ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ಕಟ್ಟಡ ತ್ಯಾಜ್ಯ ಹಾರ: ಬತ್ತುತ್ತಿದೆ ನೀರಿನ ಸೆಲೆ

Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮದ ಕಟ್ಟಡ ತ್ಯಾಜ್ಯಗಳನ್ನು ಕೆರೆಗಳಿಗೆ   ತಂದು ಸುರಿಯಲಾಗುತ್ತಿದೆ. ಕಸಗಳು ಹಾಗೂ ತ್ಯಾಜ್ಯಗಳು ಸೇರಿ ಕೆರೆಗಳು ಡಂಪಿಂಗ್‌ ಯಾರ್ಡ್‌ಗಳಾಗುತ್ತಿವೆ.  ಒತ್ತುವರಿ ಯಿಂದಾಗಿ ನೀರಿನ ಸೆಲೆಗಳು ಬತ್ತುತ್ತಿವೆ. ನೀರಿರುವ ಜಾಗದಲ್ಲಿ ‘ಅಂತರಗಂಗೆ’ಗಳೇ ರಾರಾಜಿಸುತ್ತಿವೆ!

ಕೆ.ಆರ್‌.ಪುರ ಹಾಗೂ ಹೊರಮಾವು ಆಸುಪಾಸಿನಲ್ಲಿರುವ ತ್ರಿವಳಿ ಕೆರೆಗಳ ದುಸ್ಥಿತಿ ಇದು.  ಕಲ್ಕೆರೆ ಕೆರೆ, ಕೆ.ಆರ್‌.ಪುರ ಕೆರೆ ಹಾಗೂ ಕಿತಗನೂರು ಕೆರೆಗಳು ದಯನೀಯ ಸ್ಥಿತಿಯಲ್ಲಿ ಇವೆ.

ಕಲ್ಕೆರೆ ಕೆರೆ: ಬೆಂಗಳೂರು ಪೂರ್ವ ತಾಲ್ಲೂಕಿನ ಸರ್ವೆ ಸಂಖ್ಯೆ 45ರಲ್ಲಿ 73 ಎಕರೆ 11 ಗುಂಟ ಜಾಗದಲ್ಲಿ ಈ ಕೆರೆ ಇದೆ. ಒತ್ತುವರಿಯಿಂದಾಗಿ ಈ ಕೆರೆಯ ವಿಸ್ತೀರ್ಣ ಈಗ ಸಾಕಷ್ಟು ಕುಗ್ಗಿದೆ.

2007ರಲ್ಲಿ ಬೆಂಗಳೂರು ಸುತ್ತಮುತ್ತಲಿನ 110 ಹಳ್ಳಿಗಳು ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)’ ವ್ಯಾಪ್ತಿಗೆ ಸೇರ್ಪಡೆಯಾದವು. ಈ ಹಳ್ಳಿಗಳಲ್ಲಿ ಕಲ್ಕೆರೆಯೂ ಒಂದು. 2007ರಲ್ಲಿ ಈ ಕೆರೆಯನ್ನು ಬಿಬಿಎಂಪಿಗೆ ಹಸ್ತಾಂತರಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ, ಸರ್ಕಾರದ ಆದೇಶ ತಲುಪಿದ್ದು 2008ರ ಮಾರ್ಚ್ ತಿಂಗಳಿನಲ್ಲಿ. ‘ಕೆರೆಯ ಪಕ್ಕದಲ್ಲಿರುವ 14 ಎಕರೆ ಜಾಗ ಕೆರೆಗೆ ಸೇರಿದ್ದು’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

ಬಿಬಿಎಂಪಿ ಇಲ್ಲಿ ಸುಂದರ ಉದ್ಯಾನ ನಿರ್ಮಿಸಬೇಕು ಎಂದು ಉದ್ದೇಶಿಸಿತ್ತು.  ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಲೇ ಈ ಭೂಮಿ ಭೂಗಳ್ಳರ ಪಾಲಾಗಿದೆ ಎಂಬುದು ಸ್ಥಳೀಯರ ಆರೋಪ.

‘ಕೆರೆ ಜಾಗದ ಜಂಟಿ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ಕಂದಾಯ ಇಲಾಖೆಗೆ ಬಿಬಿಎಂಪಿಯಿಂದ ಹಲವು ಬಾರಿ ಪತ್ರ ಬರೆಯಲಾಗಿದೆ. 2009ರಲ್ಲಿ ಮೊದಲ ಪತ್ರ ಬರೆಯಲಾಯಿತು. ಆ ಬಳಿಕ ಬೆಂಗಳೂರು ನಗರ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್‌ ಅವರಿಗೆ ಕನಿಷ್ಠ 10 ಪತ್ರಗಳನ್ನು ಬರೆಯಲಾಗಿದೆ. ಈ ವರೆಗೆ ಸಕಾರಾ­ತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೀಗಾಗಿ ಕೆರೆಯ ಅಭಿ­ವೃದ್ಧಿ ನಡೆಸಲು ಈ ವರೆಗೆ ಸಾಧ್ಯವಾಗಿಲ್ಲ. ಇದೇ ಸ್ಥಿತಿ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಕೆರೆ ಪೂರ್ಣ­ವಾಗಿ ನಾಶವಾಗಲಿದೆ’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸುತ್ತಾರೆ.

‘ಕೆರೆಯ ರಕ್ಷಣೆಗೆ ಹಾಕಿದ್ದ ತಡೆಗೋಡೆಯನ್ನು ಕಿಡಿಗೇಡಿಗಳು ಕಿತ್ತು ಹಾಕಿದ್ದಾರೆ. ಕೊಳಚೆ ನೀರು ಕೆರೆಗೆ ಸೇರ್ಪಡೆಯಾಗಿ ದುರ್ನಾತ ಬೀರುತ್ತಿದೆ. ಅಳಿದುಳಿದಿರುವ ಕೆರೆಗಳಲ್ಲಿ ಅಂತರಗಂಗೆಯೇ ಕಾಣುತ್ತಿದೆ’  ಎಂದು ಹೋರಾಟಗಾರ ಈಶ್ವರಪ್ಪ ಮಡಿವಾಳಿ ಕೆರೆಯ ದುಸ್ಥಿತಿಯನ್ನು ಬಿಚ್ಚಿಡುತ್ತಾರೆ.

ಕೆ.ಆರ್‌.ಪುರ ಕೆರೆ: ಕೆ.ಆರ್‌.ಪುರ ಕೆರೆ ಸಹ ಒತ್ತುವರಿಯಿಂದಾಗಿ ನಲುಗಿದೆ. ಒಂದು ಕಾಲದಲ್ಲಿ ಆಸುಪಾಸಿನ ನಿವಾಸಿಗಳಿಗೆ ಈ ಕೆರೆ

ಕುಡಿಯುವ ನೀರಿನ ಮೂಲವಾಗಿತ್ತು ಎಂದು ಇಲ್ಲಿನ ನಿವಾಸಿಗಳು ನೆನಪಿಸಿ­ಕೊಳ್ಳುತ್ತಾರೆ. ಕೆಲವು ವರ್ಷಗಳಿಂದ ಸುತ್ತಮುತ್ತ ಬಡಾವಣೆಗಳು ತಲೆ ಎತ್ತುತ್ತಿವೆ. ತ್ಯಾಜ್ಯವನ್ನು ಕೆರೆಯ ದಡದಲ್ಲಿ ತಂದು ಸುರಿಯಲಾಗುತ್ತಿದೆ.

‘2006ರಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರವು ಕೆರೆಯನ್ನು ಅಭಿವೃದ್ಧಿಪಡಿಸಿತ್ತು. ಸಂಚಾರದಟ್ಟಣೆ ಹೆಚ್ಚಿದ ಹಿನ್ನೆಲೆಯಲ್ಲಿ 2008ರಲ್ಲಿ ರಸ್ತೆ ವಿಸ್ತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೆರೆಯ ಒಂದು ಬದಿಗೆ ಮಣ್ಣು ಸುರಿಯಲಾಯಿತು. ಇದರಿಂದಾಗಿ ಕೆರೆ ನೈಜ ಸೌಂದರ್ಯ ಕಳೆದುಕೊಂಡಿತ್ತು’ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ.

‘ರಸ್ತೆ ನಿರ್ಮಾಣಕ್ಕಾಗಿ ಸಮತಟ್ಟು ಮಾಡಿದ ಜಾಗವನ್ನು ಒತ್ತುವರಿ ಮಾಡಲಾಗಿದೆ. ಈ ಹಿಂದೆ ಮಳೆ ನೀರು ಕೆರೆಗೆ ಹೋಗುತ್ತಿತ್ತು. ಈಗ ಕೊಳಚೆ ನೀರು ಕೆರೆಗೆ ಸೇರಿ ಕಲುಷಿತಗೊಳ್ಳುತ್ತಿದೆ. ಹೀಗಾಗಿ ಕೆರೆಯಲ್ಲಿ ಅಲ್ಪಪ್ರಮಾಣದಲ್ಲಿ ಉಳಿದಿರುವ ನೀರು ಬಳಕೆಗೆ ಯೋಗ್ಯವಲ್ಲ’ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರುತ್ತಾರೆ.

‘ಕೆರೆಯ ಪಕ್ಕದಲ್ಲೇ ದೊಡ್ಡ ಬಡಾವಣೆಯೊಂದು ತಲೆ ಎತ್ತಲಿದ್ದು, ಅದಕ್ಕಾಗಿ ಎಲ್ಲ ಸಿದ್ಧತೆ ನಡೆದಿದೆ. ಇಲ್ಲಿ ಬಡಾವಣೆ ನಿರ್ಮಾಣವಾದರೆ ಕೆರೆ ಸಂಪೂರ್ಣ ನಾಶವಾಗುತ್ತದೆ. ಕೆರೆ ಅಭಿವೃದ್ಧಿ ಪ್ರಾಧಿಕಾರವು ಕೆರೆ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸುತ್ತಾರೆ.

‘ಈ ಕೆರೆಯ ಒತ್ತುವರಿ ಆಗಿಲ್ಲ. ಕೆರೆ ಪಕ್ಕದಲ್ಲಿ ಅಕ್ರಮವಾಗಿ ನಿರ್ಮಾಣ ಕಾಮಗಾರಿ ಆಗುತ್ತಿರುವ ಬಗ್ಗೆಯೂ ಮಾಹಿತಿ ಇಲ್ಲ. ಒತ್ತುವರಿ ಬಗ್ಗೆ ಸ್ಥಳೀಯರು ಸುಳ್ಳು ಸುದ್ದಿ ಹರಡುತ್ತಿದ್ದಾರೆ’ ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಸಮಜಾಯಿಷಿ ನೀಡುತ್ತಾರೆ.

ಕಿತಗನೂರು ಕೆರೆ: ಈ ಕೆರೆ ಪ್ರಸ್ತುತ ಬಹುತೇಕ ಬತ್ತಿ ಹೋಗಿ ಪಳೆಯುಳಿಕೆಯಂತೆ ಕಾಣುತ್ತಿದೆ. ಈಚಿನ ದಿನಗಳಲ್ಲಿ ಕೆರೆಗೆ ಕಸ ಸುರಿಯುವ ಪ್ರವೃತ್ತಿ ದುಪ್ಪಟ್ಟಾಗಿದೆ. ಇಟ್ಟಿಗೆ ಕಾರ್ಖಾನೆಯೊಂದರ ತ್ಯಾಜ್ಯವನ್ನು, ಇಟ್ಟಿಗೆ ಚೂರುಗಳನ್ನು ತಂದು ಕೆರೆ ಸಮೀಪ ಹಾಕಲಾಗುತ್ತಿದೆ. ಕಸ ಎಸೆಯುವ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯ್ತಿಗೆ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸ್ಥಳೀಯರು ಆರೋಪ. ಈ ನಡುವೆ, ಆಸುಪಾಸಿನ ಮನೆಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲು ಕೆರೆಯ ಮಧ್ಯದಲ್ಲೇ ಎರಡು ಕೊಳವೆಬಾವಿಗಳನ್ನು ತೋಡಲಾಗಿದೆ.
‘ನಾವು ಇಲ್ಲಿ 15 ವರ್ಷಗಳಿಂದ ವಾಸಿಸುತ್ತಿದ್ದೇವೆ. ಊರಿನ ಕಸವನ್ನು ತಂದು ಇಲ್ಲೇ ಎಸೆಯಲಾಗುತ್ತಿದ್ದು, ಕಸದ ತೊಟ್ಟಿಯಾಗಿ ಪರಿವರ್ತನೆ ಹೊಂದಿದೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರುತ್ತಾರೆ.

‘ದೊಡ್ಡ ಪ್ರಮಾಣದಲ್ಲಿ ಕಸ ಕೆರೆಯ ಒಡಲನ್ನು ಸೇರುವುದನ್ನು ಗಮನಿಸಿದ ಕೆಲವು ಸ್ಥಳೀಯರು ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆವಲಹಳ್ಳಿ ಗ್ರಾಮ ಪಂಚಾಯ್ತಿಗೆ ದೂರು ಸಲ್ಲಿಸಿದ್ದರು. ಸುಮಾರು ಎರಡು ತಿಂಗಳ ಕಾಲ ಕಸ ಎಸೆಯುವುದು ನಿಂತಿತ್ತು. ಮತ್ತೆ ಅದೇ ರಾಗ ಅದೇ ಹಾಡು ಎಂಬಂತೆ ಆಗಿದೆ’ ಎಂದು ಅವರು ಹೇಳುತ್ತಾರೆ.

‘ಟ್ರಕ್‌ಗಳಲ್ಲಿ ತಂದು ಕೆರೆಯ ತಟದಲ್ಲಿ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ    ಬೆದರಿಕೆ ಹಾಕುತ್ತಾರೆ. ಅವರಿಗೆ ಸ್ಥಳೀಯ ನಾಯಕರ ಬೆಂಬಲ ಇದೆ. ಹೀಗಾಗಿ ತ್ಯಾಜ್ಯ ಎಸೆಯುವುದು ನಿರಂತರವಾಗಿ ಮುಂದುವರಿದಿದೆ’ ಎಂದು ಸ್ಥಳೀಯರೊಬ್ಬರು ತಿಳಿಸುತ್ತಾರೆ.
‘ಇಲ್ಲಿ ಕಸ ಹಾಕುವವರು ಯಾರು ಎಂಬುದು ಗೊತ್ತಾಗುತ್ತಿಲ್ಲ. ಅವರನ್ನು ಪತ್ತೆ ಹಚ್ಚಲು ಸ್ಥಳೀಯರು ಸಾಕಷ್ಟು ಪ್ರಯತ್ನ ಮಾಡಿದ್ದೇವೆ.

ಅದರಲ್ಲಿ ಯಶಸ್ಸು ಸಿಕ್ಕಿಲ್ಲ. ಈ ಬಗ್ಗೆ ಪೂರ್ವ ತಾಲ್ಲೂಕಿನ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಗಿದೆ. ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದರು. ಆದರೆ, ಪರಿಸ್ಥಿತಿಯಲ್ಲಿ ಬದಲಾವಣೆ ಆಗಿಲ್ಲ’ ಎಂದು ಸ್ಥಳೀಯ ನಿವಾಸಿ ಶ್ರೀನಿವಾಸ್‌ ಅಳಲು ತೋಡಿಕೊಳ್ಳುತ್ತಾರೆ.

ಕಠಿಣ ಕ್ರಮ ಅಗತ್ಯ: ‘ನಗರದ ಎಲ್ಲ ಕೆರೆಗಳ ಸಮಸ್ಯೆ ಒಂದೇ ರೀತಿಯದ್ದು. ಒತ್ತುವರಿ ಹಾಗೂ ನಿರ್ವಹಣೆ ಕೊರತೆಯಿಂದ ಕೆರೆಗಳು ಮಾಯವಾಗುತ್ತಿವೆ. ಸರ್ಕಾರಿ ಭೂಮಿ ಒತ್ತುವರಿ ಕುರಿತು ನಿವೃತ್ತ ಐಎಎಸ್‌ ಅಧಿಕಾರಿ ವಿ.ಬಾಲಸುಬ್ರಮಣಿಯನ್‌ ಸಮಿತಿ ನೀಡಿರುವ ವರದಿ ರಾಜ್ಯ ಸರ್ಕಾರದ ಮುಂದಿದೆ. ಹೀಗಾಗಿ, ಒತ್ತುವರಿಯಾದ ಕೆರೆಗಳೆಷ್ಟು ಎಂಬುದು ಸರ್ಕಾರಕ್ಕೆ ಸ್ಪಷ್ಟವಾಗಿ ಗೊತ್ತಿದೆ. ಆದರೂ, ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ‘ನೀರಿನ ಹಕ್ಕಿಗಾಗಿ ಜನಾಂದೋಲನ ವೇದಿಕೆ’ಯ ಸಂಚಾಲಕ ಕ್ಷಿತಿಜ ಅರಸ್ ದೂರುತ್ತಾರೆ.

‘ಪರಿಸರ ಹೋರಾಟಗಾರರು ಹಾಗೂ ಸ್ಥಳೀಯರಿಂದ ಒತ್ತಡ ಬಂದಾಗ ಕೆರೆ ಪಕ್ಕದಲ್ಲಿರುವ ಬಡಪಾಯಿಗಳನ್ನು ಎತ್ತಂಗಡಿ ಮಾಡಲಾಗುತ್ತಿದೆ. ಶಾಸಕರು, ಬಿಬಿಎಂಪಿ ಸದಸ್ಯರ ಬೆಂಬಲದಿಂದ ಆಗಿರುವ ದೊಡ್ಡ ಮಟ್ಟದ ಒತ್ತುವರಿಗಳ ತೆರವಿಗೆ ಕ್ರಮ ಕೈಗೊಳ್ಳುವುದಿಲ್ಲ. ಅಧಿಕಾರಿಗಳು ಒತ್ತಡಕ್ಕೆ ಮಣಿದು ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಹೈಕೋರ್ಟ್‌ ಆದೇಶದಲ್ಲಿ ಏನಿದೆ?
*ಕೆರೆಯ ಸಮೀಕ್ಷೆ ಮಾಡಿ ಅದರ ಸುತ್ತಲೂ ಬೇಲಿ ಹಾಕಬೇಕು.

*ತ್ಯಾಜ್ಯವಸ್ತು ಹಾಗೂ ಚರಂಡಿ ನೀರನ್ನು ಕೆರೆಗೆ ಹರಿಸಬಾರದು.
*ಕೆರೆ ಸುತ್ತಮುತ್ತ 30 ಮೀಟರ್‌ ವ್ಯಾಪ್ತಿ­ಯಲ್ಲಿ ತಲೆ ಎತ್ತಿರುವ ಅನಧಿಕೃತ ಕಟ್ಟಡಗಳ ತೆರವು ಮಾಡಬೇಕು.
*ಅರಣ್ಯ ಇಲಾಖೆ ಕೆರೆಯ ಸುತ್ತಮುತ್ತ ಸಸಿಗಳನ್ನು ನೆಡಬೇಕು.
*ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆರೆಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಪಡಿಸುವ ಜವಾಬ್ದಾರಿ ಬಿಬಿಎಂಪಿ ಆಯುಕ್ತರಿಗೆ ಸೇರಿದ್ದು.
*ಕಾಲ ಕಾಲಕ್ಕೆ ಕೆರೆಯ ಹೂಳು ತೆಗೆಯಬೇಕು. ಕಳೆಗಳಿಂದ ಮುಕ್ತವಾಗಿಡಬೇಕು. ಭದ್ರವಾದ ಒಡ್ಡುಗಳನ್ನು ನಿರ್ಮಿಸಬೇಕು.

‘ಕಸದ ತೊಟ್ಟಿಗಳಾದ ಕೆರೆಗಳು’
ಆಡಳಿತಶಾಹಿಗಳ ನಿರ್ಲಕ್ಷ್ಯದಿಂದಾಗಿ ನಗರದಲ್ಲಿ ಕೆಲವೇ ಜಲಮೂಲಗಳು ಉಳಿದಿವೆ. ಕೆ.ಆರ್‌.ಪುರ ಹಾಗೂ ಹೊರಮಾವು ಆಸುಪಾಸಿನ ಬಹುತೇಕ ಕೆರೆಗಳು ಒತ್ತುವರಿಯಾಗಿವೆ. ಕಸದ ತೊಟ್ಟಿಗಳಾಗಿ ಪರಿವರ್ತನೆಗೊಂಡಿವೆ. ಇದರಿಂದ ನೀರಿನ ಮೂಲ ನಾಶವಾಗುತ್ತಿದೆ.
ವರ್ಷದಿಂದ ವರ್ಷಕ್ಕೆ ಈ ಪ್ರವೃತ್ತಿ ಜಾಸ್ತಿ ಆಗುತ್ತಿದೆ. ಇದರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

–ನಿಖಿಲ್‌ ಐಸಾಕ್‌, ಸಾಮಾಜಿಕ ಹೋರಾಟಗಾರ

‘ಇಚ್ಛಾಶಕ್ತಿಯ ಕೊರತೆ’

ನಗರದ ಕೆರೆಗಳ ರಕ್ಷಣೆಗಾಗಿ ಐದು ವರ್ಷಗಳ ನಿರಂತರ ಹೋರಾಟ ಮಾಡಲಾಗಿದೆ. ಕೆರೆಗಳ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ಆದೇಶಿಸಿದರೂ ರಾಜ್ಯ ಸರ್ಕಾರ ಕಿವಿಗೊಡಲಿಲ್ಲ.

ಬಳಿಕ ನ್ಯಾಯಾಂಗ ನಿಂದನೆಯ ಅರ್ಜಿ ಸಲ್ಲಿಸಲಾಯಿತು. ಹೀಗಾಗಿ, ಸರ್ಕಾರ ಸಮಿತಿಗಳನ್ನು ರಚಿಸಿದೆ. ಆದರೆ, ಸಮಿತಿ ಸಭೆಗಳು ಸರಿಯಾಗಿ ನಡೆಯುತ್ತಿಲ್ಲ. ಐಎಎಸ್‌ ಅಧಿಕಾರಿಗಳಿಗೆ ನಾವೇ ಮಾರ್ಗದರ್ಶನ ನೀಡಬೇಕಾದ ಹೀನಾಯ ಸ್ಥಿತಿ ಇದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕೆರೆಗಳ ಸಂರಕ್ಷಣೆ ಆಗುತ್ತಿಲ್ಲ.
–ಲಿಯೋ ಸಲ್ಡಾನಾ, ಸಂಚಾಲಕ, ಎನ್ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌

‘ಜಿಲ್ಲಾ ಸಮಿತಿ ವರದಿಯೇ ನೀಡಿಲ್ಲ’
ಕೆರೆಗಳ ಪುನಶ್ಚೇತನಕ್ಕೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕಿದೆ. ಕೆರೆಗಳ  ಸಮಗ್ರ ನಿರ್ವಹಣೆ, ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ರಾಜ್ಯ ಮಟ್ಟದಲ್ಲಿ ಅಪೆಕ್ಸ್‌  ಸಮಿತಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಿದೆ. ಜಿಲ್ಲಾಧಿಕಾರಿ ಅವರು ಜಿಲ್ಲಾ ಮಟ್ಟದ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಬೆಂಗಳೂರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಕೆರೆ ಸಂರಕ್ಷಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಸಮಿತಿ ಪ್ರತಿ ಮೂರು ತಿಂಗಳಿಗೊಮ್ಮೆ ವರದಿ ಸಲ್ಲಿಸಬೇಕಿದೆ. ಸಮಿತಿ ರಚನೆಯಾಗಿ ಮೂರು ತಿಂಗಳು ಕಳೆದರೂ ಈ ವರೆಗೆ ವರದಿ ಸಲ್ಲಿಸಿಲ್ಲ.
–ಕ್ಷಿತಿಜ ಅರಸ್‌, ನೀರಿನ ಹಕ್ಕಿಗಾಗಿ ಜನಾಂದೋಲನ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT