆ ಅನೇಕ ಸರಕುಗಳನ್ನು ಈ ಬಂದರಿನ ಮೂಲಕವೇ ವಿಜಯನಗರದ ಅರಸರು ಆಮದು ಮಾಡಿಕೊಳ್ಳುತ್ತಿದ್ದರು’...

–ಕೃಷ್ಣಪಟ್ಟಣಂ ಬಂದರು ಕಂಪೆನಿ ನಿಯಮಿತದ (ಕೆಪಿಸಿಟಿ) ಗ್ರಾಹಕರ ವಿಭಾಗದ ಅಧಿಕಾರಿ ಕೃಷ್ಣಾರೆಡ್ಡಿ, ಅಲ್ಪಾವಧಿಯಲ್ಲಿ ಬಂದರು ಬೆಳೆದ ಬಗೆಯನ್ನು ಇತಿಹಾಸದ ಪುಟಗಳ ನೆನಪುಗಳನ್ನು ಕೆದಕುತ್ತಾ ವಿವರಿಸುವಾಗ, ಚರಿತ್ರೆಯ ಕುರುಹುಗಳೆಲ್ಲಾದರೂ ಕಾಣಿಸುತ್ತವೆಯೇ ಎಂಬ ಕುತೂಹಲದಿಂದ ಹುಡುಕಿದೆವು. ಅದರ ಪುಟ್ಟದೊಂದು ಸುಳಿವೂ ಇರಲಿಲ್ಲ.

ಹೆಚ್ಚೂ ಕಡಿಮೆ ಸಮತಟ್ಟಾಗಿದ್ದ ವಿಶಾಲ ಭೂ ಪ್ರದೇಶದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಕಾಣಿಸುತ್ತಿದ್ದದ್ದು ಆಕಾಶದೆತ್ತರದ ಬೃಹತ್‌ ಯಂತ್ರಗಳು, ದೊಡ್ಡ ಕಟ್ಟಡಗಳು, ಯಾವ ದಾರಿ ಎಲ್ಲಿಗೆ ಹೋಗುತ್ತದೆ ಎಂಬ ಗೊಂದಲ ಹುಟ್ಟಿಸುವ ಹತ್ತಾರು ದಾರಿಗಳು, ಸರಕು ಸರಂಜಾಮುಗಳನ್ನು ಹೊತ್ತೊಯ್ಯುವ ವಾಹನಗಳು, ರಸ್ತೆಯ ಕಸಗಳನ್ನು ಗುಡಿಸುವ, ಕಲ್ಲಿದ್ದಲ ರಾಶಿಯನ್ನು ಮೊಗೆಯುವ ಕಾರ್ಮಿಕರು.

ಹೆಗ್ಗಳಿಕೆಗಳ ನಡುವೆ
ಭಾರತದ ಪೂರ್ವ ಕರಾವಳಿಯ ಅತಿ ದೊಡ್ಡ ಖಾಸಗಿ ಬಂದರು, ಅತಿ ಆಳದ ಬಂದರು, ದೇಶದ ಎರಡನೇ ಅತಿ ದೊಡ್ಡ ಬಂದರು, ಮೂರನೇ ಅತಿ ದೊಡ್ಡ ಕಲ್ಲಿದ್ದಲು ಮತ್ತು ಖಾದ್ಯ ತೈಲ ನಿರ್ವಹಣೆಯ ಬಂದರು, ಭಾರತದ ವೇಗವಾಗಿ ಅಭಿವೃದ್ಧಿ ಯಾಗುತ್ತಿರುವ ಕಂಟೈನರ್ ಟರ್ಮಿನಲ್‌, ಸರಕುಗಳ ಸಾಗಣೆಯ ಅತಿ ದೊಡ್ಡ ಕ್ರೇನ್‌ ಹೀಗೆ ಕೆಪಿಸಿಟಿ ಹಲವು ಹೆಗ್ಗಳಿಕೆಗಳನ್ನು ಹೊಂದಿದೆ. 2 ಲಕ್ಷ ಟನ್‌ ಡಿಡಬ್ಲ್ಯುಟಿವರೆಗಿನ (ಡೆತ್‌ ವೇಟ್‌ ಟನ್ನೇಜ್‌) ಹಡಗು ನಿರ್ವಹಣೆ ಸಾಮರ್ಥ್ಯ ಹೊಂದಿರುವ ಈ ಬಂದರಿನಲ್ಲಿ, ಹಡಗುಗಳು ಕಂಟೈನರ್ ಸಾಗಿಸುವ ಸಾಮರ್ಥ್ಯ 60 ಲಕ್ಷ ಟ್ವೆಂಟಿ ಫೂಟ್‌ ಈಕ್ವೆಲೆಂಟ್ ಯುನಿಟ್‌ ದಷ್ಟಿದೆ.

ಎಂಟು ವರ್ಷದಲ್ಲೇ ಅಭಿವೃದ್ಧಿ
ಯಾವುದೇ ಅಭಿವೃದ್ಧಿ ಇಲ್ಲದೆ ಸೂಕ್ತವಾಗಿ ಬಳಕೆಯಾಗದಿದ್ದ ಕೃಷ್ಣಪಟ್ಟಣಂ ಬಂದರನ್ನು ಅಭಿವೃದ್ಧಿಪಡಿಸುವ ಹೊಣೆಯನ್ನು ಆಂಧ್ರಪ್ರದೇಶ ಸರ್ಕಾರ ಸಿವಿಆರ್‌ ಸಮೂಹದ ನವಯುಗ ಎಂಜಿನಿಯರಿಂಗ್ ಕಂಪೆನಿ ನಿಯಮಿತಕ್ಕೆ 2008ರಲ್ಲಿ ಒಪ್ಪಿಸಿತ್ತು. ಸುಮಾರು ಆರೂವರೆ ಸಾವಿರ ಎಕರೆ ಪ್ರದೇಶದ ಕಡಲ ತೀರವನ್ನು ಅತ್ಯಾಧುನಿಕ ಸೌಕರ್ಯ, ಸೌಲಭ್ಯದ ಬಂದರನ್ನಾಗಿ ಪರಿವರ್ತಿಸಲು ಸರ್ಕಾರ ಮತ್ತು ಕಂಪೆನಿ ನಡುವೆ 50 ವರ್ಷದ ಒಪ್ಪಂದ ನಡೆಯಿತು. ಈ ಅವಧಿಯಲ್ಲಿ ಬಂದರು ಅಭಿವೃದ್ಧಿಗೆ ಬೇಕಾದ ಹೂಡಿಕೆ, ಅದರೊಳಗೆ ಮೂಲಸೌಕರ್ಯಗಳನ್ನು ಕಲ್ಪಿಸುವುದು, ಕಟ್ಟಡಗಳ ನಿರ್ಮಾಣ, ನಿರ್ವಹಣೆ, ಆಮದು–ರಫ್ತು ವ್ಯವಹಾರ, ಆಡಳಿತ ಹೀಗೆ ಪ್ರತಿಯೊಂದರ ಹೊಣೆಯೂ ಕಂಪೆನಿಯದೇ.

ಒಟ್ಟಾರೆ ಅದರ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಎನ್ನುತ್ತಾರೆ ಕೆಪಿಸಿಟಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜಿತೇಂದ್ರ ನಿಮ್ಮಗಡ್ಡ. ಉಳಿದ ಎಲ್ಲ ಬಂದರುಗಳಿಗಿಂತ ಕೃಷ್ಣಪಟ್ಟಣಂ ಹೆಚ್ಚು ಗ್ರಾಹಕ ಸ್ನೇಹಿ ಮತ್ತು ಲಾಭದಾಯಕ ಎನ್ನುತ್ತಾರೆ ಜಿತೇಂದ್ರ. ದಕ್ಷಿಣ ಭಾರತದ ರಾಜ್ಯಗಳಿಗೆ ಚೆನ್ನೈ ಬಂದರು ಪ್ರಮುಖ ರಫ್ತು ಮತ್ತು ಆಮದು ಕೇಂದ್ರವಾಗಿತ್ತು. ಆದರೆ ವ್ಯಾಪಕ ಸ್ಥಳಾವಕಾಶ, ದಕ್ಷತೆ, ಮೂಲಸೌಕರ್ಯಗಳ ಕೊರತೆಯಿಂದಾಗಿ ಅಲ್ಲಿ ನಡೆಯುವ ವಹಿವಾಟು ವಿಳಂಬವಾಗುತ್ತದೆ. ಆಡಳಿತಾತ್ಮಕವಾಗಿಯೂ ಹಲವು ರೀತಿ ರಿವಾಜುಗಳಿರುವುದರಿಂದ ಅವುಗಳನ್ನು ಪಾಲಿಸಲು ಹೆಚ್ಚು ಸಮಯ ತಗಲುತ್ತದೆ.

ಅಲ್ಲಿನ ಸರಕು ಸಾಗಾಟದ ಸಾಮರ್ಥ್ಯವೂ ಕಡಿಮೆ. ಚೆನ್ನೈ ನಗರದಿಂದ ಸರಾಗವಾಗಿ ಸಾರಿಗೆ ಅಡೆತಡೆಗಳಿಲ್ಲದ ಸರಕು ಸಾಗಾಟವೂ ಕಷ್ಟ. ಇದರಿಂದ ವೆಚ್ಚವೂ ಹೆಚ್ಚು. ಈ ಯಾವ ಸಮಸ್ಯೆಯೂ ಕೃಷ್ಣಪಟ್ಟಣಂನಲ್ಲಿ ಇಲ್ಲ. ಕಲ್ಲಿದ್ದಲು, ಕಬ್ಬಿಣದ ಅದಿರು, ರಸಗೊಬ್ಬರ, ಖಾದ್ಯ ತೈಲ, ಜಿಪ್ಸಂ, ಕಚ್ಚಾ ಸಕ್ಕರೆ ಮುಂತಾದವು ಇಲ್ಲಿ ಹೆಚ್ಚು ಆಮದಾಗುವ ಸರಕುಗಳು. ಕಬ್ಬಿಣದ ಅದಿರು, ಜೋಳ, ಗ್ರಾನೈಟ್‌, ಸುಣ್ಣದ ಕಲ್ಲು, ಗೋಧಿ, ಭತ್ತ ಹೆಚ್ಚು ಪ್ರಮಾಣದಲ್ಲಿ ರಫ್ತಾಗುತ್ತಿವೆ. ಪೆಟ್ರೋಲಿಯಂ ಉತ್ಪನ್ನಗಳ ಆಮದಿನ ಕೇಂದ್ರವನ್ನಾಗಿಸುವ ಗುರಿಯೂ ಇದೆ ಎಂದು ವಿವರಿಸುತ್ತಾರೆ ಅವರು. ಇಲ್ಲಿನ ವ್ಯವಹಾರದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ.

ಏಕ ಗವಾಕ್ಷಿ ಯೋಜನೆಯಲ್ಲಿ ವಹಿವಾಟುಗಳು ನಡೆಯುತ್ತವೆ. ಬಹುತೇಕ ವ್ಯವಹಾರಗಳು ಕಾಗದ ಮುಕ್ತವಾಗಿವೆ. ಎಲ್ಲವೂ ಗಣಕೀಕೃತವಾಗಿ ನಡೆಯುತ್ತವೆ. ಬೆಂಗಳೂರಿನಲ್ಲಿ ಕುಳಿತ ಗ್ರಾಹಕ ತನ್ನ ಸರಕು ಸರಂಜಾಮು ಎಲ್ಲಿದೆ ಎಂಬುದನ್ನು ಅಲ್ಲಿಂದಲೇ ಗಮನಿಸಬಹುದು. 24X7 ಗ್ರಾಹಕ ಸೇವೆ ಯೋಜನೆ ಇರುತ್ತದೆ. ಇಲ್ಲಿಂದ ಚೆನ್ನೈ, ಬೆಂಗಳೂರು, ವಿಜಯವಾಡ, ಹೈದರಾಬಾದ್‌ ನಗರಗಳಿಗೆ ರಸ್ತೆ ಮತ್ತು ರೈಲು ಸಂಪರ್ಕಗಳಿರುವುದರಿಂದ ಸರಕು ಸಾಗಾಟಕ್ಕೆ ಕಷ್ಟಪಡಬೇಕಿಲ್ಲ ಎಂದು ಅವರು ಹೇಳುತ್ತಾರೆ.

ಮೊದಲ ಹಂತದಲ್ಲಿ ಕಳೆದ ವರ್ಷ 1 ಕೋಟಿ ಟನ್‌ ಸರಕು ವಹಿವಾಟು ನಡೆದಿದೆ. ಮುಂದಿನ ವರ್ಷ ಅದರ ಪ್ರಮಾಣ 1.50 ಕೋಟಿ ಟನ್‌ಗೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಇದು ಒಟ್ಟು ಸಾಮರ್ಥ್ಯದ ಶೇ 10ರಷ್ಟು ಮಾತ್ರ. ಇದರ ಜತೆಗೆ 2ನೇ ಫೇಸ್‌ನಲ್ಲಿ 4.2 ಕೋಟಿ ಟನ್ ಸಾಮರ್ಥ್ಯದ ಸರಕಿನ ವಹಿವಾಟು ಸಾಧ್ಯ. ಇದನ್ನು ಅಗತ್ಯಕ್ಕೆ ಅನುಗುಣವಾಗಿ ಭವಿಷ್ಯದಲ್ಲಿ ವಿಸ್ತರಿಸಲು ಅವಕಾಶವಿದೆ. ದಿನಕ್ಕೆ 6 ಸಾವಿರ ಟ್ರಕ್‌ ಮತ್ತು 60 ರೈಲುಗಳು ಇಲ್ಲಿ ಸರಕುಗಳ ಸಾಗಣೆಯ ಓಡಾಟ ನಡೆಸುತ್ತಿವೆ. ಅದನ್ನು ದುಪ್ಪಟ್ಟುಗೊಳಿಸುವಷ್ಟು ಸಾಮರ್ಥ್ಯವಿದೆ ಎನ್ನುತ್ತಾರೆ.

ಕರ್ನಾಟಕಕ್ಕೆ ಲಾಭಕರ
ಕರ್ನಾಟಕ ಇದುವರೆಗೂ ಚೆನ್ನೈ ಬಂದರನ್ನು ಆಮದು–ರಫ್ತಿಗಾಗಿ ಹೆಚ್ಚು ಅವಲಂಬಿಸಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎನ್ನುತ್ತಾರೆ ಜಿತೇಂದ್ರ. ಬೆಂಗಳೂರು–ಚೆನ್ನೈ ನಡುವಣ ರಸ್ತೆ ಮಾರ್ಗದ ಅಂತರ ಸುಮಾರು 345 ಕಿ.ಮೀ. ಕೃಷ್ಣಪಟ್ಟಣಂಗೆ ಸುಮಾರು 380 ಕಿ.ಮೀ. ಇದು ಅಷ್ಟೇನೂ ದೊಡ್ಡ ವ್ಯತ್ಯಾಸವಲ್ಲ. ಚೆನ್ನೈ–ಬೆಂಗಳೂರು ಕೈಗಾರಿಕಾ ಕಾರಿಡಾರ್‌ (ಸಿಬಿಐಸಿ), ಚೆನ್ನೈ–ಕೋಲ್ಕತ್ತಾ ಕಾರಿಡಾರ್‌ ಮತ್ತು ಸಾಗರ್‌ ಮಾಲಾ ರಸ್ತೆ ಯೋಜನೆಗಳು ಕೇಂದ್ರ ಸರ್ಕಾರದಿಂದ ಕೃಷ್ಣಪಟ್ಟಣಂಗೆ ಆಗಿರುವ ಲಾಭಗಳು. ಸಿಬಿಐಸಿ ಕೃಷ್ಣಪಟ್ಟಣಂಗೆ ಯಾವ ಸಂಪರ್ಕವೂ ಹೊಂದಿರಲಿಲ್ಲ. ಈ ಯೋಜನೆಯ ಸಮೀಕ್ಷೆ ನಡೆಸಿದ್ದು ಜಪಾನ್‌ ಮೂಲದ ಜೈಕಾ ಕಂಪೆನಿ.

ಬೆಂಗಳೂರು ಸುತ್ತಮುತ್ತಲೂ ಜಪಾನ್‌ನದ್ದೇ ನೂರಾರು ಕಂಪೆನಿಗಳಿವೆ. ಜಪಾನ್‌ನ ಟೊಯೊಟೊ, ಹೊಂಡೊ ಮುಂತಾದ ಪ್ರಮುಖ ಕಂಪೆನಿಗಳು ಕೃಷ್ಣಪಟ್ಟಣಂ ಅನ್ನೇ ಪ್ರಮುಖ ವಹಿವಾಟು ಕೇಂದ್ರವನ್ನಾಗಿಸಿಕೊಳ್ಳುತ್ತಿವೆ. ಹೀಗಾಗಿ ಈ ಯೋಜನೆಯ ಅಡಿ ಕೃಷ್ಣಪಟ್ಟಣಂ ಬಂದರನ್ನೂ ಸೇರಿಸಿಕೊಳ್ಳಬೇಕೆಂದು ಜೈಕಾ ವರದಿ ನೀಡಿದೆ. ಸಿಬಿಐಸಿ ಯಶಸ್ಸಿಗೆ ಕೃಷ್ಣಪಟ್ಟಣಂ ಪ್ರಮುಖ ರಹದಾರಿ ಎನ್ನುವುದು ಅದರ ಅಭಿಪ್ರಾಯ. ಸಾಗರ್‌ ಮಾಲಾ ಯೋಜನೆಯಲ್ಲಿ ಸರ್ಕಾರ ನಾಲ್ಕು ರಸ್ತೆಗಳನ್ನು ಕೃಷ್ಣಪಟ್ಟಣಂಗೆ ಒದಗಿಸಿದೆ. ಇದರಲ್ಲಿ ನಾಯ್ಡಪೇಟೆ ಮೂಲಕ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗ 40 ಕಿ.ಮೀಯಷ್ಟು ದೂರವನ್ನು ಕಡಿಮೆ ಮಾಡುತ್ತದೆ. ನಾಲ್ಕು ಲೇನ್‌ನ ರಸ್ತೆಯನ್ನು ಆರು ಲೇನ್‌ಗೂ ವಿಸ್ತರಿಸಲು ಅವಕಾಶವಿದೆ.

ಹಾಗೆಯೇ ಬೆಂಗಳೂರಿನ ವೈಟ್‌ಫೀಲ್ಡ್‌ಗೆ ಮಂಗಳವಾರ ಮತ್ತು ಶುಕ್ರವಾರ ರೈಲು ಸಂಪರ್ಕವಿದೆ. ಇಲ್ಲಿ ಹಡಗಿನಿಂದ ರೈಲಿಗೆ ಸರಕುಗಳನ್ನು ತುಂಬಲು ಹೆಚ್ಚು ಸಮಯ ತಗಲುವುದಿಲ್ಲ. ಬಳ್ಳಾರಿಯ ಅದಿರು, ಕೊಪ್ಪಳ, ಚಿತ್ರದುರ್ಗ ಮುಂತಾದ ಕಡೆಗಳ ಜೋಳ, ಬೆಂಗಳೂರಿನ ಮೂಲಕ ಗ್ರಾನೈಟ್‌ ಹೆಚ್ಚು ಈ ಬಂದರಿನಿ ಮೂಲಕ ರಫ್ತಾಗುತ್ತಿವೆ. ಬೆಂಗಳೂರಿನಲ್ಲಿನ ಅನೇಕ ಕಂಪೆನಿಗಳು ಕೃಷ್ಣಪಟ್ಟಣಂ ಬಂದರಿಗೆ ಆದ್ಯತೆ ನೀಡುತ್ತಿವೆ. ಪ್ರಸ್ತುತ ನಿತ್ಯ 1500–2000 ಕಂಟೈನರ್‌ ಸರಕು ಕರ್ನಾಟಕ–ಕೆಪಿಸಿಎಲ್‌ ನಡುವೆ ನಡೆಯುತ್ತಿದೆ. ಅದನ್ನು ತುರ್ತು ಸಂದರ್ಭದಲ್ಲಿಯೂ 5000–8000ದವರೆಗೆ ವಿಸ್ತರಿಸಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ–ಕೃಷ್ಣಪಟ್ಟಣಂ ವಹಿವಾಟು ವೃದ್ಧಿಸುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಜಿತೇಂದ್ರ.

‘ನಾವು ಬಂದರು ಅಭಿವೃದ್ಧಿ ಪಡಿಸಲು ಶುರುಮಾಡುತ್ತಿದ್ದಂತೆಯೇ ಬಂದರಿನ ಸುತ್ತಲೂ ಅನೇಕ ಕೈಗಾರಿಕೆಗಳು ಬಂದವು. ಕೈಗಾರಿಕೆಗಳು ಬೆಳೆದಂತೆ ಸಾರಿಗೆ ಸಂಪರ್ಕದ ಅಗತ್ಯ ಹುಟ್ಟಿಕೊಂಡಿತು. ಬಂದರಿನ ವಲಯದ ಒಳಗೇ ಥರ್ಮಲ್ ಪವರ್ ಪ್ಲಾಂಟ್‌ ಕೂಡ ಬಂದಿದೆ. ಜೈಕಾ ಕಂಪೆನಿ ಬಂದರಿನ ಸಮೀಪ ಬಹು ಉತ್ಪನ್ನ ಕೈಗಾರಿಕಾ ಪಾರ್ಕ್‌ ಅಭಿವೃದ್ಧಿಪಡಿಸುತ್ತಿದೆ. ಮೇಕ್‌ ಇನ್ ಇಂಡಿಯಾ ಯೋಜನೆಯಡಿ ಅನೇಕ ಹೊಸ ಕಂಪೆನಿಗಳು ತಲೆ ಎತ್ತುತ್ತಿವೆ. ಉದ್ಯೋಗ ಮತ್ತು ಮೂಲಸೌಕರ್ಯ ಸೃಷ್ಟಿಯಿಂದ ಕೆಲವು ದಶಕಗಳಲ್ಲಿ ಕೃಷ್ಣಪಟ್ಟಣಂ ಎಂಬ ಪುಟ್ಟ ಹಳ್ಳಿ ಬೃಹತ್‌ ಕೈಗಾರಿಕಾ ಕೇಂದ್ರವಾಗಿ ಬೆಳೆಯುವುದು ನಿಶ್ಚಿತ ಎಂದು ಹೇಳುತ್ತಾರೆ ಅವರು.

ಯೋಜಿತ ಅಭಿವೃದ್ಧಿ
ಯಾವುದೇ ಯೋಜನೆ ರೂಪಿಸುವಾಗ ಅದರ ಗರಿಷ್ಠ ಸಾಧ್ಯತೆಗಳನ್ನು ಚಿಂತಿಸಬೇಕು. ಅಭಿವೃದ್ಧಿ ಯೋಜನೆಗಳಲ್ಲಿ ನಮ್ಮ ಚಿಂತನೆ 10 ವರ್ಷಗಳಿಗಲ್ಲ, 50–100 ವರ್ಷದಷ್ಟು ಮುಂದೆ ಇರಬೇಕು. ಕೃಷ್ಣಪಟ್ಟಣಂ ಭವಿಷ್ಯದ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣವಾದ ಬಂದರು. ಇಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಂತಗಳನ್ನು ಪ್ರಾರಂಭಿಸಲು, ಭಾರಿ ಪ್ರಮಾಣದ ಸರಕುಗಳನ್ನು ಸಂಗ್ರಹಿಸಲು, ರಸ್ತೆ ಮತ್ತು ರೈಲು ಸಂಪರ್ಕಗಳನ್ನು ಕಲ್ಪಿಸಲು ಅವಕಾಶವಿದೆ. ಇದಕ್ಕಾಗಿ ಮತ್ತೆ ಹೆಚ್ಚುವರಿ ಭೂಸ್ವಾಧೀನದ ಅಗತ್ಯವೂ ಇಲ್ಲ ಎನ್ನುತ್ತಾರೆ ಜಿತೇಂದ್ರ.

ಸ್ಥಳೀಯರಿಗೆ ಅವಕಾಶ
ಬಂದರು ಅಭಿವೃದ್ಧಿಗೆ ಭೂಮಿ ಸ್ವಾಧೀನ ಪಡಿಸಿಕೊಂಡಾಗ ಸ್ಥಳೀಯರಿಗೆ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಂಡಿದ್ದೇವೆ. ಅವರಿಗೆ ವಸತಿ, ಮಕ್ಕಳಿಗೆ ಶಾಲೆ, ಉದ್ಯೋಗದ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ. ಇಲ್ಲಿ ಕೆಲಸ ಮಾಡುವವರಿಗಾಗಿ ಒಂದು ಸುಸಜ್ಜಿತ ನಗರದಲ್ಲಿ ಇರಬೇಕಾದ ಎಲ್ಲಾ ಸವಲತ್ತುಗಳನ್ನೂ ಒದಗಿಸಲಾಗಿದೆ. ಸ್ಥಳೀಯರಿಗೇ ಭದ್ರತಾ ತರಬೇತಿ ನೀಡಿದ್ದೇವೆ. ಅವರು ಇಲ್ಲಿನ ತಾಂತ್ರಿಕ ಕೆಲಸಗಳನ್ನೂ ಮಾಡಬಲ್ಲರು. ಆರೋಗ್ಯ ಕೇಂದ್ರಗಳೂ ಸದಾ ಕಾರ್ಯ ನಿರ್ವಹಿಸುತ್ತವೆ. ಪರಿಸರಕ್ಕೆ ಹಾನಿಯಾಗದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇಲ್ಲಿನ ದೂಳು ವಾತಾವರಣ ಸೇರದಂತೆ ತಡೆಯುವ ಯಂತ್ರಗಳು ನಿರಂತರ ಚಲನೆಯಲ್ಲಿರುತ್ತವೆ. ಬಂದರಿನ ಸುತ್ತಲೂ ಮರಗಿಡಗಳನ್ನು ಬೆಳೆಸಿದ್ದೇವೆ ಎನ್ನುತ್ತಾರೆ ಗ್ರಾಹಕರ ವಿಭಾಗದ ಅಧಿಕಾರಿ ಕೃಷ್ಣಾರೆಡ್ಡಿ.

* ₹ 20,100 ಕೋಟಿ ಬಂದರು ನಿರ್ಮಾಣಕ್ಕೆ ಉದ್ದೇಶಿತ ಬಂಡವಾಳ ಹೂಡಿಕೆ.
* ₹ 6 ಕೋಟಿ ಇದುವರೆಗಿನ ಹೂಡಿಕೆ 18 ತಿಂಗಳಲ್ಲೇ ನಿರ್ಮಾಣ ಮತ್ತು ಕಾರ್ಯಾರಂಭ.
* 962 - 2014–15ರ ಸಾಲಿನಲ್ಲಿ ಕಾರ್ಯಾಚರಣೆ ನಡೆಸಿದ ಹಡಗುಗಳು.
* 4.7 ಕೋಟಿ ಟನ್‌ ಕಳೆದ ಸಾಲಿನಲ್ಲಿ ನಡೆದ ಸರಕು ವಹಿವಾಟು.

(ಲೇಖಕ, ಸಂಸ್ಥೆಯ ಆಹ್ವಾನದ ಮೇರೆಗೆ ಬಂದರಿಗೆ ಭೇಟಿ ಕೊಟ್ಟಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT