ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣರಾವ್, ಅಶ್ವಿನ್‌ ಬಂಧಿಸುವಂತೆ ಆಗ್ರಹ

ಲೋಕಾಯುಕ್ತರ ಅಧಿಕೃತ ನಿವಾಸ ದುರುಪಯೋಗ ಆಮ್‌ ಆದ್ಮಿ ಪಕ್ಷದ ಆರೋಪ
Last Updated 29 ಜೂನ್ 2015, 19:49 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರರಾವ್‌‌ ಅವರ ನಿವಾಸವನ್ನು ದುರುಪಯೋಗ ಮಾಡಿಕೊಂಡವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ, ಸೋಮವಾರ ಹೈಗ್ರೌಂಡ್ಸ್‌ ಠಾಣೆಯಲ್ಲಿ ಆಮ್‌ ಆದ್ಮಿ ಪಕ್ಷದ ಸದಸ್ಯರು ದೂರುನೀಡಿದ್ದಾರೆ.

‘ಕೃಷ್ಣರಾವ್‌ ಮತ್ತು ಅಶ್ವಿನ್‌ ರಾವ್‌ ಎನ್ನುವವರು ಲೋಕಾಯುಕ್ತರ ನಿವಾಸಕ್ಕೆ ಸರ್ಕಾರಿ ಅಧಿಕಾರಿಗಳನ್ನು ಕರೆಯಿಸಿಕೊಂಡು, ಬೆದರಿಸಿ ಹಣದ ಬೇಡಿಕೆ ಇಟ್ಟಿದ್ದರು ಎಂಬ ಆರೋಪಗಳು ಕೇಳಿ ಬಂದಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಈ ಇಬ್ಬರ ಪೈಕಿ ಅಶ್ವಿನ್ ರಾವ್‌ ಎಂಬುವವರನ್ನು ತಮ್ಮ ಪುತ್ರ ಎಂದು ಲೋಕಾಯುಕ್ತ ಭಾಸ್ಕರರಾವ್‌ ಅವರೇ ಒಪ್ಪಿಕೊಂಡಿದ್ದು, ಇಡೀ ಪ್ರಕರಣದ ಸೂತ್ರಧಾರ  ಅವರೇ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ’ ಎಂದು ದೂರಿದ್ದಾರೆ.

‘ಲೋಕಾಯುಕ್ತರ ಅಧಿಕೃತ ನಿವಾಸವನ್ನು ದುರಪಯೋಗ ಮಾಡಿಕೊಂಡ ಆರೋಪದ ಮೇಲೆ ಈ ಇಬ್ಬರನ್ನು  ಸರ್ಕಾರಿ ಕೆಲಸಕ್ಕೆ ತೊಂದರೆ (ಐಪಿಸಿ 383), ದರೋಡೆ (384), ಹಲ್ಲೆ (385), ಭ್ರಷ್ಟಾಚಾರ ತಡೆ (409), ವಂಚನೆ(420) ಆರೋಪ  ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಬಂಧಿಸಿ, ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಹೇಳಿದ್ದಾರೆ.

ಪತ್ರ ಕುರಿತು ತನಿಖೆಯಾಗಲಿ: ‘ಲೋಕಾಯುಕ್ತ ಕಚೇರಿಗೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಎಂಜಿನಿಯರೊಬ್ಬರನ್ನು ಕರೆಯಿಸಿಕೊಂಡು ಲಂಚ ಬೇಡಿಕೆ ಇಟ್ಟಿದ್ದ ಕುರಿತು, ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರು ಸಂಸ್ಥೆಯ ರಿಜಿಸ್ಟ್ರಾರ್‌ ಅವರಿಗೆ ಮೇ 11ರಂದು ಪತ್ರ ಕೂಡ ಬರೆದಿದ್ದಾರೆ. ಈ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕು’ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
*
ನಿವಾಸದ ಬಳಿ ಭದ್ರತೆ
‘ಲೋಕಾಯುಕ್ತ ನ್ಯಾಯಮೂರ್ತಿ  ವೈ. ಭಾಸ್ಕರರಾವ್‌ ಅವರ ನಿವಾಸದ ಎದುರು ಅನುಮತಿಯಿಲ್ಲದೆ ಯಾವುದಾದರೂ ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ, ನಿವಾಸದ ಬಳಿ ಒಬ್ಬ ಇನ್‌ಸ್ಪೆಕ್ಟರ್‌ ಮತ್ತು ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಅವರು ತಿಳಿಸಿದರು.
*
ಎಎಪಿ ಸದಸ್ಯರು ನೀಡಿರುವ ದೂರನ್ನು ಪರಿಶೀಲಿಸಲಾಗುತ್ತಿದೆ.  ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಎಂ.ಎನ್‌. ರೆಡ್ಡಿ,
ನಗರ ಪೊಲೀಸ್ ಕಮೀಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT