ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಕೆಆರ್‌ಗೆ ಸವಾಲಾಗುವುದೇ ಆರ್‌ಸಿಬಿ?

ಎಬಿ ಡಿವಿಲಿಯರ್ಸ್‌, ಸರ್ಫರಾಜ್‌ ಖಾನ್‌ ಮೇಲೆ ಭರವಸೆ, ರಾಬಿನ್‌ ಉತ್ತಪ್ಪ ಪ್ರಮುಖ ಆಕರ್ಷಣೆ
Last Updated 1 ಮೇ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಬಿನ್‌ ಉತ್ತಪ್ಪ, ಮನೀಷ್ ಪಾಂಡೆ. ಈ ಎರಡು ಹೆಸರುಗಳಲ್ಲಿ ಅದೇನು ಶಕ್ತಿಯಿದೆಯೋ? ಉತ್ತಪ್ಪ ಮತ್ತು ಮನೀಷ್‌ ಎಂದಾಕ್ಷಣ ಕ್ರಿಕೆಟ್‌ ಪ್ರೇಮಿಗಳಿಗೆ ಭಾರಿ ಪ್ರೀತಿ. ಇವರ ಆಟದ ಸೊಬಗನ್ನು ಕಣ್ತುಂಬಿಕೊಳ್ಳಬೇಕು ಎನ್ನುವ ಆಸೆ. ಈ ಕಾರಣಕ್ಕಾಗಿಯೇ ಗ್ಯಾಲರಿಯಲ್ಲಿನ ಟಿಕೆಟ್‌ ಮಾರಾಟ ಆರಂಭವಾದ ಅರ್ಧ ಗಂಟೆಯಲ್ಲಿಯೇ ‘ಟಿಕೆಟ್‌ ಸೋಲ್ಡ್‌ ಔಟ್’ ಎನ್ನುವ ಘೋಷಣೆ.

ಕರ್ನಾಟಕದ ಈ ಆಟಗಾರರು ಕೋಲ್ಕತ್ತ ನೈಟ್‌ ರೈಡರ್ಸ್ ತಂಡದಲ್ಲಿದ್ದಾರೆ. ಹಾಲಿ ಚಾಂಪಿಯನ್‌ ನೈಟ್‌ರೈಡರ್ಸ್ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಎದುರು ಪೈಪೋಟಿ ನಡೆಸಲಿದೆ.

ರಾಜ್ಯದ ಅಭಿಮಾನಿಗಳಿಗೆ ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಲೆಕ್ಕಾಚಾರಕ್ಕಿಂತ ಉತ್ತಪ್ಪ ಮತ್ತು ಮನೀಷ್‌ ಹೇಗೆ ಅಬ್ಬರಿಸುತ್ತಾರೆ ಎನ್ನುವ ಕುತೂಹಲವೇ ಹೆಚ್ಚಾಗಿದೆ. ಶುಕ್ರವಾರ ಟಿಕೆಟ್‌ ಖರೀದಿಸಲು ಬಂದಿದ್ದ 15 ವರ್ಷದ ಶ್ರೀಹರಿ ಎನ್ನುವ ಅಭಿಮಾನಿಯೂ ಇದೇ ಮಾತನ್ನು ಹೇಳಿದರು.

ಗೌತಮ್‌ ಗಂಭೀರ್‌ ನಾಯಕತ್ವದ ನೈಟ್‌ ರೈಡರ್ಸ್‌ ಎಂಟು ಪಂದ್ಯಗಳನ್ನು ಆಡಿದ್ದು ನಾಲ್ಕರಲ್ಲಿ ಗೆಲುವು ಪಡೆದಿದೆ. ಈ ತಂಡ ಐಪಿಎಲ್‌ನಲ್ಲಿ ಆರ್‌ಸಿಬಿ ಎದುರು ಉತ್ತಮ ಗೆಲುವಿನ ದಾಖಲೆ ಹೊಂದಿದೆ. 2014ರ ಟೂರ್ನಿಯಲ್ಲಿ ಎರಡು ಸಲವೂ ಶಾರುಕ್‌ ಖಾನ್‌ ಒಡೆತನದ ನೈಟ್‌ ರೈಡರ್ಸ್‌ ತಂಡವೇ ಆರ್‌ಸಿಬಿ ಎದುರು ಗೆದ್ದಿದೆ.

ಹೋದ ವರ್ಷ ಕೋಲ್ಕತ್ತದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಎದುರು ಉತ್ತಪ್ಪ 83 ರನ್‌ ಬಾರಿಸಿ ಗೆಲುವು ತಂದುಕೊಟ್ಟಿದ್ದರು. ಅಷ್ಟೇ ಅಲ್ಲದೇ, ನೈಟ್‌ ರೈಡರ್ಸ್‌ ತಂಡಕ್ಕೆ ಉದ್ಯಾನನಗರಿ ಅಂಗಳದಲ್ಲಿ ಸವಿ ನೆನಪುಗಳೇ ಹೆಚ್ಚಾಗಿವೆ. 2014ರಲ್ಲಿ  ಇಲ್ಲಿ ನಡೆದಿದ್ದ ಫೈನಲ್‌ನಲ್ಲಿ ಗಂಭೀರ್‌ ಪಡೆ  ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಮಣಿಸಿ ಚಾಂಪಿಯನ್‌ ಆಗಿತ್ತು. ಆಗ 94 ರನ್‌ ಗಳಿಸಿ ಗೆಲುವಿಗೆ ಕಾರಣರಾಗಿದ್ದು ಮನೀಷ್‌ ಪಾಂಡೆ. ಎರಡು ದಿನಗಳ ಹಿಂದೆ ನಡೆದ ಪಂದ್ಯದಲ್ಲಿ ಉತ್ತಪ್ಪ ಅಜೇಯ 80 ರನ್ ಗಳಿಸಿದ್ದರು. ಆದ್ದರಿಂದ ಇವರು ಪಂದ್ಯದ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.

ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಹೊಂದಿರುವ ಆರ್‌ಸಿಬಿ ಬಲಿಷ್ಠವಾಗಿದ್ದು ತವರಿನಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಮೂರು ದಿನಗಳ ಹಿಂದೆ ರಾಜಸ್ತಾನ ರಾಯಲ್ಸ್ ಎದುರು ಗೆಲುವಿನ ಅವಕಾಶವಿತ್ತು. ಆದರೆ, ಮಳೆ ಸುರಿದ ಕಾರಣ ಆರ್‌ಸಿಬಿ ಗೆಲುವಿನ ಕನಸು ಕೊಚ್ಚಿ ಹೋಗಿತ್ತು.

ಟೂರ್ನಿಯ ಆರಂಭದಲ್ಲಿ ಬೌಲಿಂಗ್‌ನಲ್ಲಿ ಸಮಸ್ಯೆ ಎದುರಿಸಿದ್ದ ಆರ್‌ಸಿಬಿ ಮಿಷೆಲ್‌ ಸ್ಟಾರ್ಕ್‌ ಬಂದ ಮೇಲೆ ಈ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ಹರ್ಷಲ್‌ ಪಟೇಲ್‌, ಯಜುವೇಂದ್ರ ಚಾಹಲ್‌ ಮತ್ತು ಡೇವಿಡ್ ವೈಸಿ ಬೌಲಿಂಗ್‌ನ ಶಕ್ತಿ ಎನಿಸಿದ್ದಾರೆ.

17 ವರ್ಷದ ಮುಂಬೈ ಮೂಲದ ಸರ್ಫರಾಜ್‌ ಖಾನ್‌ ಹೊಸ ಭರವಸೆ ಎನಿಸಿದ್ದಾರೆ. ರಾಯಲ್ಸ್‌ ಎದುರಿನ ಪಂದ್ಯದಲ್ಲಿ ಸರ್ಫರಾಜ್‌ 21 ಎಸೆತಗಳಲ್ಲಿ 45 ರನ್ ಬಾರಿಸಿದ್ದರು.  ಕ್ರಿಸ್‌ ಗೇಲ್‌, ವಿರಾಟ್‌ ಕೊಹ್ಲಿ, ಮನ್‌ದೀಪ್‌ ಸಿಂಗ್‌ ಮತ್ತು ಎಬಿ ಡಿವಿಲಿಯರ್ಸ್‌ ಅವರನ್ನು ಹೊಂದಿರುವ ಬೆಂಗಳೂರು ತಂಡ ಸರ್ಫರಾಜ್‌ ಅಬ್ಬರದಿಂದ ಬ್ಯಾಟಿಂಗ್‌ನಲ್ಲಿ ಮತ್ತಷ್ಟು ಬಲಿಷ್ಠವಾಗಿದೆ.

ಸಾಟಿಯಾಗುವುದೇ ಆರ್‌ಸಿಬಿ?: ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿರುವ ನೈಟ್‌ ರೈಡರ್ಸ್  ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ.

ಗಂಭೀರ್‌, ಮನೀಷ್, ಸೂರ್ಯಕುಮಾರ್ ಯಾದವ್ ಹಿಂದಿನ ಪಂದ್ಯದಲ್ಲಿ ವೈಫಲ್ಯ ಕಂಡಿದ್ದರು. ಆದರೆ, ಆ್ಯಂಡ್ರೆ ರಸೆಲ್ 32 ಎಸೆತಗಳಲ್ಲಿ 55 ರನ್‌ ಬಾರಿಸಿದ್ದರು. ಇವರನ್ನು ಕಟ್ಟಿ ಹಾಕಬೇಕಾದ ಸವಾಲು ಆರ್‌ಸಿಬಿ ಬೌಲರ್‌ಗಳ ಮುಂದಿದೆ.

ಬೆಂಗಳೂರು ತಂಡ ಏಳು ಪಂದ್ಯಗಳನ್ನು ಆಡಿದ್ದು, ಕೊಹ್ಲಿ ಐದು ಬಾರಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆರಿಸಿಕೊಂಡಿದ್ದರು. ಆದ್ದರಿಂದ ನೈಟ್‌ ರೈಡರ್ಸ್ ಎದುರು ಟಾಸ್‌ ಗೆದ್ದರೂ ಫೀಲ್ಡಿಂಗ್‌ ಮಾಡಲು ಮುಂದಾಗುವುದು ಖಚಿತ. ಆದರೆ, ಉದ್ಯಾನನಗರಿಯಲ್ಲಿ ಮಳೆ ಕಣ್ಣಮುಚ್ಚಾಲೆ ಆಡುತ್ತಿರುವ ಕಾರಣ ಪಂದ್ಯ ನಡೆಯುವ ಬಗ್ಗೆ ಅನುಮಾನ ಮೂಡಿದೆ.

‘ಪಂದ್ಯದಲ್ಲಿ ಯಾರೇ ಗೆಲ್ಲಲಿ. ಆದರೆ, ಮಳೆ ಬಾರದಿರಲಿ’ ಎಂದು ಅಭಿಮಾನಿಗಳು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಗುರುವಾರ ಸಂಜೆ ಇಲ್ಲಿ ಭಾರಿ ಮಳೆ ಸುರಿದಿದೆ. ಆದರೆ, ಶುಕ್ರವಾರ ಬಿಸಿಲು ಇತ್ತು. ಆದ್ದರಿಂದ ವರುಣನ ಆಟ ಕ್ರಿಕೆಟ್‌ ಪ್ರೇಮಿಗಳ ಸಂಕಟಕ್ಕೆ ಕಾರಣವಾಗಿದೆ.

ಎರಡು ದಿನ ಮಳೆ ಭೀತಿ
ನಗರದಲ್ಲಿ ಎರಡು ದಿನ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ. ಆದ್ದರಿಂದ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ. ಹೀಗಾಗಿ ಆರ್‌ಸಿಬಿ ತಂಡದ ಆಟಗಾರರು ಶುಕ್ರವಾರ ಮಧ್ಯಾಹ್ನವೇ ಅಭ್ಯಾಸ ಮುಗಿಸಿ ಹೋಟೆಲ್‌ ಸೇರಿಕೊಂಡರು.

*
ಸುನಿಲ್‌ ನಾರಾಯಣ ಅದ್ಭುತ ಪ್ರತಿಭಾವಂತ. ಅವರು ಮತ್ತೆ ತಂಡಕ್ಕೆ ಬರಲಿದ್ದಾರೆ. ಅವರ ಸಾಮರ್ಥ್ಯ ಪ್ರತಿಯೊಬ್ಬರಿಗೂ ಗೊತ್ತು.

-ರಾಬಿನ್ ಉತ್ತಪ್ಪ, ಕೋಲ್ಕತ್ತ ನೈಟ್ ರೈಡರ್ಸ್‌ ಆಟಗಾರ

ಮುಖ್ಯಾಂಶಗಳು
* ಭರವಸೆ ಮೂಡಿಸಿರುವ ಸರ್ಫರಾಜ್‌ ಖಾನ್‌

* ನೈಟ್‌ ರೈಡರ್ಸ್‌ ತಂಡದಲ್ಲಿ ಮೂವರು ಕರ್ನಾಟಕದವರು
* ತವರಿನಲ್ಲಿ ಆರ್‌ಸಿಬಿಗೆ ಚೊಚ್ಚಲ ಜಯದ ನಿರೀಕ್ಷೆ

ಇಂದಿನ ಪಂದ್ಯಗಳು
ಆರ್‌ಸಿಬಿ–ಕೋಲ್ಕತ್ತ ನೈಟ್‌ ರೈಡರ್ಸ್‌

ಸ್ಥಳ: ಬೆಂಗಳೂರು, ಆರಂಭ: ಸಂಜೆ 4ಕ್ಕೆ
ಸನ್‌ರೈಸರ್ಸ್‌ ಹೈದರಾಬಾದ್‌–ಚೆನ್ನೈ ಸೂಪರ್‌ ಕಿಂಗ್ಸ್‌
ಸ್ಥಳ: ಹೈದರಾಬಾದ್‌ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್‌

ತಂಡಗಳು
ಆರ್‌ಸಿಬಿ:   ವಿರಾಟ್‌ ಕೊಹ್ಲಿ (ನಾಯಕ), ಕ್ರಿಸ್‌ ಗೇಲ್‌, ಎಬಿ ಡಿವಿಲಿಯರ್ಸ್‌, ದಿನೇಶ್‌ ಕಾರ್ತಿಕ್‌ (ವಿಕೆಟ್‌ ಕೀಪರ್‌), ಎಸ್‌. ಬದರೀನಾಥ್‌, ಡರೆನ್‌ ಸಮಿ, ಮಿಷೆಲ್‌ ಸ್ಟಾರ್ಕ್‌, ಮ್ಯಾಡಿನ್‌ಸನ್‌, ವರುಣ್‌ ಆ್ಯರನ್‌, ಯಜುವೇಂದ್ರ ಚಾಹಲ್‌, ರಿಲಿ ರೊಸೊ, ವಿಜಯ್‌ ಜೋಲ್‌, ಟಿ. ಯೋಗೇಶ್‌, ಅಬು ನೇಚಿಮ್‌ ಅಹ್ಮದ್‌, ಹರ್ಷಲ್‌ ಪಟೇಲ್‌, ಅಶೋಕ್‌ ದಿಂಡಾ,  ಮನ್ವಿಂದರ್ ಬಿಸ್ಲಾ,  ಸೀನ್‌ ಅಬಾಟ್‌, ಆ್ಯಡಮ್‌ ಮಿಲ್ನೆ, ಡೇವಿಡ್‌ ವೈಸಿ, ಜಲಜ್‌ ಸಕ್ಸೇನಾ, ಸರ್ಫರಾಜ್‌ ಖಾನ್‌ ಮತ್ತು ಶಿಶಿರ್‌ ಭವಾನೆ.

ಕೋಲ್ಕತ್ತ ನೈಟ್‌ ರೈಡರ್ಸ್‌: ಗೌತಮ್ ಗಂಭೀರ್‌ (ನಾಯಕ),  ರಾಬಿನ್ ಉತ್ತಪ್ಪ, ಜೊಹಾನ್‌ ಬೋಥಾ, ಕೆ.ಸಿ. ಕಾರ್ಯಪ್ಪ, ಪಿಯೂಷ್ ಚಾವ್ಲಾ, ಪ್ಯಾಟ್‌ ಕಮಿನ್ಸ್‌, ಬ್ರಾಡ್ ಹಾಗ್‌, ಶೆಲ್ಡನ್‌ ಜಾಕ್ಸನ್‌, ಕುಲದೀಪ್‌ ಯಾದವ್‌, ಮಾರ್ನ್‌ ಮಾರ್ಕೆಲ್‌, ಸುನಿಲ್ ನಾರಾಯಣ್, ಸುಮಿತ್‌ ನರ್ವಾಲ್‌, ಮನೀಷ್ ಪಾಂಡೆ, ಯೂಸುಫ್‌ ಪಠಾಣ್‌, ವೀರ ಪ್ರತಾಪ್‌ ಸಿಂಗ್‌, ವೈಭವ್‌ ರಾವಲ್‌, ಆ್ಯಂಡ್ರೆ ರಸೆಲ್‌, ಶಕೀಬ್‌ ಅಲ್‌ ಹಸನ್‌, ರ್‍ಯಾನ್‌ ಟೆನ್‌ ಡಾಷೆಟ್, ಸೂರ್ಯಕುಮಾರ್‌ ಯಾದವ್‌, ಉಮೇಶ್ ಯಾದವ್, ಜೇಮ್ಸ್‌ ನೀಶಮ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT