ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೀಯ ವಿ.ವಿ ಸ್ಥಾನಕ್ಕೆ ಕೋರಿಕೆ

ಶೈಕ್ಷಣಿಕ ಮಂಡಳಿಯ ನಾಲ್ಕನೆ ಸಾಮಾನ್ಯಸಭೆಯಲ್ಲಿ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ
Last Updated 28 ಮಾರ್ಚ್ 2015, 9:07 IST
ಅಕ್ಷರ ಗಾತ್ರ

ಮೈಸೂರು: ಮಾನಸಗಂಗೋತ್ರಿ ಆವರಣದಲ್ಲಿ ಕುವೆಂಪು ಪ್ರತಿಮೆ, ಕ್ರಾಫರ್ಡ್‌ ಭವನದ ಮುಂಭಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆಯನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. 2015–16ನೇ ಶೈಕ್ಷಣಿಕ ಸಾಲಿನಿಂದ ಎಂ.ಫಿಲ್‌ ಮತ್ತು ಪಿಎಚ್‌.ಡಿ ಕೋರ್ಸ್‌ಗಳಿಗೆ ಏಕರೂಪ ಪ್ರವೇಶ ಪರೀಕ್ಷೆ ನಡೆಸಲು, ವಾಣಿಜ್ಯ ಮತ್ತು ನಿರ್ವಹಣೆ ಕೋರ್ಸ್‌ಗಳಿಗೆ ಯೂನಿವರ್ಸಿಟಿ ಸ್ಕೂಲ್‌ ಆಫ್‌ ಬ್ಯುಸಿನೆಸ್‌ನ ಪಠ್ಯಕ್ರಮವನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ತಿಳಿಸಿದರು.

ನಗರದ ಕ್ರಾಫರ್ಡ್‌ ಭವನದಲ್ಲಿ ಶುಕ್ರವಾರ ನಡೆದ ಶೈಕ್ಷಣಿಕ ಮಂಡಳಿಯ ನಾಲ್ಕನೇ ಸಾಮಾನ್ಯಸಭೆಯಲ್ಲಿ ಅವರು ಮಾತನಾಡಿದರು. ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವದ ಅಂಗವಾಗಿ ಸ್ಥಾಪಿಸುತ್ತಿರುವ ಈ ಪ್ರತಿಮೆಗಳನ್ನು ರಾಷ್ಟ್ರಪತಿ ಉದ್ಘಾಟಿಸಲಿದ್ದಾರೆ. ವಾಣಿಜ್ಯ, ವ್ಯವಹಾರ ಅಧ್ಯಯನಕ್ಕೆ ವ್ಯಾಪಕ ಬೇಡಿಕೆ ಇದೆ. ವಾಣಿಜ್ಯ ಪದವಿ ಕೋರ್ಸ್‌ಗಳ ಗುಣಮಟ್ಟ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ವಿಷಯಗಳಲ್ಲಿ ಯೂನಿವರ್ಸಿಟಿ ಸ್ಕೂಲ್‌ ಆಫ್‌ ಬ್ಯುಸಿನೆಸ್‌ನ ಪಠ್ಯಕ್ರಮವನ್ನು ಅಳವಡಿಸಲಾಗುತ್ತಿದೆ. ಮಹಾರಾಜ ಕಾಲೇಜು ಆವರಣದಲ್ಲಿ ಈ ಘಟಕವನ್ನು ಆರಂಭಿಸಲಾಗುತ್ತಿದೆ ಎಂದರು.

ವಿಶ್ವವಿದ್ಯಾಲಯದ ಓರಿಯಂಟಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಅನ್ನು ಮಾರ್ಚ್‌ 31ರಂದು ಮಧ್ಯಾಹ್ನ 3.30ಕ್ಕೆ ಭಾರತದಲ್ಲಿನ ಅಮೆರಿಕದ ರಾಯಭಾರಿ ರಿಚರ್ಡ್‌ ವರ್ಮ ಉದ್ಘಾಟಿಸಲಿದ್ದಾರೆ. ಏಪ್ರಿಲ್‌ 17ರಂದು ಘಟಿಕೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು. ಮೈಸೂರು ವಿಶ್ವವಿದ್ಯಾಲಯವನ್ನು ಮೇಲ್ದರ್ಜೆಗೇರಿಸಿ ಕೇಂದ್ರೀಯ  ವಿಶ್ವವಿದ್ಯಾಲಯದ ವಿಶೇಷ ಸ್ಥಾನಮಾನ ನೀಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಮನವಿ ಮಾಡಲು ನಿರ್ಧರಿಸಲಾಗಿದೆ. ವಿ.ವಿ ವ್ಯಾಪ್ತಿಯ ಜಿಲ್ಲೆಗಳ ಸಂಸದರಿಗೆ ವಿಷಯವನ್ನು ಮನದಟ್ಟು ಮಾಡಿ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲು ಅಗತ್ಯ ಮಾಹಿತಿ ನೀಡಲಾಗುವುದು ಎಂದು ವಿವರ ನೀಡಿದರು.

ಎಂ.ಟೆಕ್‌ ಕೋರ್ಸ್‌ಗಳು, ಸ್ನಾತಕೋತ್ತರ ಪದವಿಯ ಮೇಟಿರಿಯಲ್‌ ಸೈನ್ಸ್‌ ಸೇರಿದಂತೆ ಕೆಲ ವಿಭಾಗಗಳಲ್ಲಿ ಈಗಲೂ ಆಂತರಿಕ ಅಂಕಗಳನ್ನು 50ಕ್ಕೆ (25+25) ನಿಗದಿಪಡಿಸಿದ್ದಾರೆ. ಇದು ಸರಿಯಲ್ಲ. ಇತರ ವಿಭಾಗಗಳು ನಿಗದಿಪಡಿಸಿರುವ ರೀತಿಯಲ್ಲೇ ಈ ವಿಭಾಗಗಳೂ ಆಂತರಿಕ ಅಂಕಗಳನ್ನು ನಿಗದಿಪಡಿಸಿ ಏಕರೂಪ ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧ್ಯಯನ ಮಂಡಳಿಗಳ ಅಧ್ಯಕ್ಷರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಹೊಸ ಕೋರ್ಸ್‌ಗಳನ್ನು ಆರಂಭಿಸುವಾಗ ಆ ಕೋರ್ಸ್‌ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅನುಮೋದಿತ ವಿಷಯಗಳ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಎಂಟಿಎ, ಎಂಎಫ್‌ಎಂ ಸೇರಿದಂತೆ ಕೆಲವಾರು ಕೋರ್ಸ್‌ಗಳು ಯುಜಿಸಿ ಪಟ್ಟಿಯಲ್ಲಿ ಇಲ್ಲ. ಒಂದು ವೇಳೆ ಪಟ್ಟಿಯಲ್ಲಿ ಇಲ್ಲದ ಕೋರ್ಸ್‌ಗಳನ್ನು ಆರಂಭಿಸಿದರೆ, ಆ ಕುರಿತು ಯುಜಿಸಿಗೆ ಮಾಹಿತಿ ನೀಡಿ ಅದನ್ನು ಮನವಿ ಮಾಡಿ ಪಟ್ಟಿಯಲ್ಲಿ ಸೇರುವಂತೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT