ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್‌ ತಿಹಾರ್‌ಗೆ

ಮಾನನಷ್ಟ ಮೊಕದ್ದಮೆ l ಬಾಂಡ್‌ ನೀಡಲು ನಿರಾಕರಣೆ
Last Updated 22 ಮೇ 2014, 10:02 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಮ್ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್‌ ಮತ್ತೊಂದು ವಿವಾದ ಸೃಷ್ಟಿಸಿದ್ದು, ಜಾಮೀನು ಪಡೆಯಲು ವೈಯಕ್ತಿಕ ಬಾಂಡ್‌ ನೀಡಲು ನಿರಾಕರಿಸಿದ ಅವರನ್ನು ತರಾಟೆಗೆ ತೆಗೆದುಕೊಂಡಿ­ರುವ ದೆಹಲಿಯ ಮೆಟ್ರೊಪಾಲಿಟನ್‌ ಮ್ಯಾಜಿ­ಸ್ಟ್ರೇಟ್‌  ನ್ಯಾಯಾಲಯ, ಅವರನ್ನು ತಿಹಾರ್‌ ಜೈಲಿಗೆ ಅಟ್ಟಿದೆ.

ಬಿಜೆಪಿ ಮುಖಂಡ ನಿತಿನ್‌ ಗಡ್ಕರಿ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಸಂಬಂಧ ಜಾಮೀನು ಪಡೆಯಲು ₨10,000ಗಳ ವೈಯಕ್ತಿಕ ಬಾಂಡ್‌ ನೀಡಲು ನಿರಾಕರಿಸಿದ್ದಕ್ಕಾಗಿ ಅವರನ್ನು ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸ­ಲಾಯಿತು.
ನ್ಯಾಯಾಲಯದ ಆದೇಶದ ಬಳಿಕ ಅವರನ್ನು ಬಂಧಿಸಿ, ತಿಹಾರ್‌ ಜೈಲಿಗೆ ಕರೆದೊಯ್ಯಲಾಯಿತು. ವಿಚಾರಣೆ­ 23ಕ್ಕೆ ಮುಂದೂಡಲಾಗಿದ್ದು, ಅಂದು ಕೇಜ್ರಿವಾಲ್‌ ಅವರನ್ನು ಹಾಜರು ಪಡಿ­ಸುವಂತೆ ನ್ಯಾಯಾಲಯ ಸೂಚಿಸಿದೆ.

ಪ್ರತಿಭಟನೆ: ಕೇಜ್ರಿವಾಲ್‌ ಅವರನ್ನು ಜೈಲಿಗೆ ಹಾಕಿದ ಸುದ್ದಿ ಹರಡಿದ ಕೂಡಲೇ ತಿಹಾರ್‌ ಜೈಲಿನ ಮುಂದೆ ಭಾರಿ ಸಂಖ್ಯೆಯಲ್ಲಿ ಸೇರಿದ ಎಎಪಿ ನಾಯಕರು ಹಾಗೂ ಕಾರ್ಯ­ಕರ್ತರು ಪ್ರತಿಭಟನೆ ನಡೆಸಿದರು. ಎಎಪಿ ನಾಯಕ ಯೋಗೇಂದ್ರ ಯಾದವ್‌ ಅವರನ್ನು ಪೊಲೀಸರು ಅಕ್ಷರಶಃ ಎಳೆದು­ಕೊಂಡು ಹೋದರು. 

ಕೇಜ್ರಿವಾಲ್‌ ಅವರನ್ನು ತಿಹಾರ ಜೈಲಿನ ನಾಲ್ಕನೇ ಸೆಲ್‌ನಲ್ಲಿ ಇಡ­ಲಾಗಿದೆ.  ಲೋಕಪಾಲ ಕಾಯ್ದೆಗಾಗಿ ಆಗ್ರಹಿಸಿ ಅಣ್ಣಾ ಹಜಾರೆ, ಕೇಜ್ರಿವಾಲ್‌  ತಂಡ 2011ರಲ್ಲಿ ಪ್ರತಿಭಟನೆ ನಡೆಸಿ­ದಾಗ ಹಜಾರೆ ಅವರನ್ನು ಇದೇ ಸೆಲ್‌ನಲ್ಲಿ ಇಡಲಾಗಿತ್ತು. 

ನೆಲದ ಮೇಲೆ ನಿದ್ದೆ: ಕೇಜ್ರಿವಾಲ್‌ ನೆಲದ ಮೇಲೆ ಮಲಗಿ­ಕೊಳ್ಳಬೇಕಾಗು­ತ್ತದೆ. ಅವರಿಗೆ ಮಾಮೂಲಿ ಆಹಾರ ನೀಡಲಾಗುತ್ತದೆ ಹಾಗೂ ಔಷಧ ತೆಗೆದುಕೊಳ್ಳಲು ಅನುಮತಿ ಇದೆ.

ಟಿವಿ ಸೌಲಭ್ಯ ಇರು­ವುದಿಲ್ಲ. ಪತ್ರಿಕೆಗಳನ್ನು ಒದಗಿಸ­ಲಾ­ಗುವುದು  ಎಂದು ತಿಹಾರ್‌ ಜೈಲಿನ ವಕ್ತಾರರು ತಿಳಿಸಿದ್ದಾರೆ. ಸಂಜೆ 6 ಗಂಟೆಗೆ ಜೈಲಿಗೆ ಬಂದ ಕೇಜ್ರಿವಾಲ್‌ ಅವ­ರನ್ನು ನಿಯಮದ ಪ್ರಕಾರ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.

ಘಟನೆ ವಿವರ: ಕೇಜ್ರಿವಾಲ್‌ ಅವರು ತಮ್ಮ ಮಾನ­ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ನಿತಿನ್‌ ಗಡ್ಕರಿ ಅವರು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ವಿಚಾರಣೆಗೆ ಹಾಜರಾಗು­ವಂತೆ ಕೇಜ್ರಿವಾಲ್‌ ಅವರಿಗೆ ನ್ಯಾಯಾ­ಲಯ ಸಮನ್ಸ್‌ ನೀಡಿತ್ತು.

ಎಎಪಿ ಸಿದ್ಧ ಪಡಿಸಿದ್ದ ‘ಭಾರತದ ಅತ್ಯಂತ ಭ್ರಷ್ಟ’ರ ಪಟ್ಟಿಯಲ್ಲಿ ನಿತಿನ್‌ ಗಡ್ಕರಿ ಅವರ ಹೆಸರೂ ಇತ್ತು. ತಿಲಕ್‌ ಲೇನ್‌ನಲ್ಲಿರುವ ತಮ್ಮ ಮನೆಯಿಂದ ಕೇವಲ 250 ಮೀಟರ್‌ ದೂರದಲ್ಲಿರುವ ಪಟಿ­ಯಾಲಾ ಹೌಸ್‌ ಕೋರ್ಟ್‌ಗೆ ಕೇಜ್ರಿವಾಲ್‌ ಮಧ್ಯಾಹ್ನ 3.50ರ ಸುಮಾರಿಗೆ ಕೆಲ ಕಾರ್ಯಕರ್ತರ ಜತೆ ತೆರಳಿದ್ದರು.

ಬಂಧನ: ಮ್ಯಾಜಿಸ್ಟ್ರೇಟ್‌ ಅವರು ಆದೇಶ ನೀಡುತ್ತಿ­ದ್ದಂತೆಯೇ, ಬಿಗಿ ಭದ್ರತೆಯ ನಡುವೆ ನ್ಯಾಯಾಲಯದ ಆವರಣದ­ಲ್ಲಿರುವ ಲಾಕಪ್‌ನಲ್ಲಿ ಕೇಜ್ರಿವಾಲ್‌ ಅವರನ್ನು ಇರಿಸಲಾಯಿತು. ನಂತರ ಜೈಲಿಗೆ ಕರೆದೊಯ್ಯಲಾಯಿತು. ‘ಕಕ್ಷಿದಾರರ ಹುಚ್ಚಾಟಿಕೆ ಮತ್ತು ಖಯಾಲಿಗಳಿಗಾಗಿ ನ್ಯಾಯಾಲಯಗಳ ನೀತಿ–ನಿಯಮಗಳನ್ನು ಗಾಳಿಗೆ ತೂರಲು ಸಾಧ್ಯವಿಲ್ಲ’ ಎಂದು ಗೋಮತಿ ಮನೋಚಾ ಅವರು ತಮ್ಮ ಮೂರು ಪುಟಗಳ ತೀರ್ಪಿನಲ್ಲಿ ಅಭಿಪ್ರಾಯ­ಪಟ್ಟರು.

‘ಪ್ರತಿವಾದಿಯೊಬ್ಬರು ಉದ್ದೇಶ ಪೂರ್ವಕ­ವಾಗಿ ಕಾನೂನಿನ ನಿಯಮ­ಗಳನ್ನು ಉಲ್ಲಂಘಿಸಲು ಬಯಸಿ­ದಾಗ ನ್ಯಾಯಾಲಯವೊಂದು ಮೂಕ ಪ್ರೇಕ್ಷಕ­ನಾಗಿ ಕುಳಿತುಕೊಳ್ಳಲು ಸಾಧ್ಯ­ವಿಲ್ಲ’ ಎಂದೂ ಅವರು ಹೇಳಿದರು. ‘ಈ ಪ್ರಕರಣವನ್ನು ಇತರ ಕ್ರಿಮಿನಲ್‌ ಪ್ರಕರಣ­ಗಳಿಗಿಂತ ಭಿನ್ನವಾಗಿ ಪರಿಗಣಿ­ಸಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದ ಮ್ಯಾಜಿಸ್ಟ್ರೇಟ್‌, ‘ಆರೋಪಿಯು ಮೌಖಿಕ­­­­ವಾಗಿ ಭರವಸೆ ನೀಡಿದ ಮಾತ್ರಕ್ಕೆ ಜಾಮೀನಿನ ಕುರಿತಾಗಿ ಈಗ ಜಾರಿಯಲ್ಲಿರುವ ನಿಯಮ ಮತ್ತು ಪದ್ಧತಿಗಳನ್ನು ಮೀರಿ ಈ ಪ್ರಕರಣದಲ್ಲಿ ಭಿನ್ನ ವಿಧಾನ­ವನ್ನು ಅನು­ಸರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ವೈಯಕ್ತಿಕ ಬಾಂಡ್‌ ನೀಡಲು ಸಾಧ್ಯ­ವಾ­ಗದಿರುವ ಪ್ರಕರಣವೂ ಇದಲ್ಲ’ ಎಂದೂ ಅವರು ಆದೇಶದಲ್ಲಿ ಹೇಳಿದರು.ಇದಕ್ಕೂ ಮೊದಲು ಬುಧವಾರ ಬೆಳಿಗ್ಗೆ ಗಡ್ಕರಿ ಮತ್ತು ಕೇಜ್ರಿವಾಲ್‌ ಪರ ವಕೀಲರ ವಾದ, ಪ್ರತಿ­ವಾದಗಳನ್ನು ಆಲಿಸಿದ ಮನೋಚಾ, ಸಂಜೆ ಆದೇಶ ನೀಡುವುದಾಗಿ ತಿಳಿಸಿದ್ದರು.

ವಿಚಾರಣೆಯ ಎಲ್ಲ ದಿನವೂ ಹಾಜರಾ­ಗುವುದಾಗಿ ವಾಗ್ದಾನ ನೀಡಲು ಸಿದ್ಧವಿರುವುದಾಗಿ ನ್ಯಾಯಾ­ಲಯಕ್ಕೆ ತಿಳಿಸಿದ ಕೇಜ್ರಿವಾಲ್‌, ವೈಯಕ್ತಿಕ ಬಾಂಡ್ ನೀಡಲು ನಿರಾಕರಿಸಿದ್ದರು.

ಎಎಪಿ ಮುಖಂಡನ ಹೇಳಿಕೆಗೆ ಪ್ರತಿ­ಕ್ರಿಯಿಸಿದ್ದ ನ್ಯಾಯಾಲಯ, ನಿವೇನಾ­ದರೂ ‘ವಿಶೇಷ ಸವಲತ್ತು’ ಬಯಸುತ್ತಿದ್ದೀರಾ? ಎಂದು ಕೇಳಿತ್ತು.
‘ಅವರು ನ್ಯಾಯಾಲಯಕ್ಕೆ ಹಾಜ­ರಾ­ಗುತ್ತಾರೆ ಎಂಬು­ದನ್ನು ನಾನು ಒಪ್ಪು-­ತ್ತೇನೆ. ಆದರೆ ಯಾಕೆ ವೈಯಕ್ತಿಕ ಬಾಂಡ್‌ ನೀಡುತ್ತಿಲ್ಲ. ಏನು ಸಮಸ್ಯೆ? ವೈಯಕ್ತಿಕ ಬಾಂಡ್‌ ನೀಡಬೇಕಾದುದು ನಿಯಮ. ಈ ಪ್ರಕರಣದಲ್ಲಿ ನಾವ್ಯಾಕೆ ಭಿನ್ನ ನೀತಿ ಅನುಸರಿಸಬೇಕು’ ಎಂದು ಮ್ಯಾಜಿಸ್ಟ್ರೇಟ್‌ ಪ್ರಶ್ನಿಸಿದ್ದರು.

ಕೇಜ್ರಿವಾಲ್‌ ಪ್ರತಿಪಾದನೆ: ಮ್ಯಾಜಿಸ್ಟ್ರೇಟ್‌ ಮುಂದೆ ತಮ್ಮ ವಾದ ಮಂಡಿಸಿದ್ದ ಕೇಜ್ರಿವಾಲ್‌, ತಾವು ಯಾವುದೇ ಘೋರ ಅಪರಾಧ ಮಾಡಿಲ್ಲ ಮತ್ತು ಯಾವುದೇ ವಿಶೇಷ ಸೌಲಭ್ಯ­ವನ್ನು ಬಯಸುತ್ತಿಲ್ಲ ಎಂದು ಹೇಳಿದ್ದರು. ‘ನಾನು ಯಾವುದೇ ತಪ್ಪು ಮಾಡದೇ ಇದ್ದಾಗ ನಾನು ಜಾಮೀನಿಗೆ ಮನವಿ ಮಾಡುವುದಿಲ್ಲ. ಇದು ನನ್ನ ಸಿದ್ಧಾಂತ. ಜೈಲಿಗೆ ಹೋಗುವುದಕ್ಕೆ ನಾನು ಸಿದ್ಧ­ನಿದ್ದೇನೆ’ ಎಂದು ಕೇಜ್ರಿವಾಲ್‌ ಹೇಳಿದ್ದರು.

ಈ ಪ್ರಕರಣವು ರಾಜಕೀಯ ಪ್ರೇರಿತವಾಗಿದ್ದು, ಎಎಪಿಯ ಸಿದ್ಧಾಂತದ ಪ್ರಕಾರ, ತಾವು ವೈಯಕ್ತಿಕ ಬಾಂಡ್‌ ನೀಡುವುದಿಲ್ಲ ಎಂದು ಕೇಜ್ರಿವಾಲ್‌ ಪರ ವಕೀಲರಾದ ಪ್ರಶಾಂತ್‌ ಭೂಷಣ್‌ ಮತ್ತು ರಾಹುಲ್‌ ಮೆಹ್ರಾ ಕೂಡ ಮ್ಯಾಜಿಸ್ಟ್ರೇಟ್‌ ಅವರಿಗೆ ತಿಳಿಸಿದ್ದರು.
ಗಡ್ಕರಿ ಪರ ಹಿರಿಯ ವಕೀಲರಾದ ಪಿಂಕಿ ಆನಂದ್‌ ಅವರು ವಾದ ಮಂಡಿಸಿದ್ದರು.

ಕೋರ್ಟ್‌ಗೆ ಧಾವಿಸಿದ ಪತ್ನಿ: ಬಂಧನದ ಸುದ್ದಿ ತಿಳಿ­ಯು­ತ್ತಿದ್ದಂತೆ ಪತ್ನಿ ಸುನಿತಾ ಕೇಜ್ರಿವಾಲ್‌ ಅವರ ಬಟ್ಟೆ, ಬರೆ ಹಾಗೂ ಔಷಧ ತೆಗೆದುಕೊಂಡು ಕೋರ್ಟ್‌ಗೆ ಧಾವಿಸಿದರು. ಕೇಜ್ರಿವಾಲ್‌ಗೆ ಸಕ್ಕರೆ ಕಾಯಿಲೆ ಇದೆ.

‘ಇದು ಸಿದ್ಧಾಂತದ ವಿಚಾರವೇ ಹೊರತು ಹಣದ್ದಲ್ಲ. ಒಂದು ವೇಳೆ ಕೇಜ್ರಿವಾಲ್‌ ಅವರು ಬಾಂಡ್‌ ನೀಡಿ­ದರೆ, ಅವರು ಅಪರಾಧಿ ಎಂದರ್ಥ. ಯಾವುದೇ ಸಮಯದಲ್ಲಿ ತಾವು ನ್ಯಾಯಾಲಯದ ಮುಂದೆ ಹಾಜರಾ­ಗುವುದಾಗಿ ಅವರು ಭರವಸೆ ನೀಡಿದ್ದಾರೆ’
  – ಮನೀಶ್‌ ಸಿಸೋಡಿಯಾ, ಎಎಪಿ ಮುಖಂಡ

‘ಕಕ್ಷಿದಾರರ ಹುಚ್ಚಾಟಿಕೆ ಮತ್ತು ಖಯಾಲಿಗಳಿಗಾಗಿ ನ್ಯಾಯಾಲಯಗಳ ನೀತಿ–ನಿಯಮಗಳನ್ನು ಗಾಳಿಗೆ ತೂರಲು ಸಾಧ್ಯವಿಲ್ಲ. ಪ್ರತಿವಾದಿಯೊಬ್ಬರು ಉದ್ದೇಶ ಪೂರ್ವಕ­ವಾಗಿ ಕಾನೂನಿನ ನಿಯಮ­ಗಳನ್ನು ಉಲ್ಲಂಘಿಸಲು ಬಯಸಿದಾಗ ನ್ಯಾಯಾಲಯವೊಂದು ಮೂಕ ಪ್ರೇಕ್ಷಕ­ನಾಗಿ ಕುಳಿತುಕೊಳ್ಳಲು ಸಾಧ್ಯ­ವಿಲ್ಲ’
–  ಗೋಮತಿ ಮನೋಚಾ ಮ್ಯಾಜಿ­ಸ್ಟ್ರೇಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT