ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ಪಟ್ಟಿ ಪರಿಷ್ಕರಣೆಗೆ ‘ಸುಪ್ರೀಂ’ ತಡೆ

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ೧೯೯೮ ಸಾಲಿನ ನೇಮಕಾತಿ ಪಟ್ಟಿಯನ್ನು  ಪರಿಷ್ಕರಿಸಬೇಕು ಎಂದು ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್‌ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಅಲ್ಲದೇ 1998, 1999 ಮತ್ತು 2004ನೇ ಸಾಲಿನ ಪಟ್ಟಿ ಕುರಿತಂತೆ ಹೈಕೋರ್ಟ್ ನಡೆಸುತ್ತಿರುವ ವಿಚಾರಣೆ ಮುಂದುವರಿಸದಂತೆಯೂ ಸೂಚಿಸಿದೆ.

ಹೈಕೋರ್ಟ್‌ ನ.೧೧ರಂದು ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌.ದತ್ತು ಅವರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ಈ ತಡೆಯಾಜ್ಞೆ ನೀಡಿದೆ.

ಸೇವಾ ವ್ಯಾಪ್ತಿಗೆ ಸಂಬಂಧಿಸಿದ ವಿಷಯದ ಬಗ್ಗೆ ಸಾರ್ವಜನಿಕ ಹಿತಾ ಸಕ್ತಿಯ ನೆಪದಲ್ಲಿ ಸಲ್ಲಿಸಲಾಗಿದ್ದ ಅರ್ಜಿ ಯನ್ನು ಆಧರಿಸಿ ಈ ಆದೇಶ ನೀಡುವ ಮೂಲಕ ಹೈಕೋರ್ಟ್‌ ತಪ್ಪೆಸಗಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರು ಹಾಗೂ ಅವರ ವಕೀಲರನ್ನು ಒಳಗೊಂಡ ಸತ್ಯಶೋಧನಾ ಸಮಿತಿಯ ವರದಿಯನ್ನು ಆಧರಿಸಿ ಹೈಕೋರ್ಟ್‌ ಈ ಆದೇಶ ನೀಡಿದೆ ಎಂದು ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಪಿ.ಆರ್‌.ರಾವ್‌ ಮತ್ತು ಎಸ್‌.ಎಂ.ಚಂದ್ರಶೇಖರ್‌ ಅವರು ವಾದಿಸಿದರು.

ಹೈಕೋರ್ಟ್‌ ಆದೇಶದ ವಿರುದ್ಧ ಎಚ್‌.ಎನ್‌.­ಗೋಪಾಲ­ಕೃಷ್ಣ ಮತ್ತಿತರರು ಈ ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕ ಹಿತಾ­ಸಕ್ತಿ ಅರ್ಜಿ ಹಾಗೂ ಸಿಐಡಿ ತನಿಖೆಯನ್ನು ಆಧರಿಸಿ ಪರಿಷ್ಕೃತ ಪಟ್ಟಿ ಸಿದ್ಧಪಡಿಸಲು ಹೈಕೋರ್ಟ್‌ ನಿರ್ದೇಶನ ನೀಡಿದ್ದು ಸರಿಯಲ್ಲ ಎಂದು ಅವರು ವಾದಿಸಿದ್ದರು.

‘ಹೈಕೋರ್ಟ್‌ ಸೆ.೧೬ರಂದು ತನ್ನ ಅಂತರ್ಜಾಲದ ಮೂಲಕ ಹೊರಡಿಸಿದ್ದ ನಿರ್ದೇಶನದಿಂದ ಕಕ್ಷಿದಾರರಿಗೆ ಹಿಂಬಡ್ತಿ­ಯಾಗಿದ್ದು, ಇದು ಸಹಜ ನ್ಯಾಯ ತತ್ವಗಳಿಗೆ ವಿರುದ್ಧ­’ ಎಂದು  ಉಪವಿಭಾಗಾಧಿಕಾರಿ ಕವಿತಾ ಮಣ್ಣಿ­ಕೇರಿ ಅವರ ವಕೀಲ ನಿಶಾಂತ್‌ ಪಾಟೀಲ್‌ ವಾದಿಸಿದರು.

ಕೆಪಿಎಸ್‌ಸಿ ನೇಮಕಾತಿಯಲ್ಲಿ ಆಯ್ಕೆಯಾಗಲು ವಿಫಲವಾದ ಅಭ್ಯರ್ಥಿ­ಗಳು ಸೇವಾ ನಿಯಮದ ಲೋಪ ಸರಿಪಡಿಸಲು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸ­ಬೇಕಿತ್ತು. ಆದರೆ, ಅವರು ಇದಕ್ಕಾಗಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದನ್ನು ವಿಚಾರಣೆಗೆ ಪರಿಗಣಿಸಿದ್ದು ಸರಿಯಲ್ಲ ಎಂದೂ ಅವರು ಆಕ್ಷೇಪಿಸಿದ್ದರು.

೧೯೯೮ನೇ ವರ್ಷದ ‘ಎ’ ಮತ್ತು ‘ಬಿ’ ದರ್ಜೆಯ ಪತ್ರಾಂಕಿತ ಪ್ರೊಬೇಷನರಿ ಅಧಿಕಾರಿಗಳ ಪರಿಷ್ಕೃತ ರ್‍್ಯಾಂಕ್‌ ಪಟ್ಟಿಯನ್ನು ತನ್ನ ಅಂತರ್ಜಾಲ ತಾಣದಲ್ಲಿ ೨೪ ಗಂಟೆಯೊಳಗೆ ಪ್ರಕಟಿಸ­ಬೇಕು ಎಂದು ಕೆಪಿಎಸ್‌ಸಿಗೆ ಹೈಕೋರ್ಟ್‌ ನ.೧೧ರಂದು ನಿರ್ದೇಶನ ನೀಡಿತ್ತು.

ಹೈಕೋರ್ಟ್‌ ಆದೇಶದಿಂದ ೭೬೦ ಅಧಿಕಾರಿಗಳ ವೃತ್ತಿ­ಭವಿಷ್ಯದಲ್ಲಿ ಏರುಪೇ­ರಾಗಿತ್ತು. ಕೆಲವರಿಗೆ ಹಿಂಬಡ್ತಿ­ಯಾದರೆ, ಇನ್ನು ಕೆಲವರಿಗೆ ಬಡ್ತಿ ಸಿಕ್ಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT