ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ವಿರುದ್ಧ ಸೋನಿಯಾ ಗುಡುಗು

ಜಂತರ್ ಮಂತರ್‌ನಲ್ಲಿ ಪ್ರಜಾಪ್ರಭುತ್ವ ಉಳಿಸಿ ರ್ಯಾಲಿ ಆಯೋಜಿಸಿದ ಕಾಂಗ್ರೆಸ್‌
Last Updated 6 ಮೇ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ನಮ್ಮನ್ನು ಬೆದರಿಸುವ ಅಥವಾ ಅಪಮಾನಗೊಳಿಸುವ ಯತ್ನ ಮಾಡ ಬೇಡಿ, ಹೋರಾಟ ಮಾಡುವುದನ್ನು ನನ್ನ ಜೀವನವೇ ಕಲಿಸಿದೆ ಮತ್ತು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕೆಂದ್ರದ ವಿರುದ್ಧ ಗುಡುಗಿದರು.

ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿರುವುದನ್ನು ವಿರೋಧಿಸಿ ಜಂತರ್ ಮಂತರ್‌ನಲ್ಲಿ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿಸಿ’ ರ್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.

ಮೋದಿ ನೇತೃತ್ವದ ಸರ್ಕಾರವು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ಆಧಾರರಹಿತ ಆಪಾದನೆಗಳನ್ನು ಮಾಡುತ್ತ ಅಪಪ್ರಚಾರ ಮಾಡುತ್ತಿದೆ ಎಂದು ಸೋನಿಯಾ ಕಿಡಿ ಕಾರಿದರು.

ಸಂಸತ್ತಿನ ಒಳಗೆ ಮತ್ತು ಹೊರಗೆ ತಮ್ಮ ಪಕ್ಷವು ಜಾಗೃತ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತದೆ ಎಂದ ಅವರು, ಮೋದಿ ಸರ್ಕಾರದ ಮುಖವಾಡಿ ಕಳಚಿ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

‘ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಅನಿಸಿದಾಗ  ಜನರಿಗೆ ಏನು ಮಾಡಬೇಕು ಎಂಬುದು ಚೆನ್ನಾಗಿ ಗೊತ್ತಿದೆ’ ಎಂದು ಸೋನಿಯಾ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಜನಾದೇಶವನ್ನು ದರ್ಬಳಕೆ ಮಾಡಿ ಕೊಂಡು ಮೋದಿ ಸರ್ಕಾರ ಜನತೆಗೆ ಮೋಸ ಮಾಡುತ್ತಿದೆ ಎಂದು ಟೀಕಿಸಿದರು. ಆಧಾರರಹಿತ ಆಪಾದನೆಗಳನ್ನು ಮಾಡಿ ಕಾಂಗ್ರೆಸ್‌ನ್ನು ಕುಗ್ಗಿಸಬಹುದು ಎಂದು ಭಾವಿಸಿದ್ದರೆ ಅದು ಸುಳ್ಳು. ಕಾಂಗ್ರೆಸ್ ದರ್ಬಲ ಪಕ್ಷವಲ್ಲ, ಯಾವತ್ತೂ ಅನ್ಯಾಯದ ವಿರುದ್ಧ ಹೋರಾಡುತ್ತ ಬಂದಿದೆ ಎಂದು ಹೇಳಿದರು.

ಎನ್‌ಡಿಎ ಸರ್ಕಾರವನ್ನು ನಾಗ್ಪುರದಿಂದ ನಿಯಂತ್ರಿಸಲಾಗುತ್ತಿದೆ ಎಂದು ಆರ್‌ಎಸ್ಎಸ್ ಹೆಸರು ಹೇಳದೆ ಟೀಕಿಸಿದರು. ಈ ಸರ್ಕಾರದ  ಕಾರ್ಯ ವೈಖರಿ ನೋಡಿದರೆ ಬಹಳ ದಿನ ಉಳಿಯುವುದಿಲ್ಲ ಎಂದು ಅನಿಸುತ್ತದೆ ಎಂದು ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ಹೇಳಿದರು.

ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ
ಖರ್ಗೆ  ಸೇರಿದಂತೆ  ಕಾಂಗ್ರೆಸ್ ನಾಯಕರನ್ನು ಸಂಸತ್ ಭವನ ಮಾರ್ಗ ಠಾಣೆಯ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಮೋದಿ, ಭಾಗವತ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಅಣತಿಯಂತೆ ದೇಶದ ಆಡಳಿತ ನಡೆಯುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಈ ಇಬ್ಬರು ನಾಯಕರು ತಮ್ಮ ವಿರುದ್ಧ ಧ್ವನಿ ಎತ್ತಿದವರ ಮೇಲೆ ಇಲ್ಲಸಲ್ಲದ ಆಪಾದನೆ ಮಾಡುವ ಮೂಲಕ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಉತ್ತರಾಖಂಡದಲ್ಲಿ ಚುನಾಯಿತ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರುವ ಮೂಲಕ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ ಎಂದು ಆಪಾದಿಸಿದರು.

ಬ್ಯಾನರ್‌ನಲ್ಲಿ ವಾದ್ರಾ ಚಿತ್ರ
ರ್ಯಾಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ  ಅವರ ಚಿತ್ರವಿರುವ ಬ್ಯಾನರ್‌ ಪ್ರದರ್ಶನಗೊಂಡಿದ್ದು ಚರ್ಚೆಗೆ ಗ್ರಾಸವಾಯಿತು.

‘ಪ್ರಜಾಪ್ರಭುತ್ವ ಉಳಿಸಿ’ ಎಂದು ಘೋಷಣೆ ಕೂಗಿದ ಕಾಂಗ್ರೆಸ್‌ ಕಾರ್ಯಕರ್ತರು ವಾದ್ರಾ ಅವರಿದ್ದ ಬ್ಯಾನರ್‌ಗಳನ್ನು ಪ್ರದರ್ಶನ ಮಾಡಿದರು. ಕೆಲವು ಫಲಕಗಳಲ್ಲಿ ವಾದ್ರಾ ಅವರು ಪತ್ನಿ ಪ್ರಿಯಾಂಕ ಗಾಂಧಿ ಅವರ ಬದಲಿಗೆ ಕಾಣಿಸಿಕೊಂಡಿದ್ದರು.

ಈ  ಘೋಷಣಾ ಫಲಕಗಳನ್ನು ಗಾಂಧಿ  ಕುಟುಂಬಕ್ಕೆ ನಿಷ್ಠವಾಗಿರುವ ಜಗದೀಶ್‌ ಶರ್ಮಾ ಅವರು ಹಾಕಿಸಿದ್ದರು.

* ದೇಶದ ಮೂಲೆಮೂಲೆಗೂ ಹೋಗಿ ಮೋದಿ ಸರ್ಕಾರದ ಮುಖವಾಡಿ ಕಳಚಿ
-ಸೋನಿಯಾ ಗಾಂಧಿ
ಕಾಂಗ್ರೆಸ್ ಅಧ್ಯಕ್ಷೆ

ಮುಖ್ಯಾಂಶಗಳು
* ರಾಷ್ಟ್ರಪತಿ ಆಡಳಿತ ಹೇರಿಕೆಗೆ ಖಂಡನೆ
* ಸಂಸತ್ ಭವನಕ್ಕೆ ಮುತ್ತಿಗೆ ಯತ್ನ
*  ಸೋನಿಯಾ, ಮನಮೋಹನ್, ರಾಹುಲ್ ಬಂಧನ– ಬಿಡುಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT