ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಒತ್ತುವರಿ ತೆರವಿಗೆ ಸೂಚನೆ

Last Updated 28 ಮಾರ್ಚ್ 2015, 20:03 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್‌.ಪುರ ತಾಲ್ಲೂಕು ವ್ಯಾಪ್ತಿಯ ವಿಭೂತಿಪುರ ಹಾಗೂ ವರ್ತೂರು ಕೆರೆಗಳ ಒತ್ತುವರಿ ತೆರವಿಗೆ ಉಪಲೋಕಾಯುಕ್ತ ಸುಭಾಷ್‌ ಅಡಿ ಶನಿವಾರ ಸೂಚನೆ ನೀಡಿದರು.

ಈ ಕೆರೆಗಳ ಒತ್ತುವರಿಯಾಗಿದ್ದು ಕೊಳಚೆ ನೀರು ಸೇರುತ್ತಿದೆ ಎಂದು ವಿಭೂತಿಪುರ ಕೆರೆ ಸಂರಕ್ಷಣಾ ಸಮಿತಿ (ವಿಕಾಸ್‌) ಹಾಗೂ ವೈಟ್‌ಫೀಲ್ಡ್ ರೈಸಿಂಗ್‌  ಸ್ವಯಂಸೇವಾ ಸಂಘಟನೆಗಳು ದೂರು ಸಲ್ಲಿಸಿದ್ದವು. ಹೀಗಾಗಿ ಅವರು ಭೇಟಿ ನೀಡಿ ಪರಿಶೀಲಿಸಿದರು.

ವಿಭೂತಿಪುರ ಕೆರೆಯ ವಿಸ್ತೀರ್ಣ 42 ಎಕರೆ. ಇದರಲ್ಲಿ 3 ಎಕರೆ 20 ಗುಂಟೆ  ಒತ್ತುವರಿಯಾಗಿತ್ತು. ಅಧಿಕಾರಿಗಳು 2 ಎಕರೆ ಒತ್ತುವರಿ ತೆರವುಗೊಳಿಸಿದ್ದರು. 1 ಎಕರೆ 20 ಗುಂಟೆಯಲ್ಲಿ ಕಟ್ಟಡಗಳು ಇವೆ.  ಇದರ ಒತ್ತುವರಿ ತೆರವಿಗೆ ಕಟ್ಟಡ ಮಾಲೀಕರು ತಡೆಯಾಜ್ಞೆ ತಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ಕೆರೆಗೆ ಕೊಳಚೆ ನೀರು ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಕೆರೆಯ ಸುತ್ತ ಬೇಲಿ ಹಾಕಬೇಕು ಎಂದು ಉಪಲೋಕಾಯುಕ್ತರು ಸೂಚಿಸಿದರು. ಬಿಬಿಎಂಪಿ, ಬಿಡಿಎ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

ವರ್ತೂರು ಕೆರೆಯ ವಿಸ್ತೀರ್ಣ 445 ಎಕರೆ. ಈ ಕೆರೆ ಸಹ ದೊಡ್ಡ ಪ್ರಮಾಣದಲ್ಲಿ ಒತ್ತುವರಿಯಾಗಿದೆ. ಇದರ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಒಂದು ತಿಂಗಳಲ್ಲಿ  ವರದಿ ಸಿಗಲಿದೆ. ಇದಾದ ಬಳಿಕ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರು.

ಈ ಕೆರೆಯ ನೀರು ಸಂಪೂರ್ಣ ಕಲುಷಿತವಾಗಿರುವ ಬಗ್ಗೆ ಸ್ಥಳೀಯ ಕಾಲೇಜಿನ ವಿದ್ಯಾರ್ಥಿಗಳು ವರದಿ ಸಿದ್ಧಪಡಿಸಿದ್ದು, ಅದನ್ನು ಲೋಕಾಯುಕ್ತರಿಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT