ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣೆಗೆ ಆ.2ಕ್ಕೆ ಸಿ.ಎಂ.ಬಾಗಿನ

ಅವಧಿಗೆ ಮುಂಚೆ ಆಲಮಟ್ಟಿ ಜಲಾಶಯ ಭರ್ತಿ
Last Updated 28 ಜುಲೈ 2016, 7:07 IST
ಅಕ್ಷರ ಗಾತ್ರ

ಆಲಮಟ್ಟಿ (ನಿಡಗುಂದಿ): ಇಲ್ಲಿನ ಲಾಲ ಬಹದ್ದೂರ ಶಾಸ್ತ್ರಿ ಜಲಾಶಯ ಇದೇ ಮೊದಲ ಬಾರಿ ಜುಲೈಯಲ್ಲಿಯೇ ಪೂರ್ಣವಾಗಿ ಭರ್ತಿಯಾಗಿ ತನ್ನ ಗರಿಷ್ಠ ಮಟ್ಟ 519.60 ಮೀಟರ್ ತಲುಪಿದೆ.

2002ರಲ್ಲಿ ಜಲಾಶಯದಲ್ಲಿ ಪೂರ್ಣ ಪ್ರಮಾಣದ ನೀರಿನ ಸಂಗ್ರಹ ಆರಂಭ ಗೊಂಡಿತ್ತು. ಪ್ರತಿ ವರ್ಷ ಆಗಸ್ಟ್‌ ಇಲ್ಲವೇ ಸೆಪ್ಟಂಬರ್‌ನಲ್ಲಿ ಜಲಾಶಯ ಭರ್ತಿಯಾ ಗುತ್ತಿತ್ತು. ಕಳೆದ 20 ದಿನಗಳ ಹಿಂದೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿದ ವ್ಯಾಪಕ ಮಳೆಯ ಕಾರಣ ಆಲಮಟ್ಟಿ ಜಲಾಶಯದ ಒಳಹರಿವು 2 ಲಕ್ಷ ಕ್ಯುಸೆಕ್‌ಗೂ ಅಧಿಕವಾಗಿತ್ತು.

ಜುಲೈ ಎರಡನೇ ವಾರದಲ್ಲಿ ಜಲಾ ಶಯ ಬಹುತೇಕ ಭರ್ತಿಯಾದರೂ, ಒಳ ಹರಿವು ಹೆಚ್ಚಿದ್ದರಿಂದ ಮುಂಜಾಗ್ರತೆಯ ಕ್ರಮವಾಗಿ 519 ಮೀಟರ್‌ವರೆಗೆ ನೀರು ಸಂಗ್ರಹಿಸಿ ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿತ್ತು ಎಂದು ಮೂಲಗಳು ಹೇಳಿವೆ.

ಕಳೆದ ವರ್ಷ 519.60 ಮೀ ಗರಿಷ್ಠ ಎತ್ತರದ ಜಲಾಶಯದಲ್ಲಿ 515.95 ಮೀ ವರೆಗೆ ಮಾತ್ರ ಜಲಾಶಯ ಭರ್ತಿಯಾಗಿತ್ತು. 123 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಆ ವರ್ಷ 72 ಟಿಎಂಸಿ ಅಡಿ ನೀರಿತ್ತು ಎಂದು ಮುಖ್ಯ ಎಂಜಿನಿಯರ್ ಸಿ. ಅನಂತರಾಮು ತಿಳಿಸಿದರು.

ಬಾಗಿನ ಕವಿಗೋಷ್ಠಿ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ  ನಿಡಗುಂದಿ ವಲಯ ಘಟಕದ ಸಹ ಯೋಗದಲ್ಲಿ ತುಂಬಿದ ಕೃಷ್ಣೆಗೆ ಬಾಗಿನ ಅರ್ಪಣೆ ಮತ್ತು ಬಾಗಿನ ಕವಿಗೋಷ್ಠಿ ಆಲಮಟ್ಟಿಯಲ್ಲಿ ಇದೇ 29ರಂದು ನಡೆಯಲಿದೆ.

ಬೆಳಿಗ್ಗೆ 11 ಗಂಟೆಯಿಂದ ಇಲ್ಲಿಯ ಶ್ರೀರಾಮಲಿಂಗೇಶ್ವರ ದೇವಸ್ಥಾನದಿಂದ ಡೊಳ್ಳು ಸೇರಿದಂತೆ ಸಕಲ ವಾದ್ಯ ವೈಭಗಳೊಂದಿಗೆ ಚಂದ್ರಮ್ಮದೇವಿ ದೇವಸ್ಥಾನದ ಸಮೀಪ ಕೃಷ್ಣೆಯ ಜಲಧಿಗೆ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಲಿದೆ.

ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯವನ್ನು ಬೆಳೆಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ಕರ್ನಾಟಕದ ಜೀವನದಿ ಕೃಷ್ಣೆ ಆಲಮಟ್ಟಿಯಲ್ಲಿ ಮೈದುಂಬಿ ನಿಂತಿದ್ದು, ಅಲ್ಲಿ ಬಾಗಿನ ಅರ್ಪಣೆಯನ್ನು ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದೆ.

ನಂತರ ಇಲ್ಲಿಯ ಉದ್ಯಾನದಲ್ಲಿ ‘ಬಾಗಿನ’ ವಿಷಯದ ಕುರಿತು ಕವಿಗೋಷ್ಠಿ ನಡೆಯಲಿದೆ. ಅವಳಿ ಜಿಲ್ಲೆಯ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಕೃಷ್ಣೆಗೆ ಪೂಜೆ ಸಲ್ಲಿಸುವರು.

ಕಾರ್ಯಕ್ರಮದಲ್ಲಿ ಕಸಾಪ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕು, ವಲಯ ಘಟಕದ ಪದಾಧಿಕಾರಿಗಳು, ಜನಪ್ರತಿ ನಿಧಿಗಳು, ಸಾಹಿತಿಗಳು, ಸಾಹಿತ್ಯಾಸಕ್ತರು ಪಾಲ್ಗೊಳ್ಳಲಿದ್ದಾರೆ.

ಸುತ್ತಮುತ್ತಲಿನ ಗ್ರಾಮಸ್ಥರು ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕಸಾಪ ನಿಡಗುಂದಿ ವಲಯ ಘಟಕದ ಅಧ್ಯಕ್ಷ ಬಿ.ಟಿ.ಗೌಡರ ತಿಳಿಸಿದ್ದಾರೆ.

ಕಾವೇರಿಗೆ ತಪ್ಪಿದ ಆದ್ಯತೆ!
ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿ ಯಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಸ್ಟ್ 2ರಂದು (ನಾಗರ ಅಮವಾಸ್ಯೆ) ಬೆಳಿಗ್ಗೆ 11 ಕ್ಕೆ ಇಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸಲಿದ್ದಾರೆ.

ಆ ದಿನ ಹೆಲಿಕ್ಯಾಪ್ಟರ್‌ ಮೂಲಕ ಬರುವ ಅವರು ಆಲಮಟ್ಟಿ ಜಲಾಶಯ ದಲ್ಲಿ ಬಾಗಿನ ಅರ್ಪಿಸಲಿದ್ದಾರೆ. ಪ್ರತಿ ಬಾರಿ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಭರ್ತಿ ಯಾದ ನಂತರ ಕಾವೇರಿಗೆ ಮೊದಲು ಬಾಗಿನ ಅರ್ಪಿಸಿ ನಂತರ ಒಂದೆರೆಡು ದಿನ ಕಳೆದು ಆಲಮಟ್ಟಿಯಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸಲಾಗುತ್ತಿತ್ತು. ಆದರೆ ಈ ಬಾರಿ ಕೆಆರ್‌ಎಸ್‌ ಇನ್ನೂ ಭರ್ತಿಯಾಗಿಲ್ಲ. ಹೀಗಾಗಿ ಕಾವೇರಿಯ ಮೊದಲೇ ಕೃಷ್ಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆಯೇ? ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ.

ಜಲಾಶಯ ಭರ್ತಿಯಾಗದ ಹಿನ್ನಲೆ ಯಲ್ಲಿ ಕಳೆದ ವರ್ಷ ಬಾಗಿನ ಅರ್ಪಣೆ ನಡೆದಿರಲಿಲ್ಲ. ಆ 2ರಂದು ಆಲಮಟ್ಟಿಗೆ ಮುಖ್ಯಮಂತ್ರಿಗಳು ಬರುವ ತಾತ್ಕಾಲಿಕ ಪ್ರವಾಸ ಇದೆ. ಬಾಗಿನ ಅರ್ಪಣೆ ಕಾರ್ಯ ಕ್ರಮದ ಸಿದ್ಧತೆ ಆರಂಭಿಸಲಾಗುತ್ತಿದೆ ಎಂದು ಕೆಬಿಜೆಎನ್‌ಎಲ್‌ ಮುಖ್ಯ ಎಂಜಿ ನಿಯರ್‌ ಸಿ.ಅನಂತರಾಮು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT