ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ, ಪತ್ನಿಯ ಆಭರಣ ಮಾರಿ ಕಾಫಿ ಡೇ ಉಳಿಸಿಕೊಳ್ಳುವೆ: ಹೀಗಿತ್ತು ಸಿದ್ದಾರ್ಥ ಮನದಾಳ

ಮುಸಾಫಿರ್ ಅಂಕಣದಲ್ಲಿ ಕಾಫಿ ಡೇ ಸಿದ್ದಾರ್ಥ ಮನೋಲೋಕದ ಅಭಿವ್ಯಕ್ತಿ ಅಭಿವ್ಯಕ್ತಿ
Last Updated 31 ಜುಲೈ 2019, 2:41 IST
ಅಕ್ಷರ ಗಾತ್ರ

ಕೆಫೆ ಕಾಫಿ ಡೇ ಬಗ್ಗೆ ಸಿದ್ದಾರ್ಥ ಅವರಿಗೆ ಇದ್ದುದು ಕೇವಲ ವ್ಯಾವಹಾರಿಕ ಸಂಬಂಧವಲ್ಲ; ಅದೊಂದು ಭಾವುಕ ನಂಟು. ಸಿದ್ದಾರ್ಥ ಅವರ ಮನೋಲೋಕವನ್ನು ಹಿರಿಯ ಪತ್ರಕರ್ತ ಸತೀಶ್ ಚಪ್ಪರಿಕೆ ಜುಲೈ 3, 2016ರಂದು ಪ್ರಕಟವಾಗಿದ್ದ ತಮ್ಮ ಅಂಕಣ ‘ಮುಸಾಫಿರ್‌’ನಲ್ಲಿ ದಾಖಲಿಸಿದ್ದರು.

–––

2008ರ ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾದ ಸಂದರ್ಭ. ನಾನಾಗ ದೆಹಲಿ ಮೂಲದ ವಾರಪತ್ರಿಕೆಯ ಸಹಸಂಪಾದಕನಾಗಿದ್ದೆ. ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮರುಜೀವ ನೀಡುವ ಸಲುವಾಗಿಯೇ ‘ಮರಳಿ ಮಣ್ಣಿಗೆ’ ಎಳೆತರಲಾಗಿತ್ತು.

ದೆಹಲಿಯ ನಮ್ಮ ಸಂಪಾದಕರು ಏನೇ ಆದರೂ, ಕೃಷ್ಣ ಅವರ ಸಂದರ್ಶನವನ್ನು ಅದೇ ವಾರ ಪ್ರಕಟ ಮಾಡಬೇಕು ಎಂಬ ಪಣತೊಟ್ಟು, ಜವಾಬ್ದಾರಿ ನನ್ನ ಮೇಲೆ ಹೊರಿಸಿದ್ದರು. ಕೃಷ್ಣ ಅವರ ಆಪ್ತ ಕಾರ್ಯದರ್ಶಿ ರಾಘವೇಂದ್ರ ಶಾಸ್ತ್ರಿ ಅವರೊಂದಿಗೆ ಮಾತುಕತೆಯಾಗಿ, ನಮ್ಮ ವಾರಪತ್ರಿಕೆಗೆ ವಿಶೇಷ ಸಂದರ್ಶನ ನೀಡಲು ಸಮಯ ಕೂಡ ನಿಗದಿಯಾಗಿತ್ತು. ಸಂದರ್ಶನ ಮಾಡುವುದಕ್ಕಾಗಿಯೇ ನಾನು ದೆಹಲಿಯಿಂದ ಬಂದಿಳಿದೆ. ಛಾಯಾಗ್ರಾಹಕ ಮಿತ್ರ ಸಾಗ್ಗೆರೆ ರಾಧಾಕೃಷ್ಣ ಬೆಂಗಳೂರಲ್ಲಿ ನನ್ನ ಜೊತೆಗೂಡಿ, ಸಂಜೆ ಐದು ಗಂಟೆಗೆ ಸದಾಶಿವನಗರದ ಕೃಷ್ಣ ಅವರ ಮನೆಗೆ ತೆರೆಳಿದೆವು. ಆದರೆ, ಶಾಸ್ತ್ರಿ ಮತ್ತು ಕೃಷ್ಣ ಇಬ್ಬರೂ ನಾಪತ್ತೆ!

ಸುಮಾರು ಒಂದು ಗಂಟೆಯ ಸತತ ಪ್ರಯತ್ನದ ನಂತರ ಶಾಸ್ತ್ರಿ ಮೊಬೈಲ್‌ನಲ್ಲಿ ಸಿಕ್ಕರು. ‘ನಾವು ಮನೆಗೆ ಬರುವುದೇ ರಾತ್ರಿ ಎಂಟಾಗಬಹುದು. ಸಂದರ್ಶನ ಬೇಕಿದ್ದರೆ ನಾಳೆ ಬೆಳಿಗ್ಗೆ ಬನ್ನಿ!’ ಎಂದರು. ಅಂದು ಬುಧವಾರ. ರಾತ್ರಿ ಎಷ್ಟು ಹೊತ್ತಾದರೂ ನಾನು ಕೃಷ್ಣ ಅವರ ಸಂದರ್ಶನ ಮಾಡಿ, ಮತ್ತೆ ಕೋರಮಂಗಲದಲ್ಲಿದ್ದ ಕಚೇರಿಗೆ ಹೋಗಿ, ಆ ಕ್ಷಣವೇ ಟೇಪ್‌ನಲ್ಲಿದ್ದ ಮಾತುಗಳನ್ನು ಬಟ್ಟಿಯಿಳಿಸಿ, ಕಚೇರಿಗೆ ಕಳುಹಿಸಬೇಕಿತ್ತು.

ಕೃಷ್ಣ ಸಂದರ್ಶನಕ್ಕೆಂದೇ ಎರಡು ಪುಟಗಳನ್ನು ಖಾಲಿ ಇಟ್ಟುಕೊಂಡು ಕೇಂದ್ರ ಕಚೇರಿಯಲ್ಲಿ ಸಂಪಾದಕರು ನನಗಾಗಿ ಕಾದು ಕೂತಿದ್ದರು. ನಾನು ಸಂದರ್ಶನ ಬರೆದು ಕಳುಹಿಸಿದ ಅರ್ಧ ಗಂಟೆಯಲ್ಲಿ ಆ ಎರಡು ಪುಟ ತುಂಬಿಸಿ, ನಮ್ಮ ವಾರಪತ್ರಿಕೆ ಗುರುವಾರ ಬೆಳಿಗ್ಗೆ ಪ್ರಿಂಟ್‌ಗೆ ಹೋಗಬೇಕಿತ್ತು. ಶಾಸ್ತ್ರಿ ಅವರಿಗೆ ಡೆಡ್‌ಲೈನ್ ವಿಷಯವನ್ನು ಮನನ ಮಾಡಿಕೊಡುವಷ್ಟರಲ್ಲಿ ಬೆವರು ಇಳಿದುಹೋಗಿತ್ತು.

ಕೊನೆಗೂ ಕೃಷ್ಣಾಗಮನವಾಯಿತು. ಮನೆಯ ಆವರಣದಲ್ಲಿ ಸುಮಾರು ಮುನ್ನೂರಕ್ಕಿಂತ ಅಧಿಕ ಟಿಕೇಟ್ ಆಕಾಂಕ್ಷಿಗಳ ಸಂತೆ. ಕೃಷ್ಣ ಅವರನ್ನೇ ಆ ಆಕಾಂಕ್ಷಿಗಳು ಮನೆಯ ಒಳಗೆ ಹೋಗಲು ಕೂಡ ಬಿಡಲಿಲ್ಲ. ಅತ್ತ ಹೊರಗಿದ್ದ ಲಾನ್‌ನಲ್ಲಿಯೇ ಕೃಷ್ಣ ಕೂತು ಒಬ್ಬೊಬ್ಬರನ್ನೇ ಮಾತನಾಡಿಸಲಾರಂಭಿಸಿದರು. ಇತ್ತ ಡೆಡ್‌ಲೈನ್ ಕುಣಿಕೆ ಬಿಗಿಯಾಗುತ್ತಾ ನನ್ನ ಉಸಿರು ಕಟ್ಟಲಾರಂಭಿಸಿತು. ರಾತ್ರಿ ಹತ್ತೂವರೆ. ಇನ್ನು ಸುಮ್ಮನೆ ನಿಂತಿದ್ದರೆ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದು, ಎಂ.ಪಿ. ಪ್ರಕಾಶ್ ಜೊತೆ ಕೂತಿದ್ದ ಕೃಷ್ಣ ಅವರ ಬಳಿಗೆ ಹೋಗಿ, ನನ್ನ ಮುಂದಿದ್ದ ‘ಸಾವಿನ ರೇಖೆ’ಯ ಬಗ್ಗೆ ಹೇಳಿದೆ.

ಶಾಸ್ತ್ರಿ ಅವರನ್ನು ಕರೆದ ಕೃಷ್ಣ, ನಮ್ಮಿಬ್ಬರನ್ನು ಮನೆಯ ಒಳಗೆ ಡೈನಿಂಗ್ ಹಾಲ್‌ಗೆ ಕರೆದುಕೊಂಡು ಕೂರಿಸುವಂತೆ ಸೂಚನೆ ನೀಡಿ, ಹದಿನೈದು ನಿಮಿಷದೊಳಗೆ ಬಂದು ಸಂದರ್ಶನ ನೀಡುವುದಾಗಿ ಭರವಸೆ ನೀಡಿದರು. ಮನೆಯೊಳಗೆ ನಾನು ಮತ್ತು ರಾಧಾಕೃಷ್ಣ ಹೆಜ್ಜೆಯಿಟ್ಟೆವು. ಡೈನಿಂಗ್ ಹಾಲ್‌ನಲ್ಲಿ ಕಾಲಿಟ್ಟ ಕೂಡಲೇ ಕಣ್ಣಿಗೆ ಬಿದ್ದದ್ದು ಮತ್ಯಾರೂ ಅಲ್ಲ, ಭಾರತದಲ್ಲಿನ ಕೆಫೆ ಸಂಸ್ಕೃತಿಯ ಹರಿಕಾರ– ಕಾಫಿ ಲೋಕದ ‘ಬುದ್ಧ’. ಒಬ್ಬ ಪತ್ರಕರ್ತನಾಗಿ, ಬ್ರ್ಯಾಂಡಿಂಗ್ ವಿದ್ಯಾರ್ಥಿಯಾಗಿ, ಚಹಾ ಕುಡುಕನಾದರೂ– ಕಾಫಿ ಪ್ರಿಯನಾಗಿ ನಾನು ಕೆಲವು ವರ್ಷಗಳಿಂದ ಕೈಕುಲುಕಲು ಇಷ್ಟಪಟ್ಟಿದ್ದ ವ್ಯಕ್ತಿ ಜಿ.ವಿ. ಸಿದ್ಧಾರ್ಥ!

ಆಗಿನ್ನೂ ‘ಕೆಫೆ ಕಾಫಿ ಡೇ’ ದೇಶದೆಲ್ಲೆಡೆ ನಿಧಾನವಾಗಿ ತನ್ನ ಕಬಂಧಬಾಹು ಚಾಚುತ್ತಿತ್ತು. ಗೊತ್ತಿದ್ದವರಿಗೆ ಮಾತ್ರ ಗೊತ್ತಿದ್ದ ಆ ಬ್ರ್ಯಾಂಡ್ ಬಗ್ಗೆ ನನಗೆ ಮೊದಲಿನಿಂದಲೂ ಎಲ್ಲಿಲ್ಲದ ಕುತೂಹಲವಿತ್ತು. ಮೊದಲ ಬಾರಿಗೆ ಬ್ರಿಗೇಡ್ ರಸ್ತೆಯಲ್ಲಿದ್ದ ‘ಕಾಫಿ ಡೇ’ ಪ್ರವೇಶಿಸುವಷ್ಟರಲ್ಲಿ ಅದರ ಮೂಲ ಹುಡುಕಿದ್ದೆ. ನಂತರದ ವರ್ಷಗಳಲ್ಲಿ ಹೆಚ್ಚು ಕಮ್ಮಿ, ದೇಶದೆಲ್ಲೆಡೆ ಎದುರು ಸಿಕ್ಕಿದ ಪ್ರತಿಯೊಂದು ‘ಕಾಫಿ ಡೇ’ ಹೊಕ್ಕಿ ಹೊರಬಂದಿದ್ದೆ. ಅದಕ್ಕಿದ್ದ ಕಾರಣಗಳೆಂದರೆ, ಒಂದು ‘ಕಾಫಿ ಡೇ’ ಕರ್ನಾಟಕ ಜಗತ್ತಿಗೆ ನೀಡಿದ ಅಪ್ಪಟ ಕೆಫೆ ಬ್ರ್ಯಾಂಡ್. ಎರಡು, ಗ್ರೇಟ್ ಬ್ರಿಟನ್‌ನಲ್ಲಿ ಕೆಫೆ ಸಂಸ್ಕೃತಿಯನ್ನು ನಾನು ಬಹಳ ಹತ್ತಿರದಿಂದ ನೋಡಿಕೊಂಡು ಬಂದಿದ್ದೆ. ಆ ಸಂಸ್ಕೃತಿ ಭಾರತದಲ್ಲಿ ಹೇಗೆ ನೆಲೆಯೂರಬಹುದು ಎಂಬ ಕುತೂಹಲ!

ಕೃಷ್ಣ ಸಂದರ್ಶನದ ಸಂದರ್ಭದಲ್ಲಿ ಸಿದ್ಧಾರ್ಥ ಭೇಟಿ ಅನಿರೀಕ್ಷಿತವಾಗಿದ್ದರೂ, ಅಸಹಜವೇನೂ ಆಗಿರಲಿಲ್ಲ. ಕೃಷ್ಣ ಅವರ ಪುತ್ರಿ ಮಾಳವೀಕ ಕೈ ಹಿಡಿದಿದ್ದ ಸಿದ್ಧಾರ್ಥ ಬುದ್ಧನ ಮತ್ತೊಂದು ಅವತಾರ. ಸಭ್ಯ, ಸರಳ, ಸದಾ ನಗು ಸೂಸುವ, ಮೆದು ಮಾತಿನ ಮನುಷ್ಯ. ಆದರೆ ಅಪ್ಪಟ ವ್ಯವಹಾರಸ್ಥ! ನಮ್ಮ ಮೊದಲ ಭೇಟಿಯಲ್ಲಿಯೇ ಹಿಡಿದಿದ್ದ ಕೈ ಗಟ್ಟಿಯಾಯಿತು. ಆ ನಡುರಾತ್ರಿ ಸಂದರ್ಶನ ಮುಗಿಸಿದ ಮೇಲೆ ಮತ್ತೊಮ್ಮೆ ಕುಲುಕಿದ ಮೇಲೆ ಆ ಕೈ ಜೊತೆಗಿನ ಸಂಪರ್ಕ ನಿರಂತರ.

ಮೂಲತಃ ಚಿಕ್ಕಮಗಳೂರಿನವರಾದ ಸಿದ್ಧಾರ್ಥ ಬಾಲ್ಯದುದ್ದಕ್ಕೂ ಆಡಿ ಬೆಳೆದದ್ದು ತಂದೆಯ ಕಾಫಿತೋಟದಲ್ಲಿ. ಕಾಫಿಯೇ ಅವರ ಬದುಕಾಗುವ ಮೊದಲು ಹೆಜ್ಜೆ ಇಟ್ಟಿದ್ದು ಷೇರು ಮಾರುಕಟ್ಟೆಗೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಕನಾಮಿಕ್ಸ್ ಸ್ನಾತಕೋತ್ತರ ಪದವಿ ಪಡೆದ ಮೇಲೆ ಮುಂಬೈನ ಜೆ.ಎಂ. ಫೈನಾನ್ಷಿಯಲ್ಸ್ ಲಿಮಿಟೆಡ್‌ನಲ್ಲಿ ಎರಡು ವರ್ಷ ಕೆಲಸ ಮಾಡಿದ ಸಿದ್ಧಾರ್ಥ ಮೂಲತಃ ಷೇರು ಮಾರುಕಟ್ಟೆಯ ಯಶಸ್ವಿ ಗೂಳಿ.

ಮುಂಬೈನಿಂದ ಬೆಂಗಳೂರಿಗೆ ಹಿಂತಿರುಗಿದ ಮೇಲೆ ಕೂಡ ಷೇರು ಮಾರುಕಟ್ಟೆ ಮತ್ತು ಬಂಡವಾಳ ಹೂಡಿಕೆ ಜಗತ್ತಿನಲ್ಲಿ ತನ್ನ ಬೇರು ಗಟ್ಟಿ ಮಾಡಿಕೊಂಡ ಅವರು ಪಿತ್ರಾರ್ಜಿತ ಆಸ್ತಿ ಕಾಫಿತೋಟದ ಮೇಲೆ ಕಣ್ಣು ಹಾಯಿಸಿದ್ದು ಆನಂತರ. ಕ್ರಮೇಣ ಅಮಾಗಲ್ಮೇಟೆಡ್ ಕಾಫಿ ಬೀನ್ (ಎಬಿಸಿ) ಕಂಪೆನಿಯ ಮೂಲಕ ಕಾಫಿ ರಫ್ತು ಮಾರುಕಟ್ಟೆಯಲ್ಲಿ ಬಹುದೊಡ್ಡ ಆಟಗಾರನಾಗಿ ಬೆಳೆದ ಸಿದ್ಧಾರ್ಥ ಕಣ್ಣು ಕೆಫೆ ಸಂಸ್ಕೃತಿಯ ಮೇಲೆ ಬಿದ್ದದ್ದು 1996ರಲ್ಲಿ.

‘ಮೊದಲ ಬಾರಿಗೆ ನಾನು ಕೆಫೆಯ ಕನಸು ತೆರೆದಿಟ್ಟಾಗ, ಗೆಳೆಯರೊಬ್ಬರು ಇದು ಕೆಲಸಕ್ಕೆ ಬಾರದ ಯೋಜನೆ ಎಂದಿದ್ದರು. ಪಕ್ಕದಲ್ಲಿಯೇ ಐದು ರೂಪಾಯಿಗೆ ಕಾಫಿ ಸಿಗುವಾಗ, ನಿಮ್ಮ ಕೆಫೆಗೆ ಬಂದು ಒಂದು ಕಪ್ ಕಾಫಿಗೆ 25 ರೂಪಾಯಿ ನೀಡಿ ಯಾರು ಕುಡಿಯುತ್ತಾರೆ ಎಂದು ಆ ಗೆಳೆಯ ಸಹಜವಾಗಿಯೇ ಕೇಳಿದ್ದ. ಆ ಕ್ಷಣ ನಾನು ಕೂಡ ಒಂದು ಹೆಜ್ಜೆ ಹಿಂದಿಟ್ಟೆ.

ಆದರೆ, ಕ್ರಮೇಣ ಕಾಫಿ ಜೊತೆ ಇಂಟರ್‌ನೆಟ್ ಸೌಲಭ್ಯ ಒದಗಿಸೋಣ ಎಂಬ ಯೋಜನೆ ಹಾಕಿಕೊಂಡು ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಜುಲೈ 11, 1996 ಮೊದಲ ಕೆಫೆ ಕಾಫಿ ಡೇ ಸ್ಥಾಪನೆ ಮಾಡಿದೆವು. ಆಗ ನನ್ನ ಮನಸ್ಥಿತಿ ಹೇಗಿತ್ತೆಂದರೆ, ಹೋದರೆ ಒಂದೂವರೆ ಕೋಟಿ ರೂಪಾಯಿ. ಯಶಸ್ವಿಯಾದರೆ ಹೊಸ ಬ್ರ್ಯಾಂಡ್‌ನ ಉದ್ಭವ’– ಸಿದ್ಧಾರ್ಥ ಇಪ್ಪತ್ತು ವರ್ಷಗಳ ಹಳೆಯ ನೆನಪುಗಳನ್ನು ಕೆದಕಿ ಹೇಳುತ್ತಾರೆ.

ಎರಡು ದಶಕಗಳ ಹಿಂದೆ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಆರಂಭವಾದ ಅಪ್ಪಟ ಕರ್ನಾಟಕ ಬ್ರ್ಯಾಂಡ್ ಇಂದು ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿದೆ. ಅಂದು ಒಂದೂವರೆ ಕೋಟಿ ರೂಪಾಯಿ ಕಳೆದುಕೊಳ್ಳಲು ಹೊರಟಿದ್ದ ಸಿದ್ಧಾರ್ಥ, ಇಂದು ‘ಕೆಫೆ ಕಾಫಿ ಡೇ’ ಮೂಲಕವೇ ವರ್ಷಕ್ಕೆ ಹತ್ತಿರ–ಹತ್ತಿರ 1600 ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿದ್ದಾರೆ. ಭಾರತ, ಜೆಕ್ ಗಣರಾಜ್ಯ, ಆಸ್ಟ್ರಿಯ, ವಿಯೆನ್ನಾ ಮತ್ತು ಈಜಿಪ್ಟ್‌ನಲ್ಲಿ ಸುಮಾರು 1600 ‘ಕೆಫೆ ಕಾಫಿ ಡೇ’ಗಳು ಹರಡಿನಿಂತಿವೆ.

ಈ ಎಲ್ಲ ಕೆಫೆಗಳಲ್ಲಿ ಬಳಸುವ ಕಾಫಿಬೀಜ ಬೆಳೆಯುವುದು ಚಿಕ್ಕಮಗಳೂರಿನ ಎಸ್ಟೇಟ್‌ನಲ್ಲಿ. ಕಾಫಿ ಕ್ಯೂರಿಂಗ್ ಆಗುವುದು ‘ಎಬಿಸಿ’ಯಲ್ಲಿ. ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ತರಬೇತಿ ನೀಡುವುದು ಬೆಂಗಳೂರಿನಲ್ಲಿ. ಕಾಣುವ ಪ್ರತಿಯೊಂದು ಕುರ್ಚಿ, ಮೇಜು ತಯಾರಾಗುವುದು ಚಿಕ್ಕಮಗಳೂರಿನ ಕಂಪೆನಿಗೆ ಸೇರಿದ ಪೀಠೋಪಕರಣ ಉತ್ಪಾದನಾ ಕಾರ್ಖಾನೆಯಲ್ಲಿ. ಇಲ್ಲಿ ಎಲ್ಲವೂ ಸ್ವಂತದ್ದು! ಇಪ್ಪತ್ತು ವರ್ಷದ ಹಿಂದಿನ ಒಬ್ಬ ವ್ಯಕ್ತಿಯ ಕನಸು ಇಂದು ಸುಮಾರು 6000 ಸದಸ್ಯರುಳ್ಳ ಬೃಹತ್ ಕುಟುಂಬವಾಗಿ ಬೆಳೆದು ನಿಂತಿದೆ.

ಆದರೂ ಸಿದ್ಧಾರ್ಥ ಮಾತ್ರ ಒಂದು ಚೂರು ಬದಲಾಗಿಲ್ಲ. ಪದೇ ಪದೇ ಕೈಗೆ ಸಿಗದೇ ಇದ್ದರೂ, ಸದಾ ಸಂಪರ್ಕದಲ್ಲಿರುವ ಕಾಫಿಲೋಕದ ‘ಬುದ್ಧ’ ಯಾವುದೇ ಕಾರಣಕ್ಕೆ ಕಳುಹಿಸಿದ ಮಿಂಚಂಚೆಗೆ ಉತ್ತರ ನೀಡದೇ ಇರುವುದಿಲ್ಲ. ಕಾಫಿ ಡೇ ಬಗ್ಗೆ ಯಾವುದೇ ಸಲಹೆ ನೀಡಿದರೂ ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾರೆ ಮಾತ್ರವಲ್ಲ, ಅದಕ್ಕಾಗಿ ಕೃತಜ್ಞತೆ ಕೂಡ ತಪ್ಪದೇ ಸಲ್ಲಿಸುತ್ತಾರೆ. ಎರಡು ತಿಂಗಳ ಹಿಂದೆ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಗೆಳೆಯ ‘ವಸಂತ ಪ್ರಕಾಶನ’ದ ಮಾಲೀಕ ಮುರಳಿ ಜೊತೆ ಮಾತನಾಡಲು ಕೋರಮಂಗಲದಲ್ಲಿ ಅವರ ಮನೆಯ ಬಳಿಯಿದ್ದ ಕಾಫಿ ಡೇಗೆ ಹೋಗಿದ್ದೆ.

ಅಲ್ಲಿದ್ದ ವಾಷ್‌ರೂಂಗೆ ಹೋದವನ ಕಣ್ಣಿಗೆ ಕಮೋಡ್‌ನ ಮುಚ್ಚಳ ಮುರಿದು ಕೆಳಗೆ ಬಿದ್ದಿರುವುದು ಕಂಡಿತು. ಮೊಬೈಲ್‌ನಲ್ಲಿ ಆ ಛಾಯಾಚಿತ್ರ ತೆಗೆದು ಮಿಂಚಂಚೆಯ ಮೂಲಕ ಸಿದ್ಧಾರ್ಥ ಅವರಿಗೆ ಕಳುಹಿಸಿದೆ. ಮುರಳಿ ಅವರ ಜೊತೆ ಮಾತು ಮುಗಿಸಿ, ನಾನು ವಾಪಸು ಎಲೆಕ್ಟ್ರಾನಿಕ್ ಸಿಟಿ ತಲುಪುವಷ್ಟರಲ್ಲಿ ‘ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುತ್ತೇವೆ’ ಎಂಬ ಮಿಂಚಂಚೆ ಅವರಿಂದ ಬಂದಿತ್ತು. ಮತ್ತೆ ಎರಡು ಗಂಟೆಯೊಳಗೆ ಇನ್ನೊಂದು ಮಿಂಚಂಚೆ. ಅದರ ಜೊತೆಯಲ್ಲಿ ಕಮೋಡ್‌ನ ರಿಪೇರಿ ಮಾಡಿಸಿ, ಹೊಸ ಮುಚ್ಚಳ ಜೋಡಿಸಿದ ಛಾಯಾಚಿತ್ರ! ತಪ್ಪನ್ನು ಗುರುತಿಸಿ ಸಲಹೆ ನೀಡಿದ್ದಕ್ಕೆ ಕೃತಜ್ಞತೆ ಬೇರೆ. ಇದು ಸಿದ್ಧಾರ್ಥ ಕಾರ್ಯಶೈಲಿ.

ಸಿದ್ಧಾರ್ಥ ಅವರ ಬಲಗೈ ಬಂಟರಾಗಿದ್ದು, ‘ಕೆಫೆ ಕಾಫಿ ಡೇ’ ಕಂಪೆನಿಯಲ್ಲಿ ಉನ್ನತ ಸ್ಥಾನದಲ್ಲಿದ್ದು ಹೊರಬಂದ ಸ್ನೇಹಿತರೊಬ್ಬರ ಜೊತೆ ಕೆಲವು ತಿಂಗಳ ಹಿಂದೆ ಒಂದು ಸಂಜೆ ಕಳೆಯುವ ಅವಕಾಶ ಒದಗಿ ಬಂದಿತ್ತು. ಮಾತು ಬ್ರ್ಯಾಂಡ್ ‘ಕೆಫೆ ಕಾಫಿ ಡೇ’ ಕಡೆ ಹೊರಳಿತು. ಇಪ್ಪತ್ತು ವರ್ಷಗಳ ಹಿಂದೆ ಸಿದ್ಧಾರ್ಥ ‘ಕೆಫೆ ಕಾಫಿ ಡೇ’ ಆರಂಭಿಸಿದ ದಿನಕ್ಕೂ ಇಂದಿಗೂ ಅಜಗಜಾಂತರವಿದೆ. ಈ ಪೈಪೋಟಿಯ ಜಗತ್ತಿನಲ್ಲಿ ಕರ್ನಾಟಕದ ಅಪ್ಪಟ ಬ್ರ್ಯಾಂಡ್ ಸದಾ ಮೇಲುಗೈ ಸಾಧಿಸಿ ಜೀವಂತವಾಗಿ ಉಳಿಯುವುದು ಸುಲಭದ ಮಾತಲ್ಲ.

ಕಳೆದ ಒಂದು ದಶಕದ ಅವಧಿಯಲ್ಲಿ, ಜಾಗತಿಕವಾಗಿ ಈಗಾಗಲೇ ಬಲಿಷ್ಠವಾಗಿರುವ ಬರಿಸ್ತಾ ಮತ್ತು ಕೋಸ್ಟಾ ಕಾಫಿ ಭಾರತದ ಮಾರುಕಟ್ಟೆ ಪ್ರವೇಶಿಸಿ ‘ಕೆಫೆ ಕಾಫಿ ಡೇ’ಗೆ ಪೈಪೋಟಿ ನೀಡಿದರೂ, ಯಾರಿಗೂ ಬುದ್ಧನ ಪ್ರಯತ್ನ ಮೀರಿ ನಿಲ್ಲಲಾಗಲಿಲ್ಲ. ಆದರೆ, ಟಾಟಾ ನೆರವಿನಿಂದ ಸುಮಾರು ನಾಲ್ಕು ವರ್ಷಗಳ ಹಿಂದೆ ಭಾರತದ ಮಾರುಕಟ್ಟೆ ಪ್ರವೇಶಿಸಿರುವ ‘ಸ್ಟಾರ್‌ಬಕ್ಸ್’ ಈಗ ‘ಕೆಫೆ ಕಾಫಿ ಡೇ’ಗೆ ತೀವ್ರ ಪೈಪೋಟಿ ನೀಡಲಾರಂಭಿಸಿದೆ. ಅಮೆರಿಕ ಮೂಲದ, 45 ವರ್ಷಗಳ ಇತಿಹಾಸ ಹೊಂದಿರುವ ‘ಸ್ಟಾರ್‌ಬಕ್ಸ್’ ಕೆಫೆ ಲೋಕದ ದೈತ್ಯ. ಜಗತ್ತಿನೆಲ್ಲೆಡೆ 24,000 ಕೆಫೆ ಅಥವಾ ಸ್ಟೋರ್ಸ್ ಹೊಂದಿರುವ ‘ಸ್ಟಾರ್‌ಬಕ್ಸ್’, ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಸ್ಥಾಪಿಸಿದ ಕೆಫೆಗಳ ಸಂಖ್ಯೆ 83. ಈ ಬಗ್ಗೆ ಸಿದ್ಧಾರ್ಥ ತಲೆಕೆಡಿಸಿಕೊಂಡಿದ್ದಾರೆಯೇ?

‘ಸ್ಟಾರ್‌ಬಕ್ಸ್ ಮಾರುಕಟ್ಟೆ ಪ್ರವೇಶಿಸಿದ್ದರಿಂದ ‘ಕೆಫೆ ಕಾಫಿ ಡೇ’ ಕಂಪೆನಿಯಲ್ಲಿ ಮಿಂಚಿನ ಸಂಚಾರ ಆಗಿರುವುದು ನಿಜ. ಆದರೆ, ಸಿದ್ಧಾರ್ಥ ಯಾವುದೇ ಪೈಪೋಟಿಗೆ ಹೆದರುವ ವ್ಯಕ್ತಿಯಲ್ಲ. ‘ಸ್ಟಾರ್‌ಬಕ್ಸ್’ ಬರುವುದು ಗೊತ್ತಾದ ಕೂಡಲೇ ಭವಿಷ್ಯದ ಪೈಪೋಟಿಗೆ ಬೇಕಾಗಿದ್ದ ಎಲ್ಲ ಬಿಲ್ಲು–ಬಾಣಗಳನ್ನು ‘ಕೆಫೆ ಕಾಫಿ ಡೇ’ ಸಿದ್ಧವಾಗಿಟ್ಟುಕೊಂಡಿತ್ತು. ಆ ಪೈಕಿ ಅದುವರೆಗೆ ಮಾಡಿದ ಎಲ್ಲ ತಪ್ಪು ಹೆಜ್ಜೆಗಳನ್ನು ತಕ್ಷಣ ಸರಿಪಡಿಸಿಕೊಳ್ಳಬೇಕು ಎಂಬ ಪ್ರಜ್ಞಾವಂತ ನಿರ್ಧಾರ ಮೂಡಿಬಂತು.

ಕೆಲವು ಕೆಫೆಗಳನ್ನು ತಕ್ಷಣ ಮುಚ್ಚಿ, ಸೂಕ್ತ ಸ್ಥಳಗಳಲ್ಲಿ ಹಲವು ಹೊಸ ಕೆಫೆ ತೆರೆಯಲಾಯಿತು. ಕೆಫೆಗಳ ವಿನ್ಯಾಸ ಬದಲಾಯಿಸಲಾಯಿತು. ಅಲ್ಲದೇ ಭಾರತದಲ್ಲಿ ಕೆಫೆ ಸಂಸ್ಕೃತಿ ಹುಟ್ಟು ಹಾಕಿದ ಕೆಫೆ ಕಾಫಿ ಡೇ ಸಂಸ್ಥೆಗೆ ಇಲ್ಲಿನ ಮಾರುಕಟ್ಟೆಯ ಸಂಪೂರ್ಣ ಪರಿಚಯ ಇದೆ. ಆದ್ದರಿಂದ ನಿಮ್ಮ ಹೃದಯಕ್ಕೆ ಹತ್ತಿರವಾದ ಕರ್ನಾಟಕದ ಅಪ್ಪಟ ಬ್ರ್ಯಾಂಡ್‌ಗೆ ಯಾವುದೇ ತೊಂದರೆಯಾಗುವುದಿಲ್ಲ’’ ಎಂದು ಆ ಹಿರಿಯರು ಸಾಂತ್ವನ ಹೇಳಿದ್ದರು.

ಈ ಬಗ್ಗೆ ಸಿದ್ಧಾರ್ಥ ನಿಲುವು ಇನ್ನೊಂದು ರೀತಿಯದ್ದು. ‘ಭಾರತೀಯ ಕೆಫೆ ಮಾರುಕಟ್ಟೆಯ ಮೇಲೆ ಶೇಕಡಾ ನೂರರಷ್ಟು ಹಿಡಿತ ಇಟ್ಟುಕೊಳ್ಳುವ ಭ್ರಮೆ ನನಗಿಲ್ಲ. ಆದರೆ, ಕೆಫೆ ಸಂಸ್ಕೃತಿ ಭಾರತದಲ್ಲಿ ಬಲವಾಗಿ ಬೇರೂರಲು ನಾವೇ ಕಾರಣ ಎಂಬ ಹೆಮ್ಮೆಯಿದೆ. ನಮ್ಮ ಬ್ರ್ಯಾಂಡ್ ಜೊತೆಗೆ ಬೇರೆ ಬ್ರ್ಯಾಂಡ್‌ಗಳಿಗೂ ಇಲ್ಲಿನ ಮಾರುಕಟ್ಟೆಯಲ್ಲಿ ನೆಲೆಯೂರಲು ಬೇಕಾದ ಸ್ಥಳಾವಕಾಶ ಇದೆ. ಹಾಗೆಂದುಕೊಂಡು ಸುಮ್ಮನೇ ಕೂರುವುದಿಲ್ಲ. ಈವರೆಗೆ ಮಾರುಕಟ್ಟೆಯ ನೇತೃತ್ವ ವಹಿಸಿರುವ ನಾವು ಇನ್ನು ಮುಂದೆ ಕೂಡ ಅದೇ ಸ್ಥಾನದಲ್ಲಿ ಮುಂದುವರಿಯಲು ಬಯಸುತ್ತೇವೆ’.

ಈ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ಕೆಫೆ ಸಂಸ್ಕೃತಿ ಈಗ ಕೇವಲ ಮೆಟ್ರೋಗಳಿಗೆ ಸೀಮಿತವಾಗಿಲ್ಲ. ಕ್ರಮೇಣ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೂಡ ಕೆಫೆ ಸಂಸ್ಕೃತಿ ಹರಡಿಕೊಳ್ಳುತ್ತಿದೆ. ಹೈವೇಗಳಲ್ಲಿ ಕೂಡ ಈ ಸಂಸ್ಕೃತಿ ಕುಡಿಯೊಡೆಯುತ್ತಿದೆ. ಹಳ್ಳಿಗಳು ಪಟ್ಟಣಗಳಾಗಿ, ಪಟ್ಟಣಗಳು ನಗರಗಳಾಗಿ, ನಗರಗಳು ಮಹಾನಗರಗಳಾಗುತ್ತಿರುವ ಈ ಸಂದರ್ಭದಲ್ಲಿ ಕೆಫೆ ಸಂಸ್ಕೃತಿ ಇನ್ನಷ್ಟು ಪ್ರಸಿದ್ಧವಾಗುವುದರಲ್ಲಿ ಅನುಮಾನವಿಲ್ಲ

ಈವತ್ತು ಕೆಫೆಗಳೆಂದರೆ ಕೇವಲ ಕಾಫಿ ಕುಡಿದು, ತಿಂಡಿ ತಿಂದು ಎದ್ದು ಬರುವ ತಾಣಗಳಲ್ಲ ಅಥವಾ ನಮ್ಮ ಹಳೆಯ ಸಂಪ್ರದಾಯದ ಹೊಟೇಲ್‌ಗಳಲ್ಲ. ಇವು ಬ್ಯುಸಿನೆಸ್ ಮೀಟಿಂಗ್‌ಗಳ ಕೇಂದ್ರಗಳು. ಸ್ಟಾರ್ಟ್‌ಅಪ್ ಕ್ರಾಂತಿಯ ಈ ಸಂದರ್ಭದಲ್ಲಿ ನೂರಾರು ಹೊಸ ಕಂಪೆನಿಗಳು ಕೆಫೆಗಳಲ್ಲಿ ಹುಟ್ಟಿದ್ದನ್ನು, ಹುಟ್ಟುತ್ತಿರುವುದನ್ನು ಗಮನಿಸಬಹುದು. ಕೆಲವೊಮ್ಮೆ ಪುಸ್ತಕ ಬಿಡುಗಡೆ ಸಮಾರಂಭ ಕೂಡ ಕೆಫೆಗಳಲ್ಲಿ ನಡೆಯುತ್ತದೆ.

ಅಷ್ಟೇಕೆ, ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ, ‘ಕೆಫೆ ಕಾಫಿ ಡೇ’ ಕಂಪೆನಿಯ ಕೇಂದ್ರ ಕಚೇರಿಯ ಕೆಳಗಿರುವ ಕಾಫಿ ಡೇ ಸ್ಕ್ವೇರ್‌ನಲ್ಲಿ ಮದುವೆಗಾಗಿ ಹೆಣ್ಣು ತೋರಿಸುವುದು, ಎರಡೂ ಕುಟುಂಬದವರು ಮಾತುಕತೆ ನಡೆಸುವುದು, ನಿಶ್ಚಿತಾರ್ಥ ಕೂಡ ಆಗಿರುವುದನ್ನು ಕಂಡ ಅದೃಷ್ಟವಂತ ನಾನು!

ಹೀಗೆ ಕೆಫೆ ಸಂಸ್ಕೃತಿಯನ್ನು ಭಾರತಕ್ಕೆ ಪರಿಚಯಿಸಿದ, ನೆಲೆಯೂರಿಸಿದ ಕೀರ್ತಿ ನಿಸ್ಸಂದೇಹವಾಗಿ ಸಿದ್ಧಾರ್ಥ ಅವರಿಗೆ ಸಲ್ಲಲೇಬೇಕು. ಕೆಲವು ತಿಂಗಳ ಹಿಂದೆ, ‘ಸ್ಟಾರ್‌ಬಕ್ಸ್’ ಪೈಪೋಟಿಯ ದಟ್ಟ ನೆರಳಿನ ನಡುವೆಯೇ ಅವರು ಒಂದು ಪತ್ರಿಕೆಗೆ ನೀಡಿದ ಸಂದರ್ಶನದ ವೇಳೆ, ‘ಅಗತ್ಯ ಬಿದ್ದರೆ ನನ್ನ ಮನೆ, ಪತ್ನಿಯ ಆಭರಣ ಎಲ್ಲವನ್ನೂ ಮಾರಿ ಕೆಫೆ ಕಾಫಿ ಡೇ ಬ್ರ್ಯಾಂಡ್ ಉಳಿಸಿಕೊಳ್ಳುತ್ತೇನೆ’ ಎಂಬ ಮಾತು ಹೇಳಿದ್ದರು.

ಆ ಬಲಗೈ ಬಂಟನ ಬಳಿ ನಾನು ಮೇಲಿನ ಹೇಳಿಕೆಯ ಪ್ರಸ್ತಾಪ ಮಾಡಿದ್ದೆ. ‘ಆ ಹೇಳಿಕೆಯ ಬಗ್ಗೆ ಯಾವುದೇ ಅನುಮಾನ ಇಟ್ಟುಕೊಳ್ಳಬೇಡಿ. ವಿಜಿಎಸ್ ಉಸಿರಾಡುವುದು ಕೂಡ ಕೆಫೆ ಕಾಫಿ ಡೇ ಬ್ರ್ಯಾಂಡ್ ಮೂಲಕವೇ. ಅದಕ್ಕಾಗಿ ಜೀವ ಕೊಡಲು ಕೂಡ ಆ ಮನುಷ್ಯ ಸಿದ್ಧ’. ಅಂತಹ ಶ್ರದ್ಧೆ ಮತ್ತು ಬದ್ಧತೆಯ ಪರಿಣಾಮವಾಗಿಯೇ ಈ ಹೊತ್ತು ಕೆಫೆ ಕಾಫಿ ಡೇ ಜಾಗತಿಕ ನೆಲೆಯಲ್ಲಿ ಪ್ರಮುಖ ಬ್ರ್ಯಾಂಡ್ ಆಗಿ ನಿಂತಿರುವುದು. ಆದರೂ ಕೆಫೆ ಕಾಫಿ ಡೇಯನ್ನು ಕಾಫಿಲೋಕದ ಸ್ಟಾರ್ಟ್‌ಅಪ್ ಎಂದೇ ವಿಧೇಯವಾಗಿ ಕರೆದುಕೊಳ್ಳುತ್ತಿರುವುದು ‘ಬುದ್ಧ’ನ ದೊಡ್ಡತನದ ಪ್ರತೀಕವಷ್ಟೆ!

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT