ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯಂಚಿನ ಒತ್ತುವರಿದಾರರಿಗೆ ನಡುಕ

ಕೆರೆಯಂಗಳದಿಂದ...
Last Updated 5 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆರೆಗಳು ಹಾಗೂ ರಾಜಕಾಲುವೆಗಳ ಸುತ್ತ ತಲೆ ಎತ್ತಿರುವ ಕಟ್ಟಡಗಳನ್ನು ನೆಲಸಮ ಮಾಡಬೇಕು ಎಂದ ಹಸಿರು ನ್ಯಾಯಮಂಡಳಿಯ ಆದೇಶದಿಂದ ಒತ್ತುವರಿದಾರರಲ್ಲಿ ನಡುಕ ಉಂಟಾಗಿದೆ.

ನಗರ ಜಿಲ್ಲೆಯಲ್ಲಿ 1,22,918 ಎಕರೆ  ಸರ್ಕಾರಿ ಭೂಮಿ ಇದ್ದು, ಈ ಪೈಕಿ 34,111 ಎಕರೆ ಒತ್ತುವರಿಯಾಗಿದೆ ಎಂದು ಎ.ಟಿ. ರಾಮಸ್ವಾಮಿ ನೇತೃತ್ವದ ಸಮಿತಿ 2007ರಲ್ಲಿ ವರದಿ ನೀಡಿತ್ತು. ಬಲಾಢ್ಯರು ಕೆರೆಗಳನ್ನೂ ಕಬಳಿಸಿದ್ದರು. ಆದರೆ, ತೆರವು ಕಾರ್ಯಾಚರಣೆ ವಿಳಂಬಗತಿಯಲ್ಲಿ ಸಾಗಿತ್ತು. ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ, ಎ.ಟಿ. ರಾಮಸ್ವಾಮಿ ಮತ್ತಿತರರು ಎರಡು ವರ್ಷಗಳ ಹಿಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರು. ಇದಾದ ಮೇಲೆ ತೆರವು ಕಾರ್ಯಾಚರಣೆಗಾಗಿಯೇ ರಾಜ್ಯ ಸರ್ಕಾರ  ಇಬ್ಬರು ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಿಸಿತ್ತು.

ಜಿಲ್ಲಾಧಿಕಾರಿ ವಿ.ಶಂಕರ್‌ ಅವರ ನೇತೃತ್ವದಲ್ಲಿ ನಗರ ಜಿಲ್ಲಾಡಳಿತ ಎರಡು ವರ್ಷಗಳಲ್ಲಿ 30 ಕೆರೆಗಳೂ ಸೇರಿದಂತೆ 4,500 ಎಕರೆ ಒತ್ತುವರಿ ತೆರವು ಮಾಡಿದೆ. ಕಳೆದ ವರ್ಷ ಸಾರಕ್ಕಿ, ಕಾಚರಕನಹಳ್ಳಿ, ಅಲ್ಲಾಳಸಂದ್ರ, ಬಾಣಸವಾಡಿ ಕೆರೆಯಂಗಳದಲ್ಲಿದ್ದ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿತ್ತು. ಬಡವರ ಮನೆಗಳನ್ನು ನೆಲಸಮ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ತೆರವು ಕಾರ್ಯಾಚರಣೆಗೆ ವಿರೋಧವೂ ವ್ಯಕ್ತವಾಗಿತ್ತು.

‘ಕೆರೆಗಳ ಒತ್ತುವರಿ ಪತ್ತೆಗೆ ಸದನ ಸಮಿತಿ ರಚಿಸುತ್ತೇವೆ. ವರದಿ ನೀಡುವವರೆಗೆ ಕೆರೆಯಂಗಳದಲ್ಲಿರುವ ಮನೆಗಳ ನೆಲಸಮ ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿ ಅವರು ಪ್ರಕಟಿಸಿದ್ದರು. ಬಳಿಕ ರಾಜ್ಯ ಸರ್ಕಾರ ಸದನ ಸಮಿತಿ ರಚಿಸಿತ್ತು. ಸದನ ಸಮಿತಿ ಅಧ್ಯಯನ ನಡೆಸಿ ಎರಡು ತಿಂಗಳ ಹಿಂದೆ ಮಧ್ಯಂತರ  ವರದಿ ನೀಡಿದೆ.

‘ನಗರ ಜಿಲ್ಲೆಯಲ್ಲಿ 835 ಕೆರೆಗಳಿದ್ದು, ಅವುಗಳ ವಿಸ್ತೀರ್ಣ 27,604 ಎಕರೆ. ಈ ಪೈಕಿ 4277 ಎಕರೆ ಒತ್ತುವರಿಯಾಗಿದೆ. 2254 ಎಕರೆಯನ್ನು ಸರ್ಕಾರಿ ಸಂಸ್ಥೆಗಳೇ ಒತ್ತುವರಿ ಮಾಡಿಕೊಂಡಿವೆ. ಗ್ರಾಮಾಂತರ  ಜಿಲ್ಲೆಯಲ್ಲಿ 710 ಕೆರೆಗಳಿದ್ದು, ವಿಸ್ತೀರ್ಣ  29,972 ಎಕರೆ. 6,195 ಎಕರೆ ಒತ್ತುವರಿಯಾಗಿದ್ದು, 1032 ಎಕರೆಯನ್ನು ಸರ್ಕಾರಿ ಸಂಸ್ಥೆಗಳೇ ಒತ್ತುವರಿ ಮಾಡಿವೆ’   ಎಂದು ಮಧ್ಯಂತರ ವರದಿಯಲ್ಲಿ ತಿಳಿಸಿತ್ತು. ಸೆಪ್ಟೆಂಬರ್‌ ಒಳಗೆ ಅಂತಿಮ ವರದಿ ನೀಡುವುದಾಗಿ ಸಮಿತಿ ತಿಳಿಸಿದೆ.

‘ಇದೀಗ ಹಸಿರು ನ್ಯಾಯಮಂಡಳಿ ಕಟ್ಟಡಗಳ ತೆರವು ಮಾಡಲು ಬುಧವಾರ ಆದೇಶ ಹೊರಡಿಸಿದೆ. ಹೀಗಾಗಿ ತೆರವು ಕಾರ್ಯಾಚರಣೆ ನಡೆಸುವುದು ಅನಿವಾರ್ಯ. ನ್ಯಾಯಮಂಡಳಿಯ ತೀರ್ಪು ಪಾಲಿಸಲೇಬೇಕಿದೆ’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಬಡಾವಣೆಗಳಾದ ಕೆರೆಗಳು: ಮೆಜೆಸ್ಟಿಕ್‌ ಆಗಿರುವ ಧರ್ಮಾಂಬುಧಿ ಕೆರೆಯಿಂದ ಹಿಡಿದು ತನ್ನೊಡಲ ಮೇಲೆ ರಸ್ತೆ ನಿರ್ಮಾಣಕ್ಕೆ ಅವ­ಕಾಶ ಕೊಟ್ಟ ಅಗರ ಕೆರೆವರೆಗೆ ನಡೆದ ಕೆರೆಗಳ ಮೇಲಿನ ದಾಳಿಗೆ ಲೆಕ್ಕವೇ ಇಲ್ಲ. ರಕ್ಷಕನ ಹೊಣೆ ಹೊರಬೇಕಾದ ಬೆಂಗ­ಳೂರು ಅಭಿವೃದ್ಧಿ ಪ್ರಾಧಿಕಾರವೇ (ಬಿಡಿಎ) ಕೆರೆ­ಗಳ ಸಮಾಧಿ ಮೇಲೆ ಬಡಾವಣೆ ನಿರ್ಮಿಸಿ ಭಕ್ಷಕ­ನಾ­ಗಿದೆ. ಒಂದೆಡೆ  ಅತಿಕ್ರಮಣ, ಇನ್ನೊಂದೆಡೆ ಕೊಳಚೆ ನೀರಿನ ಆಕ್ರಮಣ– ಇವೆರಡರ ಅಡಕತ್ತರಿಯಲ್ಲಿ ಸಿಕ್ಕಿ ಕೊಂಡಿರುವ ಕೆರೆಗಳ ಉಸಿರು ಪೂರ್ಣ ಕಟ್ಟಿಹೋಗಿದೆ.

‘ಬದಲಾವಣೆಯ ದಾರಿಯಲ್ಲಿ ಬಹುದೂರ ಸಾಗಿ ‘ಸಿಲಿಕಾನ್‌ ಸಿಟಿ’ಯಾಗಿ ರೂಪುಗೊಂಡ ಈ ಮಹಾನಗರದ ಇಂದಿನ ಚಹರೆಯ ಹಿಂದೆ ಅಸಂಖ್ಯಾತ ಸಮೃದ್ಧ ಕೆರೆಗಳ ಹುತಾತ್ಮ ಕಥನವೂ ಇದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಯನ ವರದಿಗಳು ಹೇಳುತ್ತವೆ.

‘ಭೂಗಳ್ಳರ ದುರಾಸೆಗೆ ಕೆರೆಗಳು ಬಲಿಯಾಗಿವೆ. ಅಂದು ಕೆರೆಗಳಿದ್ದ ಜಾಗದಲ್ಲಿ ಬಹುಮಹಡಿ ಕಟ್ಟಡಗಳು, ಕಪ್ಪುಹೊಗೆಯುಗುಳುವ ಬಸ್‌ಗಳಿಗೆ ಸಾಕ್ಷಿಯಾಗುವ ನಿಲ್ದಾಣಗಳು, ಜನಸಂದಣಿಯಿಂದ ಗಿಜಿಗಿಜಿಗುಡುವ ಮಾರುಕಟ್ಟೆಗಳು, ರೈಲು ನಿಲ್ದಾಣಗಳು, ಆಟದ ಮೈದಾನಗಳು, ವಸತಿ ನಿವಾಸಗಳು ಇವೆ. ನಗರದ ಪರಿಸರ ವ್ಯವಸ್ಥೆಯಲ್ಲಿದ್ದ ಸುಮಾರು 300 ಕೆರೆಗಳು ಹಾಗೂ ಜಲಮೂಲಗಳು ಕಾಣೆಯಾಗಿವೆ’ ಎಂದು ಈ ಅಧ್ಯಯನ ವರದಿಗಳು ಹೇಳುತ್ತವೆ.

‘ನಗರದ ಕೆರೆಗಳು ಬಿಬಿಎಂಪಿ, ಬಿಡಿಎ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಸಣ್ಣ ನೀರಾವರಿ ಇಲಾಖೆಯ ಸುಪರ್ದಿಯಲ್ಲಿವೆ.  ಈ ಯಾವ ಇಲಾಖೆಗಳು ಕೆರೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಇದರಿಂದಾಗಿ ಒತ್ತುವರಿದಾರರ ಕಣ್ಣು ಕೆರೆಗಳ ಮೇಲೆ ಬೀಳುತ್ತಿದೆ. ಹತ್ತಾರು ಲೇಕ್ ವ್ಯೂ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿವೆ’ ಎಂದು ಹೋರಾಟಗಾರರು ವಿಶ್ಲೇಷಿಸುತ್ತಾರೆ.

‘ಕೆರೆ ಸುತ್ತಲಿನ ಹಸಿ ಪ್ರದೇಶಗಳನ್ನು ಸರ್ಕಾರದ ಭ್ರಷ್ಟ ವ್ಯವಸ್ಥೆ ಡಿನೋಟಿಫೈ ಮಾಡುವ ಮೂಲಕ ಬಿಲ್ಡರ್‌ಗಳಿಗೆ ಮಾರುತ್ತದೆ. ಕೆರೆಗಳನ್ನು ಉಳಿಸಬೇ­ಕಾದರೆ ಇಂತಹ ಕಬಂಧಬಾಹುಗಳನ್ನು ಕತ್ತರಿಸಿ ಹಾಕ­ಬೇಕು’ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ. 
‘ಸದ್ಯ ನಗರದಲ್ಲಿ 93 ಕೆರೆಗಳಿದ್ದು, ಮಳೆ­ಗಾಲ­ದಲ್ಲಿ ಮಾತ್ರ ಜೀವ ತಳೆಯುವ ಜಲಮೂಲಗಳನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಅವುಗಳ ಸಂಖ್ಯೆ 190ಕ್ಕೆ ಹೆಚ್ಚುತ್ತದೆ’ ಎನ್ನುತ್ತಾರೆ ಅವರು.

‘ಭರದಿಂದ ಸಾಗಿರುವ ನಗರೀಕರಣವೇ ಕೆರೆಗಳ ಕಣ್ಮರೆಗೆ ಬಹುಮುಖ್ಯ ಕಾರಣ. ಕೆರೆಗಳಲ್ಲೇ ಹಲವು ಗಗನಚುಂಬಿ ಕಟ್ಟಡ­ಗಳು ನಿರ್ಮಾಣವಾಗಿವೆ. ಕೆರೆ ಸುತ್ತಲಿನ ಹಸಿ ಪ್ರದೇಶ­ವನ್ನು ಅತಿಕ್ರಮಿಸಲಾಗಿದ್ದು, ಕೆರೆಗಳ ಕತ್ತು ಹಿಸುಕಿದಂತಾಗಿದೆ’ ಎಂದು ಅವರು ವಿಶ್ಲೇಷಿಸುತ್ತಾರೆ.

‘ಕೆರೆಗಳಿಗೆ ನಿಯಮಿತವಾಗಿ ಭೇಟಿ ಕೊಟ್ಟು ಅದರ ಪಾತ್ರಕ್ಕೆ ಯಾವುದೇ ಕುಂದು ಬಂದಿಲ್ಲ ಎಂಬುದನ್ನು ಯಾವ ಅಧಿಕಾರಿಯೂ ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ’ ಎಂದು ಮತ್ತೊಬ್ಬ ಸಂಶೋಧಕರು ಹೇಳುತ್ತಾರೆ.

‘ಕೆರೆಗಳ ಅಭಿವೃದ್ಧಿಗಾಗಿಯೇ ಪ್ರಾಧಿಕಾರ ಇದೆ. ಆದರೆ, ಭೂಗಳ್ಳರಿಂದ ಕೆರೆ ಪಾತ್ರವನ್ನು ಸಂರಕ್ಷಿಸಲು ಅದು ಎಷ್ಟರ ಮಟ್ಟಿಗೆ ಕಾರ್ಯಪ್ರವೃತ್ತವಾಗಿದೆ’ ಎಂಬ ಪ್ರಶ್ನೆಯನ್ನು ಅವರು ಹಾಕುತ್ತಾರೆ. ‘ಭೂಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳುವಷ್ಟು ಈ ಪ್ರಾಧಿಕಾರ ಸಶಕ್ತವಾಗಿದೆಯೇ’ ಎಂದೂ ಕೇಳುತ್ತಾರೆ.

ಸಮಿತಿಯ ನೋಟಿಸ್‌ಗೆ ಕ್ಯಾರೆ ಅನ್ನದ ಬಿಡಿಎ
ಅಗರ, ಸಾಣೆ­ಗುರುವನಹಳ್ಳಿ, ಚಿಕ್ಕಮಾರೇನಹಳ್ಳಿ, ಕಾಚರಕನ­ಹಳ್ಳಿ, ಗೆದ್ದಲಹಳ್ಳಿ, ಚಳ್ಳಕೆರೆ ಮೊದಲಾದ ಗ್ರಾಮಗಳ ಕೆರೆ­ಗಳನ್ನೇ ಬಿಡಿಎ ಬಡಾವಣೆ ಮಾಡಿಬಿಟ್ಟಿದೆ.

18 ಕೆರೆಗಳ ಜಾಗದಲ್ಲಿ ನಿವೇಶನ ರಚಿಸಿರುವುದಾಗಿ ಬಿಡಿಎ ಉಪಲೋಕಾಯುಕ್ತರಿಗೆ  ಕಳೆದ ವರ್ಷ ವರದಿ ಸಲ್ಲಿಸಿದೆ. ಜೆ.ಸಿ.ನಗರದ ದೊರೆಸ್ವಾಮಿ ಕೆರೆ ಒತ್ತುವರಿ ಮಾಡಿಕೊಂಡು ಬಿಡಿಎ, ಡಾಲರ್ಸ್ ಕಾಲೋನಿ ನಿರ್ಮಿಸಿದೆ. ಅದರಲ್ಲಿ  ನಿವೇಶನ ಪಡೆದವರಲ್ಲಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕಾರಣಿಗಳು, ನಟರೂ ಇದ್ದಾರೆ.

ಬಿಡಿಎ ಒಟ್ಟು 41 ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಸುಮಾರು 10 ಸಾವಿರ ನಿವೇಶನಗಳನ್ನು ಹಂಚಿದೆ ಎಂದು ಸದನ ಸಮಿತಿಯ ಅಧ್ಯಕ್ಷ ಕೆ.ಬಿ.ಕೋಳಿವಾಡ ಇತ್ತೀಚೆಗೆ ತಿಳಿಸಿದ್ದರು.  ಅದು 375 ಎಕರೆ ಕಬಳಿಸಿದೆ. ಸಮಿತಿಯು ‘ಸಹಜ ನ್ಯಾಯ’ದಡಿ ಬಿಡಿಎಗೂ ನೋಟಿಸ್‌ ನೀಡಿತ್ತು. ಆದರೆ, ಇಲ್ಲಿಯ ವರೆಗೂ ಬಿಡಿಎ ನೋಟಿಸ್‌ಗೆ ಉತ್ತರ ನೀಡಿಲ್ಲ.

‘ಇದು ಬೆಂಗಳೂರು ಉಳಿಸುವ ಹೋರಾಟ’
‘ಇದು ನಗರದ ಜಲಮೂಲಗಳ ಕುರಿತ ಹೋರಾಟ ಮಾತ್ರ ಅಲ್ಲ. ನಗರದ ಪರಿಸರ, ನೀರು ಹಾಗೂ ಸುಸ್ಥಿರ ಅಭಿವೃದ್ಧಿ ಹಾಗೂ ಸಾರ್ವಜನಿಕ ಆರೋಗ್ಯದ ಕುರಿತ  ಹೋರಾಟ’ ಎಂದು ‘ನಮ್ಮ ಬೆಂಗಳೂರು ಪ್ರತಿಷ್ಠಾನ’ದ ಸ್ಥಾಪಕ, ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

‘ದಶಕಗಳಿಂದ ಭೂಗಳ್ಳರು ನಗರದ ಕೆರೆ, ಸರ್ಕಾರಿ ಭೂಮಿ ಹಾಗೂ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ನಾಗರಿಕರು ಮೂಕಪ್ರೇಕ್ಷಕರು ಆಗಿದ್ದರು. ಅಧಿಕಾರಿಗಳು ಹಾಗೂ ಕೆಲವು ಬಿಲ್ಡರ್‌ಗಳ  ನಡುವಿನ ಅಕ್ರಮ ನೋಡಿ ಅಸಹಾಯಕರಾಗಿದ್ದರು. ನ್ಯಾಯ ಮಂಡಳಿಯ ಆದೇಶ ಹೊಸ ಭರವಸೆ ಮೂಡಿಸಿದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಬೆಳ್ಳಂದೂರು ಹಾಗೂ ಅಗರ ಕೆರೆಗಳ ಕಣಿವೆಯಲ್ಲಿ 80 ಎಕರೆ ಪ್ರದೇಶದಲ್ಲಿ ಮಂತ್ರಿ ಡೆವಲಪರ್‌ನ ಎಸ್‌ಇಜೆಡ್‌ ಯೋಜನೆಯ ಕಾಮಗಾರಿಗಳು ಆರಂಭವಾಗಿದ್ದವು. ಇದರಿಂದಾಗಿ ಪರಿಸರ ವ್ಯವಸ್ಥೆಗೆ ಅಪಾಯ ಉಂಟಾಗಿತ್ತು. ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಈ ಅಕ್ರಮದಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ’ ಎಂದು ಅವರು ಕಿಡಿಕಾರಿದ್ದಾರೆ.

ತಾಕೀತು ಮಾಡಿದೆ: ಇನ್ನು, ಕೆರೆಯಂಚಿನಲ್ಲಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ತೆರವು ಮಾಡಬೇಕು ಎಂದು ಹಸಿರು ನ್ಯಾಯಮಂಡಳಿ ನಿರ್ದೇಶನ ನೀಡಿದೆ. ಜತೆಗೆ ಇನ್ನು ಮುಂದೆ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡಬಾರದು. ಅಂತಹ ಯೋಜನೆಗಳಿಗೆ ಅನುಮತಿ ನೀಡಬಾರದು ಎಂದೂ ತಾಕೀತು ಮಾಡಿದೆ ಎಂದು ‘ನಮ್ಮ ಬೆಂಗಳೂರು ಪ್ರತಿಷ್ಠಾನ’ದ ಪರ ವಕೀಲ ಸಜನ್‌ ಪೂವಯ್ಯ ತಿಳಿಸಿದ್ದಾರೆ.

ಆಮೆಗತಿಯಲ್ಲಿ ಸಮೀಕ್ಷೆ
ನಗರದಲ್ಲಿ ರಾಜಕಾಲುವೆಗಳ ಸಮೀಕ್ಷೆ ಕುಂಟುತ್ತಾ ಸಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1,088 ಕಿ.ಮೀ. ಉದ್ದದ ರಾಜಕಾಲುವೆಗಳು ಇವೆ. ಹೃದಯ ಭಾಗದಲ್ಲಿ 842 ಕಿ.ಮೀ. ಉದ್ದದ ರಾಜಕಾಲುವೆಗಳಿವೆ. ರಾಜಕಾಲುವೆಗಳ ಮೇಲೆಯೇ ನೂರಾರು ಮನೆಗಳು ನಿರ್ಮಾಣವಾಗಿದೆ. ಇವುಗಳ ತೆರವು ಕಾರ್ಯಾಚರಣೆಗೂ ಮುನ್ನ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು ಎಂದು ಭೂದಾಖಲೆಗಳ ಇಲಾಖೆಗೆ ಸದನ ಸಮಿತಿ 6 ತಿಂಗಳ ಹಿಂದೆ ನಿರ್ದೇಶನ ನೀಡಿತ್ತು. ಐದು ತಿಂಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸುವುದಾಗಿ ಭೂಮಾಪನಾ ಇಲಾಖೆಯ ಆಯುಕ್ತರು ಸಮಿತಿಗೆ ಭರವಸೆ ನೀಡಿದ್ದರು. ಆದರೆ, ಇಲಾಖೆ ಈವರೆಗೆ ಕೇವಲ 100 ಕಿ.ಮೀ. ರಾಜಕಾಲುವೆ ಸಮೀಕ್ಷೆ ನಡೆಸಿದೆ. ‘ರಾಜಕಾಲುವೆಗಳ ಮೇಲೆ ಮನೆಗಳು ನಿರ್ಮಾಣವಾಗಿವೆ. ನೋಟಿಸ್‌ ನೀಡಲು ಆಗುತ್ತಿಲ್ಲ. ಒತ್ತುವರಿ ತೆರವು ಮಾಡುತ್ತಾರೆ ಎಂದು ಸಮೀಕ್ಷೆಗೆ ಅಡ್ಡಿಪಡಿಸುತ್ತಾರೆ. ಹೀಗಾಗಿ ವಿಳಂಬವಾಗುತ್ತಿದೆ’ ಎಂದು ಭೂದಾಖಲೆಗಳ ಇಲಾಖೆಯ  ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಭೂಗಳ್ಳರ ಗಲ್ಲಿಗೇರಿಸಬೇಕು: ಕೋಳಿವಾಡ
ಆದೇಶದ ಪ್ರತಿಯನ್ನು ತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅದನ್ನು ಸಂಪೂರ್ಣ ಓದಿದ ಮೇಲೆ ತೆರವು ಕಾರ್ಯಾಚರಣೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ.

ಕೆರೆಯಂಗಳದ ಮನೆಗಳನ್ನು ಸದನ ಸಮಿತಿ ವರದಿ ಕೊಡುವ ತನಕ ತೆರವು ಮಾಡಬಾರದು ಎಂದು ಮುಖ್ಯಮಂತ್ರಿ ಕಳೆದ ವರ್ಷ ನಿರ್ದೇಶನ ನೀಡಿದ್ದರು. ಹಾಗೆಂದ ಮಾತ್ರಕ್ಕೆ ಮತ್ತಷ್ಟು ಒತ್ತುವರಿಗೆ ಅವಕಾಶ ಕೊಡಿ ಅಂತಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು ಕೆರೆಗಳ ಬಗ್ಗೆ ನಿರಂತರ ನಿಗಾ ಇಡಬೇಕು.
ಕೆರೆ ಒತ್ತುವರಿಯ ಬಗ್ಗೆ ಸಮಿತಿ ಅಂತಿಮ ವರದಿ ಸಿದ್ಧಪಡಿಸುತ್ತಿದೆ. ಆದರೆ, ಕೆರೆಗಳ ಹೊರ ಅಂಚಿನಿಂದ 75 ಮೀಟರ್‌ ಹಾಗೂ ರಾಜಕಾಲುವೆ ಅಂಚಿನಿಂದ 50 ಮೀಟರ್‌ ವ್ಯಾಪ್ತಿಯ ಬಫರ್‌ ಝೋನ್‌ ಬಗ್ಗೆ ನಮಗೆ ಮಾಹಿತಿ ಇಲ್ಲ. ಇದರ ಬಗ್ಗೆ ಸಮೀಕ್ಷೆ ನಡೆಸುವಂತೆ ಕಾಲಮಿತಿಯಲ್ಲಿ ವರದಿ ನೀಡುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ. ಭೂಗಳ್ಳರನ್ನು ಜೈಲಿಗೆ ಅಟ್ಟಬೇಕು ಹಾಗೂ ಗಲ್ಲಿಗೇರಿಸಬೇಕು ಎಂಬುದು ನನ್ನ ಅಭಿಪ್ರಾಯ.
-ಕೆ.ಬಿ.ಕೋಳಿವಾಡ, ಕೆರೆ ಒತ್ತುವರಿ ಪತ್ತೆಯ ಸದನ ಸಮಿತಿಯ ಅಧ್ಯಕ್ಷ

ಪ್ರಮುಖ ಒತ್ತುವರಿದಾರರು
ಐಶ್ವರ್ಯ ಡೆವಲಪರ್ಸ್ಸ್, ಲೇಕ್‌ ವ್ಯೂ ಅಪಾರ್ಟ್‌ಮೆಂಟ್ಸ್‌, ಆದರ್ಶ ಡೆವಲಪರ್ಸ್‌ ಪ್ರೆಸ್ಟೀಜ್‌ ಗ್ರೂಪ್‌, ಡಿಎಸ್‌ ಮ್ಯಾಕ್ಸ್‌, ಶೋಭಾ, ಬ್ರಿಗೇಡ್‌ ಗ್ರೂಪ್‌, ಒಬೆರಾಯ್ ಗ್ರೂಪ್‌, ಆರ್‌ಎನ್‌ಎಸ್‌ ಮೋಟರ್ಸ್, ಬಾಗಮಾನೆ ಟೆಕ್‌ ಪಾರ್ಕ್‌, ನಿಸರ್ಗಧಾಮ ಎಸ್ಟೇಟ್ಸ್‌, ನಂದಿನಿ ಅಪಾರ್ಟ್‌ಮೆಂಟ್ಸ್‌, ಗ್ರಾಸ್‌ ಹೋಪರ್‌ ರೆಸಾರ್ಟ್ಸ್, ವಂದನ ಸಾಗರ ಅಪಾರ್ಟ್‌ಮೆಂಟ್ಸ್‌, ಅದ್ವೈತ ಗ್ರೂಪ್‌, ವಾಲ್‌ ಮಾರ್ಕ್‌ ಗ್ರೂಪ್‌, ಗ್ರೀನ್‌ ವುಡ್‌ ಗ್ರೂಪ್‌, ಪುಷ್ಪಂ ಡೆವಲಪರ್ಸ್, ಆರ್‌.ಕೆ. ಡೆವಲಪರ್ಸ್, ಬಿ.ಆರ್‌.ವ್ಯಾಲಿ ಪಾರ್ಕ್‌, ಶ್ರೀರಾಮ ಅಪಾರ್ಟ್‌ಮೆಂಟ್ಸ್‌, ಎನ್‌.ಡಿ. ಡೆವಲಪರ್ಸ್ಸ್, ಒಯಾಸಿಸ್‌ ಅಪಾರ್ಟ್‌ಮೆಂಟ್ಸ್‌, ಫ್ಯಾಂಟಸಿ ಅಪಾರ್ಟ್‌ ಮೆಂಟ್ಸ್‌, ಮಹಾಲಕ್ಷ್ಮಿ ಅಪಾರ್ಟ್‌ಮೆಂಟ್ಸ್‌.

ಒತ್ತುವರಿ ಮಾಡಿದವರಲ್ಲಿ ಖಾಸಗಿ ನಿರ್ಮಾಣ ಸಂಸ್ಥೆಗಳಷ್ಟೇ ಅಲ್ಲದೆ, ಸರ್ಕಾರದ ಅಂಗ ಸಂಸ್ಥೆಗಳಾದ ಬಿಡಿಎ, ಬಿಬಿಎಂಪಿ, ಅರಣ್ಯ, ಸಾರಿಗೆ ಸಂಸ್ಥೆಗಳೂ ಇವೆ. ಒಟ್ಟು 10,742 ಒತ್ತುವರಿದಾರರು ಇದ್ದಾರೆ. 
(ಮಾಹಿತಿ: ಕೆರೆ ಒತ್ತುವರಿ ಪತ್ತೆಯ ಸದನ ಸಮಿತಿ)

ರಾಜಕಾಲುವೆ ಒತ್ತುವರಿ ತೆರವು
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶದ ಬೆನ್ನಲ್ಲೆ ಎಚ್ಚೆತ್ತಿರುವ ಬಿಬಿಎಂಪಿಯು ಮೇಯರ್‌ ಬಿ.ಎನ್‌.ಮಂಜುನಾಥ ರೆಡ್ಡಿ ನೇತೃತ್ವದಲ್ಲಿ ಅಂದಾಜು ₹ 14 ಕೋಟಿ ಮೌಲ್ಯದ ರಾಜಕಾಲುವೆ ಒತ್ತುವರಿಯನ್ನು ಗುರುವಾರ ತೆರವುಗೊಳಿಸಿದೆ.

ನಗರದ ಥಣಿಸಂದ್ರ ವಾರ್ಡ್‌ನ  ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ 11 ಮನೆ,  ಎರಡು ಕಾರ್ಖಾನೆ  ಶೆಡ್‌ಗಳನ್ನು ಈ ವೇಳೆ ತೆರವುಗೊಳಿಸಲಾಯಿತು.

ಸರ್ವೆ ನಂ  46, 47, 48, 49, 63, 64,70,71,72,73,74 ರಲ್ಲಿಯೂ ರಾಜಕಾಲುವೆ ಒತ್ತುವರಿಯಾಗಿರುವುದು ಕಂಡುಬಂದಿದ್ದು, ತಕ್ಷಣದಿಂದಲೇ ಒತ್ತುವರಿ ತೆರವುಗೊಳಿಸಬೇಕೆಂದು ಮೇಯರ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ರಾಜಕಾಲುವೆ ಒತ್ತುವರಿಯಿಂದ ಮಳೆಗಾಲದಲ್ಲಿ ಕಾಲುವೆಗಳು ನೀರು ಉಕ್ಕಿ ಹರಿದು ಅನಾಹುತಗಳು ಸಂಭವಿಸುತ್ತವೆ. ಹಾಗಾಗಿ ಮಳೆಗಾಲಕ್ಕೂ ಮುನ್ನವೇ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅವರು  ಸುದ್ದಿಗಾರರಿಗೆ ತಿಳಿಸಿದರು.

‘ನಾನು ಅಧಿಕಾರ ಸ್ವೀಕರಿಸಿದಾಗ ಒತ್ತುವರಿ ಆಸ್ತಿಯನ್ನು ತೆರವುಗೊಳಿಸುವುದಾಗಿ ಮಾತು ನೀಡಿದ್ದೆ. ಜತೆಗೆ ಥಣಿಸಂದ್ರದಲ್ಲಿ ಒತ್ತುವರಿಯಾಗಿ­ರುವುದು
ಸರ್ವೆಯಿಂದ  ಖಚಿತವಾಗಿತ್ತು. ಹಾಗಾಗಿ ಅದನ್ನು ತ್ವರಿತವಾಗಿ ತೆರವುಗೊಳಿಸಲಾಗಿದೆ’ ಎಂದು ಅವರು ಹೇಳಿದರು.

ಪಾಲಿಕೆಯ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌, ಮುಖ್ಯ ಎಂಜಿನಿಯರ್‌ (ರಾಜಕಾಲುವೆ) ಸಿದ್ದೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT