ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸದಲ್ಲಿ ಪಾಲು, ಅಹಂ ಸೋಲು

Last Updated 20 ನವೆಂಬರ್ 2015, 19:48 IST
ಅಕ್ಷರ ಗಾತ್ರ

‘ಅಲ್ರಿ ಸರ್ ನೀವ್ಯಾಕ ಅಂಗಳ ಕಸ ಹುಡುಗತೀರಿ. ನಿಮ್ಮ ಮನೆಯವ್ರು ಮಾಡತಾರ ಬಿಟ್ಟ ಬಿಡ್ರಿ’ ಎಂದ ಪಕ್ಕದ ಮನೆಯಾಕೆಗೆ ‘ಇಲ್ರಿ ಮೇಡಂ ನಾವಿಬ್ಬರೂ ಕೆಲಸ ಮಾಡತೀವಲ್ಲ, ಆಕಿಗೊಬ್ಬಾಕಿಗೆ ಅಂದ್ರ ತ್ರಾಸ್ ಆಗತ್ರಿ. ಒಂಬತ್ತು ಗಂಟೆಯಂದ್ರ ಇಬ್ಬರೂ ಮನೆ ಬಿಡಬೇಕು. ನಾನು ಕಸಗುಡಿಸುವುದು, ತರಕಾರಿ ಹೆಚ್ಚಿಕೊಡೋದು, ಮಕ್ಕಳನ್ನು ರೆಡಿ ಮಾಡಲಿಲ್ಲಂದ್ರ ಆಫೀಸಿಗೆ ಟೈಮಾಗಿ ಇಬ್ಬರೊಳಗ ಯಾರಾದ್ರೂ ಬೈಸಿಕೊಂಡಿರ್ತೀವಿ. ಮಗನನ್ನು ಶಾಲೆಗೆ ಬಿಟ್ಟು, ಈಕೆಯನ್ನು ಬಸ್ ಸ್ಟ್ಯಾಂಡಿಗೆ ಇಳಿಸಿ, ಬೈಕ್ ಒಂದ ಕಡೆ ಹಚ್ಚಿ ಬರೋದ್ರಾಗ ನನ್ನ ಬಸ್ ರೆಡಿ  ಇರ್ತದ. ನಾನು 92 ಕಿ.ಮಿಗಳ ಮೂರತಾಸು ಜರ್ನಿ ಮಾಡಬೇಕು. ಮತ್ತ ಮನಿಗೆ ಬಂದ ಸೇರಬೇಕು ಅಂದ್ರ ರಾತ್ರಿ ಎಂಟು ದಾಟಿರತೈತಿ’  ಮೂರು ವರ್ಷದ ಹಿಂದ ನೋಡಿದ ದಂಪತಿಯಾ ಇವರು! ಎಂದುಕೊಳ್ಳುತ್ತಿರುವಾಗಲೇ ಅವರು ಕಸ ಗುಡಿಸಿ ಒಳಸೇರಿಯಾಗಿರುತ್ತಿತ್ತು.

ಅವರು ದುಡಿಕಿ ಸಹಿ ಹಾಕಿ ಬಿಟ್ಟಿದ್ದರೆ... ? ಅವರಿಬ್ಬರೂ ಎರಡೆರಡು ಪದವಿ ಪಡೆದವರು. ಅತಿಯಾದ ಮದ್ಯಪಾನ, ಆಕೆಯ ಹಟ ನೋಡುವವರಿಗೆ, ಮೇಲಿಂದ ಮೇಲೆ ಅವರ ಸಂಸಾರ ಸರಿಪಡಿಸಲು ಹೋಗುವವರಿಗೆ ಸಾಕೆನಿಸಿತ್ತು. ಕೇಸು ಕೋರ್ಟ್‌ ಮೆಟ್ಟಿಲೇರಿತು. ಅಲ್ಲಿಯೂ ಅವರಿಬ್ಬರ ಹಟ ಮಣಿಯಲಿಲ್ಲ. ಕಾಲದ ಎದುರು ಎಚ್ಚರ ತಪ್ಪಿದರೆ ಕಾಲವೇ ಕಾಲನೇಮಿಯೂ ಆಗಬಹುದು ಎಂಬ ಭಯದಿಂದಲೋ ಏನೋ ಕೊನೆ ಗಳಿಗೆಯಲ್ಲಿ ಪವಾಡ ನಡೆದಂತೆ ಅವರು ಕೇಸು ಹಿಂಪಡೆದು, ರಿಹ್ಯಾಬಿಲಿಟೇಷನ್ ಸೆಂಟರ್‌ನ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದ ನಂತರ ಅವರದು ಸ್ವರ್ಗಕ್ಕೆ ಕಿಚ್ಚು ಹಚ್ಚುವ  ಸುಖೀ ಸಂಸಾರವಾಯ್ತು.

ಗಂಡನ ಬಗ್ಗೆ ದ್ವೇಷ ಒಂದು ಹಂತದಲ್ಲಿ ಸಹಜ. ಅದು ಅನುಭವ ಮತ್ತು ಆಸೆಗಳ ಮುಖಾಮುಖಿ. ಸ್ವಾತಂತ್ರ್ಯವನ್ನು ಸಮಾನವಾಗಿ ಹಂಚಿಕೊಳ್ಳಬಯಸುವ ಎರಡು ಜೀವಸೃಷ್ಟಿಗಳ ಮಧ್ಯೆ ನಡೆಯುವ ಪ್ರಕ್ರಿಯೆ ಅದು. ಹೆಣ್ಣು ಅಡುಗೆ, ಸೇವೆ ಇತ್ಯಾದಿ ಮಿನಿಕೆಲಸಗಳನ್ನೇ ಮಾಡಿಕೊಂಡಿರಬೇಕು ಎಂದರೆ ಅದು ಒಪ್ಪತಕ್ಕ ಮಾತಲ್ಲ. 

ಸಂಸಾರ ನೌಕೆ ಸರಿಯಾಗಿ ಸಾಗಬೇಕೆಂದರೆ ಗಂಡ ಹೆಂಡತಿ ಇಬ್ಬರ ಪಾಲು ಸಾಕಷ್ಟಿದೆ. ಮಾತು, ಮಾತಿಗೂ ಅವನು ಗಂಡಸು, ಅವನು ಗಂಡಸು ಎನ್ನುವದನ್ನು ಮಾತಿನಲ್ಲಿ ಪ್ರತಿಷ್ಠಾಪಿಸುವುದನ್ನು ಬಿಡುವುದರ ಜೊತೆ, ಜೊತೆಗೆ ಹೆಣ್ಣಾದವಳು ಹೀಗೆ ಇರಬೇಕು, ಹಾಗೆ ಮಾಡಬೇಕು ಎನ್ನುವ ಹೆಣ್ತನದ ಉಲ್ಲಂಘನೆಯೂ ಆಗಬಾರದು. ಗಂಡನಾದವನು ಹೆಂಡತಿಯನ್ನು  ಪ್ರೀತಿ, ವಿಶ್ವಾಸ, ಸ್ನೇಹ, ಕಾಳಜಿಗಳಿಂದ ಒಲಿಸಿಕೊಳ್ಳುತ್ತಾನೆ. ಸಂತೋಷಪಡಿಸಿ, ಸಂತೃಪ್ತಗೊಳಿಸಿ ಮುಖದಲ್ಲಿಯೇ ಸಂತುಷ್ಟಿ ಭಾವ ಹೊಮ್ಮುವಂತೆ ಮಾಡುತ್ತಾನೆ.

ಜವಾಬ್ದಾರಿ ನಿಭಾಯಿಸಿ ಗೌರವಾದರಗಳಿಗೆ ಪಾತ್ರನಾಗಿ ಹೆಂಡತಿಗೆ ಆರಾಧನೆಯ ವಸ್ತುವಾಗುತ್ತಾನೆ. ಅವಳ ಮಾನ, ಗೌರವ, ಪ್ರಾಣಗಳಿಗೆ ರಕ್ಷೆಯಾಗಿ ಜೀವನಕ್ಕೆ ಆಸರೆಯಾಗುತ್ತಾನಲ್ಲ ಅದೆಲ್ಲ ಪುಸ್ತಕದ ಬದನೆಕಾಯಿ ಅಲ್ಲ. ನಿಜ ಜೀವನದಲ್ಲಿ ನಡೆದಾಗ ಮಾತ್ರ ಅದು ಜವಾಬ್ದಾರಿ, ಅಧಿಕಾರ ಸಮವಾಗಿ ಹಂಚಿಕೊಂಡ ಅನುರೂಪದ ದಾಂಪತ್ಯ. ಹಿಂದೆ ಮದುವೆ ಸಂದರ್ಭದಲ್ಲಿ ಮದುವೆಯ ಉಡುಗೊರೆಯಾಗಿ ‘ದಾಂಪತ್ಯ ದೀಪಿಕೆ’ ಪುಸ್ತಕ ಕೊಟ್ಟು ಅವರು ಅದನ್ನು ಓದಿ ಅರಿತು ಅದರಂತೆ ತಮ್ಮ ದಾಂಪತ್ಯ ಜೀವನವನ್ನು ಮಧುರ ಗೊಳಿಸಬೇಕೆಂಬ ಸದಭಿರುಚಿಯ ವಾತಾವರಣ ಇತ್ತು. ಯಾವುದೇ ಸೈಬರ್ ಜ್ಞಾನಕ್ಕಿಂತ ಹೆಚ್ಚಾಗಿ ಇಂದಿನ ಯುವಪೀಳಿಗೆ ಇಂತಹ ಸದಭಿರುಚಿಯ, ಆರೋಗ್ಯಕರ ಪಕ್ವ ಮನಸ್ಥಿತಿ ಇಂದಿಗೂ ಅವಶ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT