ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಲ್‌: ಪ್ಯಾಂಥರ್‌್ಸಗೆ ಭರ್ಜರಿ ಜಯ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮೈಸೂರು:  ಗಂಗೋತ್ರಿ ಗ್ಲೇಡ್‌್ಸನಲ್ಲಿ ಸೋಮವಾರ ಸಂಜೆ ಮಳೆಯೂ ಸುರಿಯಿತು. ರನ್ನುಗಳ ಹೊಳೆಯೂ ಹರಿಯಿತು!ಕೆಪಿಎಲ್ ಟೂರ್ನಿಯ ಇತಿಹಾಸದಲ್ಲಿಯೇ ದೊಡ್ಡ ಮೊತ್ತ (20 ಓವರುಗಳಲ್ಲಿ 4 ವಿಕೆಟ್‌ಗಳಿಗೆ 214)  ದಾಖಲಿಸಿದ ಬೆಳಗಾವಿ ಪ್ಯಾಂಥರ್‌್ಸ ತಂಡವು  96 ರನ್ನುಗಳಿಂದ  ರಾಕ್‌ಸ್ಟಾರ್‌ ತಂಡದ ವಿರುದ್ಧ ಜಯ ಗಳಿಸತು. ಕೆಪಿಎಲ್‌ ಮೊದಲ ಆವೃತ್ತಿಯಲ್ಲಿ (2009) 2 ವಿಕೆಟ್‌ ನಷ್ಟಕ್ಕೆ 201 ರನ್ನುಗಳ ಮೊತ್ತ ಗಳಿಸಿದ್ದ ಬೆಳಗಾವಿ ತಂಡವು ತನ್ನ ದಾಖಲೆಯನ್ನು ಉತ್ತಮ ಪಡಿಸಿಕೊಂಡಿತು.   

2010ರಲ್ಲಿ ಮಂಗಳೂರು ಯುನೈಟೆಡ್‌  ದ್ವಿಶತಕದ ಗಡಿ (201ಕ್ಕೆ3) ದಾಟಿತ್ತು. ಸಂಜೆ ಸಿನಿತಾರೆಯರ ತಂಡವು ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಾಗಲೇ ಫಲಿತಾಂಶ ನಿರ್ಧಾರವಾದಂತಾಗಿತ್ತು. ಬೆಳಗಾವಿ ತಂಡದ ಆರಂಭಿಕ ಜೋಡಿ ಸುನಿಲ್‌ ರಾಜು (38; 35ಎಸೆತ, 2ಬೌಂಡರಿ, 1ಸಿಕ್ಸರ್) ಮತ್ತು  ಭರತ್ ಚಿಪ್ಲಿ (77; 46ಎಸೆತ, 6ಬೌಂಡರಿ, 3ಸಿಕ್ಸರ್) ಸುದೀಪ್ ಬಳಗದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಚೆಂಡು ನೆಲದ ಮೇಲೆ ಉರುಳಿದ್ದೇ ಕಡಿಮೆ. ಗಾಳಿಯಲ್ಲಿ ತೇಲಿ ಬೌಂಡರಿಗೆರೆ ಆಚೆ ಅಥವಾ ಈಚೆ ನೆಲಸ್ಪರ್ಶ ಮಾಡಿದ್ದೇ ಹೆಚ್ಚು. ಕೇವಲ 29 ಎಸೆತಗಳಲ್ಲಿ 50ರ ಗಡಿ ದಾಟಿದ ಮೊತ್ತವು, ಒಟ್ಟು 64 ಎಸೆತಗಳಲ್ಲಿ 100ರ ಗೆರೆಯನ್ನೂ ದಾಟಿತು. 9ನೇ ಓವರ್ ಮುಗಿದಾಗ ಮಳೆ ಸುರಿದು ಸುಮಾರು 20 ನಿಮಿಷ ಆಟವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ನಂತರ  ರನ್ನುಗಳ ಪ್ರವಾಹ ಹರಿಯಿತು. ಮೊದಲ ವಿಕೆಟ್‌ ಜೊತೆಯಾಟದಲ್ಲಿ 105 ರನ್ನುಗಳು ಸೇರಿದ ಸಂದರ್ಭ ದಲ್ಲಿ ಸುನಿಲರಾಜು ವಿಕೆಟ್‌ಕೀಪರ್ ಸುದೀಪ್‌ಗೆ ಕ್ಯಾಚಿತ್ತು ನಡೆದರು. ಭರತ್ ಚಿಪ್ಲಿ ಜೊತೆ ಸೇರಿದ ಎಂ. ನಿಧೀಶ್ (37; 20ಎಸೆತ, 2ಬೌಂಡರಿ, 3ಸಿಕ್ಸರ್‌) ಕೂಡ ಚೆಂಡಿಗೆ ಬೌಂಡರಿ  ದಾರಿ ತೋರಿಸಿದರು.

14 ಮತ್ತು 15ನೇ ಓವರ್‌ಗಳಲ್ಲಿ ಚಿಪ್ಲಿ ಬಾರಿಸಿದ ಸಿಕ್ಸರ್‌ಗಳು ಪ್ರೇಕ್ಷಕರ ಗ್ಯಾಲರಿ ದಾಟಿದವು.  ಅವರು ನಿರ್ಗಮಿಸಿದ ನಂತರ ನಿಧೀಶ್ ಅಕ್ಷರಶಃ ಗದಾಪ್ರಹಾರ ಆರಂಭಿಸಿದರು. ಶಬೀರ್ ಹಾಕಿದ ಒಂದೇ ಓವರ್‌ನಲ್ಲಿ ಸತತ ಎರಡು ಸಿಕ್ಸರ್‌ಗಳು, ನಂತರದ ಓವರ್‌ನಲ್ಲಿ ವಿಕ್ರಾಂತ್ ಎಸೆತದಲ್ಲಿ ಬಾರಿಸಿದ ಒಂದು ಸಿಕ್ಸರ್‌ ಪ್ರೇಕ್ಷಕರ ಉತ್ಸಾಹವನ್ನು ಇಮ್ಮಡಿಸಿತು. ಅದೇ ಓವರ್‌ನಲ್ಲಿ ಅವರು ನಿರ್ಗಮಿಸಿದ ನಂತರ, ನಾಯಕ ಆರ್.ವಿನಯಕುಮಾರ್ ಮತ್ತು ಕೆ. ಗೌತಮ್ ಕೂಡ ತಮ್ಮ ಕಾಣಿಕೆ ನೀಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ರಾಜೀವ್–ಸುದೀಪ್ ಆಟ
ಒಂದು ದಿನ ಮೊದಲೇ ಜನ್ಮದಿನ ಆಚರಿಸಿಕೊಂಡ ಕಿಚ್ಚ ಸುದೀಪ್  ತಮ್ಮ ಹಾಗೂ ಬೆಳಗಾವಿ ತಂಡದ ಆಟಗಾರರಿಗೆ ಸಿಹಿ ತಿನ್ನಿಸಿದರು. ನಂತರ ಬ್ಯಾಟಿಂಗ್‌ಗೆ ಬಂದ ಆರಂಭಿಕ ಆಟಗಾರ ರಾಜೀವ್ (41; 22ಎಸೆತ, 7ಬೌಂಡರಿ, 1ಸಿಕ್ಸರ್‌) ತಮ್ಮ ನಾಯಕನಿಗೆ ಜನ್ಮದಿನದ ಉಡುಗೊರೆ ನೀಡುವ ಭರದಲ್ಲಿ ಬ್ಯಾಟು ಬೀಸಿದರು. ಮೊದಲ ಓವರ್‌ ನಲ್ಲಿಯೇ ಸತತ ಮೂರು ಬೌಂಡರಿ ಹೊಡೆದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ನಿಲ್ಲಲಿಲ್ಲ. ಸ್ವಲ್ಪ ಜಿಗುಟುತನ ತೋರಿದ ಸಿದ್ದಾಂತ್ 8ನೇ ಓವರ್‌ನಲ್ಲಿ ಸುನಿಲರಾಜು ಎಸೆತವನ್ನು ಸ್ವೀಪ್ ಮಾಡುವ ಯತ್ನದಲ್ಲಿ ಹಣೆಗೆ ಪೆಟ್ಟು ತಿಂದರು. ಅವರು ಚಿಕಿತ್ಸೆಗಾಗಿ ಹೊರಗೆ ನಡೆದಾಗ, ಪ್ರೇಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು!

ಏಕೆಂದರೆ, ಆಗ ಬ್ಯಾಟು ಹಿಡಿದು ಬಂದಿದ್ದು ಕಿಚ್ಚ ಸುದೀಪ್. ಅವರೂ ಭರ್ಜರಿಯಾಗಿಯೇ ಬ್ಯಾಟು ಬೀಸಿದರು. 9ನೇ ಓವರ್‌ನಲ್ಲಿ ಅವರು ಎತ್ತಿದ ಸಿಕ್ಸರ್‌ ಲಾಂಗ್ ಆನ್ ದಾಟಿ, ಪ್ರೇಕ್ಷಕರ ನಡುವೆ ಬಿತ್ತು. 12ನೇ ಓವರ್‌ನಲ್ಲಿ ಅವರು ಎತ್ತಿದ ಸಿಕ್ಸರ್‌ಗೆ ಚೆಂಡು ಹೋಗಿ ಅವರ ತಂಡದ ಡಗ್‌ಔಟ್‌ನಲ್ಲಿ ಬಿತ್ತು. ಇನ್ನೊಂದು ಸಿಕ್ಸರ್‌ ಲಾಂಗ್ ಆಫ್ ದಾಟಿತು. ಆದರೆ, 13ನೇ ಓವರ್‌ನಲ್ಲಿ ಅವರು ನವೀನ್‌ಗೆ ಎಲ್‌ಬಿಡಬ್ಲ್ಯು ಆದರು. ಅಭಿಮಾನಿಗಳೂ ಹೊರನಡೆದರು. 

ಸಂಕ್ಷಿಪ್ತ ಸ್ಕೋರು: ಬೆಳಗಾವಿ ಪ್ಯಾಂಥರ್‌್ಸ: 20 ಓವರುಗಳಲ್ಲಿ 4 ವಿಕೆಟ್‌ಗಳಿಗೆ 214 (ಸುನಿಲ್‌ರಾಜು 38, ಭರತ್ ಚಿಪ್ಲಿ 77, ಎಂ. ನಿಧೀಶ್ 37, ಆರ್. ವಿನಯ ಕುಮಾರ್ 18, ಕೆ. ಗೌತಮ್ ಔಟಾಗದೇ 15, ವಿವೇಕ್ ಗೋಪನ್ 29ಕ್ಕೆ1). ರಾಕ್‌ಸ್ಟಾರ್‌್ಸ: 16.3 ಓವರುಗಳಲ್ಲಿ 118 (ರಾಜೀವ್ 41, ಚರಣ್ ತೇಜಾ 4, ಸಿದ್ಧಾಂತ್ 13, ಕಾರ್ತಿಕ್ 12, ಕಿಚ್ಚ ಸುದೀಪ್ 30, ಎನ್‌.ಸಿ. ಅಯ್ಯಪ್ಪ 22ಕ್ಕೆ1, ಬಿ. ನವೀನ್ 16ಕ್ಕೆ3, ಕೆ. ಗೌತಮ್ 28ಕ್ಕೆ3)
ಫಲಿತಾಂಶ: ಪ್ಯಾಂಥರ್‌್ಸಗೆ 96 ರನ್ನುಗಳ ಜಯ.  ಪಂದ್ಯದ ಆಟಗಾರ: ಭರತ್ ಚಿಪ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT