ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಕ್‌ನಲ್ಲಿ ಅನಾವರಣಗೊಂಡ ‘ಸಂಸತ್‌ ಭವನ’

ನಾಳೆಯಿಂದ ಕೇಕ್ ಪ್ರದರ್ಶನ, ಮಂಗಳ ನೌಕೆ ವಿಶೇಷ ಆಕರ್ಷಣೆ
Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಣ್ಮನ ಸೆಳೆಯುವ ಸಂಸತ್‌ ಭವನ, ಪಕ್ಕದಲ್ಲೇ ಮಂಗಳಯಾನ ನೌಕೆ, ಮಕ್ಕಳ ಇಷ್ಟದ ಛೋಟಾ ಭೀಮ್‌, ಭಯ ಮೂಡಿಸುವ ಫ್ಲೈಯಿಂಗ್‌ ಡ್ರ್ಯಾಗನ್‌, ವಿಶ್ರಾಂತಿ ಪಡೆಯುತ್ತಿರುವ ಬಿಳಿ ಹುಲಿ, ಶೃಂಗಾರಗೊಂಡ ಮದುಮಗಳು...

ಇವೆಲ್ಲಾ ಒಂದೇ ಸೂರಿನಡಿ ಜನರ ಮನ­ಸೆಳೆಯಲು ಸಜ್ಜಾಗಿ ನಿಂತಿವೆ. ಇವುಗಳ ವಿಶೇಷ­ವೇನು ಗೊತ್ತೆ? ಈ ಕಲಾಕೃತಿಗಳನ್ನು ಕೇಕ್‌ನಿಂದ ರಚಿಸಲಾಗಿದ್ದು ಪ್ರದರ್ಶನಕ್ಕಿಡಲಾಗಿದೆ.

ಕ್ರಿಸ್ಮಸ್‌ ಪ್ರಯುಕ್ತ ‘ಬ್ಲೂಹಿಲ್ ಸಮೂ­ಹ’ದ ವಾರ್ಷಿಕ ‘ಕೇಕ್ ಪ್ರದರ್ಶನ’ ಸೇಂಟ್ ಜೋಸೆಫ್ಸ್ ಹೈಸ್ಕೂಲ್‌ ಮೈದಾನದಲ್ಲಿ ಡಿ.19­ರಿಂದ ಜನವರಿ 4ರವರೆಗೆ ನಡೆಯಲಿದೆ. ಒಟ್ಟು 28 ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಈ ಬಾರಿಯ ವಿಶೇಷ ಆಕರ್ಷಣೆ ಎಂದರೆ ‘ಸಂಸತ್‌ ಭವನ’. ಏಳೂವರೆ ಅಡಿ ಎತ್ತರ ಹಾಗೂ 18 ಅಡಿ ಸುತ್ತಳತೆಯ ಭವನವನ್ನು 3500 ಕೆ.ಜಿ. ಸಕ್ಕರೆ ಬಳಸಿ ನಿರ್ಮಿಸಲಾಗಿದೆ. ‘60 ಸಿಬ್ಬಂದಿ ಮೂರು ತಿಂಗಳು ಕೆಲಸ ಮಾಡಿ ಈ ಕಲಾಕೃತಿ ನಿರ್ಮಿಸಿದ್ದಾರೆ. ಸುಮಾರು ₨ 25 ಲಕ್ಷ ವೆಚ್ಚವಾಗಿದೆ’ ಎಂದು ಪ್ರದರ್ಶನದ ರೂವಾರಿ ಸಿ. ರಾಮಚಂದ್ರನ್ ತಿಳಿಸಿದರು.

‘ಹಿಂದೆ ಕೇಕ್‌ನಿಂದ ದೆಹಲಿಯ ಕೆಂಪು­ಕೋಟೆ, ವಿಧಾನಸೌಧ, ಮೈಸೂರು ಅರಮನೆ, ತಾಜ್‌ಮಹಲ್, ಐಫೆಲ್ ಟವರ್‌ ಕಲಾಕೃತಿ ರಚಿಸಿ­ದ್ದೆವು. ಇದು 40ನೇ ವರ್ಷದ ಪ್ರದರ್ಶನ. ವಿಶೇಷ ವಿನ್ಯಾಸಗಳ ಕಲಾಕೃತಿಗಳ ಪ್ರದರ್ಶನಕ್ಕೆ ಒತ್ತು ನೀಡಲಾಗಿದೆ’ ಎಂದು ಹೇಳಿದರು.
ಹಾಗೇ, ಕೇಕ್‌ನಲ್ಲಿ ಮಂಗಳಯಾನ ನೌಕೆ ತಯಾರಿಸಿ ಪ್ರದರ್ಶನಕ್ಕಿಡಲಾಗಿದೆ. ಬಿಸ್ಕತ್‌­ಗಳನ್ನು ಬಳಸಿ ಚರ್ಚ್‌ ಕಲಾಕೃತಿ ನಿರ್ಮಿಸಲಾ­ಗಿದೆ. ಇನ್‌ಸ್ಟಿಟ್ಯೂಟ್‌ ಆಫ್‌ ಬೇಕಿಂಗ್‌ ಮತ್ತು ಕೇಕ್‌ ಆರ್ಟ್‌ನ ವಿದ್ಯಾರ್ಥಿಗಳು ಕೂಡ ವಿವಿಧ ಕಲಾಕೃತಿ ನಿರ್ಮಿಸಿದ್ದಾರೆ.  

‘ಇಡೀ ಪ್ರದರ್ಶನಕ್ಕೆ 8 ಸಾವಿರ ಕೆ.ಜಿ. ಸಕ್ಕರೆ ಬಳಸಲಾಗಿದೆ. ಪ್ರದರ್ಶನ ಮುಗಿದ ಮೇಲೆ ಈ ಕೇಕ್‌ಗಳನ್ನು ಅನಾಥಾಶ್ರಮಗಳಿಗೆ ನೀಡಲಾಗು­ವುದು’ ಎಂದು ಆಯೋಜಕರು ಮಾಹಿತಿ ನೀಡಿ­ದರು. ‘ಮೂರು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ. ಉಳಿದಂತೆ ಪ್ರವೇಶ ಶುಲ್ಕ ₨ 49. ಪ್ರತಿದಿನ ಬೆಳಿಗ್ಗೆ 11ರಿಂದ ರಾತ್ರಿ 9ರ­ವರೆಗೆ ತೆರೆದಿರುತ್ತದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT