ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿಯಲ್ಲೇ ಬೇರುಬಿಟ್ಟ ಸಿಬ್ಬಂದಿ!

ಅನುಷ್ಠಾನಗೊಳ್ಳದ ಶೇ 50 ಸಿಬ್ಬಂದಿ ವರ್ಗಾವಣೆ ಶಿಫಾರಸು
Last Updated 30 ಜೂನ್ 2016, 22:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ರಹಸ್ಯ ಶಾಖೆ ಸೇರಿದಂತೆ ಆಯಕಟ್ಟಿನ ಹುದ್ದೆಗಳಲ್ಲಿ ಕೆಲವು ಸಿಬ್ಬಂದಿ ಸುದೀರ್ಘ ಅವಧಿಯಿಂದ ಬೇರುಬಿಟ್ಟಿದ್ದಾರೆ.

ಕೆಪಿಎಸ್‌ಸಿಯಲ್ಲಿ ಅವ್ಯವಹಾರ ಕೇಳಿಬಂದ ನಂತರ ಸಂಸ್ಥೆಗೆ ಕಾಯಕಲ್ಪ ನೀಡಲು ನೇಮಕಗೊಂಡಿದ್ದ ಪಿ.ಸಿ. ಹೋಟಾ ಸಮಿತಿ,  ಅಕ್ರಮಗಳನ್ನು ತಡೆಯಲು ಮತ್ತು ಸುಧಾರಣೆ ತರುವ ನಿಟ್ಟಿನಲ್ಲಿ ಕೆಲವು ಪ್ರಮುಖ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

ಸಂಸ್ಥೆಯಲ್ಲಿರುವ ಶೇ 50ರಷ್ಟು ಸಿಬ್ಬಂದಿಯನ್ನು ಇತರ ಇಲಾಖೆಗಳಿಗೆ ನಿಯೋಜನೆ ಮೂಲಕ ಬದಲಾಯಿಸಬೇಕು ಎನ್ನುವುದು ಅದರಲ್ಲಿ ಪ್ರಮುಖವಾದುದು. ಸಮಿತಿ ಸಲ್ಲಿಸಿದ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಕೊಂಡಿದ್ದ ಸರ್ಕಾರ, ತಕ್ಷಣ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಮೂರು ವರ್ಷ ಕಳೆದರೂ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಆಗಿಲ್ಲ.

ಆಯೋಗಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರತ್ಯೇಕವಾಗಿ ನಿರ್ವಹಿಸುವ ಸಲುವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ (ಡಿಪಿಪಿಆರ್‌) ಸರ್ಕಾರದ ಅಧೀನ ಕಾರ್ಯದರ್ಶಿ ಹುದ್ದೆಯನ್ನು ಸೃಜಿಸುವಂತೆ ಹೋಟಾ ಸಮಿತಿ ಶಿಫಾರಸು ಮಾಡಿತ್ತು.

ಆಯೋಗವು ಸರ್ಕಾರಕ್ಕೆ ಸಲ್ಲಿಸುವ ಪ್ರಸ್ತಾವನೆಗಳಿಗೆ ಪ್ರತ್ಯೇಕ ಗಮನಹರಿಸಲು ಕೆಳಹಂತದ ಶ್ರೇಣಿಯಲ್ಲಿಯೂ ಸಾಧ್ಯವಾಗುತ್ತಿಲ್ಲ. ಹೊಸತಾಗಿ ಈ ಹುದ್ದೆ ಸೃಜಿಸುವುದರಿಂದ ಸರ್ಕಾರ  ಮತ್ತು ಆಯೋಗದ ನಡುವಿನ ಸಂಪರ್ಕ ಉತ್ತಮಗೊಂಡು ಆಯೋಗಕ್ಕೆ ಸಂಬಂಧಿಸಿ ಆದ್ಯತೆ ವಿಷಯಗಳನ್ನು ಗಮನಹರಿಸಲು ಅನುಕೂಲ ಆಗಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿತ್ತು.

309 ಹುದ್ದೆಗಳು: ಕೆಪಿಎಸ್‌ಸಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಒಟ್ಟು 309 ಹುದ್ದೆಗಳಿವೆ. ಈ ನೌಕರರ ಪೈಕಿ ಕನಿಷ್ಠ ಶೇ 50ರಷ್ಟು ನೌಕರರನ್ನು ನಿಯೋಜನೆಗೆ ಕಳುಹಿಸಿ ಸಚಿವಾಲಯ ಅಥವಾ ಇತರ ಸಂಸ್ಥೆಗಳ ಸಿಬ್ಬಂದಿಯಿಂದ ಬದಲಾಯಿಸಬೇಕು ಎಂದು ಹೋಟಾ ಸಮಿತಿ ತಿಳಿಸಿದೆ.

ಅದರಲ್ಲೂ  ಸೂಕ್ಷ್ಮ ಮಾಹಿತಿಯನ್ನು ನಿರ್ವಹಿಸುವ ಆಯೋಗದ ರಹಸ್ಯ (ಕಂಪ್ಯೂಟರ್) ಶಾಖೆಯಲ್ಲಿ ಈ ಕೆಲಸ ತ್ವರಿತಗತಿಯಲ್ಲಿ ಜಾರಿಗೆ ಬರಬೇಕು ಎಂದೂ ಸಮಿತಿ ಶಿಫಾರಸು ಮಾಡಿತ್ತು. ವಿಶೇಷವೆಂದರೆ, ಆಯೋಗದಲ್ಲಿ ಕೆಲವರು 2–3 ದಶಕಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹೋಟಾ ಸಮಿತಿಯ ಶಿಫಾರಸ್ಸಿನಂತೆ ಇತ್ತೀಚೆಗೆ ಪರೀಕ್ಷಾ ನಿಯಂತ್ರಕರಾಗಿ ಕೃಷ್ಣ ವಾಜಪೇಯಿ ಅವರನ್ನು ನೇಮಿಸಲಾಗಿದೆ. ಆಯೋಗದಲ್ಲಿದ್ದ ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಈ ಹುದ್ದೆಯಾಗಿ ಬದಲಿಸಲಾಗಿದೆ.

(ಕೆಪಿಎಸ್‌ಸಿ) ಅಕ್ರಮ ನೇಮಕಾತಿ  ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಭಾಗೀಯ ಪೀಠ ಇತ್ತೀಚೆಗೆ ನೀಡಿದ ಅಂತಿಮ ತೀರ್ಪಿನಲ್ಲಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕೆಪಿಎಸ್‌ಸಿ ಸುಧಾರಣೆಗೆ ರಚಿಸಿದ್ದ ಪಿ.ಸಿ ಹೋಟಾ ಸಮಿತಿ ಶಿಫಾರಸಿನಂತೆ ನಿಯಮಾವಳಿ ರೂಪಿಸುವಂತೆ ನಿರ್ದೇಶಿಸಿದೆ. ಈ ಕುರಿತ ಸರಣಿ ವರದಿ.:
ಭಾಗ– 1:
 ಕೃಷ್ಣ ವಾಜಪೇಯಿ ಅವರು 2010ರ ಬ್ಯಾಚಿನ ಐಎಎಸ್‌ ಅಧಿಕಾರಿ. ಇ– ಆಡಳಿತ ಇಲಾಖೆಯಿಂದ ಅವರು ಆಯೋಗಕ್ಕೆ ನೇಮಕಗೊಂಡಿದ್ದರು. ಕಾನೂನು ಕೋಶದ ಮುಖ್ಯಸ್ಥರಾಗಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಮಹೇಶ ಹೆಗಡೆ  ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಆಯೋಗದಲ್ಲಿ 120ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಇದರಲ್ಲಿ ಸಹಾಯಕರು, ಕಿರಿಯ ಸಹಾಯಕರು, ಶೀಘ್ರ ಲಿಪಿಗಾರರು, ಬೆರಳಚ್ಚುಗಾರರು, ದತ್ತಾಂಶ ನಮೂದಕರು, ದಲಾಯತ್‌ ಮುಂತಾದ ಅವಶ್ಯಕ ವೃಂದದ ಹುದ್ದೆಗಳೇ ಹೆಚ್ಚಿನವು. ಆಯ್ಕೆ ಪ್ರಾಧಿಕಾರವಾದ ಆಯೋಗವೇ ತನಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಮೀನಮೇಷ ಎನಿಸುತ್ತಿದೆ.

ಅಲ್ಲದೆ, ‘ಡಿ’ ಗುಂಪಿನ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ 20–25 ಮಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ. ಕೆಪಿಎಸ್‌ಸಿಯಲ್ಲಿ ಪೂರ್ವಭಾವಿ ಪರೀಕ್ಷಾ ತಯಾರಿ ಮತ್ತು ಪರೀಕ್ಷಾ ನಂತರದ ಕಾರ್ಯಗಳಿಗಾಗಿ ಎರಡು ರಹಸ್ಯ ಶಾಖೆಗಳಿವೆ. ತಲಾ ಆರು ಸಿಬ್ಬಂದಿ ಈ ಶಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ಶಾಖೆಗಳಲ್ಲಿ ಸಹಾಯಕ ಕಾರ್ಯದರ್ಶಿ–2, ಶಾಖಾಧಿಕಾರಿ– 1 (1 ಹುದ್ದೆ ಖಾಲಿ ಇದೆ), ಮೂವರು ಸಹಾಯಕರು– 3 (1ಹುದ್ದೆ ಖಾಲಿ), ಶೀಘ್ರ ಲಿಪಿಗಾರರು–2, ಒಬ್ಬರು ಡಾಟಾ ಎಂಟ್ರಿ ಆಪರೇಟರ್ (1 ಹುದ್ದೆ ಖಾಲಿ ) ಇದ್ದಾರೆ. ರಹಸ್ಯ ಶಾಖೆಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿರುವ ಎ. ಮೀನಾ ಮೂವತ್ತು ವರ್ಷಗಳಿಂದ ಕೆಪಿಎಸ್‌ಸಿಯಲ್ಲಿ ಇದ್ದಾರೆ.

ಕಿರಿಯ ಸಹಾಯಕರಾಗಿ ಸೇರಿ ಈಗ ಈ ಹುದ್ದೆಯಲ್ಲಿದ್ದಾರೆ. ಫಲಿತಾಂಶ ಸಿದ್ಧಗೊಳಿಸುವ ವಿಭಾಗದಲ್ಲಿ ಮಹತ್ವದ ಹೊಣೆ ನಿಭಾಯಿಸುತ್ತಿದ್ದಾರೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ. ಇದೇ ಶಾಖೆಯಲ್ಲಿ ಅನ್ನಪೂರ್ಣ ಎಂಬವರು 20 ವರ್ಷಗಳಿಂದ ಕರ್ತವ್ಯದಲ್ಲಿದ್ದಾರೆ. ಅವರೂ ಕಿರಿಯ ಸಹಾಯಕರಾಗಿ ಸೇರಿದವರು.

ಎರಡೂವರೆ ದಶಕದಿಂದ ಕೆಪಿಎಸ್‌ಸಿ ಉದ್ಯೋಗಿ ಆಗಿರುವ ನೀಲಕಂಠಪ್ಪ  ಕಿರಿಯ ಸಹಾಯಕರಾಗಿದ್ದವರು, ಈಗ ರಹಸ್ಯ ಶಾಖೆಯಲ್ಲಿ ಶಾಖಾಧಿಕಾರಿ. ಕಿರಿಯ ಸಹಾಯಕರಾಗಿದ್ದವರು ಸಹಾಯಕರಾಗಿ ಬಡ್ತಿ ಪಡೆದ ನಟರಾಜ್‌ 7 ವರ್ಷದಿಂದ ಇದ್ದಾರೆ. ಅಟೆಂಡರ್‌ ಆಗಿ ಸೇರಿದ ಕವಿತಾ, ಕಿರಿಯ ಸಹಾಯಕರಾಗಿ ಬಡ್ತಿ ಪಡೆದಿದ್ದು, 10 ವರ್ಷದಿಂದ ಕೆಪಿಎಸ್‌ಸಿಯಲ್ಲೇ ಇದ್ದಾರೆ.

‘ಮೈಸೂರು, ಬೆಳಗಾವಿ, ಶಿವಮೊಗ್ಗ ಮತ್ತು ಕಲಬುರ್ಗಿಯಲ್ಲಿರುವ ಆಯೋಗದ ಪ್ರಾದೇಶಿಕ ಕಚೇರಿಗಳಲ್ಲಿ ಹುದ್ದೆಗಳು  ಖಾಲಿ ಇವೆ. ಆ ಕಚೇರಿಗಳು ನಿಷ್ಪ್ರಯೋಜಕವಾಗಿದ್ದು ಆರ್ಥಿಕವಾಗಿ ಹೊರೆ. ಇಲ್ಲಿ ಆಯೋಗದ ಯಾವುದೇ ಕೆಲಸ ನಡೆಯುತ್ತಿಲ್ಲ. ಇವನ್ನು ಮುಚ್ಚುವುದೇ ಲೇಸು ಎನ್ನುತ್ತಾರೆ ಆಯೋಗದ ಹಿರಿಯ ಅಧಿಕಾರಿ.

ಆಯೋಗದಲ್ಲಿ ಉಪ ಕಾರ್ಯದರ್ಶಿಯಾಗಿದ್ದ ಲಕ್ಷ್ಮಣ್‌ ಕುಕ್ಕಿನ್‌ ನಿವೃತ್ತಿಯಾದ ಬಳಿಕ ಮತ್ತೆ ಒಂದು ವರ್ಷ (2016ರ ಮೇ 31ರವರೆಗೆ) ಅವಧಿಗೆ ಅವರನ್ನು ವಿಶೇಷ ಅಧಿಕಾರಿಯಾಗಿ (ಆಡಳಿತ)  ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿತ್ತು. ಸರ್ಕಾರದ ಆದೇಶಗಳನ್ನು ಕಡೆಗಣಿಸಿ ಈ ನೇಮಕ ನಡೆದಿತ್ತು ಎಂದೂ ಆ ಅಧಿಕಾರಿ ಹೇಳಿದರು.

‘ಸುಧಾರಣೆ’ಗಾಗಿ ತಂದವರ ವರ್ಗ: ಕೆಪಿಎಸ್‌ಸಿ ‘ಸುಧಾರಣೆ’ ಉದ್ದೇಶದಿಂದ ಕಾರ್ಯದರ್ಶಿಯಾಗಿ 2 ವರ್ಷಗಳ ಹಿಂದೆ ನೇಮಕಗೊಂಡಿದ್ದ ಮನೋಜ್‌ ಕುಮಾರ್ ಮೀನಾ ಅವರನ್ನು ಇತ್ತೀಚೆಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರಾಗಿ ವರ್ಗಾಯಿಸಿ ಆ ಜಾಗಕ್ಕೆ ಬಿಬಿಎಂಪಿ ವಿಶೇಷ ಆಯುಕ್ತ ಸುಬೋಧ್‌ ಯಾದವ್ ಅವರನ್ನು ನೇಮಿಸಲಾಗಿದೆ.

ಆದರೆ, ಸುಬೋಧ್‌ ಅವರು ಆಯ್ಕೆ ಶ್ರೇಣಿಯ ಅಧಿಕಾರಿಯಾಗಿ ಬಡ್ತಿ ನಿರೀಕ್ಷೆಯಲ್ಲಿದ್ದು, ಈಗ ಮುಸ್ಸೋರಿಯಲ್ಲಿರುವ ಲಾಲ್‌ ಬಹದ್ದೂರ್‌ಶಾಸ್ತ್ರಿ ಸಾರ್ವಜನಿಕ ಆಡಳಿತ ಸಂಸ್ಥೆಗೆ ಒಂದು ತಿಂಗಳ ತರಬೇತಿಗಾಗಿ ತೆರಳಿದ್ದಾರೆ. ಹೀಗಾಗಿ ಮೀನಾ ಅವರೇ ಕಾರ್ಯದರ್ಶಿ ಹುದ್ದೆಯ ಹೊಣೆಯನ್ನು ಹೆಚ್ಚುವರಿಯಾಗಿ ವಹಿಸಿಕೊಂಡಿದ್ದಾರೆ.

ಈ ಮಧ್ಯೆ, ಕಾರ್ಯದರ್ಶಿ ಹುದ್ದೆ ಮೇಲೆ ಕಣ್ಣಿಟ್ಟು ಕೆಲವರು ಪ್ರಯತ್ನ ಆರಂಭಿಸಿದ್ದಾರೆ ಎನ್ನಲಾಗಿದೆ. 2014ರ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ಸಂದರ್ಶನ ಸದ್ಯದಲ್ಲೇ ನಡೆಯಬೇಕಿದೆ. ಈ ಸಂದರ್ಭದಲ್ಲಿ ಮೀನಾ ಅವರನ್ನು ವರ್ಗಾಯಿಸಿರುವುದರ ವಿರುದ್ಧ ಆಯೋಗದ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT