ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ವಿ.ವಿಗೆ ದೊಡ್ಡಬಳ್ಳಾಪುರ

ವಿದ್ಯಾರ್ಥಿಗಳ, ಪೋಷಕರ ಆಗ್ರಹ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿಸಲು ವಿರೋಧ
Last Updated 4 ಜುಲೈ 2015, 10:14 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:  ತಾಲ್ಲೂಕನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಸೇರಿಸಿರುವುದಕ್ಕೆ  ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ದೊಡ್ಡಬಳ್ಳಾಪುರವನ್ನು ಬೆಂಗಳೂರು ಕೇಂದ್ರ  ವಿಶ್ವವಿದ್ಯಾಲಯಕ್ಕೆ ಸೇರಿಸಬೇಕು ಎಂದು  ಒತ್ತಾಯಿಸಿದ್ದಾರೆ.ಬೆಂಗಳೂರು ವಿಶ್ವವಿದ್ಯಾಲಯವನ್ನು ತ್ರಿವಿಭಜನೆ ಮಾಡುವ ವಿಧೇಯಕ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಾಗಿದೆ.  ಕೆಲವು ವರ್ಷಗಳಿಂದ ವಿವಿ ವಿಭಜನೆ ಮಾತು ಕೇಳಿ ಬರುತ್ತಿತ್ತು. ಇದಕ್ಕೆ ಹಲವು ಮಂದಿ ವಿರೋಧ ಸಹ ವ್ಯಕ್ತಪಡಿಸಿದ್ದರು. 

ಆದರೆ, ರಾಜ್ಯ ಸರ್ಕಾರ  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಡಳಿತ ಮತ್ತು ಕಾರ್ಯನಿರ್ವಹಣೆ ಸುಧಾರಣೆ ತರಲು ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮಾಡಲು ತ್ರಿವಿಭಜನೆ ಮಾಡುವ ವಿಧೇಯಕವನ್ನು ಅಧಿವೇಶನದಲ್ಲಿ ಮಂಡಿಸಿದೆ.ಬೆಂಗಳೂರು ವಿಶ್ವವಿದ್ಯಾಲಯದ ವಿಭಜನೆಯಲ್ಲಿ  ಬೆಂಗಳೂರು ಗ್ರಾಮಾಂತರ ಜಿಲ್ಲೆ ನಾಲ್ಕು ತಾಲ್ಲೂಕುಗಳು ಎರಡು ವಿಭಜನೆಗೆ ಒಳಗಾಗಲಿವೆ. ನೆಲಮಂಗಲ ತಾಲ್ಲೂಕನ್ನು ಬೆಂಗಳೂರು ಜ್ಞಾನಭಾರತಿ ವಿವಿ ವ್ಯಾಪ್ತಿಗೆ ಸೇರಿಸಲಾಗಿದೆ. ಉಳಿದಂತೆ ದೊಡ್ಡಬಳ್ಳಾಪುರ, ದೇವನಹಳ್ಳಿ,  ಹೊಸಕೋಟೆ ತಾಲ್ಲೂಕನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಗೆ  ಸೇರಿಸಲಾಗಿದೆ.  ಹೊಸ ವಿಶ್ವ ವಿದ್ಯಾಲಯದ ಕೇಂದ್ರ ಸ್ಥಾನವು ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯಲ್ಲಿರುವ ಕೋಲಾರ ಸ್ನಾತಕೋತ್ತರ ಕೇಂದ್ರವಾಗಿದೆ.

ಬೆಂಗಳೂರು ಉತ್ತರ ವಿವಿ ಕೇಂದ್ರ ಸ್ಥಾನವು ದೊಡ್ಡಬಳ್ಳಾಪುರದಿಂದ 60 ಕಿ.ಮೀ ದೂರದಲ್ಲಿದೆ. ಆದರೆ ಬೆಂಗಳೂರಿನ ಕೇಂದ್ರ ವಿಶ್ವವಿದ್ಯಾಲಯದ ಕೇಂದ್ರಸ್ಥಾನವಾದ ಸೆಂಟ್ರಲ್ ಕಾಲೇಜು ಕ್ಯಾಂಪಸ್‌ಗೆ 35 ಕಿ.ಮೀ ದೂರವಿದೆ.  ಬೆಂಗಳೂರಿನ ಕಾವೇರಿಭವನದ ಸಮೀಪವೇ ದೊಡ್ಡಬಳ್ಳಾಪುರ  ಕಡೆಗೆ ಹೋಗಿ ಬರುವ ಬಸ್‌ ನಿಲ್ದಾಣ ಸಹ ಇದೆ. ಇದರಿಂದಾಗಿ ದೊಡ್ಡಬಳ್ಳಾಪುರ ತಾಲ್ಲೂಕನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಬದಲಾಗಿ  ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಸೇರಿಸಬೇಕು ಎಂದು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಒತ್ತಾಯಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲ್ಲೂಕನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿಸುವುದರಿಂದ ಹಲವಾರು ತೊಂದರೆಗಳಿವೆ ಎನ್ನುತ್ತಾರೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು.  ಬೆಂಗಳೂರು  ಉತ್ತರ ವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸುವ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಗೆ ದೊಡ್ಡಬಳ್ಳಾಪುರದಿಂದ ಬಸ್‌ ಸೌಕರ್ಯಗಳು ಇಲ್ಲ. ವಿಶ್ವವಿದ್ಯಾಲಯ ಕೆಲಸ ಕಾರ್ಯಗಳಿಗೆ ಹೋಗಿ ಬರಲು  ಸಾಕಷ್ಟು ಅನಾನುಕೂಲವಾಗಲಿದೆ.  ವಿದ್ಯಾರ್ಥಿಗಳು ಪರೀಕ್ಷೆ, ಅಂಕಪಟ್ಟಿ, ಪದವಿ ಪ್ರಮಾಣ ಪತ್ರ ಪಡೆಯಲು ಜಂಗಮಕೋಟೆಗೆ ಹೋಗುವುದಕ್ಕಿಂತ ಬೆಂಗಳೂರಿನ ಸೆಂಟ್ರಲ್ ಕಾಲೇಜು ಕ್ಯಾಂಪಸ್ ಹತ್ತಿರವಾಗುತ್ತದೆ.

  ಎಲ್ಲ ಸಮಯದಲ್ಲೂ  ಕೆಎಸ್ಆರ್‌ಟಿಸಿ  ಮತ್ತು ಬಿಎಂಟಿಸಿ ಬಸ್‌ಗಳ ಅನುಕೂಲವಿದೆ. ಕಾಲೇಜಿನ  ಅಧ್ಯಾಪಕರು ಸಹ ಮೌಲ್ಯಮಾಪನ ಮುಂತಾದ ಕೆಲಸಗಳಿಗೆ ಹೋಗಿ ಬರಲು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವೇ  ಸೂಕ್ತವಾಗಿದೆ ಎನ್ನುತ್ತಾರೆ  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಸಿ.ರಾಮಚಂದ್ರ.ಬೆಂಗಳೂರಿನಲ್ಲಿ ಸ್ನಾತಕೋತ್ತರ ಮತ್ತು ಉನ್ನತ ವ್ಯಾಸಂಗಕ್ಕೆ ಉತ್ತಮ ಸ್ನಾತಕೋತ್ತರ ಕೇಂದ್ರಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ವಿದ್ಯಾರ್ಥಿಗಳು ಬೆಂಗಳೂರಿನ ಉತ್ತರ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರೆ ಅವರಿಗೆ ಬೆಂಗಳೂರು ಕೇಂದ್ರ ಮತ್ತು ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ  ಸ್ನಾತಕೋತ್ತರ ವಿದ್ಯಾಭ್ಯಾಸ  ಮಾಡಲು ಅವಕಾಶ ಇರುವುದಿಲ್ಲ. ಕೇಂದ್ರ ಮತ್ತು ಜ್ಞಾನಭಾರತಿ ವಿಶ್ವವಿದ್ಯಾಲಯಕ್ಕೆ ದೊಡ್ಡಬಳ್ಳಾಪುರದ ವಿದ್ಯಾರ್ಥಿಗಳು ಹೊರಗಿನ ವಿದ್ಯಾರ್ಥಿಗಳಾಗುತ್ತಾರೆ. ಇದರಿಂಂದ ದೊಡ್ಡಬಳ್ಳಾಪುರದ ವಿದ್ಯಾರ್ಥಿಗಳು  ಬೆಂಗಳೂರಿನಲ್ಲಿ  ಉನ್ನತ ವ್ಯಾಸಂಗ ಮಾಡುವ ಅವಕಾಶಗಳು ತೀರ ಕಡಿಮೆಯಾಗುತ್ತವೆ.

ಇದನ್ನು ಈಗಾಗಲೇ ಮನಗಂಡಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಚ್ಚಿನ ವಿದ್ಯಾರ್ಥಿಗಳು  ಬೆಂಗಳೂರಿನ ವಿವಿಧ  ಪದವಿ ಕಾಲೇಜುಗಳು ಬಿಎ, ಬಿಎಸ್ಸಿ ಮತ್ತು ಬಿಕಾಂ ತರಗತಿಗಳಿಗೆ ಪ್ರವೇಶ ಪಡೆದಿದ್ದಾರೆ. ಇದರಿಂದ ದೊಡ್ಡಬಳ್ಳಾಪುರದಲ್ಲಿರುವ ಎರಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಮತ್ತು ಒಂದು ಅನುದಾನಿತ ಖಾಸಗಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಪ್ರವೇಶ ಸಹಜವಾಗಿ ಕಡಿಮೆಯಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

‘ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ತಾಲ್ಲೂಕನ್ನು ಸೇರಿಸುವುದು ಅತ್ಯಂತ ಸೂಕ್ತವಾಗಿದೆ. ಬೆಂಗಳೂರು ಉತ್ತರ ವಿವಿಗೆ  ಸೇರಿಸುವ ವಿಚಾರವನ್ನು ಮರುಪರಿಶೀಲನೆ ಮಾಡಬೇಕು’
ವೆಂಕಟರಾಜು,
ಅಭಿವೃದ್ದಿ ಸಮಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT